ಭಾರತ ಕಂಡು ವಿಸ್ಮಿತಗೊಂಡ ಜೆಫ್ರಿ ಆರ್ಚರ್; ಅಂಥದ್ದೇನು ಇಷ್ಟವಾಯ್ತು ಈ ವಿಶ್ವ ಶ್ರೇಷ್ಠ ಕಾದಂಬರಿಕಾರನಿಗೆ?

ಬರೆಯಬೇಕೆನಿಸುತ್ತಾ, ಬರೆಯಿರಿ, ನೀವೇನೂ ಸೆಕ್ಸ್ ಮಾಡುತ್ತಿಲ್ಲ, ಅಪರಾಧ ಮಾಡುತ್ತಿಲ್ಲ. ಗುಲಾಮರಂತೆ ಕೂತು ತಲೆಬಗ್ಗಿಸಿ ಬರೆಯುತ್ತಾ ಹೋಗಿ... ಇದು ಜೆಫ್ರಿ ಆರ್ಚರ್ ಕೊಡುವ ಸಲಹೆ.

Vijayasarthy SN | news18
Updated:January 29, 2019, 4:59 PM IST
ಭಾರತ ಕಂಡು ವಿಸ್ಮಿತಗೊಂಡ ಜೆಫ್ರಿ ಆರ್ಚರ್; ಅಂಥದ್ದೇನು ಇಷ್ಟವಾಯ್ತು ಈ ವಿಶ್ವ ಶ್ರೇಷ್ಠ ಕಾದಂಬರಿಕಾರನಿಗೆ?
ಜೆಫ್ರಿ ಆರ್ಚರ್
Vijayasarthy SN | news18
Updated: January 29, 2019, 4:59 PM IST
- ಸಿಮಂತಿನಿ ಡೇ,

ಜೈಪುರ(ಜ. 29): ಜೆಫ್ರಿ ಆರ್ಚರ್ ವಿಶ್ವದ ಶ್ರೇಷ್ಠ ಕಾದಂಬರಿಕಾರರಲ್ಲೊಬ್ಬರು. ಇವರ ಕೇನ್ ಮತ್ತು ಆಬೆಲ್, ದಿ ಫೋರ್ತ್ ಎಸ್ಟೇಟ್ ಮತ್ತು ದಿ ಪ್ರಾಡಿಜಲ್ ಡಾಟರ್ ಮೊದಲಾದವು ಅತ್ಯಂತ ಜನಪ್ರಿಯ ಕಾದಂಬರಿಗಳಾಗಿವೆ. ರಾಜಸ್ಥಾನದ ಜೈಪುರ ನಗರದಲ್ಲಿ ನಡೆದ ವಿಶ್ವ ಪ್ರಸಿದ್ಧ ಸಾಹಿತ್ಯ ಮೇಳದಲ್ಲಿ ಜೆಫ್ರಿ ಆರ್ಚರ್ ಅವರು ಸೂಪರ್ ಸ್ಟಾರ್ ಎನಿಸಿದ್ದರು. ಜೆಫ್ರಿಗೆ ಭಾರತವೆಂದರೆ ಅಚ್ಚುಮೆಚ್ಚು. ತಮ್ಮ ಭಾಷಣ ಕೇಳಲು ಸಾವಿರಾರು ಜನರು ಆಡಿಟೋರಿಯಮ್​ನಲ್ಲಿ ನೆರೆದಿದ್ದು ಕಂಡು ಜೆಫ್ರಿಯ ಎದೆ ತುಂಬಿಹೋಯಿತು. ಭಾರತ ಇವರಿಗೆ ಇಷ್ಟವಾಗಲು ಇದೊಂದೇ ಕಾರಣವಲ್ಲ.

ಭಾರತದ ಜನರ ಹೃದಯವೈಶಾಲ್ಯತೆ; ಇಲ್ಲಿನ ಜನರ ಕ್ರಿಕೆಟ್ ಹುಚ್ಚು; ತಮಗಿರುವ ಅಪಾರ ಭಾರತೀಯ ಮಹಿಳಾ ಅಭಿಮಾನಿಗಳು; ಇವು ಜೆಫ್ರಿ ಅವರನ್ನು ಸೆಳೆದಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಭಾರತದ ಬಗ್ಗೆ ಜೆಫ್ರಿ ಇಷ್ಟಪಡುವ ಅಂಶವೆಂದರೆ ಇಲ್ಲಿಯ ಓದುವ ಸಂಸ್ಕೃತಿ.

ಇಲ್ಲಿನ ಜನರು ತಮ್ಮ ಮುಂದಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಕಲಿಸುತ್ತಾರೆ. ಬೇರೆ ದೇಶಗಳಲ್ಲಿ ಜನರು ಫೇಸ್​ಬುಕ್ ಅಥವಾ ಟ್ವಿಟ್ಟರ್​ನಲ್ಲಿ ಅಥವಾ ಇನ್ಯಾವುದೋ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿಹೋಗುತ್ತಾರೆ. ಅವರಿಗೆ ದೇವರು ಬುದ್ಧಿ ಕೊಡಲಿ. ಭಾರತದ ಮಕ್ಕಳು ಪುಸ್ತಕ ಹಿಡಿದು ಓದುತ್ತಾರೆ. ಇಲ್ಲಿ ಓದುವ ಸಂಸ್ಕೃತಿ ಇದೆ ಎಂದು ಜೆಪ್ರಿ ಆರ್ಚರ್ ಹೇಳುತ್ತಾರೆ.

40 ವರ್ಷದ ಹಿಂದೆ ತಾವು ಬರೆದ ಕೇನ್ ಮತ್ತು ಆಬೆಲ್ ಕಾದಂಬರಿಯನ್ನು ಭಾರತೀಯರು ಈಗಲೂ ಓದುತ್ತಿದ್ದಾರೆಂಬುದನ್ನು ಕಂಡು ಜೆಪ್ರಿ ಆರ್ಚರ್ ಅವರ ಹೃದಯ ಇನ್ನಷ್ಟು ತುಂಬಿಹೋಗಿದೆ.

ವಿಶ್ವದ ಬೇರೆಡೆ ನಡೆಯುವ ಸಾಹಿತ್ಯ ಮೇಳಗಳಲ್ಲಿ ಲೇಖಕರನ್ನು ಹೇಳುವವರು ಇರೋದಿಲ್ಲ, ಕೇಳುವವರು ಇರೋದಿಲ್ಲವಂತೆ. ಆದರೆ, ಜೈಪುರದಲ್ಲಿ ನಡೆದ ಲಿಟರರಿ ಫೆಸ್ಟಿವಲ್​ನಲ್ಲಿ ಜೆಫ್ರಿ ಅವರ ಭಾಷಣ ಕೇಳಲು ಸಭಾಂಗಣಕ್ಕೆ 3 ಸಾವಿರ ಜನರು ನೆರೆದಿದ್ದರಂತೆ. ಮೇಳಕ್ಕೆ ಬಂದವರೆಲ್ಲರೂ ಜೆಫ್ರಿ ಭಾಷಣ ಕೇಳಲು ತುದಿಗಾಲಲ್ಲಿದ್ದರು. ಅದೇ ಸಮಯದಲ್ಲಿ ಬೇರೆ ಸಾಹಿತಿಗಳ ಗೋಷ್ಠಿ ಅಥವಾ ಭಾಷಣ ನಡೆಯುತ್ತಿದ್ದರೂ ಜನರೆಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದ ಜೆಫ್ರಿಯೇ. ತನ್ನ ಭಾಷಣ ಕೇಳಲು ಇಷ್ಟು ಮಂದಿ ಬರುತ್ತಾರೆಂದು ನಿರೀಕ್ಷಿಸದ ಜೆಫ್ರಿ ಆರ್ಚರ್ ಇದಕ್ಕೆ ಸಾಕ್ಷಿಯಾಗಿ ಜನರೊಟ್ಟಿಗಿರುವ ಸೆಲ್ಫಿಯನ್ನು ಕ್ಲಿಕ್ಕಿಸಿ ತಮ್ಮ ಹೆಂಡತಿ ಕಳುಹಿಸಿಕೊಟ್ಟರಂತೆ.

ಜೈಪುರ ಲಿಟರೇಚರ್ ಫೆಸ್ಟಿವಲ್​ಗೆ ಜನರ ಪ್ರತಿಕ್ರಿಯೆ ಕಂಡು ಬೆರಗಾಗಿರುವ ಜೆಫ್ರಿ ಆರ್ಚರ್ ಅವರು ಗೋಷ್ಠಿ, ಸಂದರ್ಶನ ಇತ್ಯಾದಿ ಕಾರ್ಯಕ್ರಮಗಳು ಎಡಬಿಡದೆ ನಡೆದರೂ ಬಳಲದೆ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
Loading...

ಅತ್ಯುತ್ತಮ ಕಥೆಗಾರಿಕೆಗೆ ಖ್ಯಾತವಾಗಿರುವ ಬ್ರಿಟನ್ ದೇಶದ 78 ವರ್ಷದ ಜೆಪ್ರಿ ಆರ್ಚರ್ ಅವರ ಹೊಸ ಪುಸ್ತಕ ‘ಹೆಡ್ಸ್ ಯೂ ವಿನ್’ (Heads You Win) ಹೊಸ ಬೆಸ್ಟ್ ಸೆಲ್ಲರ್ ಎನಿಸಿದೆ. ತಂದೆಯನ್ನು ಕಳೆದುಕೊಂಡ ರಷ್ಯಾದ ಬಾಲಕನೊಬ್ಬನ ಕಥೆ ಇರುವ ಹೆಡ್ಸ್ ಯೂ ವಿನ್ ಕಾದಂಬರಿ ತನಗೆ ಬರೆಯಲು ಅತ್ಯಂತ ಕ್ಲಿಷ್ಟವೆನಿಸಿದ ಪುಸ್ತಕ ಎಂದು ಹೇಳುತ್ತಾರೆ ಜೆಫ್ರಿ. ಈ ಪುಸ್ತಕವನ್ನು ಪಬ್ಲಿಷ್ ಮಾಡುವ ಮುನ್ನ ಜೆಫ್ರಿ ಅವರು ಬರೋಬ್ಬರಿ 16 ಬಾರಿ ಹಸ್ತಪ್ರತಿ ತಿದ್ದುಪಡಿ ಮಾಡಬೇಕಾಯಿತಂತೆ.

ಬರೆಯುವ ಕಲೆ ಸಿದ್ಧಿಸುವುದು ಹೇಗೆ?

ಬರೆಯುವುದು, ಅದರಲ್ಲೂ ಕಥೆ, ಕಾದಂಬರಿ ಬರೆಯುವುದು ಸುಮ್ಮನೆ ಅಲ್ಲ. ಸುಮ್ಮನೆ ಗೀಚಿದರೆ ಕಾದಂಬರಿ ಎನಿಸುವುದಿಲ್ಲ. ಸಾಕಷ್ಟು ಯವಕರು ಕಾದಂಬರಿ ಬರೆಯಲು ಶುರು ಮಾಡಿ ಬೇಸ್ತುಬಿದ್ದು ಮಧ್ಯದಲ್ಲೇ ಕೈಬಿಟ್ಟಿದ್ದಿದೆ. ಪುಸ್ತಕದ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೆ ಜನರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳಬಲ್ಲಂತಹ ಬರಹ ಹೊಂದಿರುವ ಜೆಫ್ರಿ ಆರ್ಚರ್ ಅವರು ಬರೆಯುವುದು ಹೇಗೆಂದು ಕೆಲ ಅಮೂಲ್ಯ ಸಲಹೆಗಳನ್ನ ನೀಡುತ್ತಾರೆ.

“ಕಥೆ ಬರೆಯಲು ಲಕ್ ಕೆಲಸ ಮಾಡೋದಿಲ್ಲ. ಯಾವುದೇ ಶಾರ್ಟ್ ಕಟ್ ಇಲ್ಲ. ಅತೀವ ಶ್ರಮ ಹಾಕಲೇ ಬೇಕು. ತಲೆ ಬಗ್ಗಿಸಿ ಜೀತದಾಳುವಿನಂತೆ ಕೆಲಸ ಮಾಡಬೇಕು. ಬರೆಯಬೇಕು, ಬರೆಯುತ್ತಲೇ ಇರಬೇಕು,” ಎಂದು ಜೆಫ್ರಿ ಹೇಳುತ್ತಾರೆ.

ಕಥೆ ಅಥವಾ ಕಾದಂಬರಿಯ ಮೊದಲ ಹಸ್ತಪ್ರತಿ ಸಿದ್ಧವಾಗುವವರೆಗೂ ಲೇಖಕ ತೋರುವ ಶಿಸ್ತು ಅತೀ ಮುಖ್ಯ ಎಂಬುದು ಜೆಫ್ರಿ ಅಭಿಪ್ರಾಯ. ಕಥೆ ಬರೆಯುವಾಗ ಏಕಾಂತ ಅತೀ ಮುಖ್ಯ. ಬಾಹ್ಯ ಪ್ರಪಂಚದಿಂದ ಅಕ್ಷರಶಃ ಬೇರ್ಪಟ್ಟು ಸಂಪೂರ್ಣ ಏಕಾಂತ ಸ್ಥಳದಲ್ಲಿ ಕೂತೇ ಬರೆಯಬೇಕು. ಇಲ್ಲದಿದ್ದರೆ ಬರೆಯಲು ಸಾಧ್ಯವೇ ಇಲ್ಲ ಎಂದು ಜೆಫ್ರಿ ಆರ್ಚರ್ ಹೇಳುತ್ತಾರೆ.

ಬರೆಯಲು ಇಚ್ಛಿಸುವ ಹೊಸ ತಲೆಮಾರಿನವರಿಗೆ ಜೆಫ್ರಿ ಮತ್ತೊಂದು ಅತ್ಯಮೂಲ್ಯ ಸಲಹೆ ಕೊಡುತ್ತಾರೆ. “ನಾನು ಏನು ಬರೆಯುತ್ತೇನೋ ಅದನ್ನೇ ಬರೆಯುತ್ತೇನೆ. ಬೇರೆಯವರಿಗೂ ನಾನು ಇದನ್ನೇ ಹೇಳುತ್ತೇನೆ. ನಿಮಗೆ ಬರೆಯಬೇಕೆನಿಸಿದರೆ ದಯವಿಟ್ಟು ಬರೆಯಿರಿ. ನಾನ್ಯಾವುದೋ ಸೆಕ್ಸ್ ಮಾಡುತ್ತಿಲ್ಲ, ಹಿಂಸಾಚಾರ ಮಾಡುತ್ತಿಲ್ಲ, ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿಲ್ಲ. ನಾನು ನನನ್ ಕೆಲಸ ಮಾಡುತ್ತೇನೆ ಹಾಗೂ ಜನರು ನಾನು ಬರೆದಿದ್ದನ್ನು ಓದಲಿ ಎಂದು ಪ್ರಾರ್ಥಿಸುತ್ತೇನೆ ಅಷ್ಟೇ,” ಎಂದು ಆರ್ಚರ್ ಸಲಹೆ ಕೊಡುತ್ತಾರೆ.

ಹಾಗೆಯೇ, ಸ್ಟೀಫಾನ್ ಜ್ವೇಗ್, ಚಾರ್ಲ್ಸ್ ಡಿಕೆನ್ಸ್, ಜೇನ್ ಆಸ್ಟೆನ್ ಮೊದಲಾದವರು ಕಥೆ ಹೇಳುವ ರೀತಿಯನ್ನು ಗಮನಿಸಿ ಎಂದು ಯುವ ಸಮುದಾಯಕ್ಕೆ ಆರ್ಚರ್ ಕಿವಿಮಾತು ಹೇಳುತ್ತಾರೆ.
First published:January 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ