IT Raid: ನಟಿ ತಾಪ್ಸಿ ಪನ್ನು-ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ; ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದೇ ಮುಳುವಾಯ್ತಾ?

ನಟಿ ತಾಪ್ಸಿ ಪನ್ನು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್​ ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರು. ಇದೇ ಕಾರಣಕ್ಕೆ ಅವರ ಆಸ್ತಿಗಳ ಮೇಲೆ ಕೇಂದ್ರ ಐಟಿ ದಾಳಿ ಪ್ರಯೋಗಿಸಿದೆಯೇ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

ತಾಪ್ಸಿ ಪನ್ನು-ಅನುರಾಗ್ ಕಶ್ಯಪ್.

ತಾಪ್ಸಿ ಪನ್ನು-ಅನುರಾಗ್ ಕಶ್ಯಪ್.

 • Share this:
  ಮುಂಬೈ (ಮಾರ್ಚ್​ 03); ಪ್ರಸ್ತುತ ದಿನಗಳಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅಗಾಗ್ಗೆ ಧ್ವನಿ ಎತ್ತುತ್ತಿದ್ದವರಲ್ಲಿ ಪ್ರಮುಖರು ನಟಿ ತಾಪ್ಸಿ ಪನ್ನು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್.  ಆದರೆ, ಇಂದು ನಟಿ ತಾಪ್ಸಿ ಪನ್ನು ಮತ್ತು ಬಾಲಿವುಡ್​ ಖ್ಯಾತ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಸೇರಿದ ಮನೆ ಮತ್ತು ಆಸ್ತಿಗಳ ಮೇಲೆ ತೆರಿಗೆ ಇಲಾಖೆ (Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಇತ್ತೀಚೆಗೆ ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ವಿದೇಶಿಗರಾದ ರಿಹಾನಾ ಮತ್ತು ಗ್ರೇಟಾ ಥನ್ಬರ್ಗ್​ ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾಗ, ಸಚಿನ್ ತೆಂಡೂಲ್ಕರ್​, ಲತಾ ಮಂಗೇಶ್ಕರ್​ ಸೇರಿದಂತೆ ಭಾರತದ ಅನೇಕ ಸ್ಟಾರ್​ಗಳು ಇದನ್ನು ವಿರೋಧಿಸಿದ್ದರು. ಆದರೆ, ತಾಪ್ಸಿ ಪನ್ನು ಮಾತ್ರ ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರವನ್ನು ಕೆಣಕಿದ್ದರು. ಇದೀಗ ಇದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ನಟಿಯ ಮೇಲೆ ಐಟಿ ದಾಳಿಯನ್ನು ಸಂಘಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ನೆಟ್ಟಿಗರು ಆರೋಪಿಸಿದ್ದಾರೆ.

  ತಾಪ್ಸಿ ಪನ್ನು, ಅನುರಾಗ್​ ಕಶ್ಯಪ್ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಪಕ ವಿಕಾಸ್ ಬಹ್ಲ್ ಅವರ ಆಸ್ತಿಗಳ ಮೇಲೆ ಕೂಡಾ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ತೆರಿಗೆ ಇಲಾಖೆಯು ಮುಂಬೈ ಮತ್ತು ಇತರ 30 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ವರದಿಯಾಗಿದ್ದು, ಈ ಶೋಧವು ‘ಫ್ಯಾಂಟಮ್ ಫಿಲ್ಮ್’‌ ಕಂಪೆನಿಯ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

  ಈ ವರ್ಷದ ಜನವರಿಯಲ್ಲಿ, ಮಧು ಮಾಂಟೆನಾ ಅವರು ಫ್ಯಾಂಟಮ್ ಫಿಲ್ಮ್ಸ್‌‌ನಲ್ಲಿ ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕ್ರಮ್ ಮೋಟ್ವಾನೆ ಮತ್ತು ವಿಕಾಸ್ ಬಹ್ಲ್ ಅವರ ಷೇರುಗಳನ್ನು ಖರೀದಿಸಿದ್ದರು. ಈ ಮೂಲಕ ಕಂಪನಿಯಿಂದ ಕಶ್ಯಪ್, ಮೋಟ್ವಾನೆ ಮತ್ತು ಬಹ್ಲ್ ಅವರು ಅಧಿಕೃತವಾಗಿ ನಿರ್ಗಮಿಸಿದ್ದರು.

  ಈ ಪ್ರೊಡಕ್ಷನ್‌‌ ಮತ್ತು ವಿತರಣಾ ಕಂಪನಿಯನ್ನು 2011 ರಲ್ಲಿ ಮಾಂಟೆನಾ, ಕಶ್ಯಪ್, ಮೋಟ್ವಾನೆ ಮತ್ತು ಬಹ್ಲ್ ಸ್ಥಾಪಿಸಿದ್ದರು. ಅಕ್ಟೋಬರ್ 2018 ರಲ್ಲಿ, ಬಹ್ಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಬಹಿರಂಗವಾಗಿ ಕೇಳಿ ಬಂದ ನಂತರ ತಂಡವು ಒಟ್ಟಾಗಿ ಕೆಲಸ ಮಾಡದಿರಲು ನಿರ್ಧರಿಸಿತ್ತು. ಇದೀಗ ಈ ಕಂಪೆನಿಯ ಮೇಲೆ ಐಟಿ ದಾಳಿ ನಡೆಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

  ಇದನ್ನೂ ಓದಿ: ಫಾರೂಕ್ ವಿರುದ್ಧದ ಅರ್ಜಿ ವಜಾ; ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ರಾಷ್ಟ್ರದ್ರೋಹವಲ್ಲವೆಂದ ಕೋರ್ಟ್

  ಮಹಾರಾಷ್ಟ್ರದ ಸರ್ಕಾರದ ಹಲವಾರು ಸಚಿವರು ಇದೀಗ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರ ಮೇಲಿನ ತೆರಿಗೆ ಇಲಾಖೆ ದಾಳಿಯನ್ನು ಖಂಡಿಸಿದ್ದಾರೆ. ಈ ಕುರಿತು ಬಹಿರಂಗ ಹೇಳಿಕೆ ನೀಡಿರುವ ನವಾಬ್ ಮಲಿಕ್, "ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರ ಮನೆ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿದ ರೀತಿಯನ್ನು ನೋಡಿದರೆ, ಇದು ಖಂಡಿತವಾಗಿಯೂ ಸರ್ಕಾರ ಅಥವಾ ಅದರ ನೀತಿಗಳ ವಿರುದ್ಧ ನಿಲುವು ತೆಗೆದುಕೊಳ್ಳುವವರ ವಿರುದ್ಧ ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆಯನ್ನು ಬಳಸಲಾಗುವುದು ಎಂಬ ಕೇಂದ್ರದ ಕಟು ಎಚ್ಚರಿಕೆಯಂತಾಗಿದೆ. ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮೋದಿ ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕ್ರಮ ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ"ಎಂದು ಅಭಿಪ್ರಾಯಪಟ್ಟಿದ್ದಾರೆ.

  ಅನುರಾಗ್ ಕಶ್ಯಪ್ ಅವರು 2019 ರಲ್ಲಿ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರವನ್ನು ಖಂಡಿಸಿ ಧ್ವನಿ ಎತ್ತಿದ್ದರು. ಕಳೆದ ವರ್ಷ ಅವರು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಕಣ್ಣು ಕೆಂಪಗಾಗಿಸಿತ್ತು. ಹೀಗಾಗಿ ಇಂದಿನ ತೆರಿಗೆ ಇಲಾಖೆ ದಾಳಿ ಎಂಬುದು ಕೇಂದ್ರ ಸರ್ಕಾರದ ಸೇಡು ತೀರಿಸಿಕೊಳ್ಳುವ ಕ್ರಮವೇ? ಎಂಬ ಪ್ರಶ್ನೆ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ.
  Published by:MAshok Kumar
  First published: