ಸಿಡಿದೆದ್ದ ಶಿವಸೇನೆ: ಮಹಾರಾಷ್ಟ್ರ ರಾಜಕಾರಣಕ್ಕೆ ಹೊಸ ಟ್ವಿಸ್ಟ್; ಇಲ್ಲಿದೆ ಸ್ಪೆಷಲ್ ಸ್ಟೋರಿ

ಮಹಾರಾಷ್ಟ್ರದಲ್ಲಿ ದಿನೇದಿನೇ ಬಲವೃದ್ಧಿಸಿಕೊಳ್ಳುತ್ತಿರುವ ಬಿಜೆಪಿಯ ನಿಜವಾದ ಟಾರ್ಗೆಟ್ ಕಾಂಗ್ರೆಸ್ಸಾಗಲೀ, ಎನ್​ಸಿಪಿಯಾಗಲೀ ಅಲ್ಲ. ಬಿಜೆಪಿಯ ಪಿತೂರಿಗೆ ಒಳಗಾಗಿರುವುದು ತಾನೇ ಎಂದು ಅರಿತ ಶಿವಸೇನೆ ಇದೀಗ ಬಹುದೊಡ್ಡ ರಿಸ್ಕ್​ನ ರಾಜಕೀಯ ದಾಳ ಉರುಳಿಸಿದೆ. ವಾಸ್ತವದಲ್ಲಿ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅಡ್ಡಿಯಾಗಿರುವುದು ಶಿವಸೇನೆಯೇ. 2014ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು 2 ಸ್ಥಾನಕ್ಕಿಳಿಸಿ ಧೂಳೀಪಟ ಮಾಡಿದ್ದವು. ಇದಾದ ನಾಲ್ಕೈದು ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಮೈತ್ರಿಕೂಟ ಮುರಿದುಬಿತ್ತು


Updated:January 23, 2018, 6:34 PM IST
ಸಿಡಿದೆದ್ದ ಶಿವಸೇನೆ: ಮಹಾರಾಷ್ಟ್ರ ರಾಜಕಾರಣಕ್ಕೆ ಹೊಸ ಟ್ವಿಸ್ಟ್; ಇಲ್ಲಿದೆ ಸ್ಪೆಷಲ್ ಸ್ಟೋರಿ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: January 23, 2018, 6:34 PM IST
- ವೆಂಕಟೇಶ್ ಕೇಸರಿ, ಸಿಎನ್​ಎನ್-ನ್ಯೂಸ್18

ನವದೆಹಲಿ(ಜ. 23): ಬಿಜೆಪಿ ಜೊತೆಗಿದ್ದ 29 ವರ್ಷಗಳ ಮೈತ್ರಿಗೆ ಶಿವಸೇನೆ ತಿಲಾಂಜಲಿ ಹಾಡಲು ನಿರ್ಧರಿಸಿದೆ. ಮುಂಬರುವ ಚುನಾವಣೆಗಳಲ್ಲಿ ಶಿವಸೇನೆ ಏಕಾಂಗಿಯಾಗಿ ಸೆಣಸಲಿದೆ. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಟರ್ನಿಂಗ್ ಪಾಯಿಂಟ್ ಆಗಬಹುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿನ ಏಕಪಕ್ಷಾಡಳಿತದ ಯುಗದ ಅಂತ್ಯಕ್ಕೆ ಕಾರಣವಾಗಿದ್ದು ಇದೇ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ. ಇದಾಗಿದ್ದು 1995ರಲ್ಲಿ. ಹಿಂದುತ್ವ ಸಿದ್ದಾಂತಗಳ ಮೂಲಕ ಹಿಂದುಳಿದ ಜಾತಿಗಳು, ಕೆಳ ಮತ್ತು ಮಧ್ಯಮ ವರ್ಗ ಹಾಗೂ ಯುವಸಮುದಾಯದ ಮತದಾರರನ್ನು ಈ ಎರಡು ಪಕ್ಷಗಳು ಸೆಳೆದು ವೋಟ್ ಬ್ಯಾಂಕ್ ಸೃಷ್ಟಿಸಿಕೊಂಡಿದ್ದವು. ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದ ನಂತರ ಮಹಾರಾಷ್ಟ್ರದಲ್ಲಿ ಏಕ ಪಕ್ಷಾಡಳಿತದ ಸರಣಿ ಖಾಯಂ ಆಗಿ ಮುರಿದುಬಿತ್ತು. ಅಷ್ಟೇ ಅಲ್ಲ, ಜನತಾ ಪಕ್ಷ, ಜನತಾ ದಳ, ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ, ಆರ್​ಪಿಐ ಮತ್ತು ಎಡಪಕ್ಷಗಳಂತಹ ಸಣ್ಣಪುಟ್ಟ ಪಕ್ಷಗಳ ನೆಲೆ ಇನ್ನಷ್ಟು ದುರ್ಬಲಗೊಂಡವು.

ಇದೇ ವೇಳೆ, ಮಹಾರಾಷ್ಟ್ರದಲ್ಲಿ ದಿನೇದಿನೇ ಬಲವೃದ್ಧಿಸಿಕೊಳ್ಳುತ್ತಿರುವ ಬಿಜೆಪಿಯ ನಿಜವಾದ ಟಾರ್ಗೆಟ್ ಕಾಂಗ್ರೆಸ್ಸಾಗಲೀ, ಎನ್​ಸಿಪಿಯಾಗಲೀ ಅಲ್ಲ. ಬಿಜೆಪಿಯ ಪಿತೂರಿಗೆ ಒಳಗಾಗಿರುವುದು ತಾನೇ ಎಂದು ಅರಿತ ಶಿವಸೇನೆ ಇದೀಗ ಬಹುದೊಡ್ಡ ರಿಸ್ಕ್​ನ ರಾಜಕೀಯ ದಾಳ ಉರುಳಿಸಿದೆ. ವಾಸ್ತವದಲ್ಲಿ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅಡ್ಡಿಯಾಗಿರುವುದು ಶಿವಸೇನೆಯೇ. 2014ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು 2 ಸ್ಥಾನಕ್ಕಿಳಿಸಿ ಧೂಳೀಪಟ ಮಾಡಿದ್ದವು. ಇದಾದ ನಾಲ್ಕೈದು ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಮೈತ್ರಿಕೂಟ ಮುರಿದುಬಿತ್ತು.

ಶಿವಸೇನೆ-ಬಿಜೆಪಿ ಮೈತ್ರಿಕೂಟದಲ್ಲಿ ಯಾವಾಗಲೂ ಸಿಂಹಪಾಲು ಶಿವಸೇನೆಯದೇ ಆಗಿರುತ್ತಿತ್ತು. ಆದರೆ ಮೋದಿ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿದ್ದರಿಂದ ಬಿಜೆಪಿ ಹೊಸ ಆಟ ಶುರು ಮಾಡಿತು. ತನಗೇ ಹೆಚ್ಚು ಕ್ಷೇತ್ರಗಳು ಬೇಕೆಂದು ಬಿಜೆಪಿ ಪಟ್ಟು ಹಿಡಿಯಿತು. ಶಿವಸೇನೆ ಇದಕ್ಕೆ ಒಪ್ಪಲಿಲ್ಲ. ಎರಡೂ ಪಕ್ಷಗಳು ಸ್ವತಂತ್ರವಾಗಿ ಚುನಾವಣೆ ಎದುರಿಸಿದವು. 288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 120ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಿತು. ಶಿವಸೇನೆ ಸುಮಾರು 60 ಸ್ಥಾನಗಳನ್ನ ಗೆದ್ದಿತು. ಆ ಬಳಿಕ ಶಿವಸೇನೆಯು ಬಿಜೆಪಿ ಜೊತೆ ಸೇರಿ ಸರಕಾರ ರಚಿಸಲು ನಿರ್ಧರಿಸಿತು. ಇದಾದ ಬಳಿಕವೂ ಬಿಜೆಪಿ ತನ್ನ ಬಿಗಿಪಟ್ಟ ಸಡಿಲಿಸಲಿಲ್ಲ. ಉಪಮುಖ್ಯಮಂತ್ರಿ, ಸಭಾಧ್ಯಕ್ಷ ಮತ್ತು ಪ್ರತಿಷ್ಠಿತ ಖಾತೆಗಳನ್ನು ಕೊಡಬೇಕೆಂಬ ಶಿವಸೇನೆಯ ಬೇಡಿಕೆಗಳಿಗೆ ಬಿಜೆಪಿ ಜಗ್ಗಲಿಲ್ಲ. ಅಷ್ಟೇ ಅಲ್ಲ, ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ವಿರುದ್ಧ ಅಭ್ಯರ್ಥಿಗಳನ್ನು ಬಿಜೆಪಿ ನಿಲ್ಲಿಸಿತು. ಮಹಾರಾಷ್ಟ್ರದಲ್ಲಿ ತನ್ನ ಪ್ರಭಾವ ವಿಸ್ತರಿಸಲು ಬಿಜೆಪಿಗೆ ಇದು ಅತ್ಯಗತ್ಯವಾಗಿತ್ತು.

ಕಳೆದ ಮೂರು ವರ್ಷಗಳಿಂದ ಎಲ್ಲಾ ರೀತಿಯಿಂದಲೂ ತನ್ನನ್ನು ಮೂಲೆಗುಂಪು ಮಾಡುತ್ತಿರುವ ಬಿಜೆಪಿಯನ್ನು ಶಿವಸೇನೆ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಾ ಎಂಬುದು ನಿಜವಾದ ಪ್ರಶ್ನೆ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳ ಸವಾಲನ್ನೂ ಶಿವಸೇನೆ ಎದುರಿಸಬೇಕು. ಯಾಕೆಂದರೆ, ಬಿಜೆಪಿ-ಶಿವಸೇನೆ ಮೈತ್ರಿ ಮುರಿದುಬಿದ್ದಿರುವುದರಿಂದ ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳನ್ನು ಹತ್ತಿರವಾಗುತ್ತಿವೆ. ಈ ಎರಡು ಪಕ್ಷಗಳ ಮರು-ಮೈತ್ರಿಯ ಮಾತುಕತೆಗಳು ಶುರುವಾಗಿಯೇ ಬಿಟ್ಟಿವೆ. “ನಾವು ಒಗ್ಗೂಡಿ ಚುನಾವಣೆ ಎದುರಿಸಿದರೆ 48 ಲೋಕಸಭಾ ಸ್ಥಾನಗಳ ಪೈಕಿ 35ರಲ್ಲಾದರೂ ಗೆಲ್ಲಬಹುದು” ಎಂದು ಮಹಾರಾಷ್ಟ್ರದ ಮಾಜಿ ಸಿಎಂವೊಬ್ಬರು ಕೆಲ ವಾರಗಳ ಹಿಂದಷ್ಟೇ ಹೇಳಿಕೆ ಕೊಟ್ಟಿದ್ದರು. ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಆ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ.

“ಮರಾಠ-ದಲಿತ-ಅಲ್ಪಸಂಖ್ಯಾತ” ಇದು ಕಾಂಗ್ರೆಸ್-ಎನ್​ಸಿಪಿಯ ವಿನ್ನಿಂಗ್ ಕಾಂಬಿನೇಶನ್ ಆಗಿದೆ. ಮಹಾರಾಷ್ಟ್ರದ ಉಚ್ಚ ನಾಯಕ ಶರದ್ ಪವಾರ್ ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲ, ಶಿವಸೇನೆಯ ಕೆಲ ವರ್ಗಗಳಿಗೂ ಸ್ವೀಕಾರ್ಹವೆನಿಸಿದ್ದಾರೆ.

“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 12 ಸ್ಥಾನಗಳನ್ನು ಮೀರಬಾರದು,” ಎಂದು ಶಿವಸೇನಾ ಮುಖಂಡರೊಬ್ಬರು ಸಂಸತ್​ನ ಚಳಿಗಾಲ ಅಧಿವೇಶನದ ವೇಳೆ ಆಫ್ ದ ರೆಕಾರ್ಡ್ ಆಗಿ ಹೇಳಿದ್ದರು.
Loading...

ಇನ್ನು, ಮಹಾರಾಷ್ಟ್ರದ ವಿದರ್ಭಾ ಪ್ರದೇಶದಲ್ಲಿ ಶಿವಸೇನೆಗೆ ಸರಿಯಾದ ನೆಲೆ ಇಲ್ಲ. ಇತ್ತ, ವಿದರ್ಭಾ ಪ್ರತ್ಯೇಕತಾ ಹೋರಾಟಕ್ಕೆ ಬೆಂಬಲ ಕೊಟ್ಟಿರುವ ಬಿಜೆಪಿ-ಆರೆಸ್ಸೆಸ್ಸಿಗರಿಗೆ ಮಹಾರಾಷ್ಟ್ರದ ಬೇರೆಡೆ ವಿರೋಧ ಎದುರಾಗಬಹುದು.

2019ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ಮ್ಯಾಜಿಕ್ ಮತ್ತೊಮ್ಮೆ ವರ್ಕೌಟ್ ಆಗಬಹುದೆಂಬ ನಂಬಿಕೆಯನ್ನು ಬಿಜೆಪಿ ಇನ್ನೂ ಇಟ್ಟುಕೊಂಡಿದೆ. ಲೋಕಸಭೆ ಚುನಾವಣೆ ಜೊತೆಜೊತೆಯಲ್ಲೇ ಮಹಾ ವಿಧಾನಸಭೆ ಚುನಾವಣೆಯನ್ನೂ ನಡೆಸುವ ಆಸಕ್ತಿಯನ್ನು ಸಿಎಂ ದೇವೇಂದ್ರ ಫಡ್ನವಿಸ್ ತೋರಿದ್ದಾರೆ. ಅದಕ್ಕಾಗಿ ಬೇಗನೇ ವಿಧಾನಸಭೆ ವಿಸರ್ಜಿಸುವ ಸೂಚನೆಯನ್ನೂ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ದಲಿತ, ಮರಾಠ ಶಕ್ತಿವೃದ್ಧಿಯಾಗುತ್ತಿರುವ; ನಗರೀಕರಣ, ನಿರುದ್ಯೋಗ, ರೈತ ಆತ್ಮಹತ್ಯೆಯಂತಹ ಸಮಸ್ಯೆಗಳ ನಡುವೆ ಈಗ ಹಿಂದುತ್ವದ ವೋಟ್ ಬ್ಯಾಂಕ್ ವಿಭಜನೆಯಾಗುತ್ತಿರುವುದು ಗೇಮ್ ಚೇಂಜರ್ ಎನಿಸಿದೆ. ಕಾಂಗ್ರೆಸ್, ಎನ್​ಸಿಪಿ ಮತ್ತು  ಕಾಂಗ್ರೆಸ್ ಪಕ್ಷಗಳಿಗೆ ಬಿಜೆಪಿಯೇ ಮೊದಲ ಟಾರ್ಗೆಟ್ ಆಗಿದ್ದರೂ ಈ ಮೂರೂ ಪಕ್ಷಗಳು ಒಮ್ಮತದ ಕಾರ್ಯಕಂತ್ರ ರೂಪಿಸುವುದು ಇನ್ನೂ ಖಚಿತವಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸರಿಯಾದ ಮೈತ್ರಿ ಇಲ್ಲ. ಸ್ವಾಭಿಮಾನಿ ಪಕ್ಷ ಈಗಾಗಲೇ ಎನ್​ಡಿಎ ತ್ಯಜಿಸಿದೆ. ಆರ್​ಪಿಐ(ಎ) ಹೇಗೆ ಬೇಕಾದರೂ ಬದಲಾಗುತ್ತದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೊದಲಿಂದಲೂ ಮೋದಿ ಮತ್ತು ಷಾ ಅವರನ್ನು ಟೀಕಿಸಿಕೊಂಡು ಬಂದಿದೆ.

ಬಿಜೆಪಿ ಸದ್ಯ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿರಬಹುದು. ಆದರೆ, ಮುಂಬರುವ ಚುನಾವಣೆಗಳಲ್ಲಿ ಫಡ್ನವಿಸ್, ಗಡ್ಕರಿ, ಚಂದ್ರಕಾಂತ್ ಪಾಟೀಲ್, ಪಂಕಚಾ ಮುಂದೆ ಮತ್ತು ವಿನೋದ್ ತಾವಡೆ ನೇತೃತ್ವದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟಕರವಾಗಬಹುದು.
First published:January 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...