ಟಾಲಿವುಡ್ ನಟ, ಜನಸೇನಾ ಪಕ್ಷದ (Janasena Party) ಸಂಸ್ಥಾಪಕ ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶ (Andhra Pradesh) ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ 'ವಾರಾಹಿ' (Varahi Vehicle) ಹೆಸರಿನ ಪ್ರಚಾರ ರಥವನ್ನು ವಿಶೇಷವಾಗಿ ತಯಾರಿಸಿದ್ದು, ಆ ಮೂಲಕ ಯುದ್ಧಕ್ಕೆ ಸಿದ್ಧ ಎಂದಿದ್ದಾರೆ. ಆದರೆ ಸದ್ಯ ಆಂಧ್ರ ಪ್ರದೇಶ ರಾಜಕೀಯ ಬೆಳವಣಿಗೆಗಳು ವಾರಾಹಿ ವಾಹನ ಸುತ್ತ ಗಿರಿಕಿ ಹೊಡೆಯಲು ಆರಂಭಿಸಿದೆ. ಹೌದು, ವಾರಾಹಿ ವಾಹನದ ಬಣ್ಣವನ್ನು ಟಾರ್ಗೆಟ್ ಮಾಡಿ ಆಡಳಿತಾರೂಢ ಪಕ್ಷದ (YSRCP) ನಾಯಕರು ಟೀಕೆ ಮಾಡಿ, ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಜನಸೇನಾ ಪಕ್ಷದ ಪ್ರಚಾರ ವಾಹನ ಕುರಿತಂತೆ ಮಾತನಾಡಿರೋ ಮಾಜಿ ಸಚಿವ ಪೆರ್ನಿ ನಾನಿ, ನಿಯಮಗಳ ಅನ್ವಯ ಆಲಿವ್ ಗ್ರೀನ್ ಬಣ್ಣವನ್ನು ಸೇನಾ ವಾಹನಗಳಿಗೆ ಮಾತ್ರ ಬಳಸಲಾಗುತ್ತದೆ ಎಂದಿದ್ದಾರೆ.
ಉಳಿದ ಯಾವುದೇ ವಾಹನಕ್ಕೆ ಈ ಬಣ್ಣ ಹಾಕಿದರೆ ಅಂತಹ ವಾಹನ ನೋಂದಣಿ ಕೂಡ ಮಾಡುವುದಿಲ್ಲ. ಜನಸೇನಾ ಪ್ರಚಾರಕ್ಕೆ ಆಲಿವ್ ಗ್ರೀನ್ ಬಣ್ಣ ಬದಲು, ಮೊದಲೇ ಅರಿಶಿಣ (TDP Party) ಬಣ್ಣ ಹಾಕಿದ್ದರೆ ಹಣ ಉಳಿಯುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ವಾರಾಹಿಯಂತಹ ವಾಹನಗಳು ಸಿನಿಮಾಗಳಲ್ಲಿ ನೋಡಲು ಚೆನ್ನಾಗಿರುತ್ತೆ
ಆಂಧ್ರ ಪ್ರದೇಶ ಸಿಎಂ ಕಾರ್ಯಾಲಯದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೆರ್ನಿ ನಾನಿ, ಸೇನೆಯ ವಾಹನಗಳಿಗೆ ಬಳಸುವ ಆಲಿವ್ ಗ್ರೀನ್ ಬಣ್ಣವನ್ನು ಖಾಸಗಿ ವಾಹನಗಳಿಗೆ ಬಳಸುವುದು ನಿಷಿದ್ಧ. ಇದೇ ಬಣ್ಣ ಇದ್ದರೆ ವಾಹನ ನೋಂದಣಿ ಆಗೋದಿಲ್ಲ. ನೀವು ಹೇಗೂ ಬಣ್ಣ ಬದಲಿಸಬೇಕು. ಆದ್ದರಿಂದ ಈಗಲೇ ಅದನ್ನು ಅರಿಶಿಣ ಬಣಕ್ಕೆ ಬದಲಿಸಿ.
ನೀವು ಟಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಹೋಗುವವರು ತಾನೇ. ಈಗ ಪ್ರಧಾನಿ ಮೋದಿ ಹೇಳಿದ ಕಾರಣ ಕೆಲ ದಿನಗಳಿಂದ ದೂರ ಇದ್ದೀರಿ. ವಾಹನಗಳಲ್ಲಿ ಚುನಾವಣಾ ಯುದ್ಧ ಮುಗಿಯುತ್ತೆ ಎಂದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ನಾನು ಕೂಡ ಇಂತಹ ವಾಹನ ಖರೀದಿ ಮಾಡಬಹುದು. ಆದರೆ ಇವು ಸಿನಿಮಾಗಳಲ್ಲಿ ಮಾತ್ರ ಚೆನ್ನಾಗಿರುತ್ತದೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: Pawan Kalyan: ನಟ, ರಾಜಕಾರಣಿ ಪವನ್ ಕಲ್ಯಾಣ್ ಚುನಾವಣಾ ರಥ ರೆಡಿ! ಹೆಸರೇನು ಗೊತ್ತಾ?
ಇಂತಹ ನಿಯಮಗಳು ಕೇವಲ ಪವನ್ ಕಲ್ಯಾಣ್ಗೆ ಮಾತ್ರವೇ?
ವಾರಾಹಿ ವಾಹನದ ಬಣ್ಣದ ಕುರಿತಂತೆ ವಿಮರ್ಶೆಗಳು ಕೇಳಿ ಬರುತ್ತಿದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರೋ ಪವನ್ ಕಲ್ಯಾಣ್, ವೈಎಸ್ಆರ್ಪಿಸಿ ಕನಿಷ್ಠ ನನಗೆ ಈ ಶರ್ಟ್ ಹಾಕಿಕೊಳ್ಳಲು ಅನುಮತಿ ನೀಡುತ್ತಾ ಎಂದು ಪ್ರಶ್ನೆ ಮಾಡಿ ಆಲಿವ್ ಗ್ರೀನ್ ಬಣ್ಣದ ಶರ್ಟ್ ಫೋಟೋ ಹಂಚಿಕೊಂಡಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ತಿರುಗೇಟು ನೀಡಿರೋ ಪವನ್ ಕಲ್ಯಾಣ್, ಹಸಿರು ವಾಹನದ ಫೋಟೋ ಹಂಚಿಕೊಂಡು ನಿಮಗೆ ಹಸಿರು ಬಣ್ಣದಲ್ಲಿ ಯಾವ ವೆರಿಯಂಟ್ ಇಷ್ಟ ಹೇಳಿ? ಇಂತಹ ನಿಯಮಗಳು ಕೇವಲ ಪವನ್ ಕಲ್ಯಾಣ್ಗೆ ಮಾತ್ರವೇ? ವೈಸಿಪಿ ಪಕ್ಷ ಟಿಕೆಟ್ ಬೆಲೆ, ಕಾರಿನ ಬಣ್ಣ, ಕಟ್ಟಡಗಳನ್ನು ತೆರವುಗೊಳಿಸುವ ಕೆಲಸಗಳನ್ನು ಬಿಟ್ಟು ಆಂಧ್ರ ಪ್ರದೇಶದ ಅಭಿವೃದ್ಧಿ ಕುರಿತು ಗಮನಹರಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚಾವತಾರ, ಕಿರುಕುಳದಿಂದ ಕಾರಿನಿಂದ ಒಳಉಡುಪು ತಯಾರಿಕ ಕಂಪನಿಗಳು ಪಕ್ಕದ ರಾಜ್ಯಗಳಿಗೆ ಹೋಗಿವೆ ಎಂದು ಕಿಡಿಕಾರಿದ್ದಾರೆ.
ಉಸಿರಾಡೋದನ್ನು ನಿಲ್ಲಿಸಿ ಬಿಡಿ ಅಂತ ಹೇಳ್ತೀರಾ..?
ಮಾಜಿ ಸಚಿವ ಪೆರ್ನ ನಾನಿ ಹೇಳಿಕೆಗೆ ತಿರುಗೇಟು ನೀಡಿರುವ ಪವನ್ ಕಲ್ಯಾಣ್, ಮೊದಲು ನನ್ನ ಸಿನಿಮಾಗಳಿಗೆ ಅಡ್ಡಿಪಡಿಸಿದ್ದರು. ವಿಶಾಖಪಟ್ಟಣಂಗೆ ಹೋದರೆ ಹೋಟೆಲ್ನಿಂದ ಹೊರಬಾರದಂತೆ ತಡೆದರು. ಮಂಗಳಗಿರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದರೆ ಅಡ್ಡಪಡಿಸಿದ್ದರು. ಗ್ರಾಮಕ್ಕೆ ನಡೆದುಕೊಂಡು ಹೋಗಲು ಬಿಡದೆ ತಡೆದರು. ಈಗ ವಾರಾಹಿ ವಾಹನದ ಬಣ್ಣದ ಬಗ್ಗೆ ವಿವಾದ ಮಾಡ್ತಿದ್ದಾರೆ. ಇನ್ನು ಮುಂದೆ ಉಸಿರು ತೆಗೆದುಕೊಳ್ಳೋದನ್ನು ಕೂಡ ನಿಲ್ಲಿಸಿ ಬಿಡಿ ಅಂತ ಹೇಳ್ತೀರಾ ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ