ಏಳು ವರ್ಷದ ಹಿಂದೆ ಮಾಡಿದ ತಪ್ಪಿಗೆ ಕೇರಳ ಈಗ ಬೆಲೆ ತೆರುತ್ತಿದೆಯಾ?


Updated:August 17, 2018, 6:54 PM IST
ಏಳು ವರ್ಷದ ಹಿಂದೆ ಮಾಡಿದ ತಪ್ಪಿಗೆ ಕೇರಳ ಈಗ ಬೆಲೆ ತೆರುತ್ತಿದೆಯಾ?

Updated: August 17, 2018, 6:54 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 17): ಕರ್ನಾಟಕದ ಕರಾವಳಿ, ಮಲೆನಾಡು, ಕೊಡಗು ಮತ್ತು ಕೇರಳದಲ್ಲಿ ವಿಪರೀತ ಮುಂಗಾರು ಮಳೆ ಮತ್ತು ನೆರೆ ಪ್ರವಾಹ ಅಪ್ಪಳಿಸಿದೆ. ಕೇರಳದಲ್ಲಿ ಕಳೆದ 100 ವರ್ಷದಲ್ಲಿ ಕಂಡುಕೇಳರಿಯಷ್ಟು ಭೀಕರ ಜಲ ಪ್ರಳಯವಾಗುತ್ತಿದೆ. ಕೇರಳದಲ್ಲಿ ಮಹಾಮಳೆ ಮತ್ತು ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 330 ದಾಟಿದೆ. ದೇವರನಾಡಿನ 14 ಜಿಲ್ಲೆಗಳ ಪೈಕಿ ಬರೋಬ್ಬರಿ 10 ಜಿಲ್ಲೆಗಳು ಜಲಕಂಟಕಕ್ಕೆ ಸಿಲುಕಿವೆ. ಅದರಲ್ಲೂ ತ್ರಿಶ್ಶೂರು, ಎರ್ನಾಕುಲಂ, ಅಲಪ್ಪುಳ ಮತ್ತು ಪತ್ತನಂತಿಟ್ಟ ಈ 4 ಜಿಲ್ಲೆಗಳು ಅಪಾಯದ ಗಡಿ ದಾಟಿವೆ. ಹೆಚ್ಚೂಕಡಿಮೆ ನೀರಿನಿಂದ ಮುಳುಗಿಹೋಗಿವೆ. ಇದಲ್ಲದೆ, ಕಣ್ಣೂರು, ಕೋಳಿಕೋಡ್, ವಯನಾಡ್, ಮಲಪ್ಪುರಂ, ಇಡುಕ್ಕಿ ಮೊದಲಾದ ಸ್ಥಳಗಳಲ್ಲೂ ನೀರಿನ ಪ್ರವಾಹ ವಿಪರೀತವಿದೆ. ಭೂಕುಸಿತ ಘಟನೆಗಳಂತೂ ನಿತ್ಯವೂ ಆಗುತ್ತಿವೆ. ಲಕ್ಷಾಂತರ ಜನರು ನಿರಾಶ್ರಿತರ ಶಿಬಿರ ಸೇರುವಂತಾಗಿದೆ.

ದೇವರ ನಾಡಿಗೆ ಇಂಥದ್ದೊಂದು ಜನಶಾಪ ತಟ್ಟಲು ಕಾರಣವಾದರೂ ಏನು? 2011ರಲ್ಲಿ ಕೇರಳ ಮಾಡಿದ ತಪ್ಪಿಗೆ ಈಗ ಶಿಕ್ಷೆಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಪಂಚರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳನ್ನ ರಕ್ಷಿಸಲು ಮಾಧವ ಗಾಡ್ಗಿಲ್ ನೇತೃತ್ವದ ಸಮಿತಿಯು 2011ರಲ್ಲಿ ವರದಿ ಮಂಡಿಸಿತ್ತು. ಈ ವರದಿಯನ್ನು ಮುಲಾಜಿಲ್ಲದೇ ತಿರಸ್ಕರಿಸಿದ ಮೊದಲ ರಾಜ್ಯ ಕೇರಳವಾಗಿತ್ತು. ಗಾಡ್ಗಿಲ್ ಕಮಿಟಿಯ ವರದಿಯನ್ನ ಮರುಪರಿಶೀಲಿಸಲು ರಚನೆಯಾಗಿದ್ದ ಕಸ್ತೂರಿರಂಗನ್ ಸಮಿತಿಯ ವರದಿಯನ್ನೂ ಕೇರಳ ಒಪ್ಪಿಕೊಳ್ಳಲಿಲ್ಲ. ಗಾಡ್ಗಿಲ್ ಸಮಿತಿಯಲ್ಲಿ ಪ್ರಸ್ತಾಪಿಸಲಾಗಿದ್ದ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯಗಳಿರುವ ಎಲ್ಲಾ ಪ್ರದೇಶಗಳೂ ಈಗ ವರುಣನ ಕೋಪಕ್ಕೆ ಸಿಲುಕಿವೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಕ್ವಾರಿ, ಅಣೆಕಟ್ಟು ಇತ್ಯಾದಿಗಳನ್ನ ನಿರ್ಮಿಸುವಂತಿಲ್ಲ; ಎತ್ತರದ ಕಟ್ಟಡಗಳನ್ನ ಕಟ್ಟುವಂತಿಲ್ಲ; ಸ್ಥಳವನ್ನ ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬಿತ್ಯಾದಿ ನಿರ್ಬಂಧಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಗಾಡ್ಗಿಲ್ ಸಮಿತಿ ಶಿಫಾರಸು ಮಾಡಿತ್ತು. ಅಲ್ಲದೇ, ಪಶ್ಚಿಮ ಘಟ್ಟದ ಅಮೂಲ್ಯ ಜೀವ ಸಂಪತ್ತನ್ನ ರಕ್ಷಿಸಲು ಸ್ಥಳೀಯ ಜನರ ಸಹಕಾರದೊಂದಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕೆಂದೂ ಸಮಿತಿಯು ಸಲಹೆ ನೀಡಿತ್ತು. ಆದರೆ, ಕೇರಳದವರು ಇದ್ಯಾವುದನ್ನೂ ಲೆಕ್ಕಿಸಲಿಲ್ಲ. ಮನಬಂದಂತೆ ಅಲ್ಲಿ ಕ್ವಾರಿ ಕೆಲಸಗಳು ನಡೆದವು. ಇದೇ ಕ್ವಾರಿಗಳಿಂದಾಗಿ ಈಗ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.

ಗಾಡ್ಗಿಲ್ ವರದಿ ಇರಲಿ, ಕಸ್ತೂರಿ ರಂಗನ್ ವರದಿಗೆ ಕರ್ನಾಟಕದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮಿತಿಯ ಶಿಫಾರಸುಗಳನ್ನ ಅನುಷ್ಠಾನಗೊಳಿಸಿದರೆ ಪ್ರದೇಶದ ರೈತರ ಬದುಕು ವಿನಾಶಗೊಳ್ಳುತ್ತದೆ ಎಂಬ ಭಾವನೆ ಹಬ್ಬಿದೆ. ಕೊಡಗಿನಲ್ಲಂತೂ ಇದಕ್ಕೆ ಅತೀವ ವಿರೋಧವಿದೆ. ಪರಿಸರದ ಸಮತೋಲನಕ್ಕೆ ಮಹತ್ವವಾಗಿರುವ ಗಾಡ್ಗಿಲ್ ಸಮಿತಿಯ ಅಭಿಪ್ರಾಯವನ್ನ ಜನರು ಈಗಲಾದರೂ ಗಂಭೀರವಾಗಿ ಪರಿಗಣಿಸಬಹುದೇ? ಕಾಲವೇ ಉತ್ತರಿಸಬೇಕು.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...