ಮುಂಬೈ (ಸೆಪ್ಟೆಂಬರ 1): ಕೊರೋನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಜಂಟೀ ಪ್ರವೇಶ ಪರೀಕ್ಷೆಯನ್ನು (ಜೆಇಇ) ನಡೆಸುತ್ತಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳು ಹಾಗೂ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪರೀಕ್ಷೆ ನಡೆಯಬಾರದು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ಪರೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ.
ಮಹಾರಾಷ್ಟ್ರದಲ್ಲಿ ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಪ್ರವಾಹ ಉಂಟಾದ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿದ್ದರು. ಆದರೆ, ಕೋರ್ಟ್ ಪರೀಕ್ಷೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೆ, ಪ್ರವಾಹಕ್ಕೆ ತುತ್ತಾದವರಿಗೆ ಎರಡನೇ ಬಾರಿಗೆ ಅವಕಾಶ ಕೇಳಬಹುದು ಎಂದು ಹೇಳಿದೆ.
ಪ್ರವಾಹದ ಪ್ರದೇಶದಲ್ಲಿ ಸಿಲುಕಿದವರಿಗೆ ಪರೀಕ್ಷೆಗೆ ತೆರಳಲು ತಡವಾಗಿರಬಹುದು. ಇಲ್ಲವೇ ಪರೀಕ್ಷೆಗೆ ತಡವಾಗಿ ತೆರಳಿರಬಹುದು. ಇಂಥ ವಿದ್ಯಾರ್ಥಿಗಳು ಮರು ಪರೀಕ್ಷೆ ಮಾಡುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಕೋರಬಹುದು ಎಂದು ಹೇಳಿದೆ.
ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಪರೀಕ್ಷಾ ಕೊಠಡಿ ಹೊರ ಭಾಗದಲ್ಲಿ ಸ್ಯಾನಿಟೈಸರ್ ಇಡುವುದು, ಪರೀಕ್ಷಾರ್ಥಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ