ಸನ್ಯಾಸತ್ವ (Monasticism) ಏನು ಅಂತಾ ಗಂಧ-ಗಾಳಿನೂ ತಿಳಿಯದ ಪುಟ್ಟ ವಯಸ್ಸಿನಲ್ಲಿ ಸನ್ಯಾಸತ್ವ ದೀಕ್ಷೆ ತೆಗೆದುಕೊಂಡ ಹಲವು ಘಟನೆಗಳು ಇತ್ತೀಚೆಗೆ ಗುಜರಾತ್ (Gujarat) ಸುತ್ತಮುತ್ತಲಿನ ಭಾಗದಲ್ಲಿ ನಡೆಯುತ್ತಿವೆ. ಆಟ ಆಡುತ್ತಾ, ಶಾಲೆಗೆ (School) ಹೋಗುತ್ತಾ, ಅಪ್ಪ-ಅಮ್ಮನ (Father And Mother) ಪ್ರೀತಿ-ಆರೈಕೆಯಲ್ಲಿ ಬೆಳೆಯಬೇಕಿದ್ದ ಮಕ್ಕಳು ಅದರಲ್ಲೂ ವಜ್ರದ ವ್ಯಾಪಾರಿಗಳ (Diamond Business) ಮಕ್ಕಳು ಬಾಲ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕೋಟಿ ಕೋಟಿ ಸಂಪಾದಿಸುವ ವಜ್ರದ ವ್ಯಾಪಾರಿಗಳ ಮಕ್ಕಳು (Children) ಸಕಲ ಸವಲತ್ತುಗಳಿದ್ರೂ ಈಗ ಬಾಲ ದೀಕ್ಷೆ ಪಡೆದುಕೊಳ್ಳುತ್ತಿದ್ದಾರೆ.
ಬಾಲ್ಯದಲ್ಲಿಯೇ ಸನ್ಯಾಸತ್ವ
ಇತ್ತೀಚಿನ ಘಟನೆಗಳನ್ನು ನೋಡುವುದಾದರೆ, ಗುಜರಾತ್‌ನ ಸೂರತ್‌ನಲ್ಲಿ ವಜ್ರದ ಪಾಲಿಶಿಂಗ್ ಮತ್ತು ರಫ್ತು ಉದ್ಯಮ ನಡೆಸುವ 'ಸಾಂಘ್ವಿ ಅಂಡ್ ಸನ್ಸ್' ಕಂಪನಿಯ ಒಡೆಯ ಧಾನೇಶ್ ಮತ್ತು ಅಮಿ ಸಾಂಘ್ವಿ ದಂಪತಿಯ ಪುತ್ರಿ ದೇವಾಂಶಿ ಎಂಬ ಪುಟ್ಟ ಬಾಲಕಿ ಜೈನ ಧರ್ಮದ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: Shocking News: ಆಡುವ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ಪುಟ್ಟ ಬಾಲಕಿ!
ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳು ಸನ್ಯಾಸ ದೀಕ್ಷೆ ಪಡೆದುಕೊಳ್ಳುತ್ತಿರುವುದು ಇದು ಮೊದಲೇನೂ ಅಲ್ಲ. ಹಿಂದೆಯೂ ಅಂತಹ ಸಾಕಷ್ಟು ಘಟನೆಗಳು ನಡೆದಿವೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಹಮದಾಬಾದ್‌ನ ಎಂಟು ವರ್ಷದ ಬಾಲಕಿ ಆಂಗಿ ಬಗ್ರೇಖ್, ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಳು. 2019ರಲ್ಲಿ ಸೂರತ್‌ನ 12 ವರ್ಷದ ಬಾಲಕಿ ಖುಷಿ ಶಾ ಎಂಬಾಕೆ ಕೂಡ ಐಹಿಕ ಸುಖವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಇದೇ ರೀತಿ ಇಂತಹ ಹಲವು ಘಟನೆಗಳು ವರದಿಯಾಗಿವೆ.
ವಜ್ರದ ವ್ಯಾಪಾರಿಗಳ ಮಕ್ಕಳಿಗೆ ಸನ್ಯಾಸತ್ವದ ಬಗ್ಗೆ ಒಲವು
ಜೈನ ಧರ್ಮವು ಬಾಲ್ಯದಲ್ಲೇ ಬಾಲ ದೀಕ್ಷಾ ತೆಗೆದುಕೊಳ್ಳುವ ಪದ್ಧತಿಯನ್ನು ಹೊಂದಿದೆ. ಹೀಗಾಗಿ ಮಕ್ಕಳು ಸಹ ಸನ್ಯಾಸತ್ವದ ಕಡೆ ವಾಲುತ್ತಿದ್ದಾರೆ. ಆ ಮೂಲಕ ಸನ್ಯಾಸತ್ವದ ಬಗ್ಗೆ ಕೊಂಚವು ಅರಿವಿಲ್ಲದ ಪುಟ್ಟ ಮಕ್ಕಳು ದೀಕ್ಷೆ ಪಡೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೋಟಿ ಕೋಟಿ ಸಂಪತ್ತು, ಆಸ್ತಿ ಹೊಂದಿರುವಂತಹ ವಜ್ರದ ವ್ಯಾಪಾರಿಗಳ ಮಕ್ಕಳು ಸನ್ಯಾಸತ್ವ ಪಡೆಯಲು ಮುಂದಾಗುತ್ತಿದ್ದಾರೆ.
ಲೌಕಿಕ ಜೀವನ ತ್ಯಜಿಸಿ ಸಾದಾಸೀದ ಜೀವನ ನಡೆಸುತ್ತಿದ್ದಾರೆ ಮಕ್ಕಳು
ಎಲ್ಲರಿಗೂ ಗೊತ್ತಿರುವಂತೆ ಸನ್ಯಾಸತ್ವ ಪಡೆದ ನಂತರ ಭೌತಿಕ ಪ್ರಪಂಚದ ಯಾವುದೇ ನಂಟನ್ನು ಇಟ್ಟುಕೊಳ್ಳಬಾರದು. ಇದು ಮಕ್ಕಳಿಗೂ ಅನ್ವಯಿಸುತ್ತದೆ.
ಐಷಾರಾಮಿ ಕಾರುಗಳಲ್ಲಿ ಓಡಾಡುವಂತಿಲ್ಲ. ಬಣ್ಣ ಬಣ್ಣದ ಬಟ್ಟೆ, ಚಪ್ಪಲಿ ಧರಿಸುವಂತಿಲ್ಲ, ಆಧುನಿಕ ಸೌಕರ್ಯಗಳನ್ನು ಬಳಸುವಂತಿಲ್ಲ, ಸಕಲ ಸವಲತ್ತು ಇದ್ದರೂ ಜೈನ ದೀಕ್ಷೆ ತೆಗೆದುಕೊಂಡ ನಂತರ ಲೌಕಿಕ ಜೀವನದ ಆಸೆಯನ್ನು ತ್ಯಜಿಸಿ ಬಿಳಿಯ ನೂಲಿನ ವಸ್ತ್ರ ಧರಿಸಿ, ಬರಿಗಾಲಲ್ಲೆ ಇದ್ದು, ಕಟ್ಟುನಿಟ್ಟಿನ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಬೇಕು.
ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ, ಬಹುಪಾಲು ಜೈನ ಸಮುದಾಯವು ಶ್ರೀಮಂತ ಕುಟುಂಬಗಳಿಗೆ ಸೇರಿದೆ. ಆದ್ದರಿಂದ, ಅವರ ಮಕ್ಕಳು ಭೌತಿಕ ಪ್ರಪಂಚವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದಾಗ ಉದ್ಯಮಗಳಿಗೆ ಉತ್ತರಾಧಿಕಾರಿ ಯಾರೆಂಬ ಆತಂಕವೂ ಕಾಡುತ್ತಿದೆ ಎಂದು ಹೇಳಿದೆ.
ದೀಕ್ಷೆ ತೆಗೆದುಕೊಂಡ ಸೂರತ್‌ನ ಹಲವು ಮಕ್ಕಳು ಕೋಟಿ ಕೋಟಿ ಆಸ್ತಿಹೊಂದಿರುವ ಕುಟುಂಬದಿಂದ ಬಂದವರು ಎಂದು ಪ್ಯೂ ಸಂಶೋಧನಾ ಕೇಂದ್ರ ಹೇಳಿದೆ.
ಜೈನ ಸಾಧುಗಳ ಬಗ್ಗೆ ರಾಷ್ಟ್ರೀಯ ಛಾಯಾಚಿತ್ರ ಸಂಪಾದಕ ಪ್ರವೀಣ್ ಜೈನ್ ಅವಲೋಕನ
ರಾಷ್ಟ್ರೀಯ ಛಾಯಾಚಿತ್ರ ಸಂಪಾದಕ ಪ್ರವೀಣ್ ಜೈನ್ ಅವರು ಕೆಲವು ಜೈನ ಸಾಧುಗಳು ಮತ್ತು ಸಾಧ್ವಿಗಳ ಜೀವನದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಾಲ ಸನ್ಯಾಸಿಗಳಲ್ಲಿ ಹೆಚ್ಚಿನವರು ಸೂರತ್‌ನ ವಜ್ರ ವ್ಯಾಪಾರ ಕುಟುಂಬಗಳಿಂದ ಬಂದವರು. ಪ್ರೌಢರಂತೆ ಮಕ್ಕಳು ಸಹ ತರಬೇತಿ ಪಡೆಯುವ ದೃಶ್ಯಗಳನ್ನು ಅವರು ಸೆರೆ ಹಿಡಿದಿದ್ದಾರೆ.
ಈ ಫೋಟೋಗಳಲ್ಲಿ ಸಾಧ್ವಿ ಪ್ರಜ್ಞಾ ಎಂಬ ಬಾಲ ಸನ್ಯಾಸಿ ಜೈನ ಧಾರ್ಮಿಕ ನಂಬಿಕೆಗಳ ಬಗ್ಗೆ ಪಠ್ಯವನ್ನು ಅಧ್ಯಯನ ಮಾಡುವ, ಹಿರಿಯ ಸಾಧ್ವಿಯೊಬ್ಬರು ಸಾಧ್ವಿ ಪ್ರಜ್ಞಾಳಿಗೆ ಸಾದಾ ಬಿಳಿಯ ನಿಲುವಂಗಿಯನ್ನು ಧರಿಸಲು ಸಹಾಯ ಮಾಡುತ್ತಿರುವ ಫೋಟೋಗಳನ್ನು ನೋಡಬಹುದು.
ಕಳೆದ ತಿಂಗಳು ಪ್ರಜ್ಞಾ ಜೈನ ಸನ್ಯಾಸಿನಿ ದೀಕ್ಷೆ ಪಡೆದು ಸಾಧ್ವಿ ಪ್ರಜ್ಞಾ ಆಗಿದ್ದಾರೆ. ಇದೇ ರೀತಿ ಹಲವು ಮಕ್ಕಳು ಸನ್ಯಾಸತ್ವದ ಕೆಲಸದಲ್ಲಿ, ವಿಧಿ ವಿಧಾನಗಳನ್ನು ಪಾಲಿಸುವುದರಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ.
ಸಾಧ್ವಿ ವಿರಾನ್ಶಿ ರೇಖಾ (13) ಎಂಬಾಕೆ ಸನ್ಯಾಸತ್ವ ಸ್ವೀಕರಿಸುವ ಮುನ್ನ ಕ್ರೀಡೆಯಲ್ಲಿ ಸಕ್ರಿಯಳಾಗಿದ್ದು ಎಂದು ಪ್ರವೀಣ್ ಜೈನ್ ವರದಿ ಮಾಡಿದ್ದಾರೆ. ಸಾಧ್ವಿ ತತ್ವತ್ರಿ ರೇಖಾ (20) ಊಟವನ್ನು ಮುಗಿಸಿದ ನಂತರ ನೆಲವನ್ನು ಒರೆಸುವುದನ್ನು ಸಹ ನಾವಿಲ್ಲಿ ನೋಡಬಹುದು.
ಹೀಗೆ ಆಡಿಕೊಂಡು, ಓದುವ ವಯಸ್ಸಲ್ಲಿ ಅದು ಕೂಡ ಮನೆಯಲ್ಲಿ ಒಂದಿಷ್ಟು ಆರ್ಥಿಕತೆಯ ಕೊರತೆ ಇಲ್ಲದ ಮಕ್ಕಳು ಸನ್ಯಾಸತ್ವದ ಕಡೆ ಮುಖ ಮಾಡುತ್ತಿರುವುದು ಅಚ್ಚರಿಯೂ ಹೌದು, ಆತಂಕಕಾರಿ ಬೆಳವಣಿಗೆಯೂ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ