10 ಲಕ್ಷ ಉದ್ಯೋಗ ನೀಡುವ ತೇಜಸ್ವಿ ಯಾದವ್​ ಭರವಸೆ ಬೋಗಸ್​; ಬಿಹಾರ ಸಿಎಂ ನಿತೀಶ್​ ಕುಮಾರ್​ ಆರೋಪ

ಅಸಲಿಗೆ ಎನ್​ಡಿಎ ಮೈತ್ರಿಕೂಟ ಸಹ ತನ್ನ ಪ್ರಣಾಳಿಕೆಯಲ್ಲಿ 4 ಲಕ್ಷ ಸರ್ಕಾರಿ ಉದ್ಯೋಗಗಳು ಮತ್ತು 15 ಲಕ್ಷ ಉದ್ಯೋಗಾವಕಾಶಗಳನ್ನು ನೀಡುವ ಭರವಸೆ ನೀಡಿದೆ. ತೇಜಶ್ವಿ ಯಾದವ್ ಅವರ ಉದ್ಯೋಗದ ಭರವಸೆಗೆ ಮತದಾರರು ಸ್ಪಂದಿಸುತ್ತಿದ್ದಾರೆ ಎಂದು ಬಿಜೆಪಿ ಮೊದಲೇ ಗ್ರಹಿಸಿತ್ತು.

ಬಿಹಾರದ ಸಿಎಂ ನಿತೀಶ್‌ ಕುಮಾರ್‌.

ಬಿಹಾರದ ಸಿಎಂ ನಿತೀಶ್‌ ಕುಮಾರ್‌.

 • Share this:
  ಪಾಟ್ನಾ (ಅಕ್ಟೋಬರ್​ 30); ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿ-ಜೆಡಿಯು ನೇತೃತ್ವದ ಎನ್​ಡಿಎ ಮೈತ್ರಿಕೂಟ ಹಾಗೂ ಕಾಂಗ್ರೆಸ್-ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿ ಕಂಡು ಬರುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಈ ನಡುವೆ ಇಂದು ಚುನಾವಣಾ ಪ್ರಚಾರ ನಡೆಸಿರುವ ನಿತೀಶ್ ಕುಮಾರ್ ಆರ್​ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ತೇಜಸ್ವಿ ಯಾದವ್ ಅವರ ಚುನಾವಣಾ ಆಶ್ವಾಸನೆಗಳನ್ನು ನಕಲಿ ಎಂದು ಕರೆದಿರುವ ನಿತೀಶ್ ಕುಮಾರ್, “ಜನರಿಗೆ ಸುಮ್ಮನೆ ಸುಳ್ಳು ಆಶ್ವಾಸನೆ ನೀಡಿ ದಾರಿ ತಪ್ಪಿಸಬೇಡಿ” ಎಂದು ದೂರಿದ್ದಾರೆ.

  ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಪ್ರಮುಖ ಆಶ್ವಾಸನೆ ಯುವಕರಿಗೆ ಉದ್ಯೋಗ ನೀಡುವುದು. ಚುನಾವಣಾ ಪ್ರಚಾರದಲ್ಲೂ ಈ ಕುರಿತು ಮಾತನಾಡುತ್ತಿರುವ ತೇಜಸ್ವಿ ಯಾದವ್, "ನಾವು ಬಿಹಾರದ ಯುವಕರಿಗೆ ಪ್ರತಿ ವರ್ಷ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುತ್ತೇವೆ" ಎಂದು ಆಶ್ವಾಸನೆ ನೀಡುತ್ತಿದ್ದಾರೆ. ಈ ಆಶ್ವಾಸನೆ ಸಾಮಾನ್ಯವಾಗಿ ಬಿಹಾರದ ನಿರುದ್ಯೋಗಿ ಯುವಕರನ್ನು ಸೆಳೆಯುತ್ತಿದೆ. ಹೀಗಾಗಿ ಎನ್​ಡಿಎ ಮೈತ್ರಿಕೂಟದಲ್ಲೂ ತಲ್ಲಣ ಸೃಷ್ಟಿಯಾಗಿದೆ.

  ಇದೇ ಕಾರಣಕ್ಕೆ ಮಹಾಘಟಬಂಧನ್ ಆಶ್ವಾಸನೆ ಹಾಗೂ ನಾಯಕ ತೇಜಸ್ವಿ ಯಾದವ್ ವಿರುದ್ಧ ಕಿಡಿಕಾರಿರುವ ನಿತೀಶ್ ಕುಮಾರ್, "ಬೊಗಸ್ ಬಾತ್ ಹೈ (ಅದೆಲ್ಲವೂ ನಕಲಿ)" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಪರ್ಬತ್ತದಲ್ಲಿ ನಡೆದ ರ‍್ಯಾಲಿಯಲ್ಲಿ ಮಹಾಘಟಬಂಧನ್ ಆಶ್ವಾಸನೆಯನ್ನು ಅಪಹಾಸ್ಯ ಮಾಡಿರುವ ನಿತೀಶ್ ಕುಮಾರ್, “ಈ ಹೇಳಿಕೆಗಳೆಲ್ಲವೂ ನಕಲಿಯಾಗಿದ್ದು, ಮತದಾರರನ್ನು ದಾರಿ ತಪ್ಪಿಸುವ ಮತ್ತು ಗೊಂದಲಕ್ಕೆ ಒಳಪಡಿಸುವ ಕೆಲಸವಾಗಿದೆ. ನಾವು ನಿಮಗೆ ಉದ್ಯೋಗ ನೀಡುತ್ತೇವೆ ಎಂದು ಈ ಜನರು ಹೇಳುತ್ತಲೇ ಇರುತ್ತಾರೆ. ಆದರೆ, ಅದೆಲ್ಲವೂ ನಕಲಿ ಮಾತು. ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಾಗಿ ಅವರು ಏನು ಬೇಕಾದರೂ ಹೇಳುತ್ತಾರೆ" ಎಂದು ಆರೋಪಿಸಿದ್ದಾರೆ.

  ಇದನ್ನೂ ಓದಿ : ದೆಹಲಿಯಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

  ಅಸಲಿಗೆ ಎನ್​ಡಿಎ ಮೈತ್ರಿಕೂಟ ಸಹ ತನ್ನ ಪ್ರಣಾಳಿಕೆಯಲ್ಲಿ 4 ಲಕ್ಷ ಸರ್ಕಾರಿ ಉದ್ಯೋಗಗಳು ಮತ್ತು 15 ಲಕ್ಷ ಉದ್ಯೋಗಾವಕಾಶಗಳನ್ನು ನೀಡುವ ಭರವಸೆ ನೀಡಿದೆ. ತೇಜಶ್ವಿ ಯಾದವ್ ಅವರ ಉದ್ಯೋಗದ ಭರವಸೆಗೆ ಮತದಾರರು ಸ್ಪಂದಿಸುತ್ತಿದ್ದಾರೆ ಎಂದು ಬಿಜೆಪಿ ಮೊದಲೇ ಗ್ರಹಿಸಿತ್ತು. ವಿಶೇಷವಾಗಿ ಒಂದು ಸಮಯದಲ್ಲಿ ಕೊರೋನಾ ವೈರಸ್, ಲಾಕ್​ಡೌನ್ ಮತ್ತು ವಲಸಿಗರ ಬಿಕ್ಕಟ್ಟು ಬಡವರನ್ನು ತಮ್ಮ ಜೀವನೋಪಾಯದಿಂದ ವಂಚಿತರನ್ನಾಗಿ ಮಾಡಿದೆ ಮತ್ತು ಹತಾಶರನ್ನಾಗಿಸಿದೆ. ಇದೇ ಕಾರಣಕ್ಕೆ ನಿತೀಶ್ ಕುಮಾರ್ ಮತ್ತು ಅವರ ಮಂತ್ರಿಗಳು ತಮ್ಮ ಕೆಲವು ರ‍್ಯಾಲಿಗಳಲ್ಲಿ ಜನರ ಸಿಟ್ಟನ್ನು ಎದುರಿಸಿದ್ದಾರೆ.

  ಬಿಹಾರಕ್ಕೆ ಮೊದಲ ಹಂತದ ಮತದಾನ ಬುಧವಾರ ನಡೆದಿದೆ. ಇನ್ನೂ ಎರಡು ಸುತ್ತಿನ ಮತದಾನ ಬಾಕಿ ಇದ್ದು, ನವೆಂಬರ್​ 7 ರಂದು ಚುನಾವಣೆ ಮುಕ್ತಾಯವಾಗಲಿದೆ. ನವೆಂಬರ್ 10 ರಂದು ಫಲಿತಾಂಶಗಳನ್ನು ಪ್ರಕಟವಾಗಲಿದೆ.
  Published by:MAshok Kumar
  First published: