Sushma ChakreSushma Chakre
|
news18-kannada Updated:January 27, 2021, 11:50 AM IST
ಪಾಕಿಸ್ತಾನದ ಜೈಲಿನಿಂದ 18 ವರ್ಷಗಳ ಬಳಿಕ ರಿಲೀಸ್ ಆದ ಮಹಾರಾಷ್ಟ್ರದ ಮಹಿಳೆ
ಮುಂಬೈ (ಜ. 27): ಕೆಲವೊಮ್ಮೆ ಅದೃಷ್ಟ ಕೈಕೊಟ್ಟರೆ ಸಣ್ಣಪುಟ್ಟ ತಪ್ಪಿಗೂ ನಾವು ದೊಡ್ಡ ಶಿಕ್ಷೆಯನ್ನೇ ಅನುಭವಿಸಬೇಕಾಗುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಮಹಾರಾಷ್ಟ್ರದ ಔರಂಗಾಬಾದ್ನ 65 ವರ್ಷದ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಪಾಸ್ಪೋರ್ಟ್ ಕಳೆದುಕೊಂಡ ಪರಿಣಾಮ 18 ವರ್ಷಗಳ ಕಾಲ ಪಾಕಿಸ್ತಾನಿ ಜೈಲಿನಲ್ಲಿ ಇರಬೇಕಾಯಿತು. ಸುಮಾರು 2 ದಶಕಗಳ ನಂತರ ಅವರು ತಾಯ್ನಾಡಿಗೆ ವಾಪಾಸಾಗಿದ್ದು, ಕೊನೆಗೂ ತಮ್ಮವರನ್ನು ಸೇರಿಕೊಂಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ನ ಹಸೀನಾ ಬೇಗಂ ಎಂಬ ಮಹಿಳೆ 18 ವರ್ಷಗಳ ಹಿಂದೆ ತಮ್ಮ ಗಂಡನ ಸಂಬಂಧಿಕರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ, ದುರಾದೃಷ್ಟವೆಂಬಂತೆ ಅಲ್ಲಿ ಅವರು ತಮ್ಮ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಆಗ ಅವರಿಗೆ ತಾನಿನ್ನು ಮನೆಗೆ ವಾಪಾಸ್ ಹೋಗಲು 18 ವರ್ಷಗಳು ಬೇಕಾಗುತ್ತದೆ ಎಂ ಕಲ್ಪನೆಯೂ ಇರಲಿಲ್ಲ! ಲಾಹೋರ್ನಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದ ಆಕೆಯನ್ನು ಪಾಕಿಸ್ತಾನದ ಜೈಲಿಗೆ ಹಾಕಲಾಗಿತ್ತು. ಆಕೆಯ ಗುರುತಿಗೆ ಬೇರಾವುದೇ ಸಾಕ್ಷಿ ಇರದಿದ್ದ ಕಾರಣದಿಂದ ಆಕೆಯ ಮೇಲೆ ಅನುಮಾನಗೊಂಡು ಜೈಲಿಗೆ ಕಳುಹಿಸಲಾಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಅವರು ಅಲ್ಲಿಂದ ಬಿಡುಗಡೆಯಾಗಿದ್ದು, ನಿನ್ನೆ ಔರಂಗಾಬಾದ್ಗೆ ಮರಳಿದ್ದಾರೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ಹಸೀನಾ ಬೇಗಂ, ಈ 18 ವರ್ಷಗಳ ಕಾಲ ನಾನು ಸಾಕಷ್ಟು ನೋವು, ಏಕಾಂತ, ಹತಾಷೆಯನ್ನು ಅನುಭವಿಸಿದ್ದೇನೆ. ನನ್ನನ್ನು ಬಲವಂತದಿಂದ ಪಾಕಿಸ್ತಾನದ ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಪರದೇಶದಲ್ಲಿ ಹೋಗಿ ಜೈಲಿನಲ್ಲಿ ಬಂಧಿಯಾದ ಆ ಅನುಭವ ಬೇರಾರಿಗೂ ಆಗುವುದು ಬೇಡ. ನನ್ನ ದೇಶಕ್ಕೆ ವಾಪಾಸ್ ಬಂದ ನಂತರ ನನ್ನ ಮನಸಿಗೆ ನೆಮ್ಮದಿ, ಶಾಂತಿ ಸಿಕ್ಕಿದಂತೆನಿಸುತ್ತಿದೆ. ನಾನು ಸ್ವರ್ಗದಲ್ಲಿದ್ದೇನೇನೋ ಎನಿಸುವಷ್ಟು ಸಂತೋಷವಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಗಂಡನ ಮೊಬೈಲ್ನಲ್ಲಿದ್ದ ತನ್ನದೇ ಹಳೆ ಫೋಟೋ ನೋಡಿ ಚಾಕುವಿನಿಂದ ಇರಿದ ಹೆಂಡತಿ!
ಹಸೀನಾ ಬೇಗಂ ಔರಂಗಾಬಾದ್ನ ರಷೀದ್ಪುರದ ನಿವಾಸಿಯಾಗಿದ್ದು, ಉತ್ತರ ಪ್ರದೇಶದ ಸಹರಾನ್ಪುರದ ದಿಲ್ಶದ್ ಅಹಮದ್ ಎಂಬುವವರನ್ನು ಮದುವೆಯಾಗಿದ್ದರು. ಲಾಹೋರ್ನಲ್ಲಿದ್ದ ತನ್ನ ಗಂಡನ ಸಂಬಂಧಿಕರ ಮನೆಗೆ 18 ವರ್ಷಗಳ ಹಿಂದೆ ಹೋಗಿದ್ದ ಹಸೀನಾ ಬೇಗಂ ಪಾಸ್ಪೋರ್ಟ್ ಕಳೆದುಕೊಂಡಿದ್ದರಿಂದ ಜೈಲು ಪಾಲಾಗಿದ್ದರು. ಭಾರತದ ನಿವಾಸಿಯಾದ ತಾನು ಅಮಾಯಕಳು, ತನ್ನದೇನೂ ತಪ್ಪಿಲ್ಲ ಎಂದು ಪಾಕಿಸ್ತಾನದ ಕೋರ್ಟ್ ಮುಂದೆ ನಡೆದ ವಿಚಾರವನ್ನು ಹೇಳಿದರೂ ಆಕೆಯ ಮೇಲಿನ ಅನುಮಾನದಿಂದ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಹಸೀನಾ ಬೇಗಂ ಹೆಸರಿನಲ್ಲಿ ಔರಂಗಾಬಾದ್ನಲ್ಲಿ ಮನೆಯಿದೆ. ಆಕೆ ಇಲ್ಲಿಯ ನಿವಾಸಿ ಎಂದು ಔರಂಗಾಬಾದ್ ಪೊಲೀಸರು ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿ, ಖಚಿತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹಸೀನಾ ಬೇಗಂ ಅವರನ್ನು ಕಳೆದ ವಾರ ಬಿಡುಗಡೆ ಮಾಡಿದ ಪಾಕಿಸ್ತಾನ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು.
Published by:
Sushma Chakre
First published:
January 27, 2021, 11:50 AM IST