ನ್ಯೂಸ್-18 ಕನ್ನಡ (ಆಗಸ್ಟ್.05): ಕಷ್ಟ, ನೋವು, ನಲಿವು, ಸಂತಸ ಎಲ್ಲ ಸಮಯದಲ್ಲಿ ನೆರವಾಗುವರೇ ಸ್ನೇಹಿತರು. ಜೀವನದಲ್ಲಿ ಅತಿ ಮುಖ್ಯ ಪಾತ್ರವಹಿಸುವ ಸ್ನೇಹಿತರನ್ನು ನೆನಪಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಹೀಗಾಗಿ ಅಗಸ್ಟ್ ತಿಂಗಳ ಮೊದಲ ಭಾನುವಾರವ ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿವರ್ಷದಂತೆಯೇ ಈ ವರ್ಷವೂ ಸ್ನೇಹಿತರ ದಿನವನ್ನು ಆ.5ರಂದು ಆಚರಿಸಲಾಗುತ್ತಿದೆ. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಗೆಳೆತನದ ಆನಂದವನ್ನು ಅನುಭವಿಸುವ ದಿನ ಇದಾಗಿದೆ. ಗೆಳೆತನದ ಖುಷಿಯನ್ನು ಸವಿಯುವ ಯುವ ಮನಸ್ಸುಗಳಿಗೆ ಸ್ನೇಹಿತರ ದಿನವೆಂದರೆ ಅದೇನೋ ಉತ್ಸಾಹ. ಸ್ನೇಹಿತರ ದಿನಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. 1958ರಲ್ಲಿ ಪೆರುಗ್ವೆ ಮೊದಲ ಸಲ ಸ್ನೇಹಿತರ ದಿನದ ಆಚರಣೆಯನ್ನು ಆರಂಭಿಸಿತು. ಇಂದು ಭಾರತವೂ ಸೇರಿ ವಿಶ್ವದೆಲ್ಲೆಡೆ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೇಹದ ಸಂಕೇತವಾಗಿ ಪರಸ್ಪರರಿಗೆ "ಗೆಳೆತನದ ಪಟ್ಟಿ'ಗಳನ್ನು ಕಟ್ಟಿ ಈ ದಿನವನ್ನು ಆಚರಿಸುವುದು ವಾಡಿಕೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2011 ಏ.27ರಂದು ಜುಲೈ 30ನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿದೆ. ಆದರೆ, ಸ್ನೇಹಿತರ ದಿನದ ಆಚರಣೆ ಒಂದೊಂದು ದೇಶದಲ್ಲಿ ಒಂದೊಂದು ದಿನದಂದು ಆಚರಿಸಿಕೊಂಡು ಬರಲಾಗುತ್ತಿದೆ. ಅರ್ಜಂಟೀನಾ ಮತ್ತು ಬ್ರೆಜಿಲ್ನಲ್ಲಿ ಜು.20ರಂದು ಈ ದಿನವನ್ನು ಆಚರಿಸಲಾಗುತ್ತದೆ. ಹಾಗೆ ಉರುಗ್ವೆಯಲ್ಲಿ ಜು. 30ರಂದು ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸುವ ಸಂಪ್ರದಾಯ ರೂಢಿಯಲ್ಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವೀಟರ್ಗಳು ಕೂಡ ಸ್ನೇಹಿತರ ದಿನದಂದು ಶುಭಾಶಗಳ ವಿನಿಮಯಕ್ಕೆ ವೇದಿಕೆಯನ್ನು ಒದಿಗಿಸಿಕೊಟ್ಟಿವೆ. ಸ್ನೇಹಿತರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗದಿದ್ದರೆ ಅಂತಾರಾರ್ಜಾಲ, ಮೊಬೈಲ್, ವಾಟ್ಸ್ಪ್ ಮೂಲಕವೂ ಸಂದೇಶವನ್ನು ಕಳುಹಿಸುವುದು ಜನಪ್ರಿಯಗೊಂಡಿದೆ.