ಸಿಎಎ ಭಿನ್ನಾಭಿಪ್ರಾಯ: ಜೆಡಿಯುನಿಂದ ಪ್ರಶಾಂತ್ ಕಿಶೋರ್, ಪವನ್ ವರ್ಮಾ ಉಚ್ಛಾಟನೆ

ಸಿಎಎ, ಎನ್​ಆರ್​ಸಿ ವಿಚಾರದಲ್ಲಿ ಎನ್​ಡಿಎ ನಿಲುವಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿರುವ ನಿತೀಶ್ ಕುಮಾರ್, ಇದನ್ನು ವಿರೋಧಿಸುವವರು ಬೇಕಾದರೆ ಪಕ್ಷ ಬಿಡಲು ಸ್ವತಂತ್ರರು ಎಂದು ಹೇಳಿದ್ದರು. ಅದಾಗಿ ಒಂದು ದಿನದಲ್ಲೇ ಇವತ್ತು ಅವರ ಉಚ್ಛಾಟನೆಯಾಗಿದೆ.

ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ

ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ

 • News18
 • Last Updated :
 • Share this:
  ನವದೆಹಲಿ(ಜ. 29): ಜೆಡಿಯು ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿಯನ್ನು ಬಲವಾಗಿ ವಿರೋಧಿಸುತ್ತಾ ಬಂದಿರುವ  ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇಬ್ಬರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಲಾಗಿದೆ. ಇದರೊಂದಿಗೆ ತಿಂಗಳುಗಳಿಂದ ಇದ್ದ ಭಿನ್ನಾಭಿಪ್ರಾಯಗಳ ಪ್ರಹಸನ ತಾರ್ತಿಕ ಅಂತ್ಯ ಕಂಡಿದೆ.

  ಪ್ರಶಾಮತ್ ಕಿಶೋರ್ ಮತ್ತು ಪವನ್ ವರ್ಮಾ ಇಬ್ಬರೂ ಕೂಡ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಹಾಗೆಯೇ ಬಿಹಾರ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ಧಾರೆ. ಹೀಗಾಗಿ, ಇವರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೇಳಿದ್ಧಾರೆ.

  ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಪೌರತ್ವ ತಿದ್ದುಪಡಿ ಮಸೂದೆಯನ್ನ ಸಂಸತ್​ನಲ್ಲಿ ಬೆಂಬಲಿಸಿದೆ. ಆದರೆ, ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಅವರು ಸಾರ್ವಜನಿಕವಾಗಿಯೇ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದಿದ್ದರು. ಪಕ್ಷದ ಮುಖ್ಯಸ್ಥರನ್ನೇ ಬಿಟ್ಟು ಪ್ರಶಾಂತ್ ಕಿಶೋರ್ ಅವರೇ ಅಧಿಕೃತ ಹೇಳಿಕೆಗಳನ್ನು ನೀಡುತ್ತಿದ್ದರು. ಸಿಎಎ ವಿಚಾರದಲ್ಲಿ ರಾಷ್ಟ್ರಾದ್ಯಂತ ಅಭಿಪ್ರಾಯ ರೂಪಿಸಲು ಅವರು ಪ್ರಯತ್ನಿಸಿದ್ದರು. ಹಾಗೆಯೇ, ಪ್ರಶಾಂತ್ ಕಿಶೋರ್ ಮತ್ತು ನಿತೀಶ್ ಕುಮಾರ್ ಮಧ್ಯೆ ವಾಗ್ಯುದ್ಧವೂ ಶುರುವಾಗಿತ್ತು.

  ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್​​ ಠಾಕೂರ್​​​, ಪರ್ವೇಶ್ ವರ್ಮಾಗೆ ಬಿಜೆಪಿ ಕೋಕ್

  ಪ್ರಶಾಂತ್ ಕಿಶೋರ್ ಅವರಿಗೆ ಸೇರಿದ ಸಂಸ್ಥೆಯು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರದ ಹೊಣೆಯನ್ನು ಹೊತ್ತಿದೆ. ಆದರೆ, ದೆಹಲಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಯು ಪಕ್ಷ 2 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದೂ ಕೂಡ ನಿತೀಶ್ ಕುಮಾರ್ ಅವರಿಗೆ ಇರಿಸುಮುರುಸು ತಂದಿತ್ತು.

  ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ನಿತೀಶ್ ಕುಮಾರ್ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದ ಪ್ರಶಾಂತ್ ಕಿಶೋರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಟೀಕೆ ಮಾಡಿದ್ದರು.

  ಸಿಎಎ, ಎನ್​ಆರ್​ಸಿ ವಿಚಾರದಲ್ಲಿ ಎನ್​ಡಿಎ ನಿಲುವಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿರುವ ನಿತೀಶ್ ಕುಮಾರ್, ಇದನ್ನು ವಿರೋಧಿಸುವವರು ಬೇಕಾದರೆ ಪಕ್ಷ ಬಿಡಲು ಸ್ವತಂತ್ರರು ಎಂದು ಹೇಳಿದ್ದರು. ಅದಾಗಿ ಒಂದು ದಿನದಲ್ಲೇ ಇವತ್ತು ಅವರ ಉಚ್ಛಾಟನೆಯಾಗಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: