• Home
  • »
  • News
  • »
  • national-international
  • »
  • ಕಾಂಗ್ರೆಸ್ ಮುಕ್ತ ದೇಶ ಮಾಡ ಹೊರಟ ಬಿಜೆಪಿಗೇ ಕಂಟಕ; ರಂಗು ಕಳೆದುಕೊಳ್ಳುತ್ತಿದೆಯಾ ಕೇಸರಿ?

ಕಾಂಗ್ರೆಸ್ ಮುಕ್ತ ದೇಶ ಮಾಡ ಹೊರಟ ಬಿಜೆಪಿಗೇ ಕಂಟಕ; ರಂಗು ಕಳೆದುಕೊಳ್ಳುತ್ತಿದೆಯಾ ಕೇಸರಿ?

ಅಮಿತ್​ ಶಾ

ಅಮಿತ್​ ಶಾ

ಬಿಜೆಪಿ ಕಂಡ ಕಂಡಲ್ಲಿ ಆಪರೇಷನ್​ ಕಮಲ ಮಾಡಿ ಸರ್ಕಾರ ರಚನೆ ಮಾಡುತ್ತಿದೆ. ಇದೇ ರೀತಿ ಮಹಾರಾಷ್ಟ್ರದಲ್ಲೂ ಮಾಡಲು ಹೋಗಿ ಇದ್ದ ಮಾನವನ್ನೂ ಕಳೆದುಕೊಂಡಿದೆ. ಈ ವಿಚಾರದಲ್ಲಿ ಬಿಜೆಪಿ ಟೀಕೆ ಎದುರಿಸುತ್ತಿದೆ.

  • Share this:

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಅಂದಿನ ಬಿಜೆಪಿ ಚಾಣಕ್ಯ ಅಮಿತ್​ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ‘ಕಾಂಗ್ರೆಸ್​ ಮುಕ್ತ ಭಾರತ ’  ಹೆಸರಿನ ಆಂದೋಲನ ಆರಂಭಿಸಿದ್ದರು. ಇದಕ್ಕೆ ಪೂರಕವಾಗಿ ಸಾಕಷ್ಟು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಆರಂಭಿಸಿತ್ತು. ಇನ್ನೇನು ‘ಕಾಂಗ್ರೆಸ್​ ಮುಕ್ತ ಭಾರತ' ಆಯಿತು ಎನ್ನುವಾಗ ಬಿಜೆಪಿ ತನ್ನ ಖ್ಯಾತಿಯನ್ನು ಕಳೆದುಕೊಳ್ಳಲು ಆರಂಭಿಸಿತ್ತು. ಕಾಂಗ್ರೆಸ್​​ ಸೇರಿ ಇತರ ಪಕ್ಷಗಳು ಮತ್ತೆ ತಮ್ಮ ಪ್ರಾಬಲ್ಯ ಸಾಧಿಸಲು ಆರಂಭಿಸಿದ್ದವು. ಈಗ, ಬಿಜೆಪಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

‘ಕಾಂಗ್ರೆಸ್​ ಮುಕ್ತ ಭಾರತ'ದ ಕನಸನ್ನು ಕಂಡು, ಅದನ್ನು ಸಾಕಾರ ಮಾಡಲು ಬಿಜೆಪಿಯ ಚಾಣಾಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್​ ಶಾ ಸಾಕಷ್ಟು ಶ್ರಮವಹಿಸಿದ್ದರು. ಕೆಲ ರಾಜ್ಯಗಳಲ್ಲಿ ಕುದುರೆ ವ್ಯಾಪಾರ ಮಾಡಿ ಇನ್ನೂ ಕೆಲ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು, ಇನ್ನೂ ಕೆಲವು ಕಡೆ ಸ್ವಂತ ಬಲದಿಂದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಭಾರತದ ಮ್ಯಾಪ್​ ನಿಧಾನವಾಗಿ ಕೇಸರೀಕರಣಗೊಳ್ಳಲು ಆರಂಭವಾಗಿತ್ತು.

ಆದರೆ, ಇದಕ್ಕೆ ಬ್ರೇಕ್​ ಹಾಕಿದ್ದು 2017ರ ಪಂಜಾಬ್​ ವಿಧಾನಸಭಾ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಕನಸು ಕಂಡಿತ್ತು. ಆದರೆ, ಕಾಂಗ್ರೆಸ್​ ಇಲ್ಲಿ ಸರ್ಕಾರ ರಚನೆ ಮಾಡಿತ್ತು.  2018ರಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ರಾಜಸ್ಥಾನ, ತೆಲಂಗಾಣ, ಚತ್ತೀಸ್​ಗಢ, ಮಿಜೋರಾಂ ಹಾಗೂ ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಉಪಚುನಾವಣೆ ನಡೆದಿತ್ತು. ರಾಜಸ್ಥಾನ, ಚತ್ತೀಸ್​ಗಢ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಈ ಮೂಲಕ ಅಮಿತ್​ ಶಾ ಲೆಕ್ಕಾಚಾರ ಉಲ್ಟಾ ಆಗಿತ್ತು.

ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಶಾಸಕರು; ನಾಳೆ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಪದಗ್ರಹಣ

ಮಹಾರಾಷ್ಟ್ರದಲ್ಲೂ ಫಲಿಸದ ಲೆಕ್ಕಾಚಾರ:

ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ಪಡೆಯಬಹುದು ಎನ್ನುವ ಕನಸು ಕಂಡಿದ್ದ ಬಿಜೆಪಿಗೆ ಮತ್ತದೇ ನಿರಾಸೆ. ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್​ 44 ಹಾಗೂ ಎನ್​ಸಿಪಿ 54 ಸ್ಥಾನ ಗಳಿಸಿದ್ದವು. ಶಿವಸೇನೆ ಜೊತೆ ಮೈತ್ರಿ ಸಾಧ್ಯವಾಗದ ಕಾರಣ ಬಿಜೆಪಿ ಹಿಂಬಾಗಿಲಿನಿಂದ ತೆರಳಿ ಅಧಿಕಾರಕ್ಕೆ ಬಂದಿತ್ತು. ಆದರೆ, ಈ ಆಟ ಹೆಚ್ಚು ದಿನ ನಡೆಯಲಿಲ್ಲ. ಈಗ ಶಿವಸೇನೆ,ಎನ್​ಸಿಪಿ ಹಾಗೂ ಕಾಂಗ್ರೆಸ್​ ಸೇರಿ ಸರ್ಕಾರ ರಚನೆ ಮಾಡುತ್ತಿದ್ದು, ಬಿಜೆಪಿ ಇಲ್ಲ ಮೂಕ ಪ್ರೇಕ್ಷಕ ಮಾತ್ರ.

ಬಿಜೆಪಿಗೆ ಚಾಟಿ:

ಬಿಜೆಪಿ ಕಂಡ ಕಂಡಲ್ಲಿ ಆಪರೇಷನ್​ ಕಮಲ ಮಾಡಿ ಸರ್ಕಾರ ರಚನೆ ಮಾಡುತ್ತಿದೆ. ಇದೇ ರೀತಿ ಮಹಾರಾಷ್ಟ್ರದಲ್ಲೂ ಮಾಡಲು ಹೋಗಿ ಇದ್ದ ಮಾನವನ್ನೂ ಕಳೆದುಕೊಂಡಿದೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಅಣ್ಣನ ಮಗ ಅಜಿತ್​ ಪವಾರ್​ ಜೊತೆ ಕೈ ಜೋಡಿಸುವ ಮೂಲಕ ಸರ್ಕಾರ ರಚನೆ ಮಾಡಿದ್ದ ದೇವೇಂದ್ರ ಫಡ್ನವೀಸ್​. ಅಷ್ಟೇ ಅಲ್ಲ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅಜಿತ್​ ಪವಾರ್​ಗೆ 9 ಹಗರಣಗಳಲ್ಲಿ ಕ್ಲಿನ್​ ಚಿಟ್​ ಕೂಡ ಸಿಕ್ಕಿತ್ತು. ಈ ವಿಚಾರದಲ್ಲಿ ಬಿಜೆಪಿ ಟೀಕೆ ಎದುರಿಸುತ್ತಿರುವಾಗಲೇ ಸರ್ಕಾರ ಪತನವಾಗಿತ್ತು.

ಮುಂದಿನ ಟಾರ್ಗೆಟ್​ ಕರ್ನಾಟಕ:

ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕಕ್ಕೂ ಬಂದೊದಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಅದಕ್ಕೆ ಕಾರಣ, ಕುದುರೆ ವ್ಯಾಪಾರ ನಡೆಸಿ ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು. ಮುಂದಿನ ತಿಂಗಳು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನ ಗೆದ್ದರೆ ಸರ್ಕಾರ ಉಳಿಯಲಿದೆ. ಇಲ್ಲದಿದ್ದರೆ ಬಿಎಸ್​ವೈ ಕುರ್ಚಿಗೆ ಕಂಟಕ ಗ್ಯಾರಂಟಿ. ಇನ್ನು, ಏಳಕ್ಕಿಂತ ಹೆಚ್ಚು ಸ್ಥಾನ ಗೆದ್ದರೂ ಖಾತೆ ಹಂಚಿಕೆ ವಿಚಾರದಲ್ಲಿ ಮತ್ತೆ ಅಸಮಾಧಾನದ ಹೊಗೆ ಎಳುವುದು ಖಚಿತ ಎನ್ನುತ್ತಿವೆ ಮೂಲಗಳು. ಇದು ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಡ್ಯಾಮೇಜ್​ ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಂಡವರ ಬೆಂಕಿಯಲ್ಲಿ ಮೈ ಬಿಸಿ ಮಾಡಿಕೊಳ್ಳುವ ಖಯಾಲಿಯಿರುವ ಜೆಡಿಎಸ್​ ಪಕ್ಷ, ಬಿಜೆಪಿಗೆ ಶಾಸಕರ ಕೊರತೆಯಾದರೆ ಬಾಹ್ಯ ಬೆಂಬಲ ನೀಡಲು ತಯಾರಾಗಿದೆ. ಅವಕಾಶವಾದಿ ರಾಜಕಾರಣ ಜೆಡಿಎಸ್​ ಪಾಲಿಗೆ ಹೊಸದೇನು ಅಲ್ಲ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಬಿಜೆಪಿ ಅಧಿಕಾರದಲ್ಲಿರುವುದೇ ಬೆರಳೆಣಿಕೆ ರಾಜ್ಯಗಳು:

ಸದ್ಯ ಬಿಜೆಪಿ ಹಿಮಾಚಲ ಪ್ರದೇಶ, ಉತ್ತರಖಂಡ, ಉತ್ತರ ಪ್ರದೇಶ, ಗುಜರಾತ್​ ತ್ರಿಪುರಾದಲ್ಲಿ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿದೆ. ಇನ್ನು, ಜಾರ್ಖಂಡ, ಅಸ್ಸಾಂ, ಹರಿಯಾಣ ಹಾಗೂ ಬಿಹಾರದಲ್ಲಿ ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರ ರಚಿಸಿದೆ. ಕರ್ನಾಟಕ, ಗೋವಾ, ಅರುಣಾಚಲ್​ ಪ್ರದೇಶ ಹಾಗೂ ಮಣಿಪುರದಲ್ಲಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿದೆ.

ನೆಟ್ಟಿಗರ ಛೀಮಾರಿ:

ಅಧಿಕಾರದ ಆಸೆಗೆ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಬಿಜೆಪಿ ಎಲ್ಲ ಕಡೆಗಳಲ್ಲಿ ಸರ್ಕಾರ ರಚನೆ ಮಾಡುತ್ತಿರುವುದಕ್ಕೆ ಮತತದಾರರು ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಇದು ಕಮಲಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡುತ್ತಿದೆ. ಅಷ್ಟೇ ಅಲ್ಲ ಶೀಘ್ರದಲ್ಲೇ ಜಾರ್ಖಂಡ, ಕರ್ನಾಟಕ ಮತ್ತು ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಕೆಲ ರಾಜಕೀಯ ತಜ್ಞರು ಅಭಿಪ್ರಾಯ.ಕಳೆಗುಂದಿದ ಕೇಸರಿ:

ದಿನ ಕಳೆದಂತೆ ಕಮಲಕ್ಕೆ ಡ್ಯಾಮೇಜ್​ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ತನ್ನ ಪ್ರಾಬಲ್ಯ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದೊದಗಬಹುದು. ಕಾಂಗ್ರೆಸ್​ ಮುಕ್ತ ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಹೊರಟಿದ್ದ ಅಮಿತ್​ ಶಾ ಈಗ ಉಂಟಾಗುತ್ತಿರುವ ಡ್ಯಾಮೇಂಜ್​ ಕಂಟ್ರೋಲ್​ ಮಾಡಿಕೊಳ್ಳುವುದು ಹೇಗೆ? ಬಿಜೆಪಿಯ ಪ್ರಾಬಲ್ಯ ಉಳಿಸಲು ಏನು ತಂತ್ರ ರೂಪಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್​ನೇ ಇಲ್ಲದಂತೆ ಮಾಡುತ್ತೇವೆ ಎಂದು ಹೊರಟಿದ್ದ ಪಕ್ಷ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಆರಂಭಿಸಿರುವುದು ನಿಜಕ್ಕೂ ವಿಪರ್ಯಾಸ.

First published: