Mahinda Rajapaksa - ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಜೊತೆ ಒಂದು ಸಂವಾದ

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಕೆಲ ವರ್ಷಗಳ ಹಿಂದೆ ಲಂಕಾದ ಅಧ್ಯಕ್ಷರಾಗಿದ್ದವರು. ಸದ್ಯ ಸಾರ್ಕ್ ಒಕ್ಕೂಟ ರಾಷ್ಟ್ರಗಳ ಮುಖಂಡರ ಪೈಕಿ ಅತ್ಯಂತ ಹಿರಿಕರೆನಿಸಿದ್ದಾರೆ. ಅವರ ಜೊತೆಗಿನ ಒಂದು ಸಂದರ್ಶನ ಇದು.

ಶ್ರೀಲಂಕಾ ಪ್ರಧಾನಿ ಮಹೀಂದ್ರಾ ರಾಜಪಕ್ಷೆ.

ಶ್ರೀಲಂಕಾ ಪ್ರಧಾನಿ ಮಹೀಂದ್ರಾ ರಾಜಪಕ್ಷೆ.

 • News18
 • Last Updated :
 • Share this:
  ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅತ್ಯಂತ ಅನುಭವಿ ಹಾಗೂ ಕುಶಾಗ್ರಮತಿ ರಾಜಕಾರಣಿ. ಬಹಳ ಗಟ್ಟಿ ನಿರ್ಧಾರಗಳಿಗೆ ಹೆಸರಾದವರು. ಲಂಕಾದ ಅಧ್ಯಕ್ಷರಾಗಿ 10 ವರ್ಷ ಕಾಲ ಆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ಲಂಕಾವನ್ನು ಕಿತ್ತುತಿನ್ನುತ್ತಿದ್ದ ಎಲ್​ಟಿಟಿಇ ನೇತೃತ್ವದ ಪ್ರತ್ಯೇಕ ತಮಿಳು ರಾಷ್ಟ್ರದ ಹೋರಾಟವನ್ನ ಹತ್ತಿಕ್ಕಿದ್ದು ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ.

  ಮಹಿಂದಾ ರಾಜಪಕ್ಸ ಸಕ್ರಿಯ ರಾಜಕಾರಣಕ್ಕೆ ಬಂದು ಇವತ್ತಿಗೆ 50 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಅವರ ಈವರೆಗಿನ ಅನುಭವ, ಅನಿಸಿಕೆ ಇತ್ಯಾದಿಗಳನ್ನು ಸಿಎನ್​ಎನ್-ನ್ಯೂಸ್18 ಹಿರಿಯ ಸಂಪಾದಕ ಡಿಪಿ ಸತೀಶ್ ಜೊತೆ ಮುಕ್ತವಾಗಿ ಹಂಚಿಕೊಂಡಿದ್ಧಾರೆ. ಅವರ ಸಂವಾದದ ಮುಖ್ಯಾಂಶಗಳು ಇಲ್ಲಿವೆ:

  1) ಸಾರ್ವಜನಿಕ ಜೀವನದಲ್ಲಿ ಮತ್ತು ಸಕ್ರಿಯ ರಾಜಕಾರಣದಲ್ಲಿ ನೀವು 50 ವರ್ಷ ಪೂರ್ಣಗೊಳಿಸಿದ್ದೀರಿ. ನಿಮಗೆ ಧನ್ಯವಾದಗಳು ಸರ್. SAARC ರಾಷ್ಟ್ರಗಳ ನಾಯಕರ ಪೈಕಿ ಪ್ರಸಕ್ತ ನೀವೇ ಹೆಚ್ಚು ಹಿರಿಯರು. ನಿಮ್ಮ 50 ವರ್ಷದ ಸಾರ್ವಜನಿಕ ಜೀವನಯಾನದ ಬಗ್ಗೆ ಏನು ಹೇಳಲು ಇಚ್ಛಿಸುತ್ತೀರಿ?
  ರಾಜಪಕ್ಸ: ಈ 50 ವರ್ಷ ಬಹಳ ಘಟನಾಯುತವಾಗಿತ್ತು. ಇಷ್ಟೂ ಅವಧಿಯಲ್ಲಿ ಕೆಲ ಕಾಲಘಟ್ಟಗಳಲ್ಲಿ ಮಾತ್ರ ನಮಗೆ ಶಾಂತಿ ವಾತಾವರಣ ಇತ್ತು. 1970ರ ಮೇನಲ್ಲಿ ನಾನು ಸಂಸತ್ ಪ್ರವೇಶ ಮಾಡಿದ್ದು. ಅದಾಗಿ ಒಂದು ವರ್ಷ ಆಗುವ ಮುನ್ನವೇ ಜನತಾ ವಿಮುಖಿ ಪೇರುಮುನದ ಮೊದಲ ಪ್ರಹಾರ ನಡೆಯಿತು. 2005ರ ನವೆಂಬರ್​ನಲ್ಲಿ ನಾನು ಅಧ್ಯಕ್ಷನಾದಾಗ ಎದುರಾದ ಅತಿದೊಡ್ಡ ಸವಾಲು ಎಲ್​​ಟಿಟಿಇಯದ್ದಾಗಿತ್ತು. ನಾವು ಬಹಳಷ್ಟು ಸವಾಲು ಎದುರಿಸಿದರೂ ಒಗ್ಗಟ್ಟಿನ ಬಲದಿಂದ ಗೆಲುವು ಪಡೆದಿದ್ದೇವೆ. ನನ್ನ ಈ 50 ವರ್ಷವನ್ನು ಅವಲೋಕಿಸಿದಾಗ ಇಷ್ಟು ವರ್ಷ ಜನಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞನಾಗಿದ್ದೇನೆ.

  2) 2005ರಿಂದ 2015ರವರೆಗೆ ನೀವು ಲಂಕಾ ಅಧ್ಯಕ್ಷರಾಗಿ ಎಲ್​ಟಿಟಿಇಯನ್ನು ಕಟ್ಟಿಹಾಕಿ ಶಾಂತಿಸ್ಥಾಪನೆ ಮಾಡಿದಿರಿ. ಈ 50 ವರ್ಷದಲ್ಲಿ ಅದು ನಿಮ್ಮ ಪಾಲಿಗೆ ಅತ್ಯಂತ ಕ್ಲಿಷ್ಟಕರ ಕಾರ್ಯವೆಂದು ಪರಿಗಣಿಸುತ್ತೀರಾ?
  ರಾಜಪಕ್ಸ: ಯಾವುದೇ ನಾಯಕನಿಗಾದರೂ ಅದು ಕಠಿಣ ಕಾರ್ಯವೇ. ಸೇನೆ, ನೌಕಾಪಡೆ, ವಾಯುಪಡೆ ಮತ್ತು ಪೊಲೀಸ್ ಪಡೆಗಳಲ್ಲಿ ಅತ್ಯುತ್ತಮ ನಾಯಕತ್ವ ಇತ್ತು. ಜೊತೆಗೆ ಗುಪ್ತಚರ ಶಕ್ತಿಯೂ ಬಲವಾಗಿತ್ತು. ಒಬ್ಬ ಅಧ್ಯಕ್ಷನಿಗೆ ಇಂಥ ಬಲ ಸಿಗುವುದು ಸೌಭಾಗ್ಯವೇ. ಭದ್ರತಾ ಪಡೆಗಳನ್ನು ನಿರ್ವಹಿಸುವುದು ಬಹಳ ಗುರುತರವಾದ ಕೆಲಸವಾಗಿತ್ತು. ಈ ಕಾರ್ಯಕ್ಕೆ ನನ್ನ ಕಿರಿಯ ಸಹೋದರನೇ ಸೂಕ್ತ ಎಂದು ನನಗೆ ತೋರಿತ್ತು. 2005ರಲ್ಲಿ ನಾನು ಅಧ್ಯಕ್ಷ ಪದವಿಗೇರಿದಾಗ ಮಾಡಿದ ಮೊದಲ ನೇಮಕಾತಿ ಎಂದರೆ ಗೋಟಾಬಾಯನನ್ನು ರಕ್ಷಣಾ ಕಾರ್ಯದರ್ಶಿಯನ್ನಾಗಿ ಮಾಡಿದ್ದು. ಆ ಯುದ್ಧದಲ್ಲಿ ಭಾಗಿಯಾದ ನಮ್ಮೆಲ್ಲರಿಗೂ ಅದು ಅವಿಸ್ಮರಣೀಯ ಸಾಧನೆಗಳಲ್ಲಿ ಒಂದಾಗಿ ಉಳಿಯುತ್ತದೆ. ಆ ದಿಗ್ವಿಜಯ ಸಾಧಿಸಲು ಅಗತ್ಯ ಇದ್ದ ರಾಜಕೀಯ ನಾಯಕತ್ವ ಮತ್ತು ರಕ್ಷಣೆ ಕೊಡುವ ಭಾಗ್ಯ ನನ್ನದಾಗಿತ್ತು. ಎಲ್​ಟಿಟಿಇ ಸಣ್ಣಪುಟ್ಟ ಸಂಘಟನೆಯಾಗಿರಲಿಲ್ಲ. ಎಫ್​ಬಿಐನಿಂದ ಬಹಳ ಮಹತ್ವ ಕೊಡಲಾಗಿದ್ದ ಒಂದು ಭಯೋತ್ಪಾದಕ ಸಂಘಟನೆಯಾಗಿತ್ತು.

  3) ನೀವು 2015ರಿಂದ 2019ರವರೆಗೆ ಐದು ವರ್ಷ ಕಾಲ ಅಧಿಕಾರದಿಂದ ಹೊರಗಿದ್ದಿರಿ. ಆ ಕಾಲದ ಬಗ್ಗೆ ತಿಳಿಸಿರಿ.
  ರಾಜಪಕ್ಸ: ಚುನಾವಣಾ ಫಲಿತಾಂಶ ಪ್ರಕಟವಾದಾಗ ನನ್ನ ವ್ಯವಹಾರಗಳನ್ನೆಲ್ಲಾ ಬಹಳ ಬೇಗ ಒಂದು ತಹಬದಿಗೆ ತಂದೆ. ವೀರಾಕೇತಿಯಾದಲ್ಲಿರುವ ನಮ್ಮ ಮನೆಗೆ ಹೋಗಿ ವಿಶ್ರಾಂತ ಕಾಲವನ್ನು ಅನುಭವಿಸಿದೆ. ಜನರು ನಾವು ಮತ್ತೆ ನಾಯಕತ್ವ ವಹಿಸಿಕೊಳ್ಳಬೇಕೆಂದು ಕೇಳಿದರು. ಲಂಕಾ ಸರ್ಕಾರವು ನನ್ನ ಅಧಿಕಾರಾವಧಿಯಲ್ಲಿ ಮುಂಚೂಣಿಯಲ್ಲಿದ್ದ ಗುಪ್ತಚರ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ನಾನು ಗಮನಿಸಿದೆ. ಆಗ ನನ್ನ ಜವಾಬ್ದಾರಿ ಇನ್ನೂ ಮುಗಿದಿಲ್ಲ ಎನಿಸಿತು. ಈ ದೇಶದ ಮುಂದಾಳುವಾಗಿ ನಾನು ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಕೆಲಸ ನನ್ನ ಮುಂದಿತ್ತು. ಅಂದಿನ ಸರ್ಕಾರಕ್ಕೆ ಜವಾಬ್ದಾರಿಗಳ ಬಗ್ಗೆ ತಿಳಿಹೇಳಿದೆ.

  4) 1985ರಲ್ಲಿ SAARC ಪ್ರಾರಂಭವಾದಾಗಿನಿಂದಲೂ ನೀವು ನೋಡುತ್ತಾ ಬಂದಿದ್ದೀರಿ. ಈಗಲೂ ಅದು ಅಗತ್ಯ ಎನಿಸುತ್ತಾ?
  ರಾಜಪಕ್ಸ: ಪ್ರಾದೇಶಿಕ ಸಹಕಾರ ಬಹಳ ಮುಖ್ಯ. ಅದು ನಮ್ಮನ್ನು ಬಲಗೊಳಿಸುತ್ತದೆ. SAARC ಒಕ್ಕೂಟದ ಸದಸ್ಯ ದೇಶಗಳ ಮಧ್ಯೆ ಸಮಸ್ಯೆಗಳು ಏರ್ಪಟ್ಟಿರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿರಬಹುದು. ಸಮಸ್ಯೆಗಳು ಇದ್ಧೇ ಇರುತ್ತವೆ. ಆದರೆ, ನಾವು ಪರಸ್ಪರ ಸಂವಹನಕ್ಕೆ ಅವಕಾಶ ತೆರೆದಿಟ್ಟಿರಬೇಕು. ಪ್ರಾದೇಶಿಕವಾಗಿ ಸಹಕಾರ ಇರಬೇಕು.

  5) ನಿಮ್ಮ ಅಧಿಕಾರಾವಧಿಯಲ್ಲಿ ಶ್ರೀಲಂಕಾ ವಿಶ್ವದ ಪ್ರಮುಖ ಪ್ರವಾಸ ತಾಣವಾಗಿತ್ತು. ಕೊರೋನಾ ಬಿಕ್ಕಟ್ಟು ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟಿದೆ. ಈ ಸಮಸ್ಯೆ ಹೇಗೆ ಸರಿಪಡಿಸುತ್ತೀರಿ?
  ರಾಜಪಕ್ಸ: ಪ್ರವಾಸೋದ್ಯಮ ವಿಶ್ವಾದ್ಯಂತ ಹಿನ್ನಡೆ ಹೊಂದಿದೆ. ಕಳೆದ ವರ್ಷ ನಮ್ಮಲ್ಲಿ ಸಂಭವಿಸಿದ ಈಸ್ಟರ್ ದುರಂತ ಈಗಲೂ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಬಿಕ್ಕಟ್ಟು ನಮಗೆ ಕಹಿ ಹೆಚ್ಚಿಸಿದೆ. ಪ್ರವಾಸೋದ್ಯಮ ನಂಬಿಕೊಂಡಿರುವವರಿಗೆ ಈ ಕಷ್ಟ ಕಳೆಯುವವರೆಗೂ ಜೀವನ ನಡೆಸಲು ತಾತ್ಕಾಲಿಕ ಕ್ರಮವಾಗಿ ಮಾರ್ಗೋಪಾಯ ಹುಡುಕುತ್ತಿದ್ದೇವೆ. ಸ್ಥಳೀಯ ಪ್ರವಾಸೋದ್ಯವು ಹೋಟೆಲ್ ಉದ್ಯಮಕ್ಕೆ ಆಸರೆಯಾಗಬಹುದು ಎಂಬ ಸಲಹೆಗಳಿವೆ. ಆ ವಿಚಾರವನ್ನು ನಾವು ಅವಲೋಕಿಸುತ್ತಿದ್ದೇವೆ.

  6) ನಿಮ್ಮ ಕಿರಿಯ ಸಹೋದರ ಗೋಟಾಬಾಯ ಲಂಕಾ ಅಧ್ಯಕ್ಷರಾಗಿದ್ಧಾರೆ. ನೀವು ಪ್ರಧಾನ ಮಂತ್ರಿಯಾಗಿದ್ದೀರಿ. ಭವಿಷ್ಯದಲ್ಲಿ ಸ್ಥಾನಪಲ್ಲಟವಾಗಬಹುದು ಎಂಬ ವದಂತಿಗಳಿವೆ. ನೀವು ಮತ್ತೆ ಅಧ್ಯಕ್ಷರಾಗುತ್ತೀರಾ?
  ರಾಜಪಕ್ಸ: ಏನೇ ಸಂವಿಧಾನಿಕ ಬದಲಾವಣೆಯಾಗಬೇಕಿದ್ದರೂ ಹೊಸ ಸಂಸತ್​ನ ಸಭೆಯಲ್ಲಿ ಚರ್ಚೆಯಾಗಬೇಕಾಗುತ್ತದೆ. ಸಂವಿಧಾನವನ್ನು ಈಗಿನ ಸ್ವರೂಪದಲ್ಲಿ ಮತ್ತು 19ನೇ ತಿದ್ದುಪಡಿಯನ್ನು ಯಾರೂ ಒಮ್ಮತದಿಂದ ಒಪ್ಪಿಕೊಳ್ಳುವುದಿಲ್ಲ ಎಂಬುದು ನನ್ನ ಭಾವನೆ.

  7) ಕಳೆದ 50 ವರ್ಷದಲ್ಲಿ ಭಾರತದ ಜೊತೆಗಿನ ಸಂಬಂಧದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರ ಏನು?
  ರಾಜಪಕ್ಸ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಏಳು ಬೀಳುಗಳಿವೆ. ಸಂಬಂಧ ಹದಗೆಟ್ಟಾಗೆಲ್ಲ ಎರಡೂ ದೇಶಗಳಿಗೆ ತೊಂದರೆಗಳಾಗಿವೆ. ಎಂಬತ್ತರ ದಶಕದಲ್ಲಿನ ಸಂದರ್ಭ ಮತ್ತು 2014ರಲ್ಲಿನ ಬೆಳವಣಿಗೆ ಇದಕ್ಕೆ ನಿದರ್ಶನ. 1948ರಿಂದ 1980ರವರೆಗೆ ಒಳ್ಳೆಯ ಸಂಬಂಧ ಇತ್ತು. ಈಗ ಮತ್ತೆ ಆ ಒಳ್ಳೆಯ ಕಾಲ ಈಗ ಅಸ್ತಿತ್ವದಲ್ಲಿದೆ ಎನಿಸುತ್ತದೆ. ಈ ಎರಡು ದೇಶಗಳಲ್ಲಿ ಯಾವುದೇ ಸರ್ಕಾರ ಬಂದರೂ ಈ ಸಂಬಂಧ ಹೀಗೇ ಮುಂದುವರಿಯಬೇಕು.

  8) ಸರ್, ನೀವು ಹಿಂದಿರುಗಿ ನೋಡಿದಾಗ ಯಾರೆಲ್ಲ ನೆನಪಿಗೆ ಬರುತ್ತಾರೆ? ನಿಮಗೆ ಮಾರ್ಗದರ್ಶನ ಮಾಡಿದವರು ಮತ್ತು ನಿಮಗೆ ಸವಾಲಾದವರು ಯಾರು?
  ರಾಜಪಕ್ಸ: ನಾನು ಮೊದಲಿಂದಲೂ ಹೇಳುತ್ತಲೇ ಬಂದಿರುವಂತೆ ರಾಜಕಾರಣಕ್ಕೆ ಪ್ರವೇಶ ಮಾಡಲು ಉತ್ತೇಜಿಸಿದವರು ನನ್ನ ತಾಯಿ. ನನ್ನ ಜೀವನಕ್ಕೆ ಹೊಸ ಆಯಾಮ ಕೊಟ್ಟಿದ್ದಕ್ಕೆ ನಾನು ಋಣಿ.

  9) ತಮಿಳು ಸಮಸ್ಯೆ ಈಗ ಬಗೆಹರಿದಿದೆ ಎನಿಸುತ್ತಾ?
  ರಾಜಪಕ್ಸ: ಈ ಪ್ರಶ್ನೆಗೆ ಉತ್ತರ ಹೇಳುವ ಮುನ್ನ ಒಂದು ವಿಚಾರ ಸ್ಪಷ್ಟಪಡಿಸುತ್ಥೇನೆ. ಶ್ರೀಲಂಕಾದಲ್ಲಿ ತಮಿಳು ಜನರು ಹೊಂದಿರುವ ಸಮಸ್ಯೆಗೂ ತಮಿಳು ರಾಜಕಾರಣಿಗಳು ಹೊಂದಿರುವ ಸಮಸ್ಯೆಗಳಿಗೂ ವ್ಯತ್ಯಾಸ ಇದೆ. ಹಿಂದೆಲ್ಲಾ ಅವಕಾಶವಂಚಿತರಾಗಿದ್ದ ಆ ಜನರಿಗೆ ಈಗ ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳಿಂದ ಪುನಶ್ಚೇತನಕ್ಕೆ ನೀಡಿ ಜನಸೇವೆ ಮಾಡುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಆದರೆ, ರಾಜಕಾರಣಿಗಳಿಂದಾಗಿ ಇದು ಮುಳ್ಳಿನ ಹಾದಿಯಾಗಿದೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪಿಸುವ ಅಥವಾ ಸ್ವಯಂ ಆಡಳಿತದ ಕಲ್ಪನೆಯಲ್ಲಿ ಈ ದೇಶದ ತಮಿಳು ರಾಜಕಾರಣ ರೂಪುಗೊಂಡಿದೆ. ಇದು ವಾಸ್ತವಿಕವಾಗಿ ಸರಿಯಾದುದಲ್ಲ. ಬಹುತೇಕ ತಮಿಳರು ಉತ್ತರ ಮತ್ತು ಪೂರ್ವಭಾಗದಲ್ಲಿ ವಾಸಿಸುತ್ತಿಲ್ಲ. ಪೂರ್ವ ಲಂಕಾದಲ್ಲಿ ತಮಿಳರು ಅಲ್ಪಸಂಖ್ಯಾತರೇ ಆಗಿದ್ಧಾರೆ. ಕೊಲಂಬೋ ನಗರದಲ್ಲಿರುವ ಹೆಚ್ಚಿನ ಜನಸಂಖ್ಯೆ ತಮಿಳು ಮತ್ತು ಮುಸ್ಲಿಮರದ್ದೇ. ಪ್ರತ್ಯೇಕ ತಮಿಳು ರಾಷ್ಟ್ರಕ್ಕೆ ಇಲ್ಲಿ ಆಸ್ಪದವೇ ಇಲ್ಲದಂತೆ ಶ್ರೀಲಂಕಾದದಲ್ಲಿ ಜನಸಂಖ್ಯೆ ಸಮ್ಮಿಳಿತಗೊಂಡಿದೆ. ತಮಿಳು ರಾಜಕಾರಣಿಗಳು ಈ ವಾಸ್ತವ ಸಂಗತಿಯನ್ನು ಅರಿತುಕೊಳ್ಳಬೇಕಿದೆ.

  10) ಶ್ರೀಲಂಕಾದಲ್ಲಿ ಇಸ್ಲಾಮೀ ಭಯೋತ್ಪಾದನೆ ಉಗ್ರವಾಗಿ ತಲೆ ಎತ್ತುತ್ತಿದೆ. ಐಸಿಸ್ ಕೂಡ ಕಾಲಿಟ್ಟಿದೆ. ಇದು ಭಯಾನಕ ಎನಿಲ್ಲವಾ?
  ರಾಜಪಕ್ಸ: ಖಂಡಿತವಾಗಿ ಇದು ಗಂಭೀರ ವಿಚಾರ. ಹಿಂದಿನ ಸರ್ಕಾರಕ್ಕೆ ಇದನ್ನು ನಿಭಾಯಿಸಲು ಆಗಲಿಲ್ಲ. ಕಳೆದ ವರ್ಷ ಸಂಭವಿಸಿದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಆ ಸರ್ಕಾರವೇನಾದರೂ ಮುಂದುವರಿದಿದ್ದರೆ ಭಾರತ ಹಾಗೂ ಬಂಗಾಳ ಕೊಲ್ಲಿಯ ನೆರೆ ರಾಷ್ಟ್ರಗಳಿಗೂ ಅಪಾಯಕರ ಪರಿಸ್ಥಿತಿ ಎದುರಾಗುತ್ತಿತ್ತು. ಈಸ್ಟರ್ ಹಬ್ಬದಂದು ಲಂಕಾದಲ್ಲಿ ನಡೆದ ಬಾಂಬ್ ದಾಳಿ ಬಹಳ ಘೋರವಾದುದು. ವಾಸಸ್ಥಳದಲ್ಲಿ ಐಸಿಸ್ ಇಷ್ಟು ದೊಡ್ಡ ಮಟ್ಟದ ದಾಳಿ ಮಾಡಿದ್ದು ಅದೇ ಮೊದಲು ಅನಿಸುತ್ತದೆ. ಆತ್ಮಾಹುತಿ ದಾಳಿಕೋರರೆಲ್ಲರೂ ಲಂಕಾದ ಸುಶಿಕ್ಷಿತ ಮತ್ತು ಸಿರಿವಂತರೇ ಆಗಿದ್ದರು. ದಾಳಿ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ದುರ್ಘಟನೆ ತಪ್ಪಿಸಲು ಅಂದಿನ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.

  ಈಗ ಪ್ರಸಕ್ತ ಸಂದರ್ಭದಲ್ಲಿ ನಾವು ಈ ಭಯೋತ್ಪಾದನೆಯನ್ನ ನಿಯಂತ್ರಣಕ್ಕೆ ತಂದಿದ್ದೇವೆ. ನಮ್ಮ ಗುಪ್ತಚರ ಜಾಲವನ್ನು ಬಲಗೊಳಿಸಿದ್ದೇವೆ. ವಿಶ್ವಾದ್ಯಂತ ಗುಪ್ತಚರ ಜಾಲಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು ಪರಸ್ಪರ ಸಹಕಾರದಿಂದ ಕೆಲಸ ಮಾಡುವುದು ಎಷ್ಟು ಮಹತ್ವ ಎಂಬುದು ನಮಗೆ ಗೊತ್ತಿದೆ. ಉಗ್ರವಾದಕ್ಕೆ ನಾನು ಅವಕಾಶ ಕೊಡುವುದಿಲ್ಲ.

  11) ಚೀನಾ ಮತ್ತು ಲಂಕಾ ನಡುವಿನ ಸಂಬಂಧದ ಬಗ್ಗೆ ತಿಳಿಸಿ. ಕೊರೋನಾ ನಂತರದ ಪರಿಸ್ಥಿತಿಯಲ್ಲಿ ಈ ಸಮೀಕರಣ ಏನಾದರೂ ಬದಲಾಗುತ್ತಾ?
  ರಾಜಪಕ್ಸ: ಎಲ್ಲಾ ರಾಷ್ಟ್ರಗಳೊಂದಿಗೆ ಶ್ರೀಲಂಕಾ ಆಲಿಪ್ತ ನೀತಿ ಅನುಸರಿಸುತ್ತದೆ. ಲಂಕಾಗೆ ಭಾರತ ಮತ್ತು ಚೀನಾ ಎರಡೂ ಸ್ನೇಹರಾಷ್ಟ್ರಗಳೇ. ಜವಾಹರಲಾಲ್ ನೆಹರೂ ಮತ್ತು ಚೀನಾದ ಝೌ ಎನ್​ಲಾಯ್ ಅವರು ಪರಸ್ಪರ ಗೌರವ ನಿಡುವ ಪಂಚಶೀಲ ತತ್ವ ರೂಪಿಸಿದರು. ಪರಸ್ಪರ ಭೂಭಾಗದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಗೌರವ ನೀಡುವುದು; ಆಕ್ರಮಣಶೀಲತೆ ಇಲ್ಲದಿರುವುದ; ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡದಿರುವುದು; ಸಮಾನತೆ ಮತ್ತು ಶಾಂತಿಯುತ ಬಾಳ್ವೆ, ಈ ಪಂಚಶೀಲ ತತ್ವಗಳನ್ನ ನಾವೂ ಅವಳಡಿಕೊಂಡಿದ್ದು ಮುಂದಿನ ವರ್ಷಗಳಲ್ಲೂ ಅದನ್ನೇ ಪಾಲಿಸಿಕೊಂಡು ಹೋಗುತ್ತೇವೆ.

  12) ಕಳೆದ 50 ವರ್ಷದಲ್ಲಿ ನಿಮಗೆ ಬಹಳ ಖುಷಿ ಕೊಡುವ ಜೀವನದ ಅತ್ಯುತ್ತಮ ಕ್ಷಣಗಳು ಯಾವುವು? ಬಹಳ ಮರೆಯಬೇಕೆಂದೆನಿಸುವ ಕರಾಳ ಕ್ಷಣಗಳು ಯಾವುವು?
  ರಾಜಪಕ್ಸ: 30 ವರ್ಷದಿಂದ ಇದ್ದ, ಯಾವತ್ತೂ ಮುಗಿಯದು ಎಂದು ಭಾವಿಸಲಾಗಿದ್ದ ಯುದ್ಧ ಅಂತ್ಯಗೊಂಡ ಕ್ಷಣ ನನ್ನ ಪಾಲಿಗೆ ಅವಿಸ್ಮರಣೀಯ. ಭಯೋತ್ಪಾದನೆಗೆ ನಮ್ಮ ದೇಶದ ಜನರು ಮತ್ತೆ ಬಲಿಯಾಗುವುದಿಲ್ಲ; ಯುದ್ಧದಲ್ಲಿ ಮತ್ತೆಂದೂ ರಕ್ತದೋಕುಳಿಯಾಗುದಿಲ್ಲ; ಅದರ ಬದಲು ಶಾಂತಿ, ಸಹಭಾಳ್ವೆ ಮತ್ತು ಪ್ರಗತಿಯ ಆಶಾಕರಣ ಇದೆ ಎನಿಸಿತು. ಅದಕ್ಕಿಂತ ಇನ್ನೇನು ಬೇಕಿತ್ತು?

  ನನ್ನನ್ನು ಮತ್ತು ನನ್ನೊಂದಿಗೆ ಗುರುತಿಸಿಕೊಂಡವರನ್ನು 2015ರಿಂದ 2019ರವರೆಗೆ ನಡೆಸಿಕೊಂಡ ರೀತಿ ನನಗೆ ಬಹಳ ನೋವು ಕೊಟ್ಟಿತು.. ಲಂಕಾದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಯಾವುದೇ ರಾಜಕೀಯ ನಾಯಕ ಅಥವಾ ವಿಪಕ್ಷ ಇಷ್ಟು ದೌರ್ಜನ್ಯ ಕಂಡಿದ್ದಿಲ್ಲ ಎನಿಸುತ್ತದೆ.

  ನನ್ನ ಜೊತೆ ಗುರುತಿಸಿಕೊಂಡಿದ್ದ ಸಂಸದರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳಿಗೆ ಕಿರುಕುಳ ಕೊಡಲಾಯಿತು. ಕೆಲವರನ್ನ ಕ್ಷುಲ್ಲಕ ಕಾರಣವೊಡ್ಡಿ ಬಂಧನದಲ್ಲಿರಿಸಲಾಯಿತು. ನನ್ನ ಮಗ ಯೋಶಿತಾ ಒಬ್ಬ ನೌಕಾಪಡೆ ಅಧಿಕಾರಿಯಾಗಿದ್ದು ಆತನಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಆತನನ್ನ ಕಾರಾಗೃಹಕ್ಕೆ ತಳ್ಳಲಾಯಿತು. ನನಗೆ ಬೆಂಬಲ ನೀಡಿದ ಸಂಸದರನ್ನು ಅವರ ಪಕ್ಷದ ಸ್ಥಾನಮಾನದಿಂದ ವಂಚಿತರನ್ನಾಗಿಸಲಾಯಿತು. ಗೋಟಾಬಾಯರನ್ನೂ ಕೂಡ ಗುರಿ ಮಾಡಿ ಕಿರುಕುಳ ಕೊಡಲಾಯಿತು.

  ನಾನು 2005ರಿಂದ 2015ರವರೆಗೆ ಅಧಿಕಾರದಲ್ಲಿದ್ದಾಗ ಪ್ರಜಾತಾಂತ್ರಿಕ ಪ್ರತಿಪಕ್ಷಗಳಿಗೆ ಎಂದಿಗೂ ಕಿರುಕುಳ ಕೊಡಲಿಲ್ಲ. ಅದಕ್ಕೆಲ್ಲಾ ತಲೆಕೆಡಿಸಿಕೊಂಡು ಸಮಯ ಹಾಳು ಮಾಡಿಕೊಳ್ಳುವುದು ಬೇಕಿರಲಿಲ್ಲ. ಯುದ್ಧವನ್ನು ಗೆಲ್ಲಲು, ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು, ದೇಶವನ್ನು ಸ್ವಾವಲಂಬಿಯಾಗಿ ಮಾಡುವುದು, ಕೃಷಿ ವಲಯ ಬಲಗೊಳಿಸುವುದು, ರಸ್ತೆ ನಿರ್ಮಿಸುವುದು ಹಾಗೂ ಪ್ರಬಲ ಭವಿಷ್ಯಕ್ಕೆ ವೇದಿಕೆ ಅಣಿಗೊಳಿಸುವ ಕಾರ್ಯಗಳಿಗೆ ನಾವು ಎಲ್ಲಾ ಗಮನ ಕೊಟ್ಟಿದ್ದೆವು.
  First published: