ತೃಣಮೂಲ ಕಾಂಗ್ರೆಸ್​ನಲ್ಲಿ ಆಂತರಿಕ ಬಿಕ್ಕಟ್ಟು; ಚುನಾವಣೆಗೂ ಮುನ್ನವೇ ಇಕ್ಕಟ್ಟಿಗೆ ಸಿಲುಕಿದ ಮಮತಾ ಬ್ಯಾನರ್ಜಿ

ಶೇಖ್ ಶಹಾಬುದ್ದೀನ್ ನಂದಿಗ್ರಾಮದಲ್ಲಿನ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಬಲ ನಾಯಕ. ಅವರು ತೃಣಮೂಲ ಕಾಂಗ್ರೆಸ್​ನಿಂದ ಹೊರಬಂದು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಿದರೆ ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಆ ಬೆಂಬಲ ಪ್ರಮುಖ ಅಂಶವಾಗಲಿದೆ ಎಂದು ಈಗಾಗಲೇ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

news18-kannada
Updated:October 17, 2020, 9:13 AM IST
ತೃಣಮೂಲ ಕಾಂಗ್ರೆಸ್​ನಲ್ಲಿ ಆಂತರಿಕ ಬಿಕ್ಕಟ್ಟು; ಚುನಾವಣೆಗೂ ಮುನ್ನವೇ ಇಕ್ಕಟ್ಟಿಗೆ ಸಿಲುಕಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
  • Share this:
ಕೋಲ್ಕತ್ತಾ: ಬಹುನಿರೀಕ್ಷಿತ ಪಶ್ಚಿಮ ಬಂಗಾಳ ವಿಧಾನ ಸಭೆಗೆ 2021ರ ವೇಳೆಗೆ ಚುನಾವಣೆ ನಡೆಯಲಿದೆ. ಈ ಭಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ನಿಶ್ಚಯಿಸಿರುವ ಬಿಜೆಪಿ ನಾಯಕರು ಈಗಾಗಲೇ ಬಂಗಾಳದಲ್ಲಿ ರ‍್ಯಾಲಿ, ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ಎಂದು ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಈ ನಡುವೆ ಮತ್ತೊಂದು ಅವಧಿಗೆ ಸರ್ಕಾರವನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಒಟ್ಟಾರೆ ಪಶ್ಚಿಮ ಬಂಗಾಳ ಈ ಭಾರಿ ಬಿಜೆಪಿ ನಾಯಕರು ಮತ್ತು ಮಮತಾ ಬ್ಯಾನರ್ಜಿ ನಡುವಿನ ಜಿದ್ದಾಜಿದ್ದಿ ಕಣವಾಗಿ ಬದಲಾಗಿರುವುದು ಮಾತ್ರ ಸ್ಪಷ್ಟವಾಗಿದೆ. ಆದರೆ, ಈ ನಡುವೆ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮಮತಾ ಬ್ಯಾನರ್ಜಿ ಅವರ ಜಿಂತೆಗೆ ಕಾರಣವಾಗಿದೆ. ಅಲ್ಲದೆ, ನಂದಿಗ್ರಾಮದ ತೃಣಮೂಲ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಚುನಾವಣೆ ಹೊಸ್ತಿಲಲ್ಲಿರುವ ಆಡಳಿತ ಪಕ್ಷದ ದೃತಿಗೆಡಿಸಿದೆ ಎಂದು ಹೇಳಲಾಗುತ್ತಿದೆ. 

ಪೂರ್ವ ಮಿಡ್ನಾಪುರದ ನಂದಿಗ್ರಾಮದ ಶಾಸಕ ಶೇಖ್​ ಶಹಾಬುದ್ದೀನ್ ತೃಣಮೂಲ ಕಾಂಗ್ರೆಸ್​ ಪಕ್ಷದ ಪ್ರಮುಖ ಮತ್ತು ಪ್ರಭಾವಿ ನಾಯಕ. ಆದರೆ, ಆಂಫಾನ್​ ಚಂಡಮಾರುತದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ್ದ ಹಣದಲ್ಲಿ ಶೇಖ್ ಶಹಾಬುದ್ದೀನ್​ ಭ್ರಷ್ಟಾಚಾರ ಎಸಗಿದ್ದಾರೆ. ಈ ಹಣ ಸಂತ್ರಸ್ತರಿಗೆ ತಲುಪಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಇದರ ಬೆನ್ನಿಗೆ ಶಿಸ್ತುಕ್ರಮ ಜರುಗಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಾಸಕ ಶೇಖ್ ಶಹಾಬುದ್ದೀನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರು.

ಆದರೆ, ಪಕ್ಷದಿಂದ ತಮ್ಮನ್ನು ಅಮಾನತು ಮಾಡಿರುವ ನಿರ್ಧಾರವನ್ನು ವಿರೋಧಿಸಿರುವ ಶೇಖ್​ ಶಹಾಬುದ್ದೀನ್ ಶುಕ್ರವಾರ ನಂದಿಗ್ರಾಮದಲ್ಲಿ ತಮ್ಮ ಶಕ್ತಿ ಪ್ರದರ್ಶನ ರ‍್ಯಾಲಿಯನ್ನು ಆಯೋಜಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, "ಪಕ್ಷದ ನಾಯಕತ್ವವು ನಂದಿಗ್ರಾಮ ತೃಣಮೂಲ ಕಾಂಗ್ರೆಸ್​ನಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ತೃಣಮೂಲ ಕಾಂಗ್ರೆಸ್​ ಪಕ್ಷ ನಂದಿಗ್ರಾಮದಲ್ಲಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದೆ" ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, "ಆಂಫಾನ್ ಚಂಡಮಾರುತ ಪೀಡಿತ ಜನರಿಗೆ (ಚಂಡಮಾರುತ) ಮಂಜೂರಾದ ಹಣದಲ್ಲಿ ನಾನು ಭ್ರಷ್ಟಾಚಾರವೆಸಗಿದ್ದೇನೆ ಎಂದು ನನ್ನ ವಿರುದ್ಧ ಆರೋಪಗಳಿವೆ. ಆದರೆ, ನಾನು ಆಯೋಜಿಸಿರುವ ರ‍್ಯಾಲಿಯಲ್ಲಿ ಜನ ಸಾಗರವೇ ಹರಿದುಬಂದಿದೆ. ನಾನು ಭ್ರಷ್ಟನಾಗಿದ್ದರೆ, ಈ ರ‍್ಯಾಲಿಯ ಮೂಲಕ ಸ್ಥಳೀಯ ಜನರು ನನ್ನನ್ನು ಬೆಂಬಲಿಸುತ್ತಿದ್ದರು ಎಂದು ನೀವು ಭಾವಿಸುತ್ತೀರಾ? ನನ್ನ ವಿರುದ್ಧದ ಎಲ್ಲಾ ಆರೋಪಗಳು ಆಧಾರ ರಹಿತ ಮತ್ತು ಕಟ್ಟುಕಥೆ. ಮಮತಾ ಬ್ಯಾನರ್ಜಿಯಿಂದ ನನಗೆ ಇನ್ನೂ ಯಾವುದೇ ಅಮಾನತು ಪತ್ರ ಬಂದಿಲ್ಲ. ನನ್ನ ಬಗೆಗಿನ ಆರೋಪಗಳನ್ನು ಪರಿಹರಿಸಲು ನಾನು ಅವರನ್ನು ವಿನಂತಿಸುತ್ತೇನೆ. ಏಕೆಂದರೆ ಭವಿಷ್ಯದಲ್ಲಿ ನಂದಿಗ್ರಾಮದಲ್ಲಿ ಟಿಎಂಸಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಅಪಾಯವಿದೆ" ಎಂದು ಶೇಖ್ ಶಹಾಬುದ್ದೀನ್​ ತಿಳಿಸಿದ್ದಾರೆ.

ಶೇಖ್ ಶಹಾಬುದ್ದೀನ್ ನಂದಿಗ್ರಾಮದಲ್ಲಿನ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಬಲ ನಾಯಕ. ಅವರು ತೃಣಮೂಲ ಕಾಂಗ್ರೆಸ್​ನಿಂದ ಹೊರಬಂದು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಿದರೆ ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಆ ಬೆಂಬಲ ಪ್ರಮುಖ ಅಂಶವಾಗಲಿದೆ ಎಂದು ಈಗಾಗಲೇ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಪೂರ್ವ ಮಿಡ್ನಾಪೋರ್ ಜಿಲ್ಲೆಯ ಸಣ್ಣ ಕುಗ್ರಾಮವಾದ ನಂದಿಗ್ರಾಮ ಒಂದು ಕಾಲದಲ್ಲಿ 2007 ರಲ್ಲಿ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಭೂ ಚಳುವಳಿಯ ಕೇಂದ್ರಬಿಂದುವಾಗಿತ್ತು ಮತ್ತು ಇಲ್ಲಿಂದಲೇ ಅವರು ಬಂಗಾಳದ ಅಧಿಕಾರಕ್ಕೆ ಏರಿದರು.

ಇದನ್ನೂ ಓದಿ : ಜಿಎಸ್‌ಟಿ ಬಿಕ್ಕಟ್ಟು: ಕೊನೆಗೂ ರಿಸರ್ವ್​ ಬ್ಯಾಂಕ್​ನಿಂದ 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಕೇಂದ್ರ!ಚಂಡಮಾರುತ ಪೀಡಿತರಿಗೆ ಆಂಫಾನ್ ಪರಿಹಾರವನ್ನು ವಿತರಿಸುವಾಗ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪದ ಮೇಲೆ ಶಹಬುದ್ದೀನ್, ಅವರ ಪತ್ನಿ ಮನ್ಸುರಾ ಬೀಬಿ (ಕೆಂಡೇಮರಿ ಗ್ರಾಮದ ಗ್ರಾಮ ಪಂಚಾಯತ್ ಪ್ರಧಾನ್) ಮತ್ತು ಇತರ ಇಬ್ಬರು ಪ್ರಬಲ ನಾಯಕರನ್ನು 2020 ರ ಅಕ್ಟೋಬರ್ 13 ರಂದು ಟಿಎಂಸಿ ಅಧಿಕೃತವಾಗಿ ಅಮಾನತುಗೊಳಿಸಿದ ನಂತರ ನಂದಿಗ್ರಾಮದಲ್ಲಿ ಸಮಸ್ಯೆ ಆರಂಭವಾಗಿದೆ.  ಕೆಲವು ದಿನಗಳ ಹಿಂದೆ ಪಕ್ಷದ ಆದೇಶದ ಹೊರತಾಗಿಯೂ ಈ ನಾಲ್ವರೂ ಕೆಳಗಿಳಿಯಲು ನಿರಾಕರಿಸಿದ ನಂತರ ಟಿಎಂಸಿ ಈ ನಿರ್ಧಾರ ಕೈಗೊಂಡಿತ್ತು.



ಆದರೆ, ಪಕ್ಷದ ನಿರ್ಧಾರವನ್ನು ವಿರೋಧಿಸಿರುವ ಶಾಸಕ ಶೇಖ್ ಶಹಾಬುದ್ದೀನ್ ಇದೀಗ ಸರ್ಕಾರ ಮತ್ತು ಮಾತೃ ಪಕ್ಷದ ವಿರುದ್ಧವೇ ದೊಡ್ಡ ಮಟ್ಟದ ರ‍್ಯಾಲಿಯನ್ನು ಆಯೋಜಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೆ ಪ್ರಸ್ತುತ ಚುನಾವಣೆ ಹೊಸ್ತಿಲಲ್ಲಿರುವ ತೃಣಮೂಲ ಕಾಂಗ್ರೆಸ್​ಗೆ ನಂದಿಗ್ರಾಮದ ಬಿಕ್ಕಟ್ಟು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಇದು ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿಗೆ ಎದುರಾಗಿರುವ ಪರೀಕ್ಷೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಂದಿಗ್ರಾಮ ಬಿಕ್ಕಟ್ಟಿನ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
Published by: MAshok Kumar
First published: October 17, 2020, 9:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading