ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿದಂತೆಯೇ ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗ ದಳದಂತಹ (Bhajarang dal) ಬಲಪಂಥೀಯ ಸಂಘಟನೆಗಳನ್ನು ಕೂಡ ನಿಷೇಧ ಮಾಡಬೇಕು ಎಂದು ಇತ್ತಿಹಾದ್- ಎ- ಮಿಲ್ಲಾತ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ತಾಕೀರ್ ರಾಜಾ ಖಾನ್ (Maulana Tauqeer Raza Khan) ಆಗ್ರಹಿಸಿದ್ದಾರೆ. ಹರ್ಯಾಣದ ಭಿವಾನಿಯಲ್ಲಿ ನಡೆದ ಇಬ್ಬರು ಮುಸ್ಲಿಂ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು ಈ ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಅಕ್ರಮ ಗೋಸಾಗಾಟ ಆರೋಪದ ಮೇಲೆ ಇಬ್ಬರು ಮುಸ್ಲಿಂ ಯುವಕರನ್ನು ಹರ್ಯಾಣದಲ್ಲಿ ದುಷ್ಕರ್ಮಿಗಳು ತಡೆದು ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಅವರ ವಾಹನಕ್ಕೆ ಬೆಂಕಿ ಹಚ್ಚಿ ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮೌಲಾನಾ ತಾಕೀರ್ ರಾಜಾ ಖಾನ್, ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜುನೈದ್ ಮತ್ತು ನಾಸಿರ್ ಎಂಬ ಯುವಕರ ಮೇಲೆ ಸುಳ್ಳು ಆರೋಪ ಹೊರಿಸಿ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Skeletons: ಬೊಲೆರೋ ವಾಹನದಲ್ಲಿ ಸುಟ್ಟು ಕರಕಲಾದ 2 ಶವ ಪತ್ತೆ; ಗೋಸಾಗಾಟ ನೆಪದಲ್ಲಿ ಭಜರಂಗದಳದ ಕೃತ್ಯ!
'ಗುಂಪು ಹತ್ಯೆಗಳು ಸಾಮಾನ್ಯವಾಗಿ ಬಿಟ್ಟಿದೆ'
‘ಭಿವಾನಿ ಘಟನೆ ಫೆಬ್ರವರಿ 16ರಂದು ನಡೆದಿದೆ. ಆದರೆ ನಾವು ಈಗಲೂ ನಮ್ಮ ಮೌನವನ್ನು ಕಾಪಾಡಿಕೊಂಡಿದ್ದೇವೆ. ನಮ್ಮ ಇಬ್ಬರು ಮಕ್ಕಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಈಗ ಅವರ ಕೊಲೆಯಾಗಿದೆ. ಆರೋಪಿಗಳ ಪರವಾಗಿ ಸಭೆಗಳು ಹಾಗೂ ಮಹಾ ಪಂಚಾಯತ್‌ಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ, ಭಾರತದಲ್ಲಿ ಕೊಲೆಗಳು ಹಾಗೂ ಗುಂಪು ಹತ್ಯೆಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದು ನಾವು ಭಾವಿಸುತ್ತೇವೆ ಇತ್ತಿಹಾದ್- ಎ- ಮಿಲ್ಲಾತ್ ಕೌನ್ಸಿಲ್ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ಪಿಎಫ್‌ಐ ಅನ್ನು ನಿಷೇಧಿಸಿದಂತೆಯೇ ವಿಎಚ್‌ಪಿ ಮತ್ತು ಬಜರಂಗ ದಳ ಕೂಡ ಭಯೋತ್ಪಾದನಾ ಸಂಘಟನೆಗಳು ಎಂದು ಘೋಷಿಸಬೇಕು ಮತ್ತು ಅವುಗಳನ್ನು ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೇ, ಈ ಘಟನೆ ಹಿಂದೂ ಸಮುದಾಯಕ್ಕೆ ಕೂಡ ಕೆಟ್ಟ ಸಂದೇಶ ರವಾನಿಸುತ್ತದೆ ಎಂದಿರುವ ಮೌಲಾನಾ, ತಾವು ಕೂಡ ಅಂತಹದೇ ಕೃತ್ಯದಲ್ಲಿ ಭಾಗಿಯಾದರೆ ತಮ್ಮನ್ನೂ ಹೀರೋಗಳು ಎಂದು ವಿಜೃಂಭಿಸುತ್ತಾರೆ ಎಂದು ಅವರು ಆಲೋಚಿಸಿದರೂ ಸಾಕು. ಇದನ್ನು ಆಡಳಿತವು ಗಮನಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಜರಂಗ ದಳದಿಂದ ಕೃತ್ಯ?!
ವಾರದ ಹಿಂದೆ ರಾಜಸ್ಥಾನದ ಇಬ್ಬರು ಯುವಕರಾದ ಜುನೈದ್ ಮತ್ತು ನಾಸೀರ್ ನಾಪತ್ತೆಯಾಗಿದ್ದರು. ಬಳಿಕ ಅವರ ಶವ ಹರ್ಯಾಣದಲ್ಲಿ ಬೊಲೆರೋ ವಾಹನದಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು. ಮೃತ ಯುವಕರ ಕುಟುಂಬಸ್ಥರು ಗೋರಕ್ಷಣೆ ಹೆಸರಿನಲ್ಲಿ ಅವರನ್ನು ಅಪಹರಣ ಮಾಡಿ ಕೊಂದಿದ್ದಾರೆ ಎಂದು ದೂರು ನೀಡಿದ್ದರು. ದೂರಿನಲ್ಲಿ ಐವರು ಭಜರಂಗದಳದ ಸದಸ್ಯರ ಹೆಸರನ್ನು ಉಲ್ಲೇಖಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜಸ್ಥಾನ ಪೊಲೀಸರು ಎಂಟು ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಜರಂಗ ದಳದ ಮುಖಂಡ ಮೋಣು ಮನೇಸಾರ್ ಈ ಕೃತ್ಯದಲ್ಲಿ ತೊಡಗಿರುವ ಮುನ್ಸೂಚನೆ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ