ಲಕ್ನೋ: ಇತ್ತೀಚಿನ ದಿನಗಳಲ್ಲಿ ಉದ್ವೇಗಕ್ಕೆ ಒಳಗಾಗಿ ಆತ್ಮಹತ್ಯೆ (Suicide) ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹಲವು ಜನರಲ್ಲಿ ತಾಳ್ಮೆ ಎನ್ನುವುದೇ ಇಲ್ಲ ಎನ್ನುವಂತಾಗಿದೆ. ಸಣ್ಣ-ಪುಟ್ಟ ಮಾತುಗಳಿಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು, ಇಲ್ಲ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಗಂಡ ಹೆಂಡತಿ (Husband-Wife) ಜಗಳ ಉಂಡು ಮಲಗೋ ತನಕ ಎನ್ನುತ್ತಾರೆ. ಆದರೆ ಇಲ್ಲೊಂದು ಅಚ್ಚರಿ ಘಟನೆ ನಡೆದಿದ್ದು, ಹೆಂಡತಿ ಚಿಕನ್ ಕರಿ (Chicken Curry) ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಪತಿ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯ ಪ್ರೇಮ್ ನಗರದಲ್ಲಿ ಗುರುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ಪವನ್ ಎಂದು ಗುರುತಿಸಲಾಗಿದೆ. ಈತ ಪೀಠೋಪಕರಣಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಪ್ರಿಯಾಂಕ ಎಂಬಾಕೆಯೊಂದಿಗೆ ವಿವಾಹವಾಗಿದ್ದ. ಚಿಕನ್ ಮಾಡುವ ವಿಚಾರಕ್ಕೆ ಜಗಳ ಮಾಡಿಕೊಂಡು ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡಿದ್ದಾನೆ. ಸಾವಿನ ಸುದ್ದಿ ತಿಳಿದ ತಕ್ಷಣ ಮನೆಯಲ್ಲಿ ಕೋಲಾಹಲ ಉಂಟಾಯಿತು. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಚಿಕನ್ ಮಾಡದಿದ್ದಕ್ಕೆ ಜಗಳ
ಪವನ್ 36 ವರ್ಷ ವಯಸ್ಸಾಗಿದ್ದು, ಫರ್ನಿಚರ್ ಕೆಲಸ ಮಾಡುತ್ತಿದ್ದರು ಎಂದು ಪವನ್ ಅವರ ಅಣ್ಣ ಕಮಲೇಶ್ ಶಾಕ್ಯ ತಿಳಿಸಿದ್ದಾರೆ. ಸುಮಾರು 4 ವರ್ಷಗಳ ಹಿಂದೆ ಪ್ರಿಯಾಂಕಾ ಅವರನ್ನು ಮದುವೆಯಾಗಿದ್ದರು. ಬುಧವಾರ ರಾತ್ರಿ ಪವನ್ ಚಿಕನ್ ನೊಂದಿಗೆ ಮನೆಗೆ ಬಂದು ಅಡುಗೆ ಮಾಡುವಂತೆ ಪತ್ನಿ ಪ್ರಿಯಾಂಕಾಗೆ ಹೇಳಿದ್ದ. ಹಲವು ಬಾರಿ ಕೇಳಿಕೊಂಡರೂ ಪ್ರಿಯಾಂಕಾ ಚಿಕನ್ ಅಡುಗೆ ಮಾಡಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದಾದ ನಂತರ ಪ್ರಿಯಾಂಕಾ ಮತ್ತೊಂದು ಕೋಣೆಗೆ ಹೋಗಿ ಮಲಗಿದ್ದಳು. ಇಲ್ಲಿ, ಪವನ್ ತನ್ನ ಕೋಣೆಯ ಬಾಗಿಲು ಮುಚ್ಚಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೋಪದಲ್ಲಿ ನೇಣಿಗೆ ಶರಣು
ಅಣ್ಣ ಕಮಲೇಶ್ ಪ್ರಕಾರ, ಅವರು ಬುಧವಾರ ರಾತ್ರಿ ಟೆರೇಸ್ ಮೇಲೆ ಮಲಗಿದ್ದರಂತೆ. ರಾತ್ರಿ 1 ಗಂಟೆ ಸುಮಾರಿಗೆ ಕೆಳಗೆ ಬಂದಾಗ ಪವನ್ ಕೊಠಡಿಯ ಬಾಗಿಲು ಬಡಿದಿದ್ದಾರೆ. ಪವನ್ ಏನೂ ಪ್ರತಿಕ್ರಿಯಿಸದಿದ್ದಾಗ ತನ್ನ ಮಗಳಿಗೆ ಕಿಟಕಿಯಿಂದ ನೋಡಲು ತಿಳಿಸಿದ್ದಾರೆ. ಆಗ ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ಬಾಗಿಲನ್ನು ಹೊಡೆದು ಪವನ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಪವನ್-ಪ್ರಿಯಾಂಕ ದಂಪತಿಗೆ 2 ವರ್ಷದ ಮಗಳಿದ್ದಾಳೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ