ಜೈಪುರ (ಆಗಸ್ಟ್ 10); ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದು, ಸರ್ಕಾರವನ್ನು ಬೀಳಿಸುವ ಯೋಜನೆ ರೂಪಿಸಿದ್ದ ಹಾಗೂ ಆ ಮೂಲಕ ಡಿಸಿಎಂ ಸ್ಥಾನದಿಂದಲೇ ವಜಾ ಆಗಿದ್ದ ಯುವ ನಾಯಕ ಸಚಿನ್ ಪೈಲಟ್ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನ ಅಧಿವೇಶನಕ್ಕೆ ಮುಂಚಿತವಾಗಿ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮಾತುಕತೆಗೆ ಸಚಿನ್ ಪೈಲಟ್ ಸಮಯ ಕೋರಿರುವುದು ಇದೀಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕು, ಆನಂತರ ಬಿಜೆಪಿ ಸೇರ್ಪಡೆಯಾಗಿ ಅಧಿಕಾರ ಹಿಡಿಯಬೇಕು ಎಂಬುದು ಸಚಿನ್ ಪೈಲಟ್ ಮಹತ್ವಾಕಾಂಕ್ಷೆಯಾಗಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ನ 18 ಬಂಡಾಯ ಶಾಸಕರ ಜೊತೆಗೆ ಪೈಲಟ್ ಬಿಜೆಪಿ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ, ಇದೀಗ ಬಿಜೆಪಿ ಬಾಗಿಲು ಸಚಿನ್ ಪೈಲಟ್ಗೆ ಬಹುತೇಕ ಮುಚ್ಚಿದೆ. ಇದೇ ಕಾರಣಕ್ಕೆ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಹೈಕಮಾಂಡ್ ನಾಯಕರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ರಾಜಸ್ಥಾನದ ಅಧಿವೇಶನಕ್ಕೆ ಮುನ್ನ ಆಗಸ್ಟ್ 14ರಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಸಚಿನ್ ಪೈಲಟ್ ಸಮಯಾವಕಾಶ ಕೇಳಿದ್ದಾರೆ. ರಾಹುಲ್ ಗಾಂಧಿ ಈ ಭೇಟಿಗೆ ಇನ್ನೂ ಸಮಯವನ್ನು ನಿಗದಿಪಡಿಸಿಲ್ಲ. ಆದರೆ, ಆಗಸ್ಟ್ 14ರಂದು ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್ ಭೇಟಿ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಡಿಸಿಎಂ ಹುದ್ದೆಯಿಂದ ಸಚಿನ್ ಪೈಲಟ್ ಅವರನ್ನು ವಜಾ ಮಾಡಿದ ನಂತರವೂ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಅವರ ಸಂಪರ್ಕ ಸಾಧಿಸಲು ವಿಫಲ ಯತ್ನ ಮಾಡಿದ್ದರು. ಆದರೆ, ಕಾಂಗ್ರೆಸ್ ಹಿರಿಯ ನಾಯಕರಾದ ಪಿ. ಚಿದಂಬರಂ ಮತ್ತು ಕೆ.ಸಿ. ವೇಣುಗೋಪಾಲ್ ಮಾತ್ರ ಸಚಿನ್ ಪೈಲಟ್ ಜೊತೆಗೆ ಮಾತುಕತೆ ನಡೆಸಿದ್ದರು. ಅಲ್ಲದೆ, ನಿರಂತರ ಸಂಪರ್ಕದಲ್ಲಿದ್ದರು. ಆ ಮೂಲಕ ಈ ರಾಜೀ ಸಂಧಾನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಂಡಾಯ ಆರಂಭವಾಗಿ ಸಚಿನ್ ಪೈಲಟ್ ಒಂದು ಹೆಜ್ಜೆಯನ್ನು ಹೊರಗಿಟ್ಟಾಗಿನಿಂದ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಎಲ್ಲಾ ನಾಯಕರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಸಚಿನ್ ಪೈಲಟ್ ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆ ಮಾಡಿಕೊಂಡರೂ ಸಹ ಉಳಿದ 18 ಬಂಡಾಯ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂಬುದು ಉಳಿದ ಎಲ್ಲಾ ಕಾಂಗ್ರೆಸ್ ಶಾಸಕರು ಒತ್ತಾಯ.
ಆದರೆ, ಮುಂದಿನ ವಾರ ನಡೆಯಲಿರುವ ರಾಜಸ್ಥಾನ ಅಧಿವೇಶನದಲ್ಲಿ ಎಲ್ಲಾ ಬಂಡಾಯ ಶಾಸಕರೂ ಕಾಂಗ್ರೆಸ್ ಸರ್ಕಾರದ ಪರ ಮತ ಚಲಾಯಿಸಿದರೆ ಎಲ್ಲರನ್ನೂ ಕ್ಷಮಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಘುವೀರ್ ಮೀನಾ ಈಗಾಗಲೇ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ