National Girl Child Day: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ, ಆರದಿರಲಿ ‘ಮನೆ ಬೆಳಗುವ ದೀಪ’

ಹೆಣ್ಣು ಮಕ್ಕಳ ರಕ್ಷಣೆ, ಸುರಕ್ಷತೆಗಾಗಿ ಹಾಗೂ ಲಿಂಗ ತಾರತಮ್ಯ (Gender Discrimination) ಹೋಗಲಾಡಿಸಲು ಪ್ರತಿ ವರ್ಷ ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ (National Child Girl Day) ಆಚರಿಸಲಾಗುತ್ತದೆ.

ರಾಷ್ಟ್ರೀಯ ಹೆಣ್ಣು ಮಗುವಿನ ದಿನ

ರಾಷ್ಟ್ರೀಯ ಹೆಣ್ಣು ಮಗುವಿನ ದಿನ

 • Share this:
  ಭಾರತೀಯ ಸಂಸ್ಕತಿಯಲ್ಲಿ (Indian Culture) ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನವಿದೆ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಅಂದಿದ್ದಾರೆ ಹಿರಿಯರು. “ಬೇಟಿ ಬಚಾವೋ ಬೇಟಿ ಪಡಾವೋ” ಅಂತ ಕರೆ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ (Narendra Modi). ಇಷ್ಟೆಲ್ಲಾ ಇದ್ದರೂ, ನಮ್ಮ ಸಮಾಜ ಆಧುನಿಕತೆಗೆ ಅದೆಷ್ಟೇ ತೆರೆದುಕೊಂಡಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಹೆಣ್ಣು ಮಗುವನ್ನು ಭಾಗ್ಯಲಕ್ಷ್ಮೀ ಎಂದು ಕರೆಯುವ ಅದೇ ಜನ, ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಠಿಣ ಕಾನೂನಿದ್ದರೂ ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಆಗೇ ಇಲ್ಲ. ಹೀಗಾಗಿ ಮನೆಯ ದೀಪ ಅಂತಾನೇ ಕರೆಸಿಕೊಳ್ಳುವ ಹೆಣ್ಣು ಮಕ್ಕಳ ರಕ್ಷಣೆ, ಸುರಕ್ಷತೆಗಾಗಿ ಹಾಗೂ ಲಿಂಗ ತಾರತಮ್ಯ (Gender Discrimination) ಹೋಗಲಾಡಿಸಲು ಪ್ರತಿ ವರ್ಷ ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ (National Child Girl Day) ಆಚರಿಸಲಾಗುತ್ತದೆ.

  2008ರಿಂದ ಆರಂಭವಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

  ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ ತಡೆಯಲು ಈ ಹಿಂದಿನಿಂದಲೂ ಹೋರಾಟಗಳು ನಡೆಯುತ್ತಲೇ ಇದ್ದವು. ಆದರೆ ಈ ಕುರಿತಂತೆ ದೊಡ್ಡ ಮಟ್ಟದ ಜಾಗೃತಿ ಮೂಡಿರಲಿಲ್ಲ. ಹೀಗಾಗಿ 2008ರ ಜನವರಿ 24ರಂದು ಮೊದಲ ಬಾರಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು.

  ಹೆಣ್ಣು ಮಕ್ಕಳ ದಿನಾಚರಣೆಯ ಉದ್ದೇಶಗಳೇನು?

  ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೇತೃತ್ವದಲ್ಲಿ ದೇಶಾದ್ಯಂತ ಆಚರಣೆಗಳು ನಡೆಯುತ್ತಿವೆ. ದೇಶದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ಅರಿವು, ಸ್ತ್ರೀಯರ ಶಿಕ್ಷಣದ ಮಹತ್ವ, ಮಹಿಳೆಯರ ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸುವುದು ದಿನದ ಉದ್ದೇಶವಾಗಿದೆ.

  ಇದನ್ನೂ ಓದಿ:MP Renukacharya: ನಮ್ಗೆ ಸಚಿವರಾಗುವ ಯೋಗ್ಯತೆ ಇಲ್ವಾ? ದಿಲ್ಲಿ ಕದ ತಟ್ಟಲು ರೆಡಿಯಾದ `ಹೊನ್ನಾಳಿ ಹೋರಿ’ ರೇಣುಕಾಚಾರ್ಯ!

  ಇನ್ನು ಈ ದಿನದ ಆಚರಣೆ ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾಗುತ್ತಿದ್ದು, ಮೌಢ್ಯ, ಪೂರ್ವಗ್ರಹಗಳನ್ನು ಬದಿಗೆ ಸರಿಸುತ್ತ ಕಾಲ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಆಚರಣೆಯ ಯಶಸ್ಸು ತೋರಿಸುತ್ತದೆ.

  ಹೆಣ್ಣು ಮಕ್ಕಳ ದಿನಾಚರಣೆಗೆ ಶುಭಕೋರಿದ ಗಣ್ಯರು

  ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ವಿವಿಧ ಗಣ್ಯರು ಶುಭಾಶಯ ಕೋರಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ಚಿತ್ರತಾರೆಯರು ಸೇರಿದಂತೆ ಅನೇಕರು ಹಾರೈಸಿದ್ದಾರೆ.

  ಶುಭಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಶುಭ ಕೋರಿದ್ದಾರೆ. ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಎಲ್ಲರ ಜೀವನದಲ್ಲಿ ಮಹತ್ತರ ಪಾತ್ರ ನಿಭಾಯಿಸುವವರೇ ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳ ಪ್ರತಿಭೆ ಗುರುತಿಸಿ, ಯಾವುದೇ ಲಿಂಗ ತಾರತಮ್ಮ ಮಾಡದೇ ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲೋಣ ಅಂತ ಟ್ವೀಟ್ ಮಾಡಿದ್ದಾರೆ.

  ಇದನ್ನೂ ಓದಿ: Republic Day 2022: ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದೇಶ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ-ಗಲ್ಲಿ ಗಲ್ಲಿಯಲ್ಲೂ ಖಾಕಿ ಹದ್ದಿನಕಣ್ಣು!

  ಇನ್ನು ನಾವೂ ಸಹ ಮನೆಯ ಹೆಣ್ಣು ಮಕ್ಕಳನ್ನು ಗೌರವಿಸೋಣ. ಲಿಂಗ ತಾರತಮ್ಯ ಮಾಡದೇ, ನಮ್ಮಂತೆಯೇ ಸಮಾನರು ಅಂತ ಕಾಣೋಣ. ಅವರ ಸುರಕ್ಷತೆಗೆ ಒತ್ತು ನೀಡಿ, ದೇಶದ ಅಭಿವೃದ್ಧಿಯಲ್ಲಿ ಒಟ್ಟಿಗೆ ಭಾಗಿಯಾಗೋಣ.. ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು.

  ವರದಿ: ಅಣ್ಣಪ್ಪ ಆಚಾರ್ಯ
  Published by:Latha CG
  First published: