US Drone Attack- ಅಫ್ಘಾನಿಸ್ತಾನದಲ್ಲಿ ಅಮೆರಿಕ ಡ್ರೋನ್ ದಾಳಿ; ಐಸಿಸ್ ಪ್ಲಾನರ್ ಹತ್ಯೆ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟ ಘಟನೆಯ ರೂವಾರಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಪ್ಲಾನರ್ವೊಬ್ಬನನ್ನು ಅಮೆರಿಕ ತನ್ನ ಡ್ರೋನ್ ದಾಳಿಯಲ್ಲಿ ಹತ್ಯೆಗೈದಿರುವುದು ವರದಿಯಾಗಿದೆ.

ಕಾಬೂಲ್ ಬಾಂಬ್ ಸ್ಪೋಟ ಘಟನೆ

ಕಾಬೂಲ್ ಬಾಂಬ್ ಸ್ಪೋಟ ಘಟನೆ

  • News18
  • Last Updated :
  • Share this:
    ಕಾಬೂಲ್, ಆ. 28: ಕಾಬೂಲ್ ಬಾಂಬ್ ಸ್ಫೋಟದ ಬೆನ್ನಲ್ಲೇ ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನೆಲೆಯ ಮೇಲೆ ಅಮೆರಿಕದ ಮಿಲಿಟರಿ ಪಡೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬ ಪ್ರಮುಖ ಉಗ್ರ ಹತರಾಗಿರುವುದು ಮೇಲ್ನೋಟಕ್ಕೆ ತೋರುತ್ತಿದೆ ಎಂದು ಹೇಳಿರುವ ಅಮೆರಿಕದ ಸೇನಾಧಿಕಾರಿಗಳು, ಅಫ್ಘನ್ ನಾಗರಿಕರಿಗೆ ದಾಳಿಯಿಂದ ಯಾವ ಹಾನಿಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖೋರಸಾನ್ ಘಟಕದ ಇಸ್ಲಾಮಿಕ್ ಸ್ಟೇಟ್ ಸಂಘಟನೆ (Islamic State- Khorasan) ಸದಸ್ಯನನ್ನು ಗುರಿ ಮಾಡಿ ಈ ದಾಳಿ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮತಿಯ ಮೇರೆಗೆ ಈ ಡ್ರೋನ್ ದಾಳಿ ನಡೆದಿದೆ.

    ಮೊನ್ನೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟವಾಗಿ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಈ ಘಟನೆಯಲ್ಲಿ ಅಮೆರಿಕದ 10ಕ್ಕೂ ಹೆಚ್ಚು ಸೈನಿಕರು ಅಸುನೀಗಿದ್ದರು. ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು. ಈ ಸ್ಫೋಟದ ಸಂಯೋಜಕನನ್ನು (Planner) ಇಂದು ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಗೈಯಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ಘಟನೆಗೆ ಪ್ರತೀಕಾರವನ್ನು ಅಮೆರಿಕ ತೀರಿಸಿಕೊಳ್ಳುತ್ತದೆ ಎಂದು ಹೇಳಿದ್ದರು. ಅದರಂತೆ ಡ್ರೋನ್ ದಾಳಿ ನಡೆದಿದೆ. ಕಾಬೂಲ್ ಏರ್ ಪೋರ್ಟ್ ಬ್ಲಾಸ್ಟ್ ಘಟನೆ ಆಗುವ ಮೂರು ದಿನ ಮೊದಲೇ ಅಮೆರಿಕ ಅದರ ಬಗ್ಗೆ ಸುಳಿವು ನೀಡಿತ್ತು. ಆದರೂ ಬಾಂಬ್ ಸ್ಫೋಟವನ್ನು ತಪ್ಪಿಸಲು ಆಗಲಿಲ್ಲ. ಕುತೂಹಲವೆಂದರೆ, ಕಾಬೂಲ್​ನಲ್ಲಿ ಉಗ್ರರಿಂದ ಮತ್ತೊಂದು ಬಾಂಬ್ ಸ್ಫೋಟ ದಾಳಿ ಆಗುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

    ಇನ್ನೊಂದು ಕುತೂಹಲದ ಸಂಗತಿ ಎಂದರೆ, ಒಂದು ಕಾಲದಲ್ಲಿ ಅಮೆರಿಕದ ಪರಮ ಶತ್ರುವಾಗಿದ್ದ ತಾಲಿಬಾನ್ ಇದೀಗ ತನ್ನ ನೆಲದಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಅವಕಾಶ ಮಾಡಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ದಿನೇ ದಿನೇ ಶಕ್ತಿ ವೃದ್ಧಿಸಿಕೊಳ್ಳುತ್ತಿರುವುದು ತಾಲಿಬಾನ್​ಗೂ ದೊಡ್ಡ ತಲೆನೋವಾಗಿದೆ. ಬೇರೆ ದೇಶಗಳ ಮೇಲೆ ದಾಳಿ ನಡೆಸಲು ಯಾವುದೇ ಉಗ್ರ ಸಂಘಟನೆಗಳಿಗೆ ಅಫ್ಘನ್ ನೆಲವನ್ನು ಉಪಯೋಗಿಸಿಕೊಳ್ಳಲು ಬಿಡುವುದಿಲ್ಲ ಎಂದು ಅನೇಕ ಬಾರಿ ತಾಲಿಬಾನ್ ಸ್ಪಷ್ಟಪಡಿಸಿದೆ. ಅದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉದ್ದೇಶಿಸಿ ನೀಡಿದ ಎಚ್ಚರಿಕೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಸ್ಥಾಪಿಸಿದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೆಚ್ಚು ಚುರುಕು ಕಂಡಿದೆ. ಹೀಗಾಗಿ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನ ಅಫ್ಘಾನಿಸ್ತಾನದಲ್ಲಿ ಹತ್ತಿಕ್ಕುವುದು ಅಮೆರಿಕ ಮತ್ತು ತಾಲಿಬಾನ್ ಎರಡಕ್ಕೂ ಬಹಳ ಮುಖ್ಯ.

    ಇದನ್ನೂ ಓದಿ: Kabul Blasts: ಕಾಬೂಲ್ ಬಾಂಬ್ ಸ್ಫೋಟದಲ್ಲಿ ಪಾಕ್​​ ಕೈವಾಡ: ಮಾಸ್ಟರ್​​ಮೈಂಡ್​​ ಅಬ್ದುಲ್ ಫಾರೂಕಿ ಯಾರು..?

    ಇದೇ ವೇಳೆ, ಕಾಬೂಲ್ ಏರ್ ಪೋರ್ಟ್ ಬಳಿ ಅಮೆರಿಕದ ಸೈನಿಕರು ಇನ್ನೂ ಇದ್ದಾರೆ. ಅಫ್ಘಾನಿಸ್ತಾದಲ್ಲಿರುವ ತನ್ನ ದೇಶದ ಎಲ್ಲಾ ನಾಗರಿಕರನ್ನ ಹೊರಸಾಗಿಸಲು ಅಮೆರಿಕದ ಸೈನಿಕರು ನೆರವಾಗುತ್ತಿದ್ದಾರೆ. ಈ ತಿಂಗಳಾಂತ್ಯದವರೆಗೆ ಅಮೆರಿಕ ಗಡುವು ಪಡೆದಿದೆ. ಇದೇ ವೇಳೆ, ಕಾಬೂಲ್ ಏರ್ ಪೋರ್ಟ್​ನ ಸಂಪೂರ್ಣ ನಿಯಂತ್ರಣ ಪಡೆಯಲು ತಾಲಿಬಾನ್ ಪ್ರಯತ್ನಿಸುತ್ತಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Vijayasarthy SN
    First published: