ಜಮ್ಮು-ಕಾಶ್ಮೀರ (ಅಕ್ಟೋಬರ್ 11); ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ಸೋಮವಾರ ನಡೆದ ದಂಗೆ-ವಿರೋಧಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ( Junior Commissioned Officer) ಸೇರಿದಂತೆ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಕೋಟೆಯ ಡಿಕೆಜಿಗೆ ಹತ್ತಿರವಿರುವ ಗ್ರಾಮದಲ್ಲಿ ಮುಂಜಾನೆ ಭಯೋತ್ಪಾದಕರು (Terrorist) ಇರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಬಂದ ನಂತರ ಸೇನಾ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ, ಕಾರ್ಯಾಚರಣೆಯಲ್ಲಿ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಸೈನಿಕರು ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಭಯೋತ್ಪಾದಕರು ದಿಢೀರೆಂದು ಸೈನಿಕರ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿದಂತೆ 5 ಜನರು ಗಂಭೀರ ಗಾಯಕ್ಕೆ ಒಳಗಾಗಿದ್ದರು. ಗಾಯದ ಕಾರಣಕ್ಕೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಅಲ್ಲದೆ, ಭಯೋತ್ಪಾದಕರೊಂದಿಗೆ ಸೈನಿಕರ ಎನ್ಕೌಂಟರ್ ಇನ್ನೂ ಮುಂದುವರೆದಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ನಿಯಂತ್ರಣ ರೇಖೆ (LOC) ಯಿಂದ ದೇಶದೊಳಕ್ಕೆ ನುಸುಳಲು ಯಶಸ್ವಿಯಾದ ನಂತರ ಭಯೋತ್ಪಾದಕರು ಚಾಮರ್ ಅರಣ್ಯದಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪನ್ನು ರಚಿಸಿಕೊಂಡಿದ್ದಾರೆ ಎಂಬ ಬಗ್ಗೆ ವರದಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗುವ ಎಲ್ಲಾ ಮಾರ್ಗಗಳಲ್ಲೂ ಕೆಟ್ಟೆಚ್ಚರ ವಹಿಸಲಾಗಿದೆ. ಗಡಿಗಳಲ್ಲಿ ಮತ್ತಷ್ಟು ಸೈನಿಕರನ್ನು ನೇಮಿಸುವ ಮೂಲಕ ಚೆಕ್ಪೋಸ್ಟ್ಗಳನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಆಗಿಂದಾಗ್ಗೆ ಗುಂಡಿನ ದಾಳಿ ಸಾಮಾನ್ಯ. ಆದರೆ, ಕಳೆದ ಫೆಬ್ರವರಿ ತಿಂಗಳಲ್ಲಿ ಎರಡೂ ದೇಶಗಳ ನಡುವೆ ಕದನ ವಿರಾಮವನ್ನು ಘೋಷಣೆ ಮಾಡಲಾಗಿತ್ತು. ಹೀಗಾಗಿ ಗಡಿಯಲ್ಲಿ ಅಲ್ಪ ಪ್ರಮಾಣದ ಶಾಂತಿ ನೆಲೆಸಿತ್ತು. ಆದರೆ, ಈ ಕದನ ವಿರಾಮ ಒಪ್ಪಂದದ ನಂತರ ಭಾರತೀಯ ಸೇನೆಯ ವಿರುದ್ಧ ನಡೆದ ಮೊದಲ ಮಾರಣಾಂತಿಕ ದಾಳಿ ಇದಾಗಿದೆ ಎನ್ನಲಾಗುತ್ತಿದೆ.
ಇತ್ತೀಚಿನ ವಾರಗಳಲ್ಲಿ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಕಳೆದ ವಾರ ಉಗ್ರಗಾಮಿ ಗುಂಪಿನವರು ಸಾರ್ವಜನಿಕರ ಮೇಲೆ ಏಕಾಏಕಿ ಗುಂಡು ಹಾರಿಸಿತ್ತು. ಈ ದಾಳಿಯಲ್ಲಿ ಇಬ್ಬರು ಶಿಕ್ಷಕರು ಸೇರಿದಂತೆ ಹಲವರು ಮೃತಪಟ್ಟಿದ್ದರು. ಈ ಘಟನೆಯ ನಂತರ ಗಡಿಯಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಇದನ್ನೂ ಓದಿ: Terrorist Sympathisers- ಕಾಶ್ಮೀರದಲ್ಲಿ ನಾಗರಿಕರ ಹತ್ಯೆ; 700 ಜನರ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ
ಆಗಸ್ಟ್ 10 ರಂದು ಮಾತನಾಡಿದ್ದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು "ಫೆಬ್ರವರಿ 25 ರಂದು ಎರಡು ದೇಶಗಳ ಡಿಜಿಎಂಒಗಳ (Director General of Military Operations) ನಡುವಿನ ಒಪ್ಪಂದದ ನವೀಕರಣದ ನಂತರ ಸ್ವಲ್ಪ ಸಮಯದ ನಂತರ, ಜಮ್ಮು ಮತ್ತು ಕಾಶ್ಮೀರದ ಒಳನುಸುಳುವಿಕೆ ಪುನರಾರಂಭವಾಯಿತು" ಎಂದು ಹೇಳಿದ್ದರು. ಗಡಿಯುದ್ದಕ್ಕೂ ಈಗಲೂ ಉಗ್ರರ ಒಳ ನುಸುಳುವಿಕೆ ನಡೆಯುತ್ತಲೇ ಇದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜೌರಿ ವಲಯದಲ್ಲಿ ನಾಲ್ಕು ಎನ್ಕೌಂಟರ್ಗಳು ನಡೆದಿವೆ ಎಂಬುದು ಉಲ್ಲೇಖಾರ್ಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ