ಶ್ರೀನಗರ(ಅ.04): ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮು ಕಾಶ್ಮೀರದ (Jammu Kashmir) ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕತ್ತು ಸೀಳಿ ಅವರ ಕೊಲೆಗೈಯ್ಯಲಾಗಿದ್ದು, ಮೃತದೇಹದ ಮೇಲೆ ಸುಟ್ಟ ಗಾಯಗಳು ಕೂಡ ಇವೆ. ಜಮ್ಮು ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ನಿವಾಸದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 57 ವರ್ಷದ ಹೇಮಂತ್ ಲೋಹಿಯಾ (Hemant Lohia) ಕೊಲೆಯಾದವರು. ಇವರು 1992ರ ಬ್ಯಾಚ್ನ ಐಪಿಎಸ್ ಅಧಿಕಾರಿ (IPS Officer) ಆಗಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮನೆಯಾಳು ನಾಪತ್ತೆಯಾಗಿದ್ದಾನೆ. ಇದೇ ವೇಳೆ ಟಿಆರ್ಎಫ್ ಉಗ್ರ ಸಂಘಟನೆ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಇದನ್ನೂ ಓದಿ: Hindu: ಹಿಂದೂವಾಗಲು ಧರ್ಮ ಬದಲಾಯಿಸಬೇಕೆಂದಿಲ್ಲ, ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ: ಮೋಹನ್ ಭಾಗವತ್
ಪೊಲೀಸರ ಪ್ರಕಾರ ಲೋಹಿಯಾ ಅವರ ಶವ ಅವರ ಮನೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರ ತನಿಖೆಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಮನೆ ಕೆಲಸದಾತ ಯಾಸಿರ್ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಬಣ್ಣಿಸಿದ್ದಾರೆ. ನೌಕರನ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಯಾಸಿರ್ ತಲೆಮರೆಸಿಕೊಂಡಿದ್ದಾನೆ.
ದೇಹ ಸುಡಲು ಯತ್ನ
ಆರೋಪಿಗಳು ಹೇಮಂತ್ ಅವರ ಲೋಹಿಯಾ ಅವರ ದೇಹವನ್ನು ಸುಡಲು ಪ್ರಯತ್ನಿಸಿದ್ದಾರೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಲೋಹಿಯಾ ಅವರನ್ನು ಆಗಸ್ಟ್ನಲ್ಲಿಯೇ ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಡೈರೆಕ್ಟರ್ ಜನರಲ್ ಆಗಿ ಬಡ್ತಿ ನೀಡಲಾಗಿತ್ತು. ಇನ್ನು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಲೋಹಿಯಾ ಮನೆಗೆ ಭೇಟಿ ನೀಡಿದ್ದು, ಲೋಹಿಯಾ ಅವರ ದೇಹದಲ್ಲಿ ಸುಟ್ಟ ಗಾಯಗಳು ಮತ್ತು ಗಂಟಲು ಸೀಳಿದ ಗುರುತುಗಳು ಕಂಡುಬಂದಿವೆ ಎಂದು ಅವರು ಹೇಳಿದರು.
Director General of J&K (Prisons) Hemant Lohia murdered at his residence in Jammu: Police
— Press Trust of India (@PTI_News) October 3, 2022
ಬಾಟಲಿಯಿಂದ ಕತ್ತು ಸೀಳಿ ಹತ್ಯೆ
ಪೊಲೀಸರ ಪ್ರಕಾರ, ಘಟನೆಯ ಸ್ಥಳದ ಪ್ರಾಥಮಿಕ ತನಿಖೆಯಲ್ಲಿ ಲೋಹಿಯಾ ಅವರನ್ನು ಮೊದಲು ಕೊಲೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅವರ ಕತ್ತು ಸೀಳಲು ಕೆಚಪ್ ಬಾಟಲಿಯನ್ನು ಬಳಸಲಾಗಿದೆ. ಬಳಿಕ ಶವಕ್ಕೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಇನ್ನು ಲೋಹಿಯಾ ಅವರ ಮನೆಯ ಹೊರಗಿದ್ದ ಕಾವಲುಗಾರರಿಗೆ ಅವರ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗೇಟ್ ಒಡೆದು ಕೊಠಡಿ ಪ್ರವೇಶಿಸಿದ್ದಾರೆ. ಈ ವೇಳೆ ಕೊಠಡಿಗೆ ಒಳಗಿನಿಂದ ಬೀಗ ಹಾಕಲಾಗಿತ್ತು
ಪ್ರಾಥಮಿಕ ತನಿಖೆ ಏನು ಹೇಳುತ್ತೆ?
ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಎಂದು ತೋರುತ್ತದೆ ಎಂದು ಎಡಿಜಿಪಿ ಹೇಳಿದ್ದಾರೆ. ಮನೆಕೆಲಸದಾತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ವಿಧಿವಿಜ್ಞಾನ ತಂಡವೂ ತನಿಖೆ ನಡೆಸುತ್ತಿದೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ. ಲೋಹಿಯಾ ಸಾವಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಂತಾಪ ಸೂಚಿಸಿದ್ದಾರೆ.
ಲೋಹಿಯಾ 1992ರ ಬ್ಯಾಚ್ನ ಐಪಿಎಸ್ ಅಧಿಕಾರಿ
ಲೋಹಿಯಾ 1992ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಲೋಹಿಯಾ ಅವರು ದೀರ್ಘಕಾಲದವರೆಗೆ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದರು. ಆದರೆ ಫೆಬ್ರವರಿ 2022 ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿದರು. ಅವರನ್ನು ಗೃಹರಕ್ಷಕ ದಳ/ನಾಗರಿಕ ರಕ್ಷಣಾ/ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಯಲ್ಲಿ ಕಮಾಂಡೆಂಟ್ ಜನರಲ್ ಆಗಿ ನಿಯೋಜಿಸಲಾಗಿತ್ತು. ಆಗಸ್ಟ್ 2022 ರಲ್ಲಿ ಕಾರಾಗೃಹ ಇಲಾಖೆಯ ಡಿಜಿ ಜೈಲು ಹುದ್ದೆಗೆ ಬಡ್ತಿ ನೀಡಲಾಯಿತು. ಹೇಮಂತ್ ಲೋಹಿಯಾ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮಗಳಿಗೆ ಮದುವೆಯಾಗಿದ್ದು, ಆಕೆ ಲಂಡನ್ನಲ್ಲಿ ವಾಸಿಸುತ್ತಾಳೆ. ಈ ವರ್ಷ ಡಿಸೆಂಬರ್ನಲ್ಲಿ ಮಗನ ಮದುವೆ ನಡೆಯಬೇಕಿತ್ತು.
ಭಯೋತ್ಪಾದಕ ಸಂಘಟನೆ ಟಿಆರ್ಎಫ್ ಹೊಣೆ ಹೊತ್ತುಕೊಂಡಿದೆ
ಎಚ್ ಕೆ ಲೋಹಿಯಾ ಹತ್ಯೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಟಿಆರ್ ಎಫ್ ಹೊತ್ತುಕೊಂಡಿದೆ. ಟಿಆರ್ಎಫ್ನ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫೋರ್ಸ್ ಹೊಸ ಭಯೋತ್ಪಾದಕ ಸಂಘಟನೆಯಾಗಿದೆ. ಸ್ಥಳೀಯರಲ್ಲದವರ ಹತ್ಯೆ ಸೇರಿದಂತೆ ಕಾಶ್ಮೀರದಲ್ಲಿ ಇತ್ತೀಚಿನ ಎಲ್ಲಾ ದಾಳಿಗಳಿಗೆ ಇದು ಕಾರಣವಾಗಿದೆ. ನಮ್ಮ ವಿಶೇಷ ಪಡೆ ಜಮ್ಮುವಿನ ಉದಯವಾಲಾದಲ್ಲಿ ಗುಪ್ತಚರ ಕಾರ್ಯಾಚರಣೆ ನಡೆಸುತ್ತಿದ್ದಾಗ ಡಿಜಿ ಪೊಲೀಸ್ ಜೈಲು ಎಚ್ಕೆ ಲೋಹಿಯಾ ಅವರನ್ನು ಕೊಂದಿದೆ ಎಂದು ಟಿಆರ್ಎಫ್ ಹೇಳಿಕೆ ನೀಡಿದೆ.
ಇದನ್ನೂ ಓದಿ: Rajasthan Politics: ಸಚಿನ್ ಪೈಲಟ್ ಸಿಎಂ ಆಗೋ ಹಾದಿಯಲ್ಲಿ ಮುಳ್ಳಾದ ಅಶೋಕ್ ಗೆಹ್ಲೋಟ್ ಆ ಮೂರು ಷರತ್ತು
ಇದು ಹೈ ಪ್ರೊಫೈಲ್ ಕಾರ್ಯಾಚರಣೆಗೆ ನಾಂದಿಯಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿದೆ. ಇದು ಹಿಂದುತ್ವದ ಆಡಳಿತ ಮತ್ತು ಅವರ ಮಿತ್ರಪಕ್ಷಗಳಿಗೆ ಎಚ್ಚರಿಕೆಯಾಗಿದೆ, ನಾವು ಎಲ್ಲಿ ಬೇಕಾದರೂ ದಾಳಿ ಮಾಡಬಹುದು. ಭೇಟಿಗೂ ಮುನ್ನ ಗೃಹ ಸಚಿವರಿಗೆ ಇದೊಂದು ಸಣ್ಣ ಉಡುಗೊರೆ. ಭವಿಷ್ಯದಲ್ಲಿ ನಾವು ಅಂತಹ ಕಾರ್ಯಾಚರಣೆಗಳನ್ನು ಮುಂದುವರಿಸುತ್ತೇವೆ ಎಂದೂ ಸವಾಲೆಸೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ