ನೋಟು ರದ್ದತಿ, ಜಿಎಸ್​ಟಿ ಜಾರಿ: ಈ ಕಾಲದ ಆರ್ಥಿಕ ಪ್ರವರ್ತಕ ಜೇಟ್ಲಿಯನ್ನು ನೆನೆಯಲಿದೆ ಯುವ ಪೀಳಿಗೆ

ಓರ್ವ ಹಣಕಾಸು ಸಚಿವನಾಗಿ, ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ಅರುಣ್​ ಜೇಟ್ಲಿ ಎಂದಿಗೂ ತಪ್ಪು ಹೆಜ್ಜೆ ಇಡಲಿಲ್ಲ, ಮೋದಿ ಸರ್ಕಾರದ ಪ್ರಮುಖ ಅಸ್ತ್ರ ಜೇಟ್ಲಿ ಎಂಬುದು ಅರ್ಥಿಕ ತಜ್ಞರು ಅವರ ಕುರಿತು ಈಗಲೂ ಆಡುವ ಮೆಚ್ಚುಗೆಯ ಮಾತು.

MAshok Kumar | news18
Updated:August 24, 2019, 4:39 PM IST
ನೋಟು ರದ್ದತಿ, ಜಿಎಸ್​ಟಿ ಜಾರಿ: ಈ ಕಾಲದ ಆರ್ಥಿಕ ಪ್ರವರ್ತಕ ಜೇಟ್ಲಿಯನ್ನು ನೆನೆಯಲಿದೆ ಯುವ ಪೀಳಿಗೆ
ಪ್ರಾತಿನಿಧಿಕ ಚಿತ್ರ.
  • News18
  • Last Updated: August 24, 2019, 4:39 PM IST
  • Share this:
ಹತ್ತಾರು ಪರ-ವಿರೋಧಗಳ ಚರ್ಚೆ, ಟೀಕೆ ಟಿಪ್ಪಣಿಗಳ ಆಚೆಗೂ ನೋಟ್ ಬ್ಯಾನ್ ಮತ್ತು ಏಕರೂಪ ತೆರಿಗೆ ನೀತಿಯನ್ನು (ಜಿಎಸ್​ಟಿ) ಸ್ವಾತಂತ್ರ್ಯ ಭಾರತದ ಅತಿದೊಡ್ಡ ನವ ಆರ್ಥಿಕತೆಯ ರಚನಾತ್ಮಕ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ. 1992ರ ಮುಕ್ತ ಆರ್ಥಿಕ ನೀತಿಯಂತಹ ಮಹತ್ವದ ನಿರ್ಧಾರದ ಬಳಿಕ ಇಡೀ ದೇಶ ಮತ್ತೆ ಅಂತಹದ್ದೇ ಕ್ರಾಂತಿಕಾರಕ ತೀರ್ಮಾನಕ್ಕೆ ಸಾಕ್ಷಿಯಾದ ವರ್ಷ 2016ರ ನೋಟ್ ಬ್ಯಾನ್ ಮತ್ತು 2017ರ ಜಿಎಸ್​ಟಿ (ಏಕರೂಪ ತೆರಿಗೆ ನೀತಿ).

ಮುಕ್ತ ಆರ್ಥಿಕ ನೀತಿ ಜಾರಿಗೆ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಬೆನ್ನಿಗೆ ಆರ್ಥಿಕ ತಜ್ಞರಾಗಿ ಮನಮೋಹನ್ ಸಿಂಗ್ ನಿಂತಿದ್ದಂತೆ, ಇಂದಿನ ಎಲ್ಲಾ ಪ್ರಮುಖ ಆರ್ಥಿಕ ನೀತಿ ಹಾಗೂ ರೂಪಕಗಳ ಹಿಂದೆ ಪ್ರಧಾನಿ ಮೋದಿ ನೆರಳಿನಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಹೆಸರು ಮಾಜಿ ವಿತ್ತ ಸಚಿವ ದಿವಂಗತ ಅರುಣ್ ಜೇಟ್ಲಿ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಕ್ಯಾಬಿನೆಟ್ ರಚಿಸುತ್ತಿದ್ದಂತೆ ಅರುಣ್ ಜೇಟ್ಲಿಗೆ ಹಣಕಾಸು ಹಾಗೂ ರಕ್ಷಣಾ ಇಲಾಖೆಯನ್ನು ನೀಡಿದ್ದರು. ಮತ್ತದಕ್ಕೆ ಜೇಟ್ಲಿ ಎಂಬ ವ್ಯಕ್ತಿ ಸಮರ್ಥರಾಗಿದ್ದರು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ. ಹೀಗೆ ಸಿಕ್ಕ ಅವಕಾಶವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು.

2016 ಮತ್ತು 2017ರ ವರ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಂದಿಗ್ಧ ಕಾಲ ಎನ್ನಲು ಅಡ್ಡಿಯಿಲ್ಲ. ಭ್ರಷ್ಟಾಚಾರ ನಿಗ್ರಹಕ್ಕಾಗಿ ಅನಿವಾರ್ಯ ಎಂಬ ಹಣೆಪಟ್ಟಿಯೊಂದಿಗೆ 2016ರ ನವೆಂಬರ್ 8 ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನೋಟ್ ಬ್ಯಾನ್ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ಎದುರು ಒಂದು ದೊಡ್ಡ ಪ್ರಶ್ನೆಯಾಗಿ ನಿಂತಿತ್ತು. ಸದನದ ಒಳಗೆ ಹಾಗೂ ಹೊರಗೆ ನೂರಾರು ಟೀಕೆಗೆ ಗುರಿಯಾದ ಈ ಯೋಜನೆಯ ಕಾವು ಆರುವ ಮುನ್ನವೇ ಕೇಂದ್ರ ಸರ್ಕಾರ 2017ರ ಜುಲೈ.1 ರಂದು ಜಿಎಸ್​ಟಿ ಎಂಬ ಹೊಸ ತೆರಿಗೆ ನೀತಿಯನ್ನು ಜಾರಿಗೊಳಿಸಿತ್ತು.

ಕೇವಲ 8 ತಿಂಗಳ ಅವಧಿಯಲ್ಲಿ ಜಾರಿಗೆ ಬಂದ ಈ ಎರಡೂ ಆರ್ಥಿಕ ನೀತಿಯನ್ನು, ಇದಕ್ಕಿದ್ದ ವಿರೋಧವನ್ನು ಸಂಬಾಳಿಸುವುದು ಯಾವುದೇ ಸರ್ಕಾರಕ್ಕೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ, ಮೋದಿ ಬೆನ್ನಿಗೆ ಎಲ್ಲಾ ಪ್ರಹಾರಕ್ಕೆ ಮೊದಲಿಗರಾಗಿ ಎದೆಯೊಡ್ಡಿ ನಿಂತದ್ದು ಇದೇ ಅರುಣ್ ಜೇಟ್ಲಿ ಎಂದರೇ ತಪ್ಪಾಗಲಾರದು.

ದೇಶದ ಹೊಸ ಆರ್ಥಿಕ ನೀತಿಯ ಪ್ರವರ್ತಕರಾದ ಜೇಟ್ಲಿ:

ಅಂತಾರಾಷ್ಟ್ರೀಯ ಆರ್ಥಿಕ ವಲಯದಲ್ಲಿ ಜಿಎಸ್​ಟಿ ಎಂಬುದು ಹೊಸ ವಿಚಾರವೇನಲ್ಲ. ಅಮೆರಿಕ ಖಂಡದ ಕೆನಡಾದಿಂದ, ಏಷ್ಯಾದ ಪ್ರಬಲ ಆರ್ಥಿಕ ಶಕ್ತಿಯಾಗಿರುವ ಮಲೇಷ್ಯಾದವರೆಗೆ ಸುಮಾರು 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಏಕರೂಪ ತೆರಿಗೆ ನೀತಿಯನ್ನು ಅನುಸರಿಸಲಾಗುತ್ತಿದೆ. ಭಾರತದ ರಾಜಕೀಯ ವಲಯದಲ್ಲೂ ಈ ನೀತಿಯ ಪ್ರಸ್ತಾಪ ಹೊಸತೇನಲ್ಲ. ಅಸಲಿಗೆ ಇದರ ಪ್ರಸ್ತಾಪವನ್ನು ಮೊದಲಿಗೆ ಮುಂದಿಟ್ಟವರೇ ಕಾಂಗ್ರೆಸ್.ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ವಿದೇಶಿ ನೇರ ಬಂಡವಾಳ ಹಾಗೂ ಉದ್ದಿಮೆ ಅತೀ ಅವಶ್ಯಕ ಹಾಗೂ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದ ಅಭಿವೃದ್ಧಿಯಲ್ಲಿ ಎಫ್​ಡಿಐ ಪಾತ್ರ ನಿರ್ಣಾಯಕ. ಆದರೆ, ಭಾರತ ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಹೀಗಾಗಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇಯಾದ ತೆರಿಗೆ ಹಾಗೂ ಆರ್ಥಿಕ ನೀತಿಯನ್ನು ರೂಪಿಸುವ ಅವಕಾಶವನ್ನು ಸಂವಿಧಾನ ಬದ್ಧವಾಗಿಯೇ ನೀಡಲಾಗಿದೆ. ಇದೇ ಕಾರಣಕ್ಕೆ 2017ರ ವರೆಗೆ ಪ್ರತಿಯೊಂದು ವಸ್ತುವಿಗೂ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆಯನ್ನು ವಿಧಿಸಲಾಗುತ್ತಿತ್ತು.

ಹೀಗೆ ಒಂದೇ ರಾಷ್ಟ್ರದಲ್ಲಿ ಹತ್ತಾರು ರೀತಿಯ ತೆರಿಗೆ ನೀತಿ ಎಂಬುದು ವಿದೇಶಿ ಉದ್ದಿಮೆಗಳ ಹಾಗೂ ಬಂಡವಾಳದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಎಫ್​ಡಿಐ ಗೆ ಪೂರಕ ವಾತಾವರಣ ಅಲ್ಲ ಎಂಬ ವಾದ ದಶಕಗಳಷ್ಟು ಹಳೆಯದು. ಇದೇ ಕಾರಣಕ್ಕೆ ಜಿಎಸ್​ಟಿ ಮೂಲಕ ಏಕರೂಪ ತೆರಿಗೆ ನೀತಿ ಜಾರಿಗೆ ತಂದರೆ ಮತ್ತಷ್ಟು ವಿದೇಶಿ ಹಣ ದೇಶಕ್ಕೆ ಹರಿದುಬರಲಿದೆ ಎಂದು ಮುಕ್ತ ಆರ್ಥಿಕ ನೀತಿ ಜಾರಿಯಾದ ಕಾಲದಲ್ಲೇ ಕಾಂಗ್ರೆಸ್ ಸಂಸತ್ತಿನ ಮುಂದೆ ಪ್ರಸ್ತಾಪವನ್ನು ಇಟ್ಟಿತ್ತು. ಆದರೆ, ಅದು ಜಾರಿಯಾಗಲು ಮಾತ್ರ ಕೊನೆಗೂ ಅರುಣ್ ಜೇಟ್ಲಿಯವರೇ ಬರಬೇಕಾಯಿತು.

ಕೇಂದ್ರ ಸರ್ಕಾರ ಒಪ್ಪದಿದ್ದರೂ ನೋಟ್ ಬ್ಯಾನ್ ನಂತರ ಮಹತ್ವದ ನಿರ್ಧಾರ ದೇಶದ ಆರ್ಥಿಕ ವ್ಯವಸ್ಥೆಗೆ ಕೊಟ್ಟ ಪೆಟ್ಟು ಸಣ್ಣದಾಗಿರಲಿಲ್ಲ. ಲಕ್ಷಾಂತರ ಉದ್ಯೋಗಗಳ ಕಡಿತ, ಆರ್ಥಿಕ ಹಿಂಜರಿತ, ಸಣ್ಣ ಉದ್ದಿಮೆಗಳ ಮೇಲೆ ಪ್ರತಿಕೂಲ ಪರಿಣಾಮ ಹಾಗೂ ಇದೇ ಕಾಲಕ್ಕೆ ಹತ್ತಾರು ಬ್ಯಾಂಕ್​ಗಳು ದಿವಾಳಿಯ ಅಂಚಿಗೆ ಸರಿದಿದ್ದ ಪರಿಸ್ಥಿತಿಯನ್ನು ನಿಭಾಯಿಸುವುದು ಸರ್ಕಾರಕ್ಕೆ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈ ವೇಳೆ ದೇಶದ ವಿತ್ತೀಯ ಕೊರತೆಯನ್ನು ಸಂಬಾಳಿಸಲು ಜಿಎಸ್​ಟಿ ಅನಿವಾರ್ಯವಾಗಿತ್ತು ಎಂಬುದು ಆರ್ಥಿಕ ತಜ್ಞರ ವಾದ.

ಜಿಎಸ್​ಟಿ ಜಾರಿಯಾಗುವ ಮುನ್ನ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದ ಅತಿ ಸಣ್ಣ ಉದ್ದಿಮೆಗಳು ಸಹ ಈ ವ್ಯಾಪ್ತಿಗೆ ಒಳಪಟ್ಟವು. ಜಿಎಸ್​ಟಿ ಪ್ರಾಥಮಿಕ ಅಂಕಿಅಂಶಗಳ ವಿಶ್ಲೇಷಣೆಗಳ ಪ್ರಕಾರ ದೇಶದಾದ್ಯಂತ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇ.50 ರಷ್ಟು ಏರಿಕೆಯಾಗಿದೆ. ಪರಿಣಾಮ 2017-18ರಲ್ಲಿ ದೇಶದ ಹಣದುಬ್ಬರದ ಸರಾಸರಿ ಪ್ರಮಾಣದಲ್ಲೂ ದೇಶ ಅಭಿವೃದ್ಧಿ ಸಾಧಿಸಿದೆ. ಅಲ್ಲದೆ, ಜಿಎಸ್​ಟಿಯಿಂದಾಗಿ ಸರಕು ಸೇವೆಗಳ ಆಂತರಿಕ ವಹಿವಾಟುಗಳು ಸಹ ಶೇ.60 ರಷ್ಟು ಏರಿಕೆಯಾಗಿದೆ ಎನ್ನುತ್ತಿವೆ ಅಂಕಿಅಂಶಗಳು.

ಜಿಎಸ್​ಟಿ ಮೂಲಕ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯದ ಮೇಲೆ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದ್ದರೂ ಸಹ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳ ಪಾಲಿಗೆ ತೆರಿಗೆ ಹಣ ಕ್ರೋಢೀಕರಣದಲ್ಲಿ ಜಿಎಸ್​ಟಿ ಲಾಭದಾಯಕ ಪಾತ್ರ ನಿರ್ವಹಿಸಿದೆ ಎಂಬುದನ್ನು ಅಲ್ಲಗೆಳೆಯಲಾಗದು.

ಇದಲ್ಲದೆ ಆಧಾರ್ ಚಿಂತನೆಗೆ ಮರುರೂಪ, ಬ್ಯಾಂಕ್ ವ್ಯವಸ್ಥೆಗಳ ಪುನಶ್ಚೇತನಕ್ಕಾಗಿ 32.43 ಬಿಲಿಯನ್ ಹಣ ಮರುಬಂಡವಾಳೀಕರಣ, ವಿದೇಶಿ ಹೂಡಿಕೆಗೆ ಉತ್ತೇಜನ ಹಾಗೂ ಹೊಸ ನೀತಿಗಳ ರಚನೆ, ಆರ್ಥಿಕ ಅಸಮಾನತೆ ಹಾಗೂ ಬಡತನ ನಿರ್ಮೂಲನೆಗೆ ಅರುಣ್ ಜೇಟ್ಲಿ ತೆಗೆದುಕೊಂಡ ಕ್ರಮಗಳು ನಿಜಕ್ಕೂ ಶ್ಲಾಘನೀಯ. ಓರ್ವ ಹಣಕಾಸು ಸಚಿವನಾಗಿ, ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ಅರುಣ್​ ಜೇಟ್ಲಿ ಎಂದಿಗೂ ತಪ್ಪು ಹೆಜ್ಜೆ ಇಡಲಿಲ್ಲ, ಮೋದಿ ಸರ್ಕಾರದ ಪ್ರಮುಖ ಅಸ್ತ್ರ ಜೇಟ್ಲಿ ಎಂಬುದು ಅರ್ಥಿಕ ತಜ್ಞರು ಅವರ ಕುರಿತು ಈಗಲೂ ಆಡುವ ಮೆಚ್ಚುಗೆಯ ಮಾತು.

ಇಂದು ಅರುಣ್​ ಜೇಟ್ಲಿ ನಮ್ಮನ್ನು ಅಗಲಿದ್ದಾರೆ. ಆದರೆ, ನೋಟ್​ ಬ್ಯಾನ್​ ಹಾಗೂ ಜಿಎಸ್​ಟಿ ಜಾರಿಗೆ ಬಂದಾಗಿನ ಸಂದಿಗ್ಧ ಸಮಯದಲ್ಲೂ ಯಾವುದೇ ಪ್ರಹಾರಕ್ಕೆ ಎದೆಗುಂದದೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಅವರ ಗುಣ ಹಾಗೂ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಗಾಗಿ ಅವರು ಕೈಗೊಂಡ ಕ್ರಮ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ.

ಇದನ್ನೂ ಓದಿ : Arun Jaitley Death: ಬಿಜೆಪಿ ಟ್ರಬಲ್​ ಶೂಟರ್ ಅರುಣ್ ಜೇಟ್ಲಿ ನಡೆದು ಬಂದ ಹಾದಿ
First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ