ಶ್ರೀನಗರ(ಡಿ. 23): ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ (DDC) ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ನ್ಯಾಷನಲ್ ಕಾನ್ಫೆರೆನ್ಸ್ ನೇತೃತ್ವದ ಗುಪ್ಕರ್ ಮೈತ್ರಿಕೂಟ ಸ್ಪಷ್ಟ ಮೇಲುಗೈ ಸಾಧಿಸಿದೆ. ಒಟ್ಟು 280 ಡಿಡಿಸಿ ಸ್ಥಾನಗಳ ಪೈಕಿ ಗುಪ್ಕರ್ ಮೈತ್ರಿಕೂಟದ ಪಕ್ಷಗಳು 112 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ಅನ್ನ ತೆಗೆದುಹಾಕಿದ ಬೆನ್ನಲ್ಲೇ ಜನತಾ ಅಭಿಪ್ರಾಯ ಸಂಗ್ರಹಣೆ ಎಂದೇ ಈ ಚುನಾವಣೆಯನ್ನು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಫಲಿತಾಂಶ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಕೂಡ ಈ ಚುನಾವಣೆಯಲ್ಲಿ ಹಿಂದೆಬಿದ್ದಿಲ್ಲ. ಪಕ್ಷವಾರು ಲೆಕ್ಕಾಚಾರದಲ್ಲಿ ಅದು ನಂಬರ್ ಒನ್ ಆಗಿದೆ. 280 ಸ್ಥಾನಗಳ ಪೈಕಿ ಬಿಜೆಪಿಯೊಂದೇ 74 ಸ್ಥಾನಗಳನ್ನ ಜಯಿಸಿದೆ. ಜಮ್ಮುಕಾಶ್ಮೀರ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ 67 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಗುಪ್ಕರ್ ಮೈತ್ರಿಕೂಟದ ಭಾಗವಾಗಿರುವ ಪಿಡಿಪಿ 27 ಸ್ಥಾನಗಳನ್ನ ಗೆದ್ದಿದೆ.
ಜಮ್ಮು ವಲಯದಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಪಡೆದಿದೆ. ಕಾಶ್ಮೀರದಲ್ಲೂ ಬಿಜೆಪಿ ತಕ್ಕ ಮಟ್ಟಿಗೆ ಪೈಪೋಟಿ ನೀಡಿ ಅಚ್ಚರಿ ಮೂಡಿಸಿದೆ. ಜಮ್ಮು ವಲಯದಲ್ಲಿ ಬಿಜೆಪಿ ಆರು ಜಿಲ್ಲಾ ಅಭಿವೃದ್ಧಿ ಸಮಿತಿಗಳಲ್ಲಿ ಬಹುಮತ ಪಡೆಯುವಲ್ಲಿ ಸಫಲವಾಗಿದೆ. ಗುಪ್ಕರ್ ಜನತಾ ಮೈತ್ರಿಕೂಟ ಕಾಶ್ಮೀರದ 9 ಡಿಡಿಸಿಗಳನ್ನ ಜಯಿಸಿದೆ. ಒಟ್ಟಾರೆ 49 ಸ್ಥಾನಗಳನ್ನ ಗೆದ್ದಿರುವ ಪಕ್ಷೇತರರು 5 ಅತಂತ್ರ ಡಿಡಿಸಿಗಳಲ್ಲಿ ಕಿಂಗ್ ಮೇಕರ್ಸ್ ಆಗಲಿದ್ದಾರೆ. ಗುಪ್ಕರ್ ಜನತಾ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರವೇ ಉತ್ತೇಜಿಸಿ ಕಣಕ್ಕಿಳಿಸಿದ್ದ ಜಮ್ಮು-ಕಾಶ್ಮೀರ ಅಪ್ನಿ ಪಾರ್ಟಿ ಕೇವಲ 12 ಸ್ಥಾನಗಳನ್ನ ಗೆದ್ದಿದೆ. ಇದು ಕಣಿವೆ ರಾಜ್ಯದಲ್ಲಿ ಹೊಸ ತಲೆಮಾರಿನ ರಾಜಕಾರಣ ಹುಟ್ಟುಹಾಕುವ ಕೇಂದ್ರ ಪ್ರಯತ್ನ ಅಷ್ಟೇನೂ ಯಶಸ್ಸು ಕಂಡಿಲ್ಲದಿರುವುದನ್ನ ತೋರಿಸಿದೆ.
ಇದನ್ನೂ ಓದಿ: ರೈತರ ಬೇಡಿಕೆ ಈಡೇರುವವರೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ; ರೈತರಿಂದ ಇಂಗ್ಲೆಂಡ್ ಸಂಸದರಿಗೆ ಪತ್ರ!
ಗುಪ್ಕರ್ ಮೈತ್ರಿಕೂಟದ ನಾಯಕರು ಈ ಫಲಿತಾಂಶವನ್ನ ಸ್ವಾಗತಿಸಿದ್ದಾರೆ. ಬಹುತೇಕ ಎಲ್ಲಾ ಪಕ್ಷಗಳೂ ಈ ಫಲಿತಾಂಶವನ್ನ ಸ್ವಾಗತಿಸಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ನಿನ್ನೆ ಬಂದ ಈ ಫಲಿತಾಂಶವು ಕೇಂದ್ರದ 370ನೇ ವಿಧಿ ರದ್ದತಿ ಕ್ರಮದ ವಿರುದ್ಧವಾಗಿ ಬಂದ ಜನತಾ ತೀರ್ಪು ಎಂದು ಜನತಾ ಮೈತ್ರಿಕೂಟ ಅಭಿಪ್ರಾಯಪಟ್ಟಿದೆ. ಕಾಂಗ್ರೆಸ್ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರದ ಜನರು ಗುಪ್ಕರ್ ಮೈತ್ರಿಗೆ ಬೆಂಬಲ ನೀಡಿದ್ದಾರೆ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಮುಖಂಡರಿಗೆ ನಿರಂತರ ತೊಡರುಗಾಲು ಹಾಕುತ್ತಿದ್ದರೂ ಮೈತ್ರಿಕೂಟಕ್ಕೆ ಜನರು ಬೆಂಬಲ ನೀಡಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ತಿಳಿಸಿದ್ದಾರೆ. ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ ಜಮ್ಮು ಮತ್ತು ಕಾಶ್ಮೀರ ಎರಡೂ ವಲಯಗಳಲ್ಲಿ ಗಮನಾರ್ಹ ಸಾಧನೆ ತೋರಿ ತಮ್ಮದು ಸರ್ವವ್ಯಾಪಿ ಪಕ್ಷ ಎಂಬುದನ್ನು ನಿರೂಪಿಸಿದೆ.
ಮುಸ್ಲಿಮ್ ಬಾಹುಳ್ಯ ಇರುವ ಕಾಶ್ಮೀರ ವಲಯದಲ್ಲಿ ಬಿಜೆಪಿ ಮೂರು ಸ್ಥಾನಗಳನ್ನ ಗೆದ್ದು ಅಚ್ಚರಿ ಮೂಡಿಸಿದೆ. ಜಮ್ಮು ವಲಯದಲ್ಲಿ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಈ ಫಲಿತಾಂಶವನ್ನು ಜನರು ತನ್ನ ಪರವಾಗಿ ನೀಡಿದ ತೀರ್ಪು ಎಂದು ಬಿಜೆಪಿ ಬಣ್ಣಿಸಿದೆ. ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು, ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡಿರುವುದು ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಕ್ಕೆ ಆಗಿರುವ ಸೋಲು ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ಸಿಎಂ ಮಮತಾ ಬ್ಯಾನರ್ಜಿ ಕರೆದಿದ್ದ ಕ್ಯಾಬಿನೆಟ್ ಸಭೆಗೆ ನಾಲ್ಕು ಸಚಿವರು ಗೈರು; ಮತ್ತೆ ಶುರುವಾಯ್ತಾ ಬಿಜೆಪಿಯ ಪಕ್ಷಾಂತರದ ಭೀತಿ?
ಜಮ್ಮು-ಕಾಶ್ಮೀರದ 280 ಡಿಡಿಸಿಗಳ ಪೈಕಿ ಘೋಷಿತ 276 ಸ್ಥಾನಗಳ ಫಲಿತಾಂಶದ ಪಕ್ಷವಾರು ವಿವರ:
ಫಲಿತಾಂಶ ಘೋಷಿತ ಸ್ಥಾನಗಳು: 276
ಬಿಜೆಪಿ: 74
ನ್ಯಾಷನಲ್ ಕಾನ್ಫೆರೆನ್ಸ್: 67
ಪಿಡಿಪಿ: 27
ಕಾಂಗ್ರೆಸ್: 26
ಅಪ್ನಿ ಪಾರ್ಟಿ: 12
ಜೆಕೆಪಿಸಿ: 8
ಸಿಪಿಐ(ಎಂ): 5
ಜೆಕೆಪಿಎಂ: 3
ಪಿಡಿಎಫ್ 2
ಜೆಕೆಎನ್ಪಿಪಿ: 2
ಬಿಎಸ್ಪಿ: 1
ಪಕ್ಷೇತರರು: 49
ಗುಪ್ಕರ್ ಮೈತ್ರಿಕೂಟ:
ನ್ಯಾಷನಲ್ ಕಾನ್ಫೆರೆನ್ಸ್: 67
ಪಿಡಿಪಿ: 27
ಸಿಪಿಐ(ಎಂ): 5
ಪೀಪಲ್ಸ್ ಕಾನ್ಫೆರೆನ್ಸ್: 8
ಅವಾಮಿ ನ್ಯಾಷನಲ್ ಕಾನ್ಫೆರೆನ್ಸ್:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ