ಜಿಯೋದ ಡೇಟಾ ಸುಗ್ಗಿ ಇನ್ನೆಷ್ಟು ದಿನ? ಇಲ್ಲಿದೆ ಲೆಕ್ಕಾಚಾರ


Updated:July 24, 2018, 10:50 PM IST
ಜಿಯೋದ ಡೇಟಾ ಸುಗ್ಗಿ ಇನ್ನೆಷ್ಟು ದಿನ? ಇಲ್ಲಿದೆ ಲೆಕ್ಕಾಚಾರ

Updated: July 24, 2018, 10:50 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜು. 23): ಟೆಲಿಕಾಂ ಕಂಪನಿಗಳು ಯದ್ವಾತದ್ವಾ ದರಗಳನ್ನ ಹಾಕಿ ಗ್ರಾಹಕರಿಗೆ ಬರೆ ಎಳೆಯುತ್ತಿದ್ದ ಸಂದರ್ಭದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ. ಆಕರ್ಷಕ ಡೇಟಾ ಪ್ಯಾಕೇಜ್​ಗಳ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಒಂದು ಜಿಬಿ ಡೇಟಾಗೆ ನೂರಾರು ರುಪಾಯಿ ತೆರುತ್ತಿದ್ದ ಗ್ರಾಹಕರ ಪಾಲಿಗೆ ಜಿಯೋ ಹೊಸ ಆಶೋತ್ತರವಾಗಿ ಕಂಡಿತು. ಎದುರಾಳಿ ಟೆಲಿಕಾಂ ಕಂಪನಿಗಳು ತತ್ತರಿಸಿದವು. ಪ್ರೈಸ್ ವಾರ್ ಶುರುವಾಯಿತು. ಜಿಯೋ ರೀತಿ ತಾವು ದರ ಇಳಿಸಿದರೆ ಕಂಪನಿ ಮುಚ್ಚಬೇಕಾಗುತ್ತದೆ ಎಂದು ಏರ್​ಟೆಲ್ ಮೊದಲಾದವು ಅಳಲು ತೋಡಿಕೊಂಡವು. ಪ್ರಧಾನಿ ಮೋದಿ ಅವರೇ ಜಿಯೋದ ಬೆನ್ನಿಗೆ ನಿಂತಿದ್ದಾರೆ. ಇದು ಒಳ್ಳೆಯ ಮಾರುಕಟ್ಟೆ ನೀತಿಯಲ್ಲ ಎಂಬ ದೂರುಗಳು ಮತ್ತು ಆಕ್ಷೇಪಗಳೂ ವ್ಯಕ್ತವಾದವು. ಆದರೂ ಅಂಬಾನಿ ಅವರ ಜಿಯೋ ಡೇಟಾ ಜಾತ್ರೆ ನಿಲ್ಲಲಿಲ್ಲ. ಎದುರಾಳಿ ಟೆಲಿಕಾಂ ಕಂಪನಿಗಳು ಜಿಯೋ ಜೊತೆಗಿನ ಯುದ್ಧದಲ್ಲಿ ಜೀವಂತವಾಗಿರಲು ಬೆಲೆ ಇಳಿಸುವುದು ಅನಿವಾರ್ಯವಾಯಿತು. ಇದರೊಂದಿಗೆ ಕಂಪನಿಗಳ ಮಧ್ಯೆ ಪೈಪೋಟಿ ಶುರುವಾಯಿತು. ಬೆಲೆಗಳು ಸಾಲುಸಾಲಾಗಿ ಇಳಿಯಲು ಶುರುವಾದವು. ತಿಂಗಳಿಗೆ ಒಂದು ಜಿಬಿ ಡೇಟಾ ಕೊಡುತ್ತಿದ್ದವರು, ಅದೇ ಬೆಲೆಗೆ ಈಗ 30-50 ಜಿಬಿ ಡೇಟಾ ಕೊಡುತ್ತಿದ್ಧಾರೆ. ಈ ಪರಿ ಬದಲಾವಣೆಗೆ ಜಿಯೋ ಎಂಟ್ರಿಯೇ ಮುನ್ನುಡಿಯಾಗಿದ್ದು ಮಾತ್ರ ನಿಜ.

ಒಬ್ಬ ಚಾಣಾಕ್ಷ್ಯ ಉದ್ಯಮಿಯಾದ ಅಂಬಾನಿ ಅವರು ಲಾಭವಿಲ್ಲದೆ ಇಷ್ಟು ಕಡಿಮೆ ದರದಲ್ಲಿ ಡೇಟಾ ಪ್ಯಾಕೇಜ್ ಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಉದ್ಯಮ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಒಂದು ವರ್ಷದವರೆಗೆ ಮಾತ್ರ ಜಿಯೋ ಆಟ ನಡೆಯುತ್ತದೆ ಎಂಬ ಲೆಕ್ಕಾಚಾರವೂ ಶುರುವಾಗಿತ್ತು. ಆದರೆ, ಎರಡೂವರೆ ವರ್ಷವಾದರೂ ಜಿಯೋ ಬೆಲೆಯಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಹಾಗಾದರೆ, ಇಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಇನ್ನೆಷ್ಟು ದಿನ ಮುಂದುವರಿಯಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

2015ರ ಡಿಸೆಂಬರ್​ನಲ್ಲಿ ಪ್ರಾರಂಭವಾದ ಜಿಯೋ ಈ ಎರಡೂವರೆ ವರ್ಷದಲ್ಲಿ ಬರೋಬ್ಬರಿ 21.5 ಕೋಟಿ ಗ್ರಾಹಕರನ್ನು ಸಂಪಾದಿಸಿದೆ. ಇಷ್ಟು ಬೇಗ ಇಷ್ಟು ಎತ್ತರಕ್ಕೆ ಜಿಯೋ ಏರುತ್ತದೆ ಎಂದು ಅಂದಾಜಿಸಿದ್ದವರು ಯಾರೂ ಇರಲಿಲ್ಲ. ಏರ್​ಟೆಲ್, ವೊಡಾಫೋನ್ ಮತ್ತು ಐಡಿಯಾ ಸಂಸ್ಥೆಗಳು ಜಿಯೋದಕ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿವೆ. ಐಡಿಯಾ ಮತ್ತು ವೊಡಾಫೋನ್ ವಿಲೀನ ಆಗುವ ಸಾಧ್ಯತೆ ಇರುವುದರಿಂದ ದೇಶದಲ್ಲಿ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಅಸ್ತಿತ್ವದಲ್ಲಿರಲಿವೆ. ಸದ್ಯ ಏರ್​ಟೆಲ್ ಸುಮಾರು 35 ಕೋಟಿ ಗ್ರಾಹಕರನ್ನು ಹೊಂದಿ ನಂಬರ್ ಒನ್ ಎನಿಸಿದೆ. ಒಂದು ವೇಳೆ, ಐಡಿಯಾವನ್ನು ವೊಡಾಫೋನ್ ಖರೀದಿ ಮಾಡಿದ್ದೇ ಅದಲ್ಲಿ ವೊಡಾಫೋನ್ ನಂಬರ್ ಒನ್ ಪಟ್ಟಕ್ಕೆ ಹೋಗುತ್ತದೆ. ಏರ್​ಟೆಲ್ ಮತ್ತು ವೊಡಾಫೋನ್ ಅವರಿಗೆ ಸ್ಪರ್ಧೆಯೊಡ್ಡಬೇಕಾದರೆ ಜಿಯೋ ಕೂಡ ಅವರಷ್ಟೇ ಪ್ರಮಾಣದಲ್ಲಿ ಗ್ರಾಹಕರನ್ನ ಹೊಂದಬೇಕಾಗುತ್ತದೆ. ಅಂದರೆ ಮಾರುಕಟ್ಟೆಯ ಶೇ. 33ರಷ್ಟು ಗ್ರಾಹಕರನ್ನು ಸಂಪಾದಿಸುವುದು ಜಿಯೋದ ಗುರಿ ಆಗಿದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮೊಬೈಲ್ ಬಳಕೆದಾರರ ಪ್ರಮಾಣವು ಸದ್ಯದಲ್ಲಿ 113 ಕೋಟಿ ಇದೆ. ಇನ್ನೆರಡು ಅಥವಾ ಮೂರು ವರ್ಷದಲ್ಲಿ ಈ ಸಂಖ್ಯೆಯು 120 ಕೋಟಿ ತಲುಪುತ್ತದೆ. ಸದ್ಯ 21.5 ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋ, ಈ ಪ್ರಮಾಣವನ್ನು 40 ಕೋಟಿಗೆ ಏರಿಸುವ ಧಾವಂತದಲ್ಲಿದೆ. ಅಂದರೆ, ಇನ್ನೆರಡು ವರ್ಷದಲ್ಲಿ ಇನ್ನೂ 18 ಕೋಟಿ ಗ್ರಾಹಕರನ್ನು ಸೆಳೆದುಕೊಳ್ಳುವುದು ಜಿಯೋಗೆ ಅನಿವಾರ್ಯವಾಗಿದೆ. ಹೀಗಾಗಿ, ಇನ್ನೂ ಹೆಚ್ಚು ಆಕರ್ಷಕ ಡೇಟಾ ಪ್ಯಾಕೇಜ್​ಗಳನ್ನ ಕೊಡುವುದನ್ನು ಜಿಯೋ ತಪ್ಪಿಸುವುದಿಲ್ಲ. ಇದು ಇನ್ನೆರಡು ವರ್ಷವಾದರೂ ಮುಂದುವರಿಯಬಹುದು. ಗ್ರಾಹಕರ ಪ್ರಮಾಣ 40 ಕೋಟಿ ಗಡಿ ಸಮೀಪ ಬರುತ್ತಿದ್ದಂತೆಯೇ ಜಿಯೋದ ನಿಜವಾದ ಲಾಭದ ಲೆಕ್ಕಾಚಾರಗಳು ಶುರುವಿಟ್ಟುಕೊಳ್ಳುವ ಸಾಧ್ಯತೆ ಇದೆ. ಆಗ ಬೆಲೆ ಸಮರ ಇಳಿದು ಮೂರು ಕಂಪನಿಗಳು ಸೆಟ್ಲ್ ಆಗಬಹುದು ಎಂದು ಹಾಂಕಾಂಗ್ ಮೂಲದ ಬ್ಲೂಮ್​ಬರ್ಗ್ ಇಂಟೆಲಿಜೆನ್ಸ್ ಸಂಸ್ಥೆಯು ವಿಶ್ಲೇಷಿಸಿದೆ.

ಜಿಯೋ ಎಂಟ್ರಿಯಿಂದ ಡೇಟಾ ಸುಗ್ಗಿ ಅನುಭವಿಸಿದ ಗ್ರಾಹಕರು ಇನ್ನೆರಡು ವರ್ಷದಲ್ಲಿ ಹೆಚ್ಚು ದರ ತೆತ್ತು ಡೇಟಾ ಪಡೆಯಬೇಕಾಗಬಹುದು.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ