Joe Biden: ಕಮಲಾ ಹ್ಯಾರೀಸ್ಗೆ ಮಾತ್ರವಲ್ಲ ಜೋ ಬಿಡೆನ್ಗೂ ಇದೆ ಭಾರತದ ನಂಟು!
ತಮಿಳುನಾಡು ಮೂಲದ ಕಮಲಾ ಹ್ಯಾರೀಸ್ ಅವರಿಗೆ ಮಾತ್ರವಲ್ಲದೆ, ಜೋ ಬಿಡೆನ್ ಅವರಿಗೂ ಭಾರತದ ಜೊತೆಗೆ ನಂಟಿದೆ ಎಂಬುದು ಮತ್ತೆ ಸುದ್ದಿಯಾಗುತ್ತಿದೆ. 7 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಜೋ ಬಿಡೆನ್ ಹೇಳಿದ್ದ ಕತೆ ಇದೀಗ ಮತ್ತೆ ಸದ್ದಾಗುತ್ತಿದೆ.
ನವದೆಹಲಿ (ನ. 9): ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗುವ ಡೊನಾಲ್ಡ್ ಟ್ರಂಪ್ ಕನಸು ಭಗ್ನಗೊಂಡಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಭಾರತ ಮೂಲದ ಕಮಲಾ ಹ್ಯಾರೀಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮಿಳುನಾಡು ಮೂಲದ ಕಮಲಾ ಹ್ಯಾರೀಸ್ ಅವರಿಗೆ ಮಾತ್ರವಲ್ಲದೆ, ಜೋ ಬಿಡೆನ್ ಅವರಿಗೂ ಭಾರತದ ಜೊತೆಗೆ ನಂಟಿದೆ ಎಂಬುದು ಮತ್ತೆ ಸುದ್ದಿಯಾಗುತ್ತಿದೆ. 7 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಜೋ ಬಿಡೆನ್ ಹೇಳಿದ್ದ ಕತೆ ಇದೀಗ ಮತ್ತೆ ಸದ್ದಾಗುತ್ತಿದೆ.
2013ರಲ್ಲಿ ಜೋ ಬಿಡೆನ್ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಆಗ ಅವರು ಮುಂಬೈನಲ್ಲಿ ಕೆಲವು ದಿನಗಳ ಕಾಲ ಉಳಿದುಕೊಂಡಿದ್ದರು. ಮುಂಬೈನಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡುವಾಗ 'ನನ್ನ ದೂರದ ಸಂಬಂಧಿಕರು ಮುಂಬೈನಲ್ಲಿ ನೆಲೆಸಿದ್ದಾರೆ. ಐವರು ಬಿಡೆನ್ಗಳು ಮುಂಬೈನಲ್ಲಿದ್ದಾರೆ' ಎಂದು ಹೇಳಿದ್ದರು. ಜೋ ಬಿಡೆನ್ ಅವರ ಪೂರ್ವಜರು ಮುಂಬೈನಲ್ಲಿ ವಾಸವಾಗಿದ್ದರು. ಭಾರತದಲ್ಲಿ ಬ್ರಿಟಿಷರ ಆಡಳಿತ ಇದ್ದಾಗ ಜೋ ಬಿಡೆನ್ ಅವರ ಐದು ತಲೆಮಾರಿನ ಹಿಂದಿನ ವಂಶಜರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಅವರು ಭಾರತೀಯ ಮಹಿಳೆಯನ್ನು ಮದುವೆಯಾಗಿ, ಇಲ್ಲೇ ನೆಲೆಸಿದರು ಎಂದು ಜೋ ಬಿಡೆನ್ ಹೇಳಿಕೊಂಡಿದ್ದರು.
1972ರಲ್ಲಿ ಜೋ ಬಿಡೆನ್ ಅಮೆರಿಕದ ಸೆನೆಟರ್ ಆಗಿ ಆಯ್ಕೆಯಾಗಿದ್ದರು. ಆಗ ಅವರಿಗೆ ಭಾರತದಿಂದ ಒಂದು ಪತ್ರ ಬಂದಿತ್ತು. ಆ ಪತ್ರದ ಮೇಲೆ ಬಿಡೆನ್ ಫ್ರಮ್ ಮುಂಬೈ ಎಂದು ಬರೆದಿತ್ತು. 2013ರ ಜುಲೈನಲ್ಲಿ ಜೋ ಬಿಡೆನ್ ಮುಂಬೈಗೆ ಬಂದಿದ್ದಾಗ ಆ ಪತ್ರದ ಬಗ್ಗೆ ಮಾತನಾಡಿದ್ದರು.
2015ರಲ್ಲಿ ಅಮೆರಿಕದ ವಾಷಿಂಗ್ಟನ್ನಲ್ಲಿ ಮಾತನಾಡುವಾಗಲೂ ಭಾರತದ ಮುಂಬೈನಲ್ಲಿ ಐವರು ಬಿಡೆನ್ಗಳಿದ್ದಾರೆ ಎಂದು ಜೋ ಬಿಡೆನ್ ಹೇಳಿದ್ದರು. ನನ್ನ ಪೂರ್ವಜರಾದ ಜಾರ್ಜ್ ಬಿಡೆನ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದರು. ಅವರು ನಿವೃತ್ತರಾದ ಬಳಿಕ ಭಾರತದಲ್ಲೇ ನೆಲೆಸಲು ಇಷ್ಟಪಟ್ಟರು. ಅವರು ಭಾರತೀಯ ಮಹಿಳೆಯನ್ನೇ ಮದುವೆಯಾಗಿ ಮುಂಬೈನಲ್ಲಿ ನೆಲೆಸಿದರು. ಅವರ ಕುಟುಂಬಸ್ಥರು ಇನ್ನೂ ಭಾರತದಲ್ಲಿದ್ದಾರೆ ಎಂದು ಹೇಳಿದ್ದರು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ