ತಿರುವನಂತಪುರಂ: ಕಲ್ಲಿಕೋಟೆಯಿಂದ (Kallikote) ದಮ್ಮಮ್‌ಗೆ ತೆರಳಿದ್ದ ಅಂತಾರಾಷ್ಟ್ರೀಯ ವಿಮಾನವನ್ನು (International Airport) ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಲ್ಯಾಂಡ್ ಮಾಡಿದ ಘಟನೆ ಕೇರಳದ ತಿರುವನಂತಪುರಂನಲ್ಲಿ (Thiruvananthapuram) ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದ (Hydraulic Fail) ಶಂಕೆ ಕಂಡು ಬಂದ ಕಾರಣ ತಿರುವನಂತಪುರಂ ಏರ್‌ಪೋರ್ಟ್ ಕಡೆಗೆ ತಿರುಗಿಸಿ ತುರ್ತು ಕ್ರಮ ಕೈಗೊಳ್ಳಲಾಗಿದೆ.
ಶುಕ್ರವಾರ ಬೆಳಿಗ್ಗೆ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ವೇಳೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಸ್ 385 ವಿಮಾನದ ಹಿಂದಿನ ಭಾಗವು ರನ್‌ವೇಗೆ ಅಪ್ಪಳಿಸಿತ್ತು ಎಂದು ಮೂಲಗಳು ತಿಳಿಸಿದ್ದು, ಹೀಗಾಗಿ ಹೈಡ್ರಾಲಿಕ್ ವೈಫಲ್ಯ ಉಂಟಾದ ಅನುಮಾನ ಇರುವ ಕಾರಣ ವಿಮಾನವನ್ನು ಮಧ್ಯಾಹ್ನ 12.15ರ ಸುಮಾರಿಗೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ ಎಂದು ಏರ್‌ಪೋರ್ಟ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Travel Tips: ವಿಮಾನದಲ್ಲಿ ಪ್ರಯಾಣಿಸ್ತಿದ್ದೀರಾ? ಫ್ಲೈಟ್ ಹತ್ತೋ ಮೊದಲು ಈ ಆಹಾರ ಅವಾಯ್ಡ್ ಮಾಡಿ
ತುರ್ತು ಪರಿಸ್ಥಿತಿ ಘೋಷಿಸಿ ಲ್ಯಾಂಡಿಂಗ್
ಕಲ್ಲಿಕೋಟೆಯಿಂದ ದಮ್ಮಮ್‌ಗೆ ಹೊರಟಿದ್ದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಸಲುವಾಗಿ ಅರಬ್ಬಿ ಸಮುದ್ರದ ಮೇಲೆ ಹಾರಾಟ ನಡೆಸಿ, ಇಂಧನ ಉರಿಸಿದ ನಂತರ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸೂಚನೆಯೊಂದಿಗೆ ಲ್ಯಾಂಡ್ ಮಾಡಲಾಗಿದೆ. ವಿಮಾನವನ್ನು ಲ್ಯಾಂಡ್ ಮಾಡುವ ಮೊದಲು ಯಾವುದೇ ರೀತಿಯಲ್ಲಿ ಅಪಾಯಗಳಿಗೆ ಅವಕಾಶವೇ ಇಲ್ಲದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಿದ್ದರು. ವಿಮಾನ ನಿಲ್ದಾಣ ನಿರ್ವಹಣಾ ಮಂಡಳಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಬಳಿಕ ವಿಮಾನವನ್ನು ಲ್ಯಾಂಡ್ ಮಾಡಲಾಯಿತು.
ಅಂದ ಹಾಗೆ ಈ ವಿಮಾನ ಕಲ್ಲಿಕೋಟೆಯ ಕರಿಪುರ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.44ಕ್ಕೆ ವಿಮಾನ ಹೊರಟಿತ್ತು. ಬೆಳಿಗ್ಗೆ 11 ಗಂಟೆಗೆ ವಿಮಾನವನ್ನು ಲ್ಯಾಂಡ್ ಮಾಡಲು ಮೊದಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ವಿಮಾನದ ಇಂಧನವನ್ನು ಉರಿಸುವ ಮೂಲಕ ಅದರ ತೂಕವನ್ನು ಮತ್ತಷ್ಟು ತಗ್ಗಿಸುವ ಸಲುವಾಗಿ ಬಲು ಹೊತ್ತು ಹಾರಾಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಎರಡು ಗಂಟೆ ಸಮುದ್ರದ ಮೇಲೆ ಹಾರಾಟ
ಹೀಗಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡುವುದಕ್ಕೂ ಮುನ್ನ ಎರಡು ಗಂಟೆಗಳ ಕಾಲ ಸಮುದ್ರದ ಮೇಲೆ ಹಾರಾಟ ನಡೆಸಿ ವಿಮಾನದಲ್ಲಿದ್ದ ಇಂಧನದ ಮಟ್ಟವನ್ನು ಕಡಿಮೆ ಮಾಡಲಾಗಿದೆ. ಕಲ್ಲಿಕೋಟೆಯಿಂದ ಸೌದಿ ಅರೇಬಿಯಾದ ದಮ್ಮಮ್‌ಗೆ ಹೊರಟಿದ್ದ ಈ ವಿಮಾನದಲ್ಲಿ ಸುಮಾರು 168 ಮಂದಿ ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿ ಕೆಳಕ್ಕಿಳಿದಿದ್ದು, ಪ್ರಯಾಣಕರು ನಿಟ್ಟುಸಿರುವ ಬಿಟ್ಟಿದ್ದಾರೆ.
ಇದನ್ನೂ ಓದಿ: Earthquake in Turkey: ಟರ್ಕಿ ನೆರವಿಗೆ ಹೊರಟ ಭಾರತ ವಿಮಾನಕ್ಕೆ ವಾಯಮಾರ್ಗ ನಿರಾಕರಣೆ, ಮಾನವೀಯತೆ ಮರೆತ ಪಾಕ್
ಇತ್ತೀಚೆಗೆ ದೇಶದಲ್ಲಿ ಇಂತಹದೇ ಎರಡು ಪ್ರಕರಣ ನಡೆದಿತ್ತು. ಕಳೆದ (ಭಾನುವಾರ) ಫೆಬ್ರವರಿ 19ರಂದು ದುಬೈನಿಂದ ತಿರುವನಂತಪುರಂಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮುಂದಿನ ಚಕ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಕಾರಣ ಅದನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ವಿಮಾನದಲ್ಲಿದ್ದ ಎಲ್ಲ 156 ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರು. ಬಳಿಕ ಈ ಪ್ರಕರಣದ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿತ್ತು.
ಇನ್ನೊಂದು ಪ್ರಕರಣದಲ್ಲಿ ಅಮೆರಿಕದ ನ್ಯೂವರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಸ್ವೀಡನ್‌ನ ಸ್ಟಾಕ್‌ಹೋಮ್ ಏರ್‌ಪೋರ್ಟ್‌ನಲ್ಲಿ ಬುಧವಾರ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ವಿಮಾನದಲ್ಲಿ ಸುಮಾರು 300 ಮಂದಿ ಪ್ರಯಾಣಿಕರಿದ್ದರು. ಬೋಯಿಂಗ್ 777-300ER ವಿಮಾನದ ಒಂದು ಎಂಜಿನ್‌ನಲ್ಲಿ ಆಯಿಲ್ ಸೋರಿಕೆ ಉಂಟಾಗಿದ್ದರಿಂದ ಅದರ ಮಾರ್ಗವನ್ನು ಬದಲಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ