ಪಾಕಿಸ್ತಾನದ ಕುತಂತ್ರ ಬುದ್ಧಿಯ ಮತ್ತೊಂದು ಮುಖ ಬಯಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ಎಸ್ಎ) ಹಾಗೂ ಇಂಡಿಯನ್ ಜೇಮ್ಸ್ ಬಾಂಡ್ ಖ್ಯಾತಿಯ ಅಜಿತ್ ದೋವಲ್ ಮತ್ತು ಸರ್ದಾರ್ ಪಟೇಲ್ ಭವನ ಸೇರಿ ದೆಹಲಿಯ ಜನ ನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಪಾಕಿಸ್ತಾನದ ಯೋಜನೆ ಬಗ್ಗೆ ಬಂಧಿತ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಬಾಯ್ ಬಿಟ್ಟಿದ್ದಾನೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪಾಕ್ ಮೂಲದ ಹ್ಯಾಂಡ್ಲರ್‌ನ ಸೂಚನೆ ಮೇರೆಗೆ ರಾಷ್ಟ್ರರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿರುವ ಬಗ್ಗೆ ಗೊತ್ತಾಗಿದೆ. ಈ ಹಿನ್ನೆಲೆ ಅಜಿತ್ ದೋವಲ್ ನಿವಾಸ ಮತ್ತು ಕಚೇರಿಗೆ ಭಾರಿ ಭದ್ರತೆಯನ್ನು ಒದಗಿಸಲಾಗಿದೆ. ರಾಷ್ಟ್ರರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.
2016ರ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರ ಬಾಲಕೋಟ್ ದಾಳಿಯ ಬಳಿಕ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳ ಗುರಿಯಾಗಿರುವ ದೋವಲ್ ಭಾರತದಲ್ಲಿ ಭಾರಿ ಭದ್ರತೆ ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಬಂದಿರುವ ಸಂಭವನೀಯ ಬೆದರಿಕೆಯನ್ನು ಭದ್ರತಾ ಏಜೆನ್ಸಿಗಳು ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 6ರಂದು ಬಂಧನಕ್ಕೊಳಗಾದ ಶೋಪಿಯಾನ್ ನಿವಾಸಿ ಜೈಶ್ ಆಪರೇಟಿವ್ ಹಿದಾಯತ್-ಉಲ್ಲಾ ಮಲಿಕ್ ಎಂಬಾತನ ವಿಚಾರಣೆಯ ವೇಳೆ ದೋವಲ್ ಅವರ ಕಚೇರಿಯ ವಿವರವಾದ ವಿಡಿಯೋ ಹಂಚಿಕೆ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾ ಎಂದು ದೆಹಲಿ ಮತ್ತು ಶ್ರೀನಗರದ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಗಂಗ್ಯಾಲ್ ಪೊಲೀಸ್ ಠಾಣೆಯಲ್ಲಿ ಮಲಿಕ್ ವಿರುದ್ಧ ಸೆಕ್ಷನ್ 18 ಮತ್ತು 20 ಯುಎಪಿ ಕಾಯ್ದೆಯಡಿ(ಎಫ್‌ಐಆರ್ ಸಂಖ್ಯೆ 15/2021) ಪ್ರಕರಣ ದಾಖಲಾಗಿದೆ. ಲಷ್ಕರ್-ಎ-ಮುಸ್ತಫಾ ಜೈಶ್ ಗುಂಪಿನ ಮುಖ್ಯಸ್ಥನಾಗಿರುವ ಮಲಿಕ್ ನನ್ನು ಅನಂತ್‌ನಾಗ್‌ನಲ್ಲಿ ಬಂಧಿಸಲಾಗಿದ್ದು, ಆತನ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಪತ್ತೆಯಾಗಿದ್ದವು.
2019ರ ಮೇ 24ರಂದು ಮಲಿಕ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಭದ್ರತಾ ವಿವರಗಳು ಸೇರಿ ಎನ್‌ಎಸ್‌ಎ ಕಚೇರಿಯ ವಿಡಿಯೋ ರೆಕಾರ್ಡ್ ಮಾಡಲು ಶ್ರೀನಗರದಿಂದ ನವದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಮಾಹಿತಿಯನ್ನು ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾನೆ. ವಿಡಿಯೋ ರೆಕಾರ್ಡ್ ಮಾಡಿದ ಬಳಿಕ ಅದನ್ನು ವಾಟ್ಸಾಪ್ ಮೂಲಕ ‘ಡಾಕ್ಟರ್’ ಎಂದು ಕರೆಯುತ್ತಿದ್ದ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗೆ ರವಾನಿಸಿದ್ದಾನೆ. ನಂತರ ಬಸ್ಸಿನಲ್ಲಿ ಮಲಿಕ್ ಕಾಶ್ಮೀರಕ್ಕೆ ಮರಳಿದ್ದಾನೆ. 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ 2020ರ ಜನವರಿ 21ರಂದು ಬಂಧಿಸಲ್ಪಟ್ಟಿದ್ದ ಸಮೀರ್ ಅಹ್ಮದ್ ದಾರ್ ನೊಂದಿಗೆ 2019ರ ಬೇಸಿಗೆಯಲ್ಲಿ ಸಾಂಬಾ ಸೆಕ್ಟರ್ ಗಡಿ ಪ್ರದೇಶದಲ್ಲಿ ಬೇಹುಗಾರಿಕೆ ನಡೆಸಿದ್ದಾಗಿ ವಿಚಾರಣಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: valentines day 2021: ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಸಿಂಗಲ್ಸ್ ಬಗ್ಗೆ ಶಾದಿ.ಕಾಮ್ ನಡೆಸಿದೆ ಮಹತ್ವದ ಸಮೀಕ್ಷೆ!
ಹಿಂದೂಸ್ತಾನ್ ಟೈಮ್ಸ್ ಕಲೆ ಹಾಕಿದ ಮಾಹಿತಿ ಪ್ರಕಾರ, ಮಲಿಕ್ 2020ರ ಮೇ ತಿಂಗಳಿನಲ್ಲಿ ಆತ್ಮಹತ್ಯಾ ದಾಳಿಗೆ ಹ್ಯುಂಡೈ ಸ್ಯಾಂಟ್ರೊ ಕಾರನ್ನು ಒದಗಿಸಿದ್ದನು. ತಾನು ಮತ್ತು ಇತರ ಮೂವರು ಜೈಶ್ ಭಯೋತ್ಪಾದಕರಾದ ಇರ್ಫಾನ್ ಥೋಕರ್, ಉಮರ್ ಮುಷ್ತಾಕ್ ಮತ್ತು ರಯೀಸ್ ಮುಸ್ತಫಾ ಸೇರಿ 2020ರ ನವೆಂಬರ್ ನಲ್ಲಿ ಶೋಪಿಯಾನ್ ನಲ್ಲಿರುವ ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕಿನ 60 ಲಕ್ಷ ರೂ. ನಗದು ಇದ್ದ ವ್ಯಾನ್ ಅನ್ನು ಲೂಟಿ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ