ನವದೆಹಲಿ(ಆ. 31): ಮೊನ್ನೆಯಷ್ಟೇ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ (Supreme Court) ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಕರ್ನಾಟಕದವರಾದ, ರಾಜ್ಯ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ. (Justice Nagarathna B.V.) ಸೇರಿ ಮೂವರು ಮಹಿಳಾ ನ್ಯಾಯಮೂರ್ತಿಗಳೂ ಒಳಗೊಂಡಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಬಿ.ವಿ. ನಾಗರತ್ನ ಅವರ ಹೆಸರು ದೇಶದಾದ್ಯಂತ ಸದ್ದು ಮಾಡುತ್ತಿದೆ. ಏಕೆಂದರೆ ಸ್ವತಂತ್ರ್ಯ ಭಾರತದಲ್ಲಿ ಈವರೆಗೆ ದೇಶದ ಪರಮೋಚ್ಛ ನ್ಯಾಯಾಲಯಕ್ಕೆ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಗಳಾದ ಇತಿಹಾಸವೇ ಇಲ್ಲ. ಇದೇ ಮೊದಲ ಬಾರಿಗೆ ಜಸ್ಟೀಸ್ ಬಿ.ವಿ. ನಾಗರತ್ನ ಅವರು 2027ರಲ್ಲಿ ದೇಶದ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಿ ಹೊಸ ಇತಿಹಾಸ ಸೃಷ್ಠಿಸುವ ಸಾಧ್ಯತೆಗಳು ದಟ್ಟವಾಗಿವೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಹಿರಿಯರನ್ನು ಮುಖ್ಯ ನ್ಯಾಯಮೂರ್ತಿಗಳಾಗುತ್ತಾರೆ. ಇದು ಈವರೆಗೆ ನಡೆದುಕೊಂಡು ಬಂದಿರುವ ಪರಿಪಾಠ. ಇದೇ ರೀತಿ ಸದ್ಯ ಹಿರಿಯ ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಚಂದ್ರಚೂಡ್, ಸಂಜೀವ್ ಖನ್ನಾ, ಸೂರ್ಯಕಾಂತ್ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಅವಧಿ ಮುಗಿದ ಬಳಿಕ 2027ರಲ್ಲಿ ಹಿರಿತನದ ಆಧಾರದಲ್ಲಿ ಕರ್ನಾಟಕ ಮೂಲದ ನ್ಯಾಯಮೂರ್ತಿ ನಾಗರತ್ನ ಬಿ.ವಿ. ಅವರಿಗೆ ಮುಖ್ಯ ನ್ಯಾಯಮೂರ್ತಿ ಆಗುವ ಸುಯೋಗ ಕೂಡಿಬರಲಿದೆ. ಹಾಗಾದರೆ ಅವರು ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾದ ದಾಖಲೆ ನಿರ್ಮಿಸಲಿದ್ದಾರೆ.
ಅಲ್ಲದೆ ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾಯಮೂರ್ತಿ, ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ, ಸಿ.ಟಿ. ರವೀಂದ್ರಕುಮಾರ್, ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಮಂಗಳವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ (Chief Justice N.V. Ramana) ಹೊಸದಾಗಿ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೊಧಿಸಿದರು.
ಜಸ್ಟೀಸ್ ಬಿ.ವಿ. ನಾಗರತ್ನ ಪರಿಚಯ:
ಅಕ್ಟೋಬರ್ 30, 1962 ರಂದು ಜನಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಅಕ್ಟೋಬರ್ 28, 1987ರಂದು ಬೆಂಗಳೂರಿನಲ್ಲಿ ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಈ ವೇಳೆ ಅವರು ಸಾಂವಿಧಾನಿಕ ಕಾನೂನು, ವಾಣಿಜ್ಯ ಕಾನೂನು, ವಿಮಾ ಕಾನೂನು, ಸೇವಾ ಕಾನೂನು, ಆಡಳಿತಾತ್ಮಕ ಮತ್ತು ಸಾರ್ವಜನಿಕ ಕಾನೂನು, ಭೂಮಿ ಮತ್ತು ಬಾಡಿಗೆಗೆ ಸಂಬಂಧಿಸಿದ ಕಾನೂನು, ಕೌಟುಂಬಿಕ ಕಾನೂನು, ಒಪ್ಪಂದಗಳು ಮತ್ತು ಒಪ್ಪಂದಗಳ ತಿಳುವಳಿಕೆ ಕಾನೂನುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡಸುವ ಮೂಲಕ ಹೆಸರುವಾಸಿಯಾಗಿದ್ದರು.
ಬಿ.ವಿ. ನಾಗರತ್ನ ಅವರನ್ನು ಫೆಬ್ರವರಿ 18, 2008ರಂದು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ಎರಡು ವರ್ಷಗಳ ನಂತರ ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು. ಆದರೆ ನ್ಯಾಯಾಧೀಶರಾಗಿ ತಮ್ಮ 13 ವರ್ಷಗಳ ಸುದೀರ್ಘ ಅವಧಿಯಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು ಮಾಧ್ಯಮಗಳನ್ನು ಮತ್ತು ವಕೀಲರನ್ನು ಕೋರ್ಟ್ನಲ್ಲಿನ ಅವರ ಮಿತಿ ಮೀರಿದ ವರ್ತನೆಯ ಬಗ್ಗೆ ಎಂದಿಗೂ ಚಕಾರ ಎತ್ತಿಲ್ಲ ಎಂಬ ಮಾತೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ