ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಿರ್ಮಾಣಕ್ಕೆ ಮಾಜಿ ಪ್ರಧಾನಿ ನೆಹರು ಕಾರಣ; ಮತ್ತೆ ಇತಿಹಾಸ ಕೆದಕಿ ಟೀಕಿಸಿದ ಅಮಿತ್​ ಶಾ

ಕಣಿವೆ ರಾಜ್ಯದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಮಾತ್ರ ನೋಡುತ್ತಿದೆ. ಆದರೆ, ಬಿಜೆಪಿ ಇದನ್ನು ಸಮಗ್ರ ರಾಷ್ಟ್ರೀಯತೆಯ ವಿಚಾರವಾಗಿ ನೋಡುತ್ತಿದೆ. ಬಿಜೆಪಿ ಯಾವಾಗಲೂ ಒಂದು ದೇಶ ಒಂದು ಪ್ರಧಾನಿ ಒಂದು ಸಂವಿಧಾನವನ್ನು ಬೆಂಬಲಿಸುವ ಪಕ್ಷ ಎಂದು ಅಮಿತ್​ ಶಾ ಸ್ಪಷ್ಟಪಡಿಸಿದ್ದಾರೆ.

MAshok Kumar | news18-kannada
Updated:September 22, 2019, 8:10 PM IST
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಿರ್ಮಾಣಕ್ಕೆ ಮಾಜಿ ಪ್ರಧಾನಿ ನೆಹರು ಕಾರಣ; ಮತ್ತೆ ಇತಿಹಾಸ ಕೆದಕಿ ಟೀಕಿಸಿದ ಅಮಿತ್​ ಶಾ
ಆಮಿತ್ ಶಾ
MAshok Kumar | news18-kannada
Updated: September 22, 2019, 8:10 PM IST
ಮುಂಬೈ (ಸೆಪ್ಟೆಂಬರ್.22); ಪಾಕಿಸ್ತಾನ ಆಕ್ರಮಿತ ಕಾಶ್ಮೀರ ರಚನೆಗೆ ದಿವಂಗತ ಮಾಜಿ ಪ್ರಧಾನಿ ಜವಹರ್​ಲಾಲ್​ ನೆಹರೂ ಅವರೇ ಕಾರಣ, ಅಂದು ಅವರು ಮಾಡಿದ ಒಂದು ತಪ್ಪಿಗಾಗಿ ನಾವಿಂದು ಬೆಲೆ ತೆರುತ್ತಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಇತಿಹಾಸವನ್ನು ಕೆದಕುವ ಮೂಲಕ ನೆಹರು ವಿರುದ್ಧ ಕಿಡಿಕಾರಿದ್ದಾರೆ. 

ಮಹಾರಾಷ್ಟ್ರದಲ್ಲಿ ಇಂದು ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸೃಷ್ಟಿಗೆ ನೆಹರು ಅವರ ತಪ್ಪು ನಿರ್ಧಾರವೇ ಕಾರಣ. 1947ರಲ್ಲಿ ಅಂದಿನ ಪ್ರಧಾನಿ ಜವಹರ್​ಲಾಲ್​ ನೆಹರು ಪಾಕಿಸ್ತಾನದೊಂದಿಗೆ ಅಕಾಲಿಕ ಕದನ ವಿರಾಮವನ್ನು ಘೋಷಿಸದೆ ಇದ್ದಿದ್ದರೆ ಇಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಸ್ಥಿತ್ವದಲ್ಲೇ ಇರುತ್ತಿರಲಿಲ್ಲ.

ಇಷ್ಟು ಸೂಷ್ಮ ವಿಚಾರವನ್ನು ಅಂದು ನೆಹರು ನಿಭಾಯಿಸುವ ಬದಲು ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ನಿರ್ವಹಿಸಿದ್ದರೆ ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಏಕೆಂದರೆ ಏಕೀಕರಣ ಸಂದರ್ಭದಲ್ಲಿ ಅವರು ನಿರ್ವಹಿಸಿದ ಎಲ್ಲಾ ರಾಜ್ಯಗಳು ಇಂದು ದೇಶದ ಭಾಗವಾಗಿಯೇ ಇವೆ” ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

“ಜವಾಹರಲಾಲ್ ನೆಹರೂ ಅವರ ಈ ಒಂದು ತಪ್ಪು ನಿರ್ಣಯದಿಂದಾಗಿ ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಅನಿವಾರ್ಯವಾಗಿ ವಿಶೇಷ ಸ್ಥಾನಮಾನ ನೀಡುವಂತಾಯಿತು. ಈ ಕ್ರಮ ಅಂತಿಮವಾಗಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಗೆ ನಾಂದಿ ಹಾಡಿತು. 1990 ಮತ್ತು 2000 ರ ವರ್ಷದ ನಡುವಿನ 10 ವರ್ಷದಲ್ಲಿ ಮಾತ್ರ ಕಣಿವೆ ರಾಜ್ಯದಲ್ಲಿ 40 ಸಾವಿರ ಜನರನ್ನು ಕೊಲ್ಲಲಾಗಿದೆ. ಅಲ್ಲದೆ, ಕಾಶ್ಮೀರಿ ಪಂಡಿತರು, ಸೂಫಿಗಳು ಮತ್ತು ಸಿಖ್ಖರನ್ನು ರಾಜ್ಯದಿಂದಲೇ ಹೊರಹಾಕಲಾಯಿತು” ಎಂದು ಅವರು ದೂರಿದರು.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ರದ್ದತಿ ಕುರಿತು ಮಾತನಾಡಿದ ಅಮಿತ್ ಶಾ, “ಕಣಿವೆ ರಾಜ್ಯದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಮಾತ್ರ ನೋಡುತ್ತಿದೆ. ಆದರೆ, ಬಿಜೆಪಿ ಇದನ್ನು ಸಮಗ್ರ ರಾಷ್ಟ್ರೀಯತೆಯ ವಿಚಾರವಾಗಿ ನೋಡುತ್ತಿದೆ. ಬಿಜೆಪಿ ಯಾವಾಗಲೂ 'ಒಂದು ದೇಶ ಒಂದು ಪ್ರಧಾನಿ ಒಂದು ಸಂವಿಧಾನ'ವನ್ನು ಬೆಂಬಲಿಸುವ ಪಕ್ಷ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ ಅಮಿತ್ ಶಾ, “ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಕಲಂ 370ರ ಕುರಿತು ಮಾತನಾಡುತ್ತಾರೆ. ಆದರೆ, ರಾಹುಲ್ ಬಾಬಾ ನೀವು ಈಗ ರಾಜಕೀಯಕ್ಕೆ ಬಂದಿದ್ದೀರಿ, ಆದರೆ ಬಿಜೆಪಿ ಮೂರು ತಲೆಮಾರುಗಳಿಂದ ಕಲಂ 370ನೇ ವಿಧಿಯ ರದ್ದತಿಗಾಗಿ ಹೋರಾಟ ನಡೆಸುತ್ತಿದೆ. ಹಲವರು ಈ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಇದು ನಮಗೆ ರಾಜಕೀಯದ ವಿಚಾರವಲ್ಲ. ಇಡೀ ದೇಶವನ್ನು ಅವಿಭಜಿತವಾಗಿರಿಸುವುದು ನಮ್ಮ ಗುರಿ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : 1965,1971ರ ಇತಿಹಾಸದಿಂದ ಪಾಠ ಕಲಿಯದಿದ್ದರೆ ಪಾಕಿಸ್ತಾನವನ್ನು ಯಾರಿಂದಲೂ ರಕ್ಷಿಸುವುದು ಸಾಧ್ಯವಿಲ್ಲ; ರಾಜ್​ನಾಥ್​ ಸಿಂಗ್ ಖಡಕ್​ ಎಚ್ಚರಿಕೆ!
Loading...

First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...