ಜಾರ್ಖಂಡ್ ಚುನಾವಣಾ ಫಲಿತಾಂಶ; ಬಿಜೆಪಿಗೆ ಭಾರೀ ಮುಖಭಂಗ, ದಶಕದ ನಂತರ ಅಧಿಕಾರದತ್ತ ಕಾಂಗ್ರೆಸ್ ಮೈತ್ರಿಕೂಟ

ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಚುನಾವಣಾ ರ್ಯಾಲಿಯ ಹೊರತಾಗಿಯೂ ಜಾರ್ಖಂಡ್​ನಲ್ಲಿ ಆಡಳಿತರೂಢ ಬಿಜೆಪಿ ಸೋಲು ಕೇಂದ್ರ ನಾಯಕರಿಗೆ ದೊಡ್ಡ ಮಟ್ಟದ ಮುಖಭಂಗಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಜಾರ್ಖಂಡ್​ ಮುಕ್ತಿ ಮೋರ್ಚ ಪಕ್ಷದ ಮುಖಂಡ ಹೇಮಂತ್​ ಸೊರೆನ್.

ಜಾರ್ಖಂಡ್​ ಮುಕ್ತಿ ಮೋರ್ಚ ಪಕ್ಷದ ಮುಖಂಡ ಹೇಮಂತ್​ ಸೊರೆನ್.

  • Share this:
ಜಾರ್ಖಂಡ್ (ಡಿಸೆಂಬರ್ 23); 81 ಕ್ಷೇತ್ರಗಳ ಜಾರ್ಖಂಡ್ ವಿಧಾನಸಭೆಗೆ ಐದು ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇದೀಗ ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿ ಮೈತ್ರಿಕೂಟ ತೀವ್ರ ಮುಖಭಂಗಕ್ಕೆ ಈಡಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಂಎಂ) ದಶಕಗಳ ನಂತರ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ.

2005 ಹಾಗೂ 2009 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ನೀಡಿದ್ದ ಜಾರ್ಖಂಡ್ ಮತದಾರ 2014ರಲ್ಲಿ ಮೋದಿ ಅಲೆಗೆ ಅಸ್ತು ಎಂದಿದ್ದ. ಈ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಜಾರ್ಖಂಡ್​ನಲ್ಲಿ 49 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಹುಮತದ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ ಪಕ್ಷದ ನಾಯಕ ರಘುಬರ್ ದಾರ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಕಳೆದ ಐದು ವರ್ಷ ಯಶಸ್ವಿ ಆಡಳಿತ ನೀಡಿದ್ದ ರಘುಬರ್ ದಾಸ್ ಈ ಬಾರಿಯೂ ಗೆಲುವು ಸಾಧಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ, ಅವರ ಕನಸಿಗೆ ಕಾಂಗ್ರೆಸ್, ಆರ್​ಜೆಡಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಂಎಂ) ಮೈತ್ರಿಕೂಟ ಎಳ್ಳು ನೀರು ಬಿಟ್ಟಿದೆ.

ಇಂದು ಮುಂಜಾನೆ 7 ಗಂಟೆಯಿಂದಲೇ ಜಾರ್ಖಂಡ್ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಆರಂಭದಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಕೂಟಗಳ ನಡುವೇ ತೀವ್ರ ನಿಕಟ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಇದ್ದರೂ ಸಹ 12 ಗಂಟೆಯ ವೇಳೆ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿತ್ತು.

ಇದನ್ನೂ ಓದಿ : ಜಾರ್ಖಂಡ್​ನಲ್ಲಿ ಮತ ಎಣಿಕೆ ಆರಂಭ; ಎರಡು ದಶಕಗಳ ನಂತರ ಬದಲಾಗಲಿದೆಯೇ ನಕ್ಸಲ್ ಪೀಡಿತ ರಾಜ್ಯದ ರಾಜಕೀಯ ಇತಿಹಾಸ?

81 ವಿಧಾನಸಭಾ ಸದಸ್ಯ ಬಲ ಹೊಂದಿರುವ ಜಾರ್ಖಂಡ್​ನಲ್ಲಿ ಸರ್ಕಾರ ರಚನೆ ಮಾಡಲು 41 ಮ್ಯಾಜಿಕ್ ನಂಬರ್. ಕಾಂಗ್ರೆಸ್ ಮೈತ್ರಿಕೂಟ ಇಷ್ಟೇ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯನ್ನು ಅಧಿಕಾರ ಕೇಂದ್ರದಿಂದ ದೂರವಿಡುವಲ್ಲಿ ಸಫಲವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 14, ಜೆಎಂಎಂ 31 ಹಾಗೂ ಆರ್​ಜೆಡಿ 04 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಯುಪಿಎ ಮೈತ್ರಿಕೂಟ 48 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆಡಳಿತರೂಢ ಬಿಜೆಪಿ ಕೇವಲ 22 ಸ್ಥಾನಕ್ಕೆ ಕುಸಿಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ಫಲಿತಾಂಶದ ನಂತರ ಕಾಂಗ್ರೆಸ್​-ಜೆಎಂಎಂ-ಆರ್​ಜೆಡಿ ಮೈತ್ರಿಕೂಟ ಜಾರ್ಖಂಡ್​ನಲ್ಲಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದ್ದು, ಜೆಎಂಎಂ ಪಕ್ಷದ ಮುಖ್ಯಸ್ಥ ಹೇಮಂತ್​ ಸೊರೆನ್​ ಮೈತ್ರಿಕೂಟದ ಒಪ್ಪಂದದಂತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ಡಿಸಿಎಂ ಸ್ಥಾನವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾರ್ಖಂಡ್​ನಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ಪ್ರಧಾನಿ ನರೇಂದ್ರ ಮೊದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಜಾರ್ಖಂಡ್​ನಲ್ಲಿ ಅನೇಕ ಚುನಾವಣಾ ರ್ಯಾಲಿಗಳನ್ನು ನಡೆಸಿ ಭರ್ಜರಿ ಪ್ರಚಾರ ಮಾಡಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ವಿವಾದಾತ್ಮಕ "ಪೌರತ್ವ ತಿದ್ದುಪಡಿ" ಮತ್ತು "ಪೌರತ್ವ ನೋಂದಣಿ" ಕಾಯ್ದಯ ವಿರುದ್ಧ ಇಡೀ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್​ ಚುನಾವಣಾ ಫಲಿತಾಂಶ ಇಡೀ ರಾಷ್ಟ್ರದ ಗಮನ ಸೆಳೆದಿತ್ತು.

ಆದರೆ, ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಚುನಾವಣಾ ರ್ಯಾಲಿಯ ಹೊರತಾಗಿಯೂ ಜಾರ್ಖಂಡ್​ನಲ್ಲಿ ಆಡಳಿತರೂಢ ಬಿಜೆಪಿ ಸೋಲು ಕೇಂದ್ರ ನಾಯಕರಿಗೆ ದೊಡ್ಡ ಮಟ್ಟದ ಮುಖಭಂಗಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ರಾಜ್ಯಾದ್ಯಂತ ವ್ಯಾಪಿಸಿದ ‘ಸಿಎಎ’ ವಿರೋಧಿ ಚಳುವಳಿ; ಕೇಂದ್ರದ ವಿರುದ್ಧ ಬೀದಿಗಿಳಿದ ಲಕ್ಷಾಂತರ ಹೋರಾಟಗಾರರು
Published by:MAshok Kumar
First published: