ನವದೆಹಲಿ: ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ನಾಯಕ ಕನ್ಹಯ್ಯ ಕುಮಾರ್ (Kanhaiya Kumar) ಕಾಂಗ್ರೆಸ್ ಸೇರ್ಪಡೆಗೆ 'ಕೈ'ಅಂಗಳದಲ್ಲಿ ಆಂತರಿಕ ಕಲಹ ಶುರುವಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಮನೀಷ್ ತಿವಾರಿ ಸೋಶಿಯಲ್ ಮೀಡಿಯಾದಲ್ಲಿ ಕನ್ಹಯ್ಯ ಸೇರ್ಪಡೆಗೆ ಅಸಮಾಧಾನ ಹೊರ ಹಾಕಿದ್ದಾರೆ. ಟ್ವೀಟ್ ಮಾಡಿರುವ ಮನೀಷ್ ತಿವಾರಿ, 1973ರಲ್ಲಿ ಮುದ್ರಣಗೊಂಡ 'ಕಮ್ಯುನಿಸ್ಟ್ ಇನ್ ಕಾಂಗ್ರೆಸ್' ಪುಸ್ತಕವನ್ನು ಮತ್ತೊಮ್ಮೆ ಓದುವ ಸಮಯ ಬಂದಿದೆ. ಎಷ್ಟೋ ವಿಷಯಗಳ ಬದಲಾಗಿರಬಹುದು. ಆದ್ರೆ ಇಂದು ಕೆಲವೇ ಹಾಗೇ ಇವೆ. ನಾನು ಇಂದಿನಿಂದ ಮತ್ತೊಮ್ಮೆ ಈ ಪುಸ್ತಕವನ್ನು ಓದುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಯುವ ಮುಖಂಡರನ್ನ ಸೆಳೆಯುತ್ತಿರುವ ಕಾಂಗ್ರೆಸ್:
ಕನ್ಹಯ್ಯ ಕುಮಾರ್ ಜೊತೆ ಗುಜರಾತಿನ ದಲಿತ ಕಾರ್ಯಕರ್ತ ಮತ್ತು ಶಾಸಕ ಜಿಗ್ನೇಶ್ ಮೇವಾನಿ (Jignesh Mewani) ಇಂದು ಕಾಂಗ್ರೆಸ್ ಸೇರ್ಪಡೆಯಾದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಇಬ್ಬರು ಕಾಂಗ್ರೆಸ್ ಪ್ರವೇಶಿಸಿದರು. ಈ ಸಮಯದಲ್ಲಿ ಪಾಟಿದಾರ್ ಸಮುದಾಯದ ಹಾರ್ದಿಕ್ ಪಟೇಲ್ ಸಹ ಉಪಸ್ಥಿತರಿದ್ದರು. ಹಲವು ರಾಜ್ಯಗಳಲ್ಲಿ ಮಕಾಡೆ ಮಲಗಿರುವ ಕಾಂಗ್ರೆಸ್ ಯುವ ನಾಯಕರ ಮೇಲೆ ಮತ್ತೊಮ್ಮೆ ಪುಟಿದೇಳಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯ ವಿಷಯ ಬಹುದಿನಗಳಿಂದ ಚರ್ಚೆಯಲ್ಲಿತ್ತು. ಕಳೆದ ವಾರ ದೆಹಲಿಯಲ್ಲಿ ಮಾತನಾಡಿದ್ದ ಸಿಪಿಐ (CPI) ಮುಖಂಡ ಡಿ.ರಾಜಾ, ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಆದ್ರೆ ಸಿಪಿಐ ಮುಖಂಡರ ಸಭೆಗೆ ಕನ್ಹಯ್ಯ ಕುಮಾರ್ ಗೈರಾಗಿದ್ದರು. ಅಂದು ಕನ್ಹಯ್ಯ ಕುಮಾರ್ ಯಾರ ಸಂಪರ್ಕಕ್ಕೂ ಲಭ್ಯವಾಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ನಿರಂತರವಾಗಿ ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತಿದ್ದಾರೆ.
ಇದನ್ನು ಓದಿ: ಬಿಜೆಪಿ ಸೇರ್ತಾರಾ ಮಾಜಿ ಸಿಎಂ ಅಮರೀಂದರ್ ಸಿಂಗ್? ಶಾ- ನಡ್ಡಾ ಭೇಟಿ ಸಾಧ್ಯತೆ
ತುಕಡೇ ಗ್ಯಾಂಗ್ ಜೊತೆ ಕಾಂಗ್ರೆಸ್ ಎಂದ ಬಿಜೆಪಿ
ಬಿಜೆಪಿ (BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವೀಯಾ (Amit Malviya), ಸರ್ಜಿಕಲ್ ಸ್ಟ್ರಕ್ ಎರಡನೇ ವಾರ್ಷಿಕೋತ್ಸವದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಭಾರತ್ ತೇರೆ ತುಕಡೇ ಹೋಂಗೇ' ಖ್ಯಾತಿಯ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿಯನ್ನು ಕಾಂಗ್ರೆಸ್ ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಇದೇನೂ ಕಾಕತಾಳೀಯ ಘಟನೆ ಅಲ್ಲ. ಭಾರತ ವಿಭಜಿಸಿ ತಂಡಗಳ ಜೊತೆ ಕೈ ಜೋಡಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: 10ದಿನದ ಉರಿ ಕಾರ್ಯಾಚರಣೆ ಅಂತ್ಯ; ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಎಲ್ಇಟಿ ಉಗ್ರನ ವಶಕ್ಕೆ ಪಡೆದ ಭಾರತೀಯ ಸೇನೆ
ಯಾರು ಈ ಕನ್ಹಯ್ಯ ಕುಮಾರ್?
ಕನ್ಹಯ್ಯ ಕುಮಾರ್ 2016ರಲ್ಲಿ ಜೆಎನ್ಯು (JNU) ದೇಶವಿರೋಧಿ ಹೇಳಿಕೆಯಿಂದಾಗಿ ಮುನ್ನಲೆಗೆ ಬಂದಿದ್ದರು. ಅಂದು ವೈರಲ್ ಆಗಿದ್ದ ವಿಡಿಯೋದಲ್ಲಿ ಆಜಾದಿ-ಆಜಾದಿ ಎಂದು ಕನ್ಹಯ್ಯಾ ಘೋಷಣೆ ಕೂಗಿದ್ದರು. ಈ ವಿವಾದದ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಸಿಪಿಐ ಸೇರ್ಪಡೆಯಾಗಿದ್ದರು. ಬೇಗೂಸರೈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು.
ಬಿಹಾರ್ ನಲ್ಲಿ ಕಾಂಗ್ರೆಸ್ಗೆ ಸಂಜೀವಿನಿ ಆಗ್ತಾರಾ ಕನ್ಹಯ್ಯ?:
ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳಾದ ಜೆಡಿಯು ಮತ್ತು ಆರ್ ಜೆಡಿ ಮುನ್ನಲೆಯಲ್ಲಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡನೇ ಸಾಲಿನಲ್ಲಿವೆ. ಆರ್ಜೆಡಿ ತೇಜಸ್ವಿ ಮತ್ತು ಲೋಕ್ ಜನಶಕ್ತಿ ಪಾರ್ಟಿಯನ್ನು ಚಿರಾಗ್ ಪಾಸ್ವಾನ್ ಮುನ್ನಡೆಸುತ್ತಿದ್ದಾರೆ. ಇಬ್ಬರು ಯುವ ನಾಯಕರು. ಹಾಗಾಗಿ ಇರ್ವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕನ್ಹಯ್ಯ ಕುಮಾರ್ ಅವರನ್ನ ಮುನ್ನಲೆಗೆ ತರಲು ಪ್ಲಾನ್ ಮಾಡಿಕೊಂಡಂತೆ ಕಾಣಿಸುತ್ತಿದೆ. ಸದ್ಯ ಬಿಹಾರದಲ್ಲಿ ಕನ್ಹಯ್ಯ ಕುಮಾರ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ.
ಜಿಗ್ನೇಶ್ ಗೆಲುವಿಗೆ ಕಾರಣವಾಗಿತ್ತು ಕಾಂಗ್ರೆಸ್:
ಜಿಗ್ನೇಶ್ ಮೇವಾನಿ ಗುಜರಾತಿನ ದಲಿತ ಸಮುದಾದಯದ ಯುವ ಮುಖ. 2017ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಜಿಗ್ನೇಶ್ ಮೇವಾನಿ ವಿರುದ್ಧ ಅಭ್ಯರ್ಥಿ ಹಾಕದೇ ಬೆಂಬಲ ನೀಡಿತ್ತು. ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್ ಡ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
-ಮಹ್ಮದ್ ರಫೀಕ್ ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ