• Home
  • »
  • News
  • »
  • national-international
  • »
  • ISRO: ಭವಿಷ್ಯದಲ್ಲಿ ಖಾಸಗಿ ವಲಯ ಇಸ್ರೋದ ಕಾರ್ಯಕ್ಷಮತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆಯೇ?

ISRO: ಭವಿಷ್ಯದಲ್ಲಿ ಖಾಸಗಿ ವಲಯ ಇಸ್ರೋದ ಕಾರ್ಯಕ್ಷಮತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆಯೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ಖಾಸಗಿ ವಲಯದ ಬಾಹ್ಯಾಕಾಶ ಉದ್ಯಮವಾದ ಸ್ಕೈರೂಟ್ ಏರೋಸ್ಪೇಸ್, ​​ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್-ಎಸ್ ಅನ್ನು ಉಡಾವಣೆ ಮಾಡುವ ಮೂಲಕ ಹಲವರ ಕನಸು ನನಸಾದಂತಾಗಿದೆ.

  • Share this:

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಖಾಸಗಿ ಕಂಪನಿಯೊಂದು ( Private sector)  ತಯಾರಿಸಿದ ವಿಕ್ರಂ-ಎಸ್ ( Vikram-S) ರಾಕೆಟ್ ಅನ್ನು ನವೆಂಬರ್ 18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಹೈದ್ರಾಬಾದ್‌ ಮೂಲದ ಸ್ಕೈರೂಟ್‌ ಏರೋಸ್ಪೇಸ್‌ ಸಂಸ್ಥೆ ತಯಾರಿಸಿದ ದೇಶದ ಮೊದಲ ಖಾಸಗಿ ರಾಕೆಟ್‌ ಇದಾಗಿದ್ದು, ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.


    ವಿಕ್ರಮ್-ಎಸ್; ಭಾರತದ ಮೊದಲ ಖಾಸಗಿ ರಾಕೆಟ್


    ಭಾರತೀಯ ಖಾಸಗಿ ವಲಯದ ಬಾಹ್ಯಾಕಾಶ ಉದ್ಯಮವಾದ ಸ್ಕೈರೂಟ್ ಏರೋಸ್ಪೇಸ್, ​​ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್-ಎಸ್ ಅನ್ನು ಉಡಾವಣೆ ಮಾಡುವ ಮೂಲಕ ಹಲವರ ಕನಸು ನನಸಾದಂತಾಗಿದೆ. ಸ್ಕೈರೂಟ್‌ ಯಶಸ್ವಿ ಕಾರ್ಯಾಚರಣೆ ಖಾಸಗಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ ಮತ್ತು ಇಸ್ರೋದ ಬಾಹ್ಯಾಕಾಶ ಬೆಳವಣಿಗೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ನೀರಿಕ್ಷಿಸಲಾಗಿದೆ.


    ಈ ಮುಂಚೆಯೂ ಇಸ್ರೋದ ಬಾಹ್ಯಾಕಾಶ ಯೋಜನೆಗಳಲ್ಲಿ ನೂರಾರು ಖಾಸಗಿ ಕಂಪನಿಗಳು ವಿವಿಧ ರೂಪದಲ್ಲಿ ಪೂರಕವಾಗಿ ಕೆಲಸ ಮಾಡಿವೆ. ಆದರೆ ಸ್ಕೈರೂಟ್‌ ಖಾಸಗಿ ಸಂಸ್ಥೆ ಇಸ್ರೋದ ಮಹತ್ವದ ಕೆಲಸಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.


    ಮಿಷನ್‌ ಪ್ರಾರಂಭ ಸಕ್ಸಸ್...‌ ಬಾಹ್ಯಾಕಾಶ ಯೋಜನೆಗಳಲ್ಲಿ ಹಲವು ಸಂಸ್ಥೆಗಳು ಕಾರ್ಯತತ್ಪರ


    ಈ ಕಾರ್ಯಾಚರಣೆಗೆ 'ಪ್ರಾರಂಭ್ʼ ಎಂದು ಹೆಸರಿಸಲಾಗಿತ್ತು. ಶ್ರೀಹರಿಕೋಟಾದಿಂದ ವಿಕ್ರಮ್-ಎಸ್ ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆದಿದ್ದು, ಇದರೊಂದಿಗೆ ಮಿಷನ್ ಪ್ರಾರಂಭ ಶುಭಾರಂಭವಾಗಿದೆ. ಎರಡು ವರ್ಷಗಳ ಹಿಂದಷ್ಟೇ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೂ ಮುಕ್ತಗೊಳಿಸಲಾಗಿತ್ತು.


    ISRO is going to create history the country s first private rocket launch
    ಭಾರತದ ಮೊದಲ ಪ್ರೈವೇಟ್ ರಾಕೆಟ್


    ಸ್ಕೈರೂಟ್ ಏರೋಸ್ಪೇಸ್ ಖಾಸಗಿ ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿದ ಬೆನ್ನಲ್ಲೇ ಹಲವು ಸಂಸ್ಥೆಗಳು ಈಗ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಸಿಕೊಂಡಿವೆ. ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದು ಪರಿಗಣಿಸಲಾದ ವಿಕ್ರಮ್ ಸಾರಾಭಾಯಿ ಅವರ ಹೆಸರನ್ನು ಸ್ಕೈರೂಟ್ ಏರೋಸ್ಪೇಸ್ ತನ್ನ ಮೊದಲ ರಾಕೆಟ್‌ಗೆ ಇಟ್ಟಿದೆ.


    ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಗೆ ಅಭಿನಂದನೆಯ ಸುರಿಮಳೆ


    ಸ್ಕೈರೂಟ್ ಏರೋಸ್ಪೇಸ್ ಅನ್ನು ಅಭಿನಂದಿಸುತ್ತಾ, "ಮಿಷನ್ ಪ್ರಾರಂಭ್ ಯಶಸ್ವಿಯಾಗಿ ನೆರವೇರಿದೆ" ಎಂದು ಇಸ್ರೋ ಟ್ವೀಟ್ ಮಾಡಿದೆ. ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸ್ಕೈರೂಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನ ಅವರು ಟ್ವೀಟ್ ಮಾಡಿದ್ದಾರೆ: “ನವೆಂಬರ್ 18, ಬೆಳಿಗ್ಗೆ 11:30ಕ್ಕೆ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ಇತಿಹಾಸದಲ್ಲಿ ಕೆತ್ತಲಾಗಿದೆ" ಎಂದು ಟ್ವೀಟ್‌ ಮಾಡಿದ್ದಾರೆ.


    ಇತ್ತ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಉಡಾವಣೆಯನ್ನು ಶ್ಲಾಘಿಸಿ "ಇದು ಖಂಡಿತವಾಗಿಯೂ ಭಾರತದ ಬಾಹ್ಯಾಕಾಶ ಪಥದಲ್ಲಿ ಒಂದು ಮೈಲಿಗಲ್ಲಿನ ಕ್ಷಣವಾಗಿದೆ. ಇದು ಹೊಸ ಆರಂಭ, ಹೊಸ ಉದಯ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಯಾಣದಲ್ಲಿ ಹೊಸ ಪ್ರಾರಂಭ.


    ಇದು ತನ್ನದೇ ಆದ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಸ್ಟಾರ್ಟ್‌ಅಪ್ ಆಂದೋಲನದಲ್ಲಿ ಸ್ಕೈರೂಟ್ ಸಂಸ್ಥೆ ಮಹತ್ವದ ತಿರುವು ಪಡೆದುಕೊಂಡಿದೆ" ಎಂದಿದ್ದಾರೆ.


    ಸ್ಕೈರೂಟ್ ಏರೋಸ್ಪೇಸ್


    ಸ್ಕೈರೂಟ್ ಏರೋಸ್ಪೇಸ್ ಒಂದು ಭಾರತೀಯ ಖಾಸಗಿ ಬಾಹ್ಯಾಕಾಶ ಉತ್ಪಾದನಾ ಸಂಸ್ಥೆಯಾಗಿದ್ದು, ಇದನ್ನು 2018 ರಲ್ಲಿ ಸ್ಥಾಪಿಸಲಾಯಿತು. 2020 ರಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಸಂಸ್ಥೆಗಳಿಗೆ ತೆರೆಯಲು ಸರ್ಕಾರದ ಘೋಷಣೆಗಳನ್ನು ಅನುಸರಿಸಿ, ಇಸ್ರೋ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ ಮೊದಲ ಸ್ಟಾರ್ಟ್ ಅಪ್ ಆಯಿತು.


    Watch ISRO Rocket Launch check how to register
    ಇಸ್ರೋ


    ಸ್ಕೈರೂಟ್ ತನ್ನದೇ ಆದ ಸರಣಿ ಉಡಾವಣಾ ವಾಹನಗಳನ್ನು, ಅದರಲ್ಲೂ ವಿಶೇಷವಾಗಿ ಸಣ್ಣ ಉಪಗ್ರಹ ಮಾರುಕಟ್ಟೆಗಾಗಿ ನಿರ್ಮಿಸುವ ಉದ್ದೇಶ ಹೊಂದಿದೆ.


    ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಸುಧಾರಿತ ಸಂಯೋಜಿತ ಮತ್ತು 3D-ಮುದ್ರಣ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್, ಹೈಪರ್‌ಗೋಲಿಕ್-ಲಿಕ್ವಿಡ್ ಮತ್ತು ಘನ ಇಂಧನ ಆಧಾರಿತ ರಾಕೆಟ್ ಎಂಜಿನ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ ಮತ್ತು ಪರೀಕ್ಷಿಸಿದೆ.


    ಸ್ಕೈರೂಟ್‌ನ ಕೂಸು ವಿಕ್ರಮ್-ಎಸ್ ರಾಕೆಟ್


    ಮೂರು ಗ್ರಾಹಕ ಪೇಲೋಡ್‌ಗಳನ್ನು ಹೊತ್ತ ವಿಕ್ರಮ್-ಎಸ್ ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸೌಂಡಿಂಗ್ ರಾಕೆಟ್ ಸಂಕೀರ್ಣದಿಂದ ಉಡಾವಣೆ ಮಾಡಲಾಯಿತು. ರಾಕೆಟ್ 89.5 ಕಿಮೀ ಎತ್ತರವನ್ನು ತಲುಪಿದೆ ಮತ್ತು ಎಲ್ಲಾ ಹಾರಾಟದ ನಿಯತಾಂಕಗಳನ್ನು ಪೂರೈಸಿದೆ ಎಂದು ಸ್ಕೈರೂಟ್ ಹೇಳಿದೆ.


    ಈ ಉಡಾವಣೆಯು ಈ ರಾಕೆಟ್‌ನಲ್ಲಿ ಬಳಸಲಾಗುವ ಎಲ್ಲಾ ವಿಭಿನ್ನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಉಪ-ಕಕ್ಷೆಯ ಮಿಷನ್ ಆಗಿತ್ತು. ವಿಕ್ರಮ್ ರಾಕೆಟ್‌ಗಳು ವಿಕ್ರಮ್ 1, 2 ಹಾಗೂ 3 ಎಂದು ಮೂರು ಹಂತದಲ್ಲಿ ಬರುತ್ತಿದ್ದು, ಕಂಪನಿಯು ಮುಂದಿನ ವರ್ಷ ವಿಕ್ರಮ್-I ರಾಕೆಟ್ ಅನ್ನು ಉಡಾವಣೆ ಮಾಡಲು ಸಿದ್ಧವಾಗುತ್ತಿದೆ.


    ವಿಕ್ರಮ್ 1 ರಾಕೆಟ್‌ನ್ನು 290 ಕೆಜಿ ತೂಕದ ಉಪಗ್ರಹಗಳನ್ನು ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್‌ಗೆ (ಎಸ್ಎಸ್‌ಪಿಓ) ಜೋಡಿಸಲು ಹಾಗೂ 480 ಕೆಜಿ ತೂಕವನ್ನು 500 ಕಿಲೋಮೀಟರ್ ದೂರದ ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿ 45 ಡಿಗ್ರಿ ಕೋನದಲ್ಲಿ ಜೋಡಿಸಲು ವಿನ್ಯಾಸಗೊಳಿಸಲಾಗಿದೆ.




    ಇನ್ನೂ ವಿಕ್ರಮ್ II, 595 ಕೆಜಿಯಿಂದ 500 ಕಿಮೀವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿದ್ದರೆ, ವಿಕ್ರಮ್ III 815 ಕೆಜಿಯಿಂದ 500 ಕಿಮೀ ಸಾಗಿಸುವ ಸಾಮರ್ಥ್ಯದೊಂದಿಗೆ ಬರಲು ಗುರಿ ಹೊಂದಿದೆ.


    "ರಾಕೆಟ್‌ಗಳು ಬಹು-ಕಕ್ಷೆಯ ಅಳವಡಿಕೆ ಮತ್ತು ಅಂತರ-ಗ್ರಹಗಳ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಕಸ್ಟಮೈಸ್ ಮಾಡಿದ, ಮೀಸಲಾದ ಮತ್ತು ಸವಾರಿ ಹಂಚಿಕೆ ಆಯ್ಕೆಗಳನ್ನು ಸಣ್ಣ ಉಪಗ್ರಹ ಗ್ರಾಹಕರ ಅಗತ್ಯಗಳ ವ್ಯಾಪಕ ಶ್ರೇಣಿಯನ್ನು" ನೀಡುತ್ತವೆ ಎಂದು ಸ್ಕೈರೂಟ್ ಹೇಳಿದೆ. ಯಾವುದೇ ಉಡಾವಣಾ ಸ್ಥಳದಿಂದ 24 ಗಂಟೆಗಳ ಒಳಗೆ ತಮ್ಮ ರಾಕೆಟ್ ಅನ್ನು ಸಂಯೋಜಿಸಬಹುದು ಮತ್ತು ಉಡಾವಣೆ ಮಾಡಬಹುದು ಎಂದು ಸ್ಕೈರೂಟ್ ಹೇಳುತ್ತದೆ.


    ಸ್ಕೈರೂಟ್ ವಿಕ್ರಮ್ ಉಪಗ್ರಹಗಳ ಸರಣಿಯನ್ನು ಉತ್ಪಾದಿಸುತ್ತಿದೆ. ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯೊಂದಿಗೆ ಕಂಪನಿಯು ಈ ರಾಕೆಟ್‌ಗಳನ್ನು ಉತ್ಪಾದಿಸುತ್ತಿದೆ, ಇದು ಇತ್ತೀಚಿನ ವರ್ಷಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಸ್ಕೈರೂಟ್ ತನ್ನ ವೆಬ್‌ಸೈಟ್‌ನಲ್ಲಿ, "ಮುಂಬರುವ ದಶಕದಲ್ಲಿ 20,000 ಕ್ಕೂ ಹೆಚ್ಚು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದು ಹೇಳಿದೆ. ಇಸ್ರೊದ ಬಹಳಷ್ಟು ನಿವೃತ್ತ ಅಧಿಕಾರಿಗಳು ಸ್ಕೈರೂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.


    ಖಾಸಗಿ ವಲಯ ಮತ್ತು ಇಸ್ರೋ


    ಸ್ಕೈರೂಟ್‌ನ ರಾಕೆಟ್ ಉಡಾವಣೆಯಲ್ಲಿ ಗಮನಾರ್ಹವಾದದ್ದು ಇಸ್ರೋ ಮತ್ತು ಅದರ ಸಂಬಂಧಿತ ಸಂಸ್ಥೆಗಳಾದ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (IN-SPAce) ಕ್ಕೆ ದೊಡ್ಡ ಮೈಲಿಗಲ್ಲು. ದೊಡ್ಡ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ IN-SPAce ಅನ್ನು ಸ್ಥಾಪಿಸಲಾಯಿತು. ಈ ಮೇಲೆ ಉಲ್ಲೇಖಿಸಿದಂತೆ ಖಾಸಗಿ ವಲಯಕ್ಕೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಕುರಿತು 2020 ರಲ್ಲಿ ಪ್ರಮುಖ ಪ್ರಕಟಣೆಗಳು IN-SPAce ನಂತಹ ಸಂಸ್ಥೆಗಳ ಸ್ಥಾಪನೆಗೆ ಕಾರಣವಾದವು.


    ಡಾ ಪವನ್ ಗೋಯೆಂಕಾ, ಇನ್-ಸ್ಪೇಸ್ ಅಧ್ಯಕ್ಷರು ಉಲ್ಲೇಖಿಸಿದಂತೆ, ಉಡಾವಣೆಗಾಗಿ ಬಹು ಮಿಷನ್ ಸಿದ್ಧತೆ ವಿಮರ್ಶೆಗಳನ್ನು ಇಸ್ರೋ ಮತ್ತು ಇನ್-ಸ್ಪೇಸ್ ಮತ್ತು ಇತರ ಹೊರಗಿನ ತಜ್ಞರೊಂದಿಗೆ ಮಾಡಲಾಗಿದೆ.


    ISRO is going to create history the country s first private rocket launch
    ಸಾಂದರ್ಭಿಕ ಚಿತ್ರ


    ಸಂಚಾಲಕರಾಗಿ ಇಸ್ರೋ ನಿರ್ವಹಿಸಿದ ಪಾತ್ರವು ಶ್ಲಾಘಿಸಬೇಕಾದ ದೊಡ್ಡ ಬದಲಾವಣೆಯಾಗಿದೆ. ಸಾಂಪ್ರದಾಯಿಕವಾಗಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳನ್ನು ಹೊಂದಲು ಯಾರಿಗೂ ಸಹ ಮನಸ್ಸಿರಲಿಲ್ಲ. ಆದರೆ ಈಗ ಈ ಮನೋಭಾವ ಬದಲಾಗಿದೆ. ಹಾಗೆಯೇ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಮೇಲೆ ಬೆಳೆಯುತ್ತಿರುವ ಮತ್ತು ವೈವಿಧ್ಯಮಯ ಬೇಡಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ನಿಜಕ್ಕೂ ಅಗತ್ಯವಾಗಿದೆ.


    ವಿದೇಶಗಳಂತೆ ಖಾಸಗಿ ವಲಯದಿಂದ ಭಾರತಕ್ಕೂ ಲಾಭ


    ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರ ಪಾಲುದಾರಿಕೆ ಇದೆ. ಅಮೆರಿಕದಲ್ಲಿ ನಾಸಾ ಮಾತ್ರವಲ್ಲ ಅಲ್ಲಿನ ಖಾಸಗಿ ಕಂಪನಿಗಳು ರಾಕೆಟ್‌ಗಳನ್ನು ತಯಾರಿಸುತ್ತವೆ. ಅದರಲ್ಲಿ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಮೊದಲಾದ ಕಂಪನಿಗಳಿವೆ, ಹೀಗೆ ವಿಶ್ವಾದ್ಯಂತ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯು ಅಗಾಧವಾದ ಪ್ರಯೋಜನಗಳನ್ನು ನೀಡುತ್ತಿವೆ.


    ಈಗ ಇದು ಭಾರತದ ವಿಷಯದಲ್ಲಿ ಸಾಧ್ಯವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಬಾಹ್ಯಕಾಶ ಸಮುದಾಯ. ಇಲ್ಲಿ ಖಾಸಗಿ ವಲಯ ಪ್ರವೇಶವನ್ನು ಹೆಚ್ಚು ಅಗ್ಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಇದು ಹೆಚ್ಚಿನ ಅಂತರರಾಷ್ಟ್ರೀಯ ಗ್ರಾಹಕರನ್ನು ಸೆಳೆಯುವಲ್ಲಿ ಸಹ ನಂಬರ್‌ ಒನ್‌ ಆಗಲಿದೆ. ಒಟ್ಟಾರೆಯಾಗಿ, ಇಸ್ರೋ ಸೇರಿ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಖಾಸಗಿ ವಲಯದ ಭಾಗವಹಿಸುವಿಕೆಯೊಂದಿಗೆ ಉಜ್ವಲ ಭವಿಷ್ಯವನ್ನು ಎದುರು ನೋಡಬಹುದು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು