ನವ ದೆಹಲಿ (ಮಾರ್ಚ್ 31); ಮುಂಬೈ ಬಳಿಯ ಮುಂಬ್ರಾ ಮೂಲದ ಇಶ್ರತ್ ಜಹಾನ್ ಎಂಬ 19 ವರ್ಷದ ಯುವತಿಯನ್ನು 2004 ರ ಜೂನ್ 15 ರಂದು ಅಹಮದಾಬಾದ್ ಬಳಿ ನಡೆದ ಎನ್‌ಕೌಂಟರ್ ನಲ್ಲಿ ಗುಜರಾತ್ ಪೊಲೀಸರು ಹತ್ಯೆ ಮಾಡಿದ್ದರು. ಇಶ್ರತ್ ಜಹಾನ್ ಜೊತೆಗೆ ಜಾವೇದ್ ಶೇಖ್ ಅಲಿಯಾಸ್ ಪ್ರಣೇಶ್ ಪಿಳ್ಳೈ, ಅಮ್ಜಾದಾಲಿ ಅಕ್ಬರಲಿ ರಾಣಾ ಮತ್ತು ಜೀಶನ್ ಜೋಹರ್ ಅವರನ್ನೂ ಹತ್ಯೆ ಮಾಡಲಾಗಿತ್ತು. "ಈ ನಾಲ್ವರು ಭಯೋತ್ಪಾದಕರಾಗಿದ್ದು, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಯೋಜಿಸುತ್ತಿದ್ದರು"ಎಂದು ಪೊಲೀಸರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಈ ಎನ್ಕೌಂಟರ್ ಇಡೀ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅಲ್ಲದೆ, ಹೈಕೋರ್ಟ್‌ನಿಂದ ನೇಮಿಸಲ್ಪಟ್ಟ ವಿಶೇಷ ತನಿಖಾ ತಂಡವು ಎನ್‌ಕೌಂಟರ್ ನಕಲಿ ಎಂದು ತೀರ್ಮಾನಿಸಿತ್ತು. ಆದ್ದರಿಂದ ಸಿಬಿಐ ವಿವಿಧ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿತ್ತು. ಆದರೆ, ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ 2004 ರ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಾದ ಜಿ ಎಲ್ ಸಿಂಘಾಲ್, ತರುಣ್ ಬರೋಟ್ ಮತ್ತು ಅನಾಜು ಚೌಧರಿ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ವಿ.ಆರ್. ರಾವಲ್ ಅವರು ಸಿಂಘಾಲ್, ಬರೋಟ್ (ಈಗ ನಿವೃತ್ತರಾಗಿದ್ದಾರೆ) ಮತ್ತು ಚೌಧರಿ ಅವರು ಸಲ್ಲಿಸಿದ್ದ ಬಿಡುಗಡೆ ಅರ್ಜಿಗಳಿಗೆ ಅನುಮತಿ ನೀಡಿದರು. ಮೂವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ನಿರಾಕರಿಸಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮಾರ್ಚ್ 20 ರಂದು ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಾಲಯವು ಅಕ್ಟೋಬರ್ 2020 ರ ತನ್ನ ಆದೇಶದಲ್ಲಿ, "ಮೂವರು ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ" ಎಂದು ಹೇಳಿತ್ತು. ಈ ಹೇಳಿಕೆ ನಕಲಿ ಎನ್ಕೌಂಟರ್ ಆರೋಪಿಗಳಿಗೆ ಪೂರಕವಾಗಿ ಪರಿಣಮಿಸಿದ್ದು ಇದೇ ಹೇಳಿಕೆ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Mamata Banerjee: ಬಿಜೆಪಿ ವಿರುದ್ಧ ಎಲ್ಲರೂ ಒಂದಾಗಬೇಕಿದೆ: ಸೋನಿಯಾ ಗಾಂಧಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ
ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 197 ರ ಅಡಿಯಲ್ಲಿ, ಅಧಿಕೃತ ಕರ್ತವ್ಯವನ್ನು ನಿರ್ವಹಿಸುವಲ್ಲಿ ಮಾಡಿದ ಯಾವುದೇ ಕೆಲಸಕ್ಕೆ ಸರ್ಕಾರಿ ನೌಕರರನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಅನುಮತಿ ಅಗತ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ