Russia-Ukraine War: ರಷ್ಯಾದ ವಿರುದ್ಧ ‘ದೊಡ್ಡಣ್ಣ‘ ಗರಂ, 2 ಹಣಕಾಸು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ರಷ್ಯಾ-ಉಕ್ರೇನ್ ಸಂಘರ್ಷ ಜೋರಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಈ ನಡುವೆ ರಷ್ಯಾದ ವಿರುದ್ಧ 'ದೊಡ್ಡಣ್ಣ' ಗುಡುಗಿದ್ದಾನೆ. ಮತ್ತೊಂದೆಡೆ ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರಿಗೂ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.

ಅಮೆರಿಕ-ರಷ್ಯಾ ಅಧ್ಯಕ್ಷರ ಸಂಗ್ರಹ ಚಿತ್ರ

ಅಮೆರಿಕ-ರಷ್ಯಾ ಅಧ್ಯಕ್ಷರ ಸಂಗ್ರಹ ಚಿತ್ರ

  • Share this:
ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಸಂಘರ್ಷ (conflict) ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳಂತೂ ಇಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಪೂರ್ವ ಉಕ್ರೇನ್‌‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಪೂರ್ವ ಉಕ್ರೇನ್‌ ಭಾಗದ ಡೊನೆಟ್ಸ್ಕ್ (Donetsk) ಮತ್ತು ಲುಹಾನ್ಸ್ಕ್ (Luhansk) ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸುವ ಶಾಸನವೊಂದಕ್ಕೆ ಪುಟಿನ್ ಸಹಿ ಹಾಕಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧದ ಕಾರ್ಮೋಡ ದಟ್ಟವಾಗಿರುವ ಸಂದರ್ಭದಲ್ಲಿ ಪುಟಿನ್ ಅವರ ಈ ಘೋಷಣೆ ಮಹತ್ವದ ತಿರುವು ನೀಡಿದೆ. ಈ ಎರಡೂ ಪ್ರದೇಶಗಳಲ್ಲಿ ರಷ್ಯಾ ಬೆಂಬಲಿತ ಬಂಡುಕೋರರ ಪ್ರಾಬಲ್ಯ ಇದೆ. ಹೀಗಾಗಿ ರಷ್ಯಾ ಇವುಗಳನ್ನು ಸ್ವತಂತ್ರ ಎಂದು ಘೋಷಿಸಿ, ಬಳಿಕ ತನ್ನ ಗಡಿ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ. ಆದರೆ ರಷ್ಯಾದ ಈ ಸರ್ವಾಧಿಕಾರಿ ಧೋರಣೆ ವಿರುದ್ಧ ಅಮೆರಿಕಾ (America) ಸೇರಿದಂತೆ ಅನೇಕ ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ರಷ್ಯಾದ ನಿರ್ಧಾರದಿಂದ ಗರಂ ಆಗಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden), ರಷ್ಯಾದ ಎರಡು ಹಣಕಾಸು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.

 ಅಮೆರಿಕಾ ಅಧ್ಯಕ್ಷರ ಸ್ಪಷ್ಟನೆ

ಈ ಕುರಿತಂತೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕಾ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋ ಬೈಡನ್, ಎರಡು ದೊಡ್ಡ ರಷ್ಯಾದ ಹಣಕಾಸು ಸಂಸ್ಥೆಗಳು ಮತ್ತು ರಷ್ಯಾದ ಸಾರ್ವಭೌಮ ಸಾಲದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಹೇಳಿದ್ದಾರೆ.  ರಷ್ಯಾದ ಗಣ್ಯರು ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧವೂ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಆಕ್ರಮಣ ಮುಂದುವರೆದರೆ ಮತ್ತಷ್ಟು ನಿರ್ಬಂಧ

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ್ದಕ್ಕಾಗಿ ಯುನೈಟೆಡ್ ಸ್ಟೇಟ್ಸ್ ರಷ್ಯಾದ ವಿರುದ್ಧ ಮೊದಲ ಹಂತದ ನಿರ್ಬಂಧಗಳನ್ನು ಅಮೆರಿಕಾ ವಿಧಿಸುತ್ತಿದೆ ಮತ್ತು ಮತ್ತಷ್ಟು ಆಕ್ರಮಣಗಳು ನಡೆದರೆ ಇನ್ನಷ್ಟು ನಿರ್ಬಂಧಗಳನ್ನು ರಷ್ಯಾದ ಮೇಲೆ ಹೇರಲಿದ್ದೇವೆ ಅಂತ ತಿಳಿಸಿದ್ದಾರೆ.

ಇದನ್ನೂ ಓದಿ: Russia-Ukraine War: ಉಭಯ ರಾಷ್ಟ್ರಗಳ ಸಂಘರ್ಷಕ್ಕೆ ಕಾರಣವಾಗಿದ್ದು ಈ 10 ಅಂಶ!

ರಷ್ಯಾ ನಡೆ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ

ರಷ್ಯಾದ ಕ್ರಮಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ದೃಢವಾದ ಪ್ರತಿಕ್ರಿಯೆಯನ್ನು ಕೋರುತ್ತದೆ ಎಂದು ಬೈಡೆನ್ ಹೇಳಿದರು. ಉಕ್ರೇನ್‌ನ ಅಸ್ತಿತ್ವವನ್ನು ಪ್ರಶ್ನಿಸಿದ್ದಕ್ಕಾಗಿ ಪುಟಿನ್ ಐತಿಹಾಸಿಕ ಕಾನೂನುನ್ನು ಉಲ್ಲಂಘಿಸಿದ್ದಾರೆ ಅಂತ ಬೈಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ, ಸ್ವತಂತ್ರ ಎಂದು ಘೋಷಿಸಲು ಮುಂದಾಗಿರುವ ಉಕ್ರೇನ್‌ನ ಎರಡು ಪ್ರದೇಶಗಳಲ್ಲಿ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ವ್ಯವಹಾರವನ್ನು ನಡೆಸದಂತೆ ನಿರ್ಬಂಧ ಹೇರಲು ಅಮೆರಿಕ ಮುಂದಾಗಿದೆ. ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು ಕೂಡ ನಿರ್ಬಂಧಗಳನ್ನು ವಿಧಿಸುವುದಾಗಿ ಹೇಳಿದ್ದಾರೆ.

ಉಕ್ರೇನ್‌ನಿಂದ ಭಾರತೀಯರ ಏರ್‌ಲಿಫ್ಟ್

ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸ್ವದೇಶಕ್ಕೆ ಮರಳುವಂತೆ ಕೈವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: Russia-Ukraine: ರಷ್ಯಾ - ಉಕ್ರೇನ್‌ ಬಿಕ್ಕಟ್ಟು- ಭಾರತಕ್ಕೆ ಇಕ್ಕಟ್ಟು

ನಿನ್ನೆ 242 ಮಂದಿ ಭಾರತೀಯರ ಏರ್‌ಲಿಫ್ಟ್

ಈಗಾಗಲೇ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಮರಳಿ ಕರೆತರುವ ಸಲುವಾಗಿ ಭಾರತದ ಏರ್ ಇಂಡಿಯಾದಿಂದ ಏರ್‌ ಲಿಫ್ಟ್‌ ಮಾಡುವ ಕಾರ್ಯ ನಡೆಯುತ್ತಿದೆ.  ಈಗಾಗಲೇ ನಿಯೋಜನೆಗೊಂಡಿರುವ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ ಮೊದಲನೆಯದು ಮಂಗಳವಾರ ಬೆಳಗ್ಗೆ 7:36ಕ್ಕೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೊರಟಿದ್ದು, ನಿನ್ನೆ ರಾತ್ರಿಯೇ 242 ಭಾರತೀಯರ ಏರ್ ಲಿಫ್ಟ್ ಮಾಡಲಾಗಿದೆ.

ಇಂದು ಏರ್‌ ಲಿಫ್ಟ್ ಕಾರ್ಯಾಚರಣೆ ಮುಂದುವರೆಯಲಿದ್ದು, ಮತ್ತಷ್ಟು ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ.
Published by:Annappa Achari
First published: