ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಪ್ರದೇಶವೂ ಭಾರತದ ಭಾಗವೇ: ಅಮಿತ್ ಶಾ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ಕ್ರಮವು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಇತರ ರಾಜ್ಯಗಳಿಗೆ ತಪ್ಪು ಸಂದೇಶ ರವಾನೆಯಾಗಬಹುದು ಎಂದು ವಿಪಕ್ಷಗಳು ಎಚ್ಚರಿಸಿವೆ.

news18
Updated:August 6, 2019, 3:19 PM IST
ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಪ್ರದೇಶವೂ ಭಾರತದ ಭಾಗವೇ: ಅಮಿತ್ ಶಾ
ಅಮಿತ್ ಶಾ ಮತ್ತು ಮನೀಶ್ ತಿವಾರಿ
news18
Updated: August 6, 2019, 3:19 PM IST
ನವದೆಹಲಿ(ಆ. 06): ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳು ಒಳಗೊಂಡಿವೆ. ಇವೆರಡೂ ಕೂಡ ಭಾರತದ ಅವಿಭಾಜ್ಯ ಅಂಗಗಳೇ ಆಗಿವೆ ಎಂದು ಅಮಿತ್ ಶಾ ಮಹತ್ವದ ಸಂದೇಶ ಹೊರಗೆಡವಿದ್ದಾರೆ. ಇವತ್ತು ಜಮ್ಮು-ಕಾಶ್ಮೀರ ವಿಶೇಷಾಧಿಕಾರ ಹಿಂಪಡೆಯುವ ನಿರ್ಣಯ ಮತ್ತು ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮೇಲಿ ಚರ್ಚೆಯ ವೇಳೆ ಅಮಿತ್ ಶಾ ಈ ಮಾತುಗಳನ್ನಾಡಿದ್ಧಾರೆ.

ನಿರ್ಣಯ ಮಂಡಿಸುವ ವೇಳೆ ಅಮಿತ್ ಶಾ ಮತ್ತು ವಿಪಕ್ಷ ಮುಖಂಡರ ಮಧ್ಯೆ ತೀವ್ರ ವಾಗ್ವಾದಗಳೇ ನಡೆದವು. ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಆಕ್ಷೇಪ ವ್ಯಕ್ತಪಡಿಸಿದರು. ಹಾಗೆಯೇ, ಕಾಶ್ಮೀರವು ಭಾರತದ ಆಂತರಿಕ ಸಮಸ್ಯೆಯಲ್ಲ ಎಂದು ಹೇಳುವ ಮೂಲಕ ವಿವಾದ ಕೂಡ ಹುಟ್ಟುಹಾಕಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ; ಲೋಕಸಭೆಯಲ್ಲಿ ಆಡಳಿತ ವಿರೋಧ ಪಕ್ಷಗಳ ನಡುವೆ ಕೋಲಾಹಲಕ್ಕೆ ಕಾರಣವಾದ ಚರ್ಚೆ!

ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಚಾರವಾಗಿದೆ. ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆದಿರುವ ಕ್ರಮವು ಏಕಪಕ್ಷೀಯ ನಿರ್ಧಾರವಾಗಿದೆ ಎಂಬುದು ಕಾಂಗ್ರೆಸ್ ಮುಖಂಡರ ಆರೋಪ.

“ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರವೆಂದು ಕೇಂದ್ರ ಸರ್ಕಾರವೇ ಸಾಕಷ್ಟು ಬಾರಿ ಹೇಳಿದೆ. 1948ರಿಂದಲೂ ವಿಶ್ವಸಂಸ್ಥೆ ಮೇಲ್ವಿಚಾರಣೆ ಮಾಡುತ್ತಾ ಬಂದಿದೆ. ನಾವು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಸಹಿಹಾಕಿದ್ದೇವೆ. ಹಾಗಿದ್ದ ಮೇಲೆ ಇದು ಆಂತರಿಕ ವಿಚಾರವೋ ದ್ವಿಪಕ್ಷೀಯ ವಿಚಾರವೋ ನೀವೇ ಹೇಳಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಜ್ಞಾನೋದಯ ಮಾಡಿಸಿ” ಎಂದು ಅಧೀರ್ ರಂಜನ್ ಚೌಧರಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕಾಪಾಡಿ; ಭಾರತ ಮತ್ತು ಪಾಕಿಸ್ತಾನಕ್ಕೆ ಸೂಚನೆ ನೀಡಿದ ವಿಶ್ವಸಂಸ್ಥೆ

ಇದರಿಂದ ಕೆರಳಿದ ಅಮಿತ್ ಶಾ, ಜಮ್ಮು-ಕಾಶ್ಮೀರವು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಜಮ್ಮು-ಕಾಶ್ಮೀರವೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳೂ ಒಳಗೊಂಡಿವೆ. ಜಮ್ಮು ಮತ್ತು ಕಾಶ್ಮೀರಕ್ಕಾಗಿ ತಾನು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.
Loading...

ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ಕಾಶ್ಮೀರ ವಿಚಾರದಲ್ಲಿ ಕೇಂದ್ರ ತೆಗೆದುಕೊಂಡ ಕ್ರಮ ಅಸಂವಿಧಾನಿಕ ಎಂದು ಟೀಕಿಸಿದರು. ಯಾವುದೇ ರಾಜ್ಯದ ಗಡಿಗಳನ್ನು ಬದಲಾಯಿಸುವ ಮುನ್ನ ಚುನಾಯಿತ ವಿಧಾನಸಭೆಯ ಸಮ್ಮತಿ ಪಡೆಯಬೇಕೆಂದು ಸಂವಿಧಾನದ ಸೆಕ್ಷನ್ 3ರಲ್ಲಿ ತಿಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದ್ಯಾವುದನ್ನೂ ಮಾಡದೇ ಸಂವಿಧಾನ ವಿರೋಧಿ ಕೆಲಸ ಮಾಡಿದೆ ಎಂದು ಮನೀಶ್ ತಿವಾರಿ ಆರೋಪಿಸಿದರು.

ಇದನ್ನೂ ಓದಿ: ಕಲಂ 370 ರದ್ದು; ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್, ಸಾರ್ವಜನಿಕ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಸೂಚನೆ!

ಡಿಎಂಕೆ, ಟಿಎಂಸಿ ಮೊದಲಾದ ಕೆಲ ವಿಪಕ್ಷಗಳೂ ಕೂಡ ಕೇಂದ್ರದ ಕ್ರಮವನ್ನು ವಿರೋಧಿಸಿದವು. ಒಂದು ಪ್ರಬಲ ರಾಜ್ಯವನ್ನು ಎರಡು ನಗರಸಭೆಗಳ ಮಟ್ಟಕ್ಕೆ ಇಳಿಸಿದ್ದೀರಿ. ಫಾರೂಕ್ ಅಬ್ದುಲ್ಲಾರಂತಹ ನಾಯಕರನ್ನು ಗೃಹಬಂಧನದಲ್ಲಿರಿಸುತ್ತೀರಿ. ಇದೆಂಥ ಆಡಳಿತ ಎಂದು ಡಿಎಂಕೆ ಸಂಸದರು ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಟಿಎಂಸಿ ಪಕ್ಷದ ಸಂಸದರು ಸದನದಿಂದಲೇ ವಾಕೌಟ್ ಮಾಡಿದರು. ಕಾಶ್ಮೀರದ ಮುಖಂಡರನ್ನು ಅನಗತ್ಯವಾಗಿ ಬಂಧನದಲ್ಲಿಡಲಾಗಿದೆ. ನಾನು ಈ ಮಸೂದೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗಲು ಇಚ್ಛಿಸುವುದಿಲ್ಲ. ನಾವು ಸದನದಿಂದ ಹೊರನಡೆಯುತ್ತೇವೆ. ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯಲ್ಲಿ ದೌರ್ಜನ್ಯ ನಡೆಯಬಾರದೆಂದು ಮನವಿ ಮಾಡುತ್ತೇವೆ ಎಂದು ಸದನದಿಂದ ವಾಕೌಟ್ ಮಾಡುವ ಮುನ್ನ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುದೀಪ್ ಬಂಡೋಪಾಧ್ಯಾಯ್ ತಿಳಿಸಿದರು.

ಇದನ್ನೂ ಓದಿ: ‘ಐತಿಹಾಸಿಕ ತಪ್ಪನ್ನು ಸರಿಪಡಿಸಲಾಗಿದೆ’; ಕಲಂ 370 ನಿಷೇಧಕ್ಕೆ ಬೆಂಬಲ ಸೂಚಿಸುತ್ತಿರುವ ಕೆಲ ಕಾಂಗ್ರೆಸ್ ನಾಯಕರು

ಜಮ್ಮು-ಕಾಶ್ಮಿರದಲ್ಲಿ ಕೇಂದ್ರ ತೆಗೆದುಕೊಂಡ ನಿರ್ಧಾರವು ದೇಶದ ಇತರ ಭಾಗಗಳ ರಾಜ್ಯಗಳಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ವಿಶೇಷ ಸ್ಥಾನಮಾನ ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು ಎಂದು ವಿಪಕ್ಷಗಳು ಆತಂಕ ವ್ಯಕ್ತಪಡಿಸಿದವು.

ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ಹಿಂಪಡೆಯುವ ನಿರ್ಣಯ ಹಾಗೂ ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ ಎರಡಕ್ಕೂ ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು. ಇವತ್ತು ಲೋಕಸಭೆಯಲ್ಲೂ ಇವುಗಳು ಪಾಸ್ ಆಗುವುದು ಖಚಿತವಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...