HR RameshHR Ramesh
|
news18-kannada Updated:January 9, 2020, 6:58 PM IST
ರಾಷ್ಟ್ರಪತಿ ಭವನದ ಕಡೆಗೆ ಸಾಗುತ್ತಿರುವ ಜೆಎನ್ಯು ವಿದ್ಯಾರ್ಥಿಗಳು.
ನವದೆಹಲಿ: ಜೆಎನ್ಯು ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ, ಇಂದು ವಿದ್ಯಾರ್ಥಿಗಳು ರಾಷ್ಟ್ರಪತಿ ಭವನ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ, ಪೊಲೀಸರು ವಿದ್ಯಾರ್ಥಿಗಳನ್ನು ಮಾರ್ಗಮಧ್ಯೆಯೇ ತಡೆದರು. ಶಾಂತಿ ಕಾಪಾಡಿ ಮತ್ತು ಪ್ರತಿಭಟನೆ ನಿಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಪೊಲೀಸರು ಮನವಿ ಕೂಡ ಮಾಡಿಕೊಂಡಿದ್ದಾರೆ.
ಜೆಎನ್ಯು ಕುಲಪತಿ ಜಗದೀಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಬೇಕು ಎಂಬುದು ವಿದ್ಯಾರ್ಥಿಗಳು ಮತ್ತು ಬೋಧಕರ ಆಗ್ರಹವಾಗಿದೆ. ಕುಲಪತಿಗಳ ಸಹಭಾಗಿತ್ವದಲ್ಲೇ ಹಲ್ಲೆಕೋರರು ಭಾನುವಾರ ವಿವಿ ಆವರಣದೊಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂದು ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದಾಗಲೂ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದೀಗ ಮತ್ತೆ ಅದೇ ಬೇಡಿಕೆಯೊಂದಿಗೆ ರಾಷ್ಟ್ರಪತಿ ಭವನದ ಕಡೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಯನ್ನು ನಿರಾಕರಿಸಿರುವ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖೇರಾ, ಜೆಎನ್ಯು ಕುಲಪತಿ ಬದಲಾವಣೆ ಸಮಸ್ಯೆಗೆ ಪರಿಹಾರವಲ್ಲ ಎಂದು ವಿದ್ಯಾರ್ಥಿಗಳ ಭೇಟಿ ಬಳಿಕ ಹೇಳಿದರು. ನಾವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜೊತೆಗೆ ರಾಜಿ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕುಲಪತಿ ಬದಲಾವಣೆಯಷ್ಟೇ ನಮ್ಮ ಯೋಚನೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಶಾ ಘೋಷ್ ಅವರು ಸಭೆ ಬಳಿಕ ತಮ್ಮ ನಿರ್ಧಾರ ಹೇಳಿದರು.
ಇದನ್ನು ಓದಿ: ಜೆಎನ್ಯು ಹಿಂಸಾಚಾರ: ಮೇಲಿಂದ ಆದೇಶ ಬಂದಾಗ ದೆಹಲಿ ಪೊಲೀಸರು ಏನು ಮಾಡಲು ಸಾಧ್ಯ?ಸಿಎಂ ಕೇಜ್ರಿವಾಲ್
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಎಚ್ಆರ್ಡಿ ಸಚಿವಾಲಯದ ಅಧಿಕಾರಿಗಳು ಜೆಎನ್ಯು ಕುಲಪತಿ ಜಗದೀಶ್ ಕುಮಾರ್ ಅವರೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಂವಹನ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Published by:
HR Ramesh
First published:
January 9, 2020, 6:58 PM IST