ಕೇಜ್ರಿವಾಲ್ ಪರಿಶ್ರಮಕ್ಕೆ ಫಲ ಸಿಕ್ಕಿತು; 2023ಕ್ಕೆ ಜೆಡಿಎಸ್​ ಪಕ್ಷ ಅಧಿಕಾರಕ್ಕೆ: ದೇವೇಗೌಡ

ಬಿಜೆಪಿಯವರು ಸಿಎಎ ಅಂತ ಮಾತನಾಡಿ ಅಭಿವೃದ್ಧಿ ವಿಷಯ ಮರೆತರು. ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷ. ದೇಶದಲ್ಲಿ ನಾವೇ ಇದ್ದಿವೀ ಅಂತ ಮೆರೆಯುತ್ತಿದ್ದರು. ಆದರೆ ಜನ ಅದನ್ನು ಕೇಳಲಿಲ್ಲ. ಎಎಪಿ ಗೆಲುವು ನಮಗೆ ಸ್ಪೂರ್ತಿ. ನಾನು ಮತ್ತೆ ಜೆಡಿಎಸ್​ ಪಕ್ಷವನ್ನು ಅಧಿಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಒಂದೇ ತಾಯಿ ಮಕ್ಕಳಂತೆ ನಿರಂತರ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು

news18-kannada
Updated:February 11, 2020, 3:54 PM IST
ಕೇಜ್ರಿವಾಲ್ ಪರಿಶ್ರಮಕ್ಕೆ ಫಲ ಸಿಕ್ಕಿತು; 2023ಕ್ಕೆ ಜೆಡಿಎಸ್​ ಪಕ್ಷ ಅಧಿಕಾರಕ್ಕೆ: ದೇವೇಗೌಡ
ಹೆಚ್ ಡಿ ದೇವೇಗೌಡ
  • Share this:
ಬೆಂಗಳೂರು(ಫೆ. 11): ನಿರಂತರ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್​ ಪಕ್ಷ ಮತ್ತೆ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಜೆಡಿಎಸ್​ ವರಿಷ್ಠರು ಪಣತೊಟ್ಟಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ, ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಸೋಲಿನ ಉತ್ತರ ಈಗ ಕೊಡುವುದಿಲ್ಲ. ಜೆಡಿಎಸ್​ ಪಕ್ಷವನ್ನು ಮುಗಿಸಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ," ಎಂದರು. ಇದೇ ವೇಳೆ, ತಾವು ಪಕ್ಷ ಕಟ್ಟಿದ ದಿನಗಳನ್ನು ದೇವೇಗೌಡರು ನೆನೆದರು.  "1989ರಲ್ಲಿ ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿದ್ದರು. ಆಗ ಯಾವ ಸ್ನೇಹಿತರೂ ನನ್ನ ಜೊತೆ ಉಳಿಯಲಿಲ್ಲ. ಯಾರೂ ಸಹ ಹಣ ಕೊಡಲಿಲ್ಲ. ನಾನು ನನ್ನ ನಾದಿನಿ ಮನೆ ಮಾಡಿ ಪಕ್ಷ ಕಟ್ಟಿದೆ," ಎಂದು ಕಷ್ಟದ ದಿನಗಳನ್ನು ನೆನೆಸಿಕೊಂಡರು.

ನನಗೆ ಆಗ ಹಠ ಇತ್ತು, ಹಾಗಾಗಿ 1994ರಲ್ಲಿ ಪಕ್ಷವನ್ನು ಕಟ್ಟಿ ಪಕ್ಷದ ಅಧ್ಯಕ್ಷನಾದೆ. ಆ  ಸಮಯದಲ್ಲಿ ಯಾವೊಬ್ಬನೂ ನನಗೆ ಸಹಾಯ ಮಾಡಲಿಲ್ಲ. ಪಿ ಜಿ ಆರ್ ಸಿಂಧ್ಯ ಸೇರಿದಂತೆ ಕೆಲವರು ಮಾತ್ರ ಸಹಾಯ ಮಾಡಿದರು. ಆ ನಂತರ ನನ್ನ ಮೇಲೆ ತನಿಖೆ ಮಾಡಿಸಿದರು. ಆದರೆ ನಾನು ಯಾರಿಗೂ ಹೆದರುವುದಿಲ್ಲ. ನನ್ನ ಪಕ್ಷವನ್ನು ಉಳಿಸಿಕೊಳ್ಳುವುದು ನನಗೆ ಗೊತ್ತಿದೆ ಎಂದು ಗುಡುಗಿದರು.

Delhi Election Result: ದೆಹಲಿಯ ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಮಾತ್ರ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ; ಹೆಚ್​.ಡಿ. ಕುಮಾರಸ್ವಾಮಿ

ಪಕ್ಷಕ್ಕಾಗಿ ಯಾರು ಸಾಯುತ್ತೇನೆ ಅನ್ನುತ್ತಾನೋ ಅವನನ್ನು ತಂದು ಪಕ್ಷ ಕಟ್ಟುತ್ತೇನೆ.  ನಾನು ಹೋರಾಟ ಮಾಡುತ್ತೇನೆ, ನನಗೆ ವಯಸ್ಸು 82 ಇರಬಹುದು, ಆದರೆ ಆ ವಯಸ್ಸು ನನಗೆ ಯಾವುದೇ ಅಡ್ಡಿ ಆಗಲ್ಲ. 2023ರಲ್ಲಿ ಜೆಡಿಎಸ್​ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದೇನೆ. ಅದಕ್ಕಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಶಪಥ ಮಾಡಿದರು.

ಜನತಾ ಪರಿವಾರದಲ್ಲಿದ್ದ ಹಲವು‌ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸುವಂತೆ ನನಗೆ ಸಲಹೆ ನೀಡಿದ್ದಾರೆ. ಜನತಾ ಪರಿವಾರದ ಹಲವು ನಾಯಕರು ಸದ್ಯ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಅವರೆನ್ನಲ್ಲಾ ಒಗ್ಗೂಡಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿದ್ದು, ಒಗ್ಗೂಡುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸಮಯಾವಕಾಶ ಬೇಕು. ಡಿಸೆಂಬರ್ 2020ರೊಳಗೆ ನಮ್ಮ‌ ಪಕ್ಷಕ್ಕೆ ಯಾರೆಲ್ಲಾ ಬರುತ್ತಾರೆ ಅವರೆನ್ನೆಲ್ಲಾ ಒಗ್ಗೂಡಿಸಲು ಯತ್ನಿಸಲಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅನೇಕ ಜನ ನನ್ನ ಸ್ನೇಹಿತರು ಇದ್ದಾರೆ. ಅವರ್ಯಾರಿಗೂ ಕೂಡ ಆ  ಎರಡು ಪಕ್ಷದಲ್ಲಿ ಇರೋಕೆ ಇಷ್ಟ ಇಲ್ಲ. ಆದರೆ ಕೆಲವು ಅಧಿಕಾರ ಶಾಹಿಗಳಿಗೆ ಹೆದರಿ ಆ ಪಕ್ಷದಲ್ಲಿ ಇದ್ದಾರೆ. ಇದು ತಮಾಷೆಯ ಮಾತಲ್ಲ. ನನ್ನ ಜೊತೆ ಅವರು ಹಂಚಿಕೊಂಡಿರುವ ಅಭಿಪ್ರಾಯವನ್ನು ಹೇಳುತ್ತಿದ್ದೇನೆ ಎಂದರು.Delhi Elections: ಮತಗಟ್ಟೆ ಸಮೀಕ್ಷೆಗಳ ಪೈಕಿ ನಿಖರ ಭವಿಷ್ಯ ನೀಡಿದ್ದು ಯಾವುದು? ದೂರ ಉಳಿದಿದ್ದು ಯಾವುದು?

 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಿದ್ದೇನೆ.  ಯಾರಿಗೂ ಹೆದರುವ ಅಗತ್ಯ ಇಲ್ಲ.‌ ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಪಕ್ಷದ ಸಂಘಟನೆಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಮಂತ್ರಿಗಳಿಗೆ, ಪೊಲೀಸರಿಗೆ ಹೆದರುವ ಅಗತ್ಯ ಇಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕೈ ಬಿಡುವುದಿಲ್ಲ.  ಮುಂದಿನ ದಿನಗಳಲ್ಲಿ 45,000 ಮಹಿಳೆಯರನ್ನು ಒಟ್ಟುಗೂಡಿಸಿ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಮಾಡಲಿದ್ದೇವೆ ಎಂದು ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದ ವಿಚಾರವಾಗಿ, ಅರವಿಂದ್​ ಕೇಜ್ರಿವಾಲ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು. ಮೊದಲ ಬಾರಿ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ ಅಧಿಕಾರ ಪಡೆದರು. ಅವರ ನಿರಂತರ ಹೋರಾಟ ಪರಿಶ್ರಮದಿಂದ ಇವತ್ತು ಎಎಪಿ ಜಯ ಗಳಿಸಿದೆ. ಕೇಜ್ರಿವಾಲ್ ಜನರ ಸಾಮಾನ್ಯ ಸಮಸ್ಯೆಗಳತ್ತ ಗಮನ ಹರಿಸಿ ಜನಪರ ಯೋಜನೆಗಳನ್ನು ತಂದರು. ಸ್ಕೂಲ್, ನೀರಾವರಿ, ಸಾರಿಗೆ ಸೇರಿದಂತೆ ಜನಸಾಮಾನ್ಯರ ಅಗತ್ಯತೆಗಳಿಗೆ ವಿಶೇಷ ಒತ್ತು ನೀಡಿದರು ಎಂದು ಶ್ಲಾಘಿಸಿದರು.

ಆದರೆ ಬಿಜೆಪಿಯವರು ಸಿಎಎ ಅಂತ ಮಾತನಾಡಿ ಅಭಿವೃದ್ಧಿ ವಿಷಯ ಮರೆತರು. ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷ. ದೇಶದಲ್ಲಿ ನಾವೇ ಇದ್ದಿವೀ ಅಂತ ಮೆರೆಯುತ್ತಿದ್ದರು. ಆದರೆ ಜನ ಅದನ್ನು ಕೇಳಲಿಲ್ಲ. ಎಎಪಿ ಗೆಲುವು ನಮಗೆ ಸ್ಪೂರ್ತಿ. ನಾನು ಮತ್ತೆ ಜೆಡಿಎಸ್​ ಪಕ್ಷವನ್ನು ಅಧಿಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಒಂದೇ ತಾಯಿ ಮಕ್ಕಳಂತೆ ನಿರಂತರ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
First published: February 11, 2020, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading