ಜಮ್ಮು ಕಾಶ್ಮೀರದ ನೌಗಾಮ್​ನಲ್ಲಿ ಉಗ್ರರ ದಾಳಿ; ಇಬ್ಬರು ಪೊಲೀಸರು ಹುತಾತ್ಮ

ಶ್ರೀನಗರದಲ್ಲಿ ಇಂದು ಬೆಳಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಪೊಲೀಸರು ಮೃತಪಟ್ಟಿದ್ದು, ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರೀನಗರ (ಆ. 14): ಜಮ್ಮು ಮತ್ತು ಕಾಶ್ಮೀರದ ನೌಗಾಮ್​ನಲ್ಲಿ ಇಂದು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇನ್ನೋರ್ವ ಪೊಲೀಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಜೈಷ್-ಇ- ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶ್ರೀನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಇದೀಗ ಭದ್ರತಾ ಪಡೆಗಳು ಸುತ್ತುವರೆದಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: Independence Day 2020: ಭಾರತದ ರಾಷ್ಟ್ರಧ್ವಜದ ಇತಿಹಾಸ, ವಿಶೇಷತೆ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಈ ದಾಳಿ ನಡೆಯಬಹುದು ಎಂಬ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಯಾವುದೇ ಪ್ರದೇಶದಲ್ಲಿ ದಾಳಿ ನಡೆಯಬಹುದು ಎನ್ನಲಾಗಿತ್ತು. ಉಗ್ರರು ಇಂದು ಬೆಳಗ್ಗೆ ದಾಳಿ ನಡೆಸಿದ ಜಾಗದಲ್ಲಿ ಜನಸಂಚಾರ ಹೆಚ್ಚಾಗಿದ್ದರಿಂದ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು. ಹೀಗಾಗಿ, ಉಗ್ರರನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಬಳಿ ಇರುವ ನೌಗಾಮ್ ಸೆಕ್ಟರ್ ಬಳಿ ಉಗ್ರರು ಮತ್ತೊಮ್ಮೆ ಭದ್ರತಾಪಡೆಗಳನ್ನು ಗುರಿಯಾಗಿಸಿದ್ದಾರೆ.  ಇಂದು ಬೆಳಗ್ಗೆ ಶ್ರೀನಗರದ ಹೊರವಲಯದಲ್ಲಿರುವ ಬೈಪಾಸ್ ಬಳಿ ಪೊಲೀಸ್ ಪಾರ್ಟಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಕಳೆದ ಹಲವು ದಿನಗಳಿಂದ ಕಣಿವೆಯಲ್ಲಿ ಉಗ್ರರು ಪೊಲೀಸ್ ಪಾರ್ಟಿಗಳು ಹಾಗೂ ಸೇನಾಪಡೆಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬಾರಾಮುಲ್ಲಾ ಜಿಲ್ಲೆಯ ಸೋಪೋರ್​ನ ಸೇನಾ ತುಕಡಿಯ ಮೇಲೆ ಹಲ್ಲೆ ನಡೆಸಲಾಗಿತ್ತು ಈ ವೇಳೆ ಓರ್ವ ಸೈನಿಕ ಗಾಯಗೊಂಡಿದ್ದರು.

ಇತ್ತೀಚೆಗೆ, ಭದ್ರತಾ ಪಡೆಗಳು ಪುಲ್ವಾಮಾ ಜಿಲ್ಲೆಯ ಸೇಬಿನ ತೋಟದಲ್ಲಿ ಅವಿತು ಕುಳಿತ ಉಗ್ರರ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಆಜಾದ್ ಅಹಮದ್ ಲೋನ್ ಉಗ್ರನನ್ನು ಮಟ್ಟ ಹಾಕಲಾಗಿತ್ತು. ಆದರೆ, ಈ ದಾಳಿಯಲ್ಲಿ ಭದ್ರತಾ ಪಡೆಯ ಯೋಧ ಕೂಡ ಹುತಾತ್ಮರಾಗಿದ್ದರು. ಇಂದು ಮತ್ತೆ ಉಗ್ರರ ದಾಳಿ ನಡೆದಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Published by:Sushma Chakre
First published: