ರಾಂಚಿ: ಇಂಡಿಗೋ ವಿಮಾನದಲ್ಲಿ (IndiGo Flight) ಧೂಮಪಾನ ಮಾಡಿದ್ದಕ್ಕಾಗಿ ಜಾರ್ಖಂಡ್ ಮೂಲದ ಬ್ಲಾಗರ್ (Jharkhand Blogger) ಐಶ್ವರ್ಯ ರೈರನ್ನು (Aishwarya Rai)ಬಂಧಿಸಲಾಗಿದೆ ಎಂದು ವರದಿಯಾಗಿದೆ. ಐಶ್ವರ್ಯ ರೈರನ್ನು ವಿಮಾನ ರಾಂಚಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಬಂಧಿಸಲಾಗಿದೆ. ಧೂಮಪಾನ ಮಾಡಿದ್ದರಿಂದ ಶೌಚಾಲಯದಲ್ಲಿ ಅಲಾರಾಂ ಹೊಡೆದುಕೊಂಡಿದೆ. ತಕ್ಷಣ ಸಿಬ್ಬಂದಿ ಅಲ್ಲಿಗೆ ತೆರಳಿ ನೋಡಿದಾಗ ಐಶ್ವರ್ಯ ರೈ ಸಿಗರೇಟ್ ಸೇದುತ್ತಿರುವುದು ಬೆಳಕಿಗೆ ಬಂದಿದೆ. ವಿಮಾನಗಳಲ್ಲಿ ಧೂಮಪಾನ (Smoking) ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಏಕೆಂದರೆ ಇದು ವಿಮಾನದಲ್ಲಿ ಬೆಂಕಿ ಅವಘಡಕ್ಕೆ ಕಾರಣವಾಗಬಹುದು. ಇದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.
ವಿಮಾನದಲ್ಲಿ ಲೈಟರ್ ನಿಷೇಧ
ವಿಮಾನ ಸಂಸ್ಥೆಗಳು ಸಾಮಾನ್ಯವಾಗಿ ವಿಮಾನದಲ್ಲಿ ಸಿಗರೇಟ್‌ಗಳನ್ನು ಸಾಗಿಸಲು ಅನುಮತಿಸುತ್ತಾರೆ. ಆದರೆ ಲೈಟರ್‌ಗಳು ಮತ್ತು ಬೆಂಕಿಕಡ್ಡಿಗಳನ್ನು ವಿಮಾನಗಳಲ್ಲಿ ನಿಷೇಧಿಸಲಾಗಿದೆ. ಆದರೆ ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮತ್ತು ವ್ಯಾಪಿಂಗ್ ಸಾಧನಗಳನ್ನು ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ನಿಷೇಧಿಸಲಾಗಿದೆ.
ಪೊಲೀಸರಿಗೆ ಹಸ್ತಾಂತರ
ಏವಿಯೇಷನ್ ನ್ಯೂಸ್ ಪೋರ್ಟಲ್ ಜೆಟ್ ಅರೆನಾ ವರದಿ ಪ್ರಕಾರ, 29 ವರ್ಷದ ಐಶ್ವರ್ಯ ರೈ ಅವರು ಫೆಬ್ರವರಿ 18 ರಂದು ಮುಂಬೈನಿಂದ ರಾಂಚಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವೆಬ್‌ಸೈಟ್ ವರದಿಮಾಡಿದೆ.
ಇದನ್ನೂ ಓದಿ:Air India: ಏರ್ ಇಂಡಿಯಾದಿಂದ ಮಹತ್ವದ ಡೀಲ್, ಭಾರತದ ವಾಯುಯಾನ ಉದ್ಯಮದ ಮೇಲೆ ಹೀಗೆಲ್ಲ ಆಗುತ್ತೆ ಪರಿಣಾಮ
ವಿಡಿಯೋ ಮಾಡುವುದಕ್ಕಾಗಿ ಧೂಮಪಾನ
ಐಶ್ವರ್ಯ ರೈ ಬ್ಲಾಗರ್ ಆಗಿದ್ದರುವುದರಿಂದ ವಿಡಿಯೋ ಹುಚ್ಚಿನಿಂದ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಮಾನದಲ್ಲಿ ಧೂಮಪಾನ ಮಾಡುವುದನ್ನು ವೀಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಪ್ಲೋಡ್ ಮಾಡಲು ಬಯಸಿದ್ದೆ ಎಂದು ರೈ ಪೊಲೀಸರಿಗೆ ತಿಳಿಸಿದ್ದಾರೆ. ಏರ್‌ಪೋರ್ಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಆನಂದ್ ಕುಮಾರ್ ಘಟನೆಯನ್ನು ಖಚಿತಪಡಿಸಿದ್ದು, ರೈ ಅವರ ಈ ಸಾಹಸ ಹಲವರ ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿತ್ತು ಎಂದು ಹೇಳಿದ್ದಾರೆ.
ಸಿಗರೇಟ್ ಮತ್ತು ಲೈಟರ್ ತಂದದ್ದು ಹೇಗೆ?
ಐಶ್ವರ್ಯ ಬಿಗಿ ಭದ್ರತೆಯ ನಡುವೆ ಹೇಗೆ ಸಿಗರೇಟ್ ಮತ್ತು ಲೈಟರ್ ಅನ್ನು ವಿಮಾನದ ಒಳಗೆ ತಂದಿರುವುದರ ಬಗ್ಗೆ ವಿಮಾನ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ವಿಮಾನದೊಳಗೆ ಧೂಮಪಾನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ವಿಮಾನದಲ್ಲಿ ವ್ಯಕ್ತಿಯೊಬ್ಬ ಧೂಮಪಾನ ಮಾಡಿದ್ದ ಘಟನೆಯನ್ನು ವರದಿ ಮಾಡದಿದ್ದಕ್ಕಾಗಿ ಡಿಜಿಸಿಎ ಏರ್ ಇಂಡಿಯಾಕ್ಕೆ 10 ಲಕ್ಷ ದಂಡ ವಿದಿಸಿತ್ತು.
ಸಿಕ್ಕಿಬಿದ್ದಿದ್ದ ಕಟಾರಿಯಾ
ವಿಮಾನದಲ್ಲಿ ವಿಡಿಯೋಗಾಗಿ ಧೂಮಪಾನ ಮಾಡಿ ಸಿಕ್ಕಿಬಿದ್ದರುವ ಘಟನೆ ಇದೇ ಮೊದಲೇನಲ್ಲ, ಈ ಹಿಂದೆ ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇನ್ಸ್ಟಾಗ್ರಾಮ್ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕಟಾರಿಯಾ ಸ್ಪೈಸ್ ಜೆಟ್ ವಿಮಾನದ ಮಧ್ಯದ ಸಾಲಿನಲ್ಲಿರುವ ಆಸನದಲ್ಲಿ ಕುಳಿತು ಸಿಗರೇಟ್ ಕಿಡಿ ಹೊತ್ತಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಈ ಬಗ್ಗೆ ತನಿಖೆ ನಡೆಸುವಂತೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶಿಸಿದ್ದರು.
ಜಾಮೀನು ರಹಿತ ವಾರೆಂಟ್
ಕಟಾರಿಯಾ ದುಬೈಯಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಧೂಮಪಾನ ಮಾಡಿದ್ದಾರೆಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಕಟಾರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಕಳೆದ ಆಗಸ್ಟ್‌ನಲ್ಲಿ ಕಟಾರಿಯಾ ಅವರು ವಿಮಾನದಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯವು ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯವು ಬಾಬಿ ಕಟಾರಿಯಾ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ