ಇರಾನ್ ದೇಶದಲ್ಲಿ(Iran Country) ಸರ್ಕಾರಿ ವಿರೋಧಿ, ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕಿಡಿ ಭಾರತದ(India) ಮೇಲೂ ವ್ಯಾಪಕವಾದ ಪರಿಣಾಮ ಬೀರಿದೆ. ಸಾಲು ಸಾಲು ಪ್ರತಿಭಟನೆಗಳಿಂದಾಗಿ(Protests) ಭಾರತ-ಇರಾನ್ ನಡುವಿನ ವ್ಯಾಪಾರ ಗಣನೀಯವಾಗಿ ಕುಸಿತ ಕಂಡಿದೆ.
ಭಾರತದ ಬಾಸ್ಮತಿ ಅಕ್ಕಿ, ಚಹಾ ಆಮದು ನಿಲ್ಲಿಸಿದ ಇರಾನ್
ಭಾರತದಿಂದ ಹಲವಾರು ವಸ್ತುಗಳು ಇರಾನ್ಗೆ ರಫ್ತಾಗುತ್ತಿದ್ದವು. ಅದರಲ್ಲೂ ಭಾರತದ ಚಹಾ ಮತ್ತು ಬಾಸ್ಮತಿ ಅಕ್ಕಿಗೆ ದೊಡ್ಡ ವ್ಯಾಪಾರ ಮಾರುಕಟ್ಟೆಯಾಗಿದ್ದ ಇರಾನ್, ಸದ್ಯ ಹೊಸ ಆರ್ಡರ್ಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸಿದ್ದು, ಭಾರತದಿಂದ ರಫ್ತು ಗಣನೀಯವಾಗಿ ಇಳಿಮುಖವಾಗಿದೆ.
ಭಾರತದಿಂದ ಚಹಾ ಮತ್ತು ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಹೊಸ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಇರಾನ್ ಕಳೆದ ವಾರದಿಂದ ಸಂಪೂರ್ಣವಾಗಿ ನಿಲ್ಲಿಸಿದೆ. ಈ ಹಠಾತ್ ಸ್ಥಗಿತದ ಬಗ್ಗೆ ಇರಾನ್ ಖರೀದಿದಾರರು ಯಾವುದೇ ರೀತಿಯ ಸ್ಪಷ್ಟನೆ ನೀಡುತ್ತಿಲ್ಲ. ಪ್ರತಿಭಟನೆ ತೀವ್ರಗೊಂಡು ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ಇರಾನ್ನ ಖರೀದಿದಾರರು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಆತಂಕಿತರಾಗಿದ್ದಾರೆ. ಹೀಗಾಗಿ ಹೊಸ ಆರ್ಡರ್ಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ವ್ಯಾಪಾರಿ ಮೂಲಗಳು ಹೇಳಿವೆ.
ಇದನ್ನೂ ಓದಿ: Mahaparinirvan Diwas 2022: ಅಂಬೇಡ್ಕರ್ 66ನೇ ಪುಣ್ಯತಿಥಿ: ಸಂವಿಧಾನ ಶಿಲ್ಪಿಯ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳಿವು
ಮುಚ್ಚಿದ ಟೀ ಅಂಗಡಿ, ಹೋಟೆಲ್.. ಚಹಾ ಆಮದಿಗೆ ಬ್ರೇಕ್
ಇರಾನ್ ದೇಶದಲ್ಲಿ ಅಂಗಡಿಗಳು, ಹೋಟೆಲ್ಗಳು ಮತ್ತು ಮಾರುಕಟ್ಟೆಗಳು ದೇಶಾದ್ಯಂತ ಹಿಜಾಬ್ ವಿರೋಧಿ ಚಳುವಳಿಯ ನಡುವೆ ಮುಚ್ಚಲ್ಪಟ್ಟಿದ್ದರಿಂದ ಟೀ ವ್ಯಾಪಾರಿಗಳು ಸಹ ಅಂಗಡಿಗಳನ್ನು ತೆರೆಯುತ್ತಿಲ್ಲ. ಇದೇ ಕಾರಣಕ್ಕೆ ಚಹಾ ರಫ್ತನ್ನು ಖರೀದಿದಾರರು ನಿಲ್ಲಿಸಿರಬಹುದು ಎನ್ನಲಾಗಿದೆ. ನವದೆಹಲಿ ಮತ್ತು ಟೆಹ್ರಾನ್ ರೂಪಾಯಿ ವ್ಯಾಪಾರ ಒಪ್ಪಂದವನ್ನು ರೂಪಿಸುತ್ತಿರುವುದರಿಂದ ಇರಾನಿನ ಆಮದುದಾರರು ಖರೀದಿಯನ್ನು ವಿಳಂಬಗೊಳಿಸಬಹುದು ಎಂದು ವ್ಯಾಪಾರದ ಒಂದಿಷ್ಟು ಮೂಲಗಳು ತಿಳಿಸಿವೆ.
ಭಾರತದ ಚಹಾ ಮತ್ತು ಅಕ್ಕಿಗೆ ಇರಾನ್ ದೊಡ್ಡ ಮಾರುಕಟ್ಟೆ
ಒಂದು ವರ್ಷದಲ್ಲಿ ಇರಾನ್ ಸುಮಾರು 30-35 ಮಿಲಿಯನ್ ಕೆಜಿ ಸಾಂಪ್ರದಾಯಿಕ ಚಹಾ ಮತ್ತು ಸುಮಾರು 1.5 ಮಿಲಿಯನ್ ಕೆಜಿ ಬಾಸ್ಮತಿ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು. ಪ್ರಸ್ತುತ ಆಮದನ್ನು ಏಕಾಏಕಿ ನಿಲ್ಲಿಸಿದ್ದು, ಭಾರತದ ಅಕ್ಕಿ ಮತ್ತು ಚಹಾ ವ್ಯಾಪಾರದ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ.
"ಟೀ ಬೋರ್ಡ್ಗೆ ವಿಷಯ ತಿಳಿಸಿದ್ದೇವೆ"
ಕೆಲ ತಿಂಗಳಿಂದ ಇರಾನ್ಗೆ ರಫ್ತಾಗುತ್ತಿದ್ದ ಚಹಾ ಕುಂಠಿತವಾಗಿತ್ತು, ಆದರೆ ಕಳೆದ ವಾರದಿಂದ ಹೊಸ ಒಪ್ಪಂದಗಳನ್ನು ನೋಂದಾಯಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದು ಇರಾನ್ಗೆ ಪ್ರಮುಖ ಚಹಾ ರಫ್ತುದಾರರಾದ ಬನ್ಸಾಲಿ ಮತ್ತು ಕಂಪನಿಯ ವ್ಯವಸ್ಥಾಪಕ ಪಾಲುದಾರ ಅನೀಶ್ ಬನ್ಸಾಲಿ ಹೇಳಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರವನ್ನು ಇರಾನ್ ಖರೀದಿದಾರರು ನೀಡುತ್ತಿಲ್ಲ. ನಾವೂ ಕೂಡ ಟೀ ಬೋರ್ಡ್ಗೆ ವಿಷಯ ತಿಳಿಸಿದ್ದೇವೆ ಮತ್ತು ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಬನ್ಸಾಲಿ ಹೇಳಿದ್ದಾರೆ.
ಇರಾನ್ನ ಮೇಲೆ ಯುಎಸ್ ಹೇರಿದ ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್ಗೆ ಚಹಾ ಸಾಗಣೆಯು ಹೆಚ್ಚಾಗಲು ವಿಫಲವಾಗಿದೆ ಎಂದು ಪಿಟಿಐ ವರದಿಯೊಂದು ನವೆಂಬರ್ನಲ್ಲಿ ತಿಳಿಸಿದೆ.
ಬಾಸ್ಮತಿ ಅಕ್ಕಿಗೆ ಇರಾನ್ನಲ್ಲಿ ಇಲ್ಲ ಡಿಮ್ಯಾಂಡ್
ಇನ್ನೂ ಚಹಾ ವ್ಯಾಪಾರಿಗಳಂತೆ ಬಾಸ್ಮತಿ ರಫ್ತುದಾರರು ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಚಹಾ ವ್ಯಾಪಾರಿಗಳಷ್ಟು ನಷ್ಟವನ್ನು ಈ ಉದ್ಯಮ ಅನುಭವಿಸುತ್ತಿಲ್ಲ. ಏಕೆಂದರೆ ವಿದೇಶಿ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರಫ್ತು ಹೆಚ್ಚಳವಾಗಿದೆ. ಜೊತೆಗೆ ರಷ್ಯಾ-ಉಕ್ರೇನ್ ಯುದ್ಧದ ನಂತರ ಬಾಸ್ಮತಿ ರಫ್ತುಗಳು ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಮತ್ತು ಸರಕುಗಳ ಬೆಲೆಗಳಲ್ಲಿ ಏರಿಕೆಯಾಗಿರುವುದರಿಂದ ಇರಾನ್ಗೆ ರಫ್ತು ನಿಲ್ಲಿಸಿದ್ದು ಹೆಚ್ಚಿನ ವ್ಯತ್ಯಾಸವನ್ನು ಉಂಟು ಮಾಡಿಲ್ಲ.
ಇದನ್ನೂ ಓದಿ: Poll Of Exit Polls Results: ಗುಜರಾತ್ನಲ್ಲಿ ಬಿಜೆಪಿ, ಹಿಮಾಚಲದಲ್ಲಿ ಪೈಪೋಟಿ, ಆಪ್ ಪಾಲಿಗೆ ದೆಹಲಿ
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ರಫ್ತು ಮಂದಗತಿಯಲ್ಲಿತ್ತು. ಇನ್ನೇನು ಎಲ್ಲವೂ ಸರಿಹೋಗುತ್ತಿದೆ ಎನ್ನುವಷ್ಟರಲ್ಲಿ ಇರಾನ್ ಸಮಸ್ಯೆ ಮತ್ತಷ್ಟು ಬಿಕ್ಕಟ್ಟನ್ನು ಶುರು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ