ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಕಟ್ಟಡಕ್ಕೆ ಶಿಲಾನ್ಯಾಸ ನೇರವೇರಿಸಿದ್ದಾರೆ. ಅತ್ಯಾಧುನಿಕ ವಿನ್ಯಾಸದ ಈ ಕಟ್ಟಡ ಇಂಧನ ದಕ್ಷತೆಯಿಂದ ಕೂಡಿರಲಿದೆ. ಪ್ರಸ್ತತವಿರುವ ಸಂಸತ್ ಭವನದ ಪಕ್ಕದಲ್ಲಿಯೇ ಈ ಹೊಸ ಕಟ್ಟಡ ಕೂಡ ತಲೆಎತ್ತಲಿದೆ. ತ್ರಿಕೋನಾಕೃತಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡ ಹೆಚ್ಚು ಭದ್ರತಾ ಸೌಲಭ್ಯವನ್ನು ಹೊಂದಿರಲಿದೆ. ನೂತನ ಕಟ್ಟಡದಲ್ಲಿ ಲೋಕಸಭೆಯೂ ಈಗಿರುವ ಗಾತ್ರದ ಮೂರು ಪಟ್ಟು ದೊಡ್ಡದಾಗಿರಲಿದೆ. ಅಲ್ಲದೇ ರಾಜ್ಯಸಭೆ ಕೂಡ ಹೆಚ್ಚು ವಿಶಾಲವಾಗಿರಲಿದೆ. ಇನ್ನು ಈ ಹೊಸ ಸಂಸತ್ ಕಟ್ಟಡಕ್ಕೆ ಹಸಿರು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ವಸ್ತುಗಳಿಗೆ ಉತ್ತೇಜಿಸಲಾಗುವುದು. ಅಲ್ಲದೇ ಆರ್ಥಿಕ ಪುನರುಜ್ಜೀವನ ಸೇರಿದಂತೆ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣ ಕಾರ್ಯದ ಹಿನ್ನಲೆ ಪ್ರಸ್ತುತ ಸಂಸತ್ಭವನದ ಮುಂದೆ ಸ್ಥಾಪಿಸಲಾಗಿರುವ ಐದು ಪ್ರತಿಮೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಮುಗಿದ ಬಳಿಕ ಇವುಗಳನ್ನು ಪುನಃ ಪ್ರತಿಷ್ಠಾಪಿಸಲಾಗುವುದು ಎಂದು ಪಿಟಿಐ ವರದಿ ಮಾಡಿದೆ.
ಈ ಹೊಸ ಸಂಸತ್ ಭವನವನ್ನು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುವುದು. 21 ತಿಂಗಳ ಅವಧಿಯೊಳಗೆ ಹೊಸ ಸಂಸತ್ ಕಾರ್ಯ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ ಇದೆ
ಹೊಸ ಸಂಸತ್ ಭವನದಲ್ಲಿ ಪ್ರತಿ ಸಂಸದರಿಗೆ ಪ್ರತ್ಯೇಕ ಕಚೇರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡಲು ಡಿಜಿಟಲ್ ಇಂಟರ್ಪೇಸ್ಗೆ ಒತ್ತು ನೀಡಲಾಗಿದೆ. ಜೊತೆಗೆ ಭಾರತದ ಪ್ರಜಾಪ್ರಭುತ್ವದ ಪ್ರದರ್ಶನಕ್ಕೆ ದೊಡ್ಡದಾದ ಸಂವಿಧಾನ ಕೋಣೆ, ಗ್ರಂಥಾಲಯ, ಸಂಸದರಿಗೆ ವಿಶ್ರಾಂತಿ ಕೋಣೆ, ಬಹು ಸಮಿತಿ ಕೊಠಡಿ, ಡೈನಿಂಗ್ ಸ್ಥಳ ಮತ್ತು ವಿಶಾಲವಾದ ಪಾರ್ಕಿಂಗ್ ಸ್ಥಳ ವ್ಯವಸ್ಥೆ ಮಾಡಲಾಗಿದೆ.
ಇದನ್ನು ಓದಿ: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಸಂಸತ್ ಭವನದ ಎದುರಿರುವ ಗೇಟ್ ನಂ 1ರ ಮುಂದಿರುವ ಮಹಾತ್ಮ ಗಾಂಧಿ ಅವರ 16 ಅಡಿ ಎತ್ತರದ ಪ್ರತಿಮೆಯನ್ನು ತಾತ್ಕಲಿಕವಾಗಿ ಸ್ಥಳಾಂತರಗೊಳಿಸಲಾಗುತ್ತಿದೆ. ಈ ಪ್ರತಿಮೆಯ ಎದುರೇ ಸಂಸದರ ಪ್ರತಿಭಟನೆ, ಸಭೆಗಳು ಹಾಗೂ ಪತ್ರಿಕಾ ಗೋಷ್ಠಿಗಳು ನಡೆಯುತ್ತಿದ್ದವು. ಮಹಾತ್ಮಗಾಂಧಿ ಅವರು ಧ್ಯಾನ ಭಂಗಿಯಲ್ಲಿರುವ ಈ ಪ್ರತಿಮೆಯನ್ನು 1993ರ ಅಕ್ಟೋಬರ್ ಎರಡರಂದು ಅಂದಿನ ರಾಷ್ಟ್ರಾಧ್ಯಕ್ಷರಾದ ಡಾ. ಶಂಕರ್ ದಯಾಳ್ ಶರ್ಮಾ ಅವರು ಅನಾವಣಗೊಳಿಸಿದ್ದರು. ರಾಮ್ ಸುತಾರ್ ಈ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು. ಈ ಪ್ರತಿಮೆಯನ್ನು ನಗರಾಭಿವೃದ್ಧಿ ಸಚಿವಾಲಯ ದಾನ ಮಾಡಿದೆ ಎಂದು ರಾಜ್ಯಸಭಾ ಜಾಲತಾಣದಲ್ಲಿನ ಮಾಹಿತಿ ತಿಳಿಸಿದೆ.
ಹೊಸ ಸಂಸತ್ ನಿರ್ಮಾಣವನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಗುತ್ತಿಗೆ ಪಡೆದಿದೆ. ಸೆಪ್ಟೆಂಬರ್ನಲ್ಲಿ ಕರೆಯಲಾದ ಬಿಡ್ನಲ್ಲಿ ಟಾಟಾ 861.90 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿ, ಬಿಡ್ ಗೆದ್ದಿತ್ತು. ಹೊಸ ಸಂಸತ್ ಭವನ ನಿರ್ಮಾಣವಾದ ಬಳಿಕ ಪ್ರಸ್ತುತ ಸಂಸತ್ ಕಟ್ಟಡವನ್ನು ಬೇರೆ ಉಪಯೋಗಕ್ಕೆ ಬಳಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ