news18-kannada Updated:February 23, 2021, 12:50 PM IST
ಜಪಾನ್ನ ಬೆತ್ತಲೆ ಹಬ್ಬ
ಕೊರೋನಾ ಸೋಂಕಿನ ರಣಕೇಕೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲಿಯೂ ಕೊರೊನಾ ಸೋಂಕಿನಿಂದಾಗಿ ಪ್ರತಿವರ್ಷ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಸೋಂಕಿನ ಹಾವಳಿಯಿಂದ ಜನರು ಭೀತಿಗೊಂಡಿದ್ದು, ಇದರಿಂದಾಗಿ ತಮ್ಮ ಸಂಭ್ರಮಾಚರಣೆಗಳನ್ನು ಮುಂದೂಡಿದ್ದಾರೆ. ಇನ್ನು, ಜಪಾನ್ನ ವಾರ್ಷಿಕ ಹಬ್ಬವಾಗಿರುವ ‘ಹಡಕ ಮತ್ಸುರಿ’ ಕಳೆದ ಬಾರಿ ವಿಜೃಂಭಣೆಯಿಂದ ನಡೆದಿತ್ತು. ಫೆಬ್ರವರಿ ತಿಂಗಳು ನಡೆಯುವ ಹಡಕ ಮತ್ಸುರಿ ಹಬ್ಬವೂ ಬೆತ್ತಲೆ ಹಬ್ಬ ಎಂದು ಪ್ರಸಿದ್ಧಿ ಪಡೆದಿದೆ. ಆದರೆ, ಈ ಬೆತ್ತಲೆ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಆದರೆ, ಈ ಬಾರಿ ಹಡಕಾ ಮತ್ಸುರಿ ಹಬ್ಬದಲ್ಲಿ ಆಯ್ದ ಜನರಿಗೆ ಮಾತ್ರ ಪ್ರವೇಶ ಸಿಕ್ಕಿದ್ದು, ಉಳಿದ ಜನರಿಗೆ ಎಂಟ್ರಿ ಇಲ್ಲ.
ಕಳೆದ ವರ್ಷ ಈ ಸಮಯದಲ್ಲಿ ಇನ್ನು ಕೊರೋನಾ ಸೋಂಕು ತನ್ನ ಖಾತೆಯನ್ನು ತೆರೆದಿರಲಿಲ್ಲ. ಆಗ ಜಪಾನ್ನಲ್ಲಿ ನಡೆದ ಬೆತ್ತಲೆ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸಿ ಸಂಭ್ರಮಿಸಿದ್ದರು. ಫೆಬ್ರವರಿ ತಿಂಗಳಿನ ಮೂರನೇ ಶನಿವಾರದಂದು ಸೈದೈಜಿ ಕಣ್ಣೋನಿನ್ ದೇವಸ್ಥಾನದಲ್ಲಿ ಹಡಕ ಮತ್ಸುರಿ ಫೆಸ್ಟಿವಲ್ ನಡೆಯುತ್ತದೆ. ಕೊರೋನಾ ಸೋಂಕಿನಿಂದ ಈಗಾಗಲೇ ತತ್ತರಿಸಿರುವ ಜಪಾನಿನ ಜನರು, ಮತ್ತೊಮ್ಮೆ ಸೋಂಕಿಗೆ ಬಲಿಯಾಗುವುದು ಬೇಡ ಎಂದು ಹಡಕಾ ಮತ್ಸುರಿ ಸಂಘಟಕರು ಆಯ್ದ ಕೆಲವು ಮಂದಿಗೆ ಮಾತ್ರ ಈ ಹಬ್ಬದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
10,000 ಪುರುಷರ ನಡುವಿನ ಯುದ್ಧ:
ಈ ಬೆತ್ತಲೆ ಹಬ್ಬದಲ್ಲಿ 10 ಸಾವಿರ ಪುರುಷರು ಭಾಗವಹಿಸುತ್ತಾರೆ. ಈ ಆಚರಣೆಯೂ ಸಮೃದ್ಧಿ ಮತ್ತು ಆಶೀರ್ವಾದವನ್ನು ಸೂಚಿಸುತ್ತದೆ. ಬೆತ್ತಲೆ ಹಬ್ಬವೂ ಯುವ ಪೀಳಿಗೆ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ. ಒಂದು ಗಂಟೆಯಿಂದ ಎರಡು ಗಂಟೆವರೆಗೆ ಬೆತ್ತಲೆ ಹಬ್ಬ ನಡೆಯುತ್ತದೆ. ಇದರಲ್ಲಿ ಭಾಗವಹಿಸುವವರು ಮೊದಲು ದೇವಸ್ಥಾನದಲ್ಲಿ ತಣ್ಣಗೆ ಇರುವ ನೀರಿನಿಂದ ಸ್ನಾನ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಹೆಸರು ಸೂಚಿಸುವ ಬೆತ್ತಲೆ ಹಬ್ಬದಲ್ಲಿ ಭಾಗವಹಿಸುವ ಪುರುಷರು ಸಂಪೂರ್ಣವಾಗಿ ಬೆತ್ತಲೆ ಆಗಿರುವುದಿಲ್ಲ. ಸೋಂಟದ ಕೆಳಗೆ ಬಿಳಿ ಬಣ್ಣ ಬಟ್ಟೆ ರೀತಿಯ ಪಂಡೋಶಿ ಎಂಬ ಕನಿಷ್ಠ ಬಟ್ಟೆ ಜೊತೆಗೆ ಬಿಳಿ ಸಾಕ್ಸ್ (ಟ್ಯಾಬಿ) ಅನ್ನು ಧರಿಸಿರುತ್ತಾರೆ.
ಬೆತ್ತಲೆ ಹಬ್ಬ ಸಂಭ್ರಮಿಸುತ್ತಿರುವ ವೇಳೆ ರಾತ್ರಿ 10 ಗಂಟೆಗೆ ದೀಪಗಳು ಹೊರಟುಹೋದ ವೇಳೆ ಒಬ್ಬ ಪಾದ್ರಿಯು 100 ಕಟ್ಟುಗಳ ಕೊಂಬೆಗಳನ್ನು ಮತ್ತು ಎರಡು ಅದೃಷ್ಟದ 20-ಸೆಂ.ಮೀ. ಉದ್ದದ ಪವಿತ್ರ ಶಿಂಗಿ ದಂಡಗಳನ್ನು ಕಿಟಕಿಯಿಂದ ಜನಸಮೂಹಕ್ಕೆ ಎಸೆಯುತ್ತಾರೆ ಎಂಬ ನಂಬಿಕೆಯಿದೆ. ಇನ್ನು, ಪಾದ್ರಿ ಎಸೆಯುವ ಕಟ್ಟುಗಳ ಕೊಂಬೆ ಮತ್ತು ಪವಿತ್ರ ಶಿಂಗಿ ದಂಡವನ್ನು ಯಾರಿಗೆ ಸಿಗುತ್ತದೆ ಅವರಿಗೆ ಒಂದು ವರ್ಷ ಭಾರಿ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ಕೊನೆಯ 30 ನಿಮಿಷ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಸಣ್ಣಪುಟ್ಟ ಗಾಯಗಳು ಕೂಡ ಆಗುತ್ತವೆ.
ಈ ಬೆತ್ತಲೆ ಹಬ್ಬವನ್ನು ನೋಡಲು ಸಾಮಾನ್ಯವಾಗಿ ಜಪಾನ್ನಾದ್ಯಂತ ಜನರು ಸೇರಿ ಕೆಲವರು ವಿದೇಶದಿಂದ ಬರುತ್ತಾರೆ. ಆದರೆ ಫೆ.20ರಂದು ನಡೆದ ಈ ವರ್ಷದ ಹಡಕಾ ಮತ್ಸುರಿ ಫೆಸ್ಟಿವಲ್ ಕೇವಲ ಆಯ್ದ 100 ಮಂದಿಗೆ ಸಾಮಾಜಿಕವಾಗಿ ಅಂತರದೊಂದಿಗೆ ಆಯೋಜನೆ ಮಾಡಲಾಗಿದೆ ಎಂದು ಫೆಸ್ಟಿವಲ್ ಸಂಘಟಕರು ಸಿಎನ್ಎನ್ ಟ್ರಾವೆಲ್ಗೆ ದೃಢಪಡಿಸಿದ್ದಾರೆ.
500 ವರ್ಷಗಳಿಂದ ನಿರಂತರವಾಗಿ ನಡೆದ ಬೆತ್ತಲೆ ಹಬ್ಬ:500 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯನ್ನು ಈ ಬಾರಿ ನಿಲ್ಲಿಸಲು ಯೋಚನೆ ಮಾಡಲಾಗಿತ್ತು. ಆದರೆ, ಕಡಿಮೆ ಜನರನ್ನು ಆಯ್ಕೆ ಮಾಡಿಕೊಂಡು ಆಚರಣೆಯನ್ನು ಮುಂದುವರೆಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಬೆತ್ತಲೆ ಹಬ್ಬವು ಮುರೋಮಾಚಿ ಅವಧಿಯಲ್ಲಿ (1338-1573)ರ ವೇಳೆ ಪ್ರಾರಂಭವಾಯಿತು. ಜಪಾನಿನ ಸೈದೈಜಿ ಕಣ್ಣೋನಿನ್ ದೇವಸ್ಥಾನದಲ್ಲಿ ಪಾದ್ರಿಯೊಬ್ಬರು ಗ್ರಾಮಸ್ಥರನ್ನು ಸೇರಿಸಿ ಈ ಹಬ್ಬ ನಡೆಸಿದ್ದರು.
ಜಪಾನ್ನಲ್ಲಿ ಇತ್ತೀಚಿನ ವಾರಗಳಲ್ಲಿ ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿವೆ. ಜಪಾನ್ನಲ್ಲಿ 4,24,000ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಮತ್ತು ಸೋಂಕಿನಿಂದ 7,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
Published by:
Sushma Chakre
First published:
February 23, 2021, 10:46 AM IST