ಎನ್​ಟಿಆರ್​ ಮಗ ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ನಿಧನ


Updated:August 29, 2018, 11:03 AM IST
ಎನ್​ಟಿಆರ್​ ಮಗ ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ನಿಧನ

Updated: August 29, 2018, 11:03 AM IST
ನ್ಯೂಸ್​ 18 ಕನ್ನಡ

ಹೈದರಾಬಾದ್​(ಆ.29): ತೆಲುಗಿನ ಖ್ಯಾತ ನಟ ದಿ. ಎನ್​.ಟಿ.ರಾಮರಾವ್ ಮಗ, ಜೂನಿಯರ್ ಎನ್​ಟಿಆರ್​ ತಂದೆ ನಂದಮೂರಿ ಹರಿಕೃಷ್ಣ ಬುಧವಾರ ನಸುಕಿನ ಜಾವ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನ ಅನ್ನೇಪತ್ತಿ ಬಳಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.

ನಂದಮೂರಿ ಹರಿಕೃಷ್ಣ ನೆಲ್ಲೂರಿನ ತಮ್ಮ ಸ್ನೇಹಿತರ ಮನೆಗೆ ತೆರಳಿದ್ದು, ಅಲ್ಲಿಂದ ಕಾವಲಿಗೆ ಅಭಿಯಾನಿಯ ಪುತ್ರನ ಮದುವೆಗೆಂದು ತೆರಳುತ್ತಿದ್ದರು. ಕಾರನ್ನು ಅವರೇ ಚಲಾಯಿಸುತ್ತಿದ್ದರು. ಅತೀ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ನಲಗೊಂಡ ಜಿಲ್ಲೆಯ‌ ಅನ್ನೇಪತ್ತಿ ಬಳಿ ಪಲ್ಟಿ ಹೊಡೆದಿದೆ.

ಹರಿಕೃಷ್ಣ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಆ ಕೂಡಲೇ ಹತ್ತಿರದ ಕಾಮಿನೇನಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ನಟ ಹರಿಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮುಂಜಾನೆ ಸುಮಾರು 4.30ರ ಸಮಯಕ್ಕೆ ಈ ದುರಂತ ನಡೆದಿದೆ ಎನ್ನಲಾಗಿದೆ. ಅಪಘಾತಕ್ಕೆ ಅತಿ ವೇಗವೇ ಕಾರಣ ಎನ್ನಲಾಗಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಸಂಸ್ಥಾಪಕ ಎನ್​.ಟಿ.ರಾಮರಾವ್ (ಎನ್​ಟಿಆರ್) ಅವರ ನಾಲ್ಕನೇ ಮಗನಾಗಿ 1956 ಸೆ.2ರಂದು ಜನಿಸಿದರು. ಬಾಲ ನಟನಾಗುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಹರಿಕೃಷ್ಣ ಹಲವಾರು ಸಿನಿಮಾಗಳಲ್ಲಿ ನಟಿಸಿ, ಆಂಧ್ರದಲ್ಲಿ ಖ್ಯಾತಿ ಗಳಿಸಿದ್ದರು. ತಂದೆಯ ಹಾದಿಯಲ್ಲಿಯೇ ಸಾಗಿ ಹರಿಕೃಷ್ಣ ಅವರು ರಾಜಕೀಯಕ್ಕೂ ಆಗಮಿಸಿ, ಕೆಲ ಕಾಲ ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಹರಿಕೃಷ್ಣರವರ ಬಾವ ಆಗಿರುವ ಆಂಧ್ರಪ್ರದೆಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರು ನಿಧನದ ಸುದ್ದಿ ತಿಳಿದು ತಮ್ಮೆಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

ನಂದಮೂರಿ ಹರಿಕೃಷ್ಣ ಅವರ ಪುತ್ರ ಜಾನಕಿರಾಮ್ ಸೂರ್ಯಂಪೇಟೆ ಅವರು 2014ರಲ್ಲಿ ರಸ್ತೆ ಅಪಘಾತದಲ್ಲಿಯೇ ಮೃತಪಟ್ಟಿದ್ದರು. 2009ರಲ್ಲಿ ಅವರ ಮತ್ತೊಬ್ಬ ಮಗ ಜೂ.ಎನ್​ಟಿಆರ್​ ಅವರು ಅಪಘಾತದಲ್ಲಿ ಗಾಯಗೊಂಡಿದ್ದರು. ಇದೀಗ ಹರಿಕೃಷ್ಣ ಅವರು ರಸ್ತೆ ಅಪಘಾತದಲ್ಲಿಯೇ ಅಸುನೀಗಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ