ನವ ದೆಹಲಿ (ಸೆಪ್ಟೆಂಬರ್ 02); ಕೊರೋನಾ ಲಾಕ್ಡೌನ್ ವೇಳೆ ಸತತ ಆರು ತಿಂಗಳ ಕಾಲ ಕೇಂದ್ರ ಸರ್ಕಾರ ಸಾಲಗಳ ಮೇಲಿನ ಇಎಂಐಗಳಿಗೆ ವಿನಾಯಿತಿ ನೀಡಿತ್ತು. ಆದರೆ, ಈ ಮೊತ್ತದ ಮೇಲೆ ಬಡ್ಡಿಯನ್ನೂ ನಿಗದಿಪಡಿಸಿತ್ತು. ಆದರೆ, ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನುಕಟುವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್ ಈ ಕುರಿತ ತೀರ್ಪನ್ನು ಇಂದು ನೀಡಲಿದೆ.
ಕೊರೋನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಹಾಗೂ ಮಾರ್ಚ್ 27 ರಂದು ಹೊರಡಿಸಲಾದ ಆರ್ಬಿಐ ಅಧಿಸೂಚನೆಯ ಕೆಲವು ಭಾಗವನ್ನು ರದ್ದುಗೊಳಿಸಬೇಕು. ಏಕೆಂದರೆ ರಿಸರ್ವ್ ಬ್ಯಾಂಕಿನ ಈ ಅಧಿಸೂಚನೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಜೀವನ ಹಕ್ಕಿನಲ್ಲಿ ಕಷ್ಟಗಳು ಮತ್ತು ಅಡೆತಡೆಗಳು ಸೃಷ್ಟಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಲಾಕ್ಡೌನ್ ಸಮಯದಲ್ಲಿನ ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ಕೋರಿತ್ತು. ಹೀಗಾಗಿ ಕಳೆದ ಬುಧವಾರ ನ್ಯಾಯಾಲಯಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಕೇಂದ್ರ ಸರ್ಕಾರ, “ಈ ಕ್ರಮವು ಬ್ಯಾಂಕುಗಳ ವ್ಯವಹಾರಗಳಿಗೆ ಧಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.
ಕೇಂದ್ರದ ಈ ಅಭಿಪ್ರಾಯಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್, "ಕೇಂದ್ರ ಸರ್ಕಾರ ಕೊರೋನಾ ಕಾರಣದಿಂದಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿದ ಕಾರಣಕ್ಕೆ ಇಂತಹ ಪರಿಸ್ಥಿತಿ ಸಂಭವಿಸಿದೆ. ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ, ಸರ್ಕಾರವಾಗಲಿ ಮರೆಮಾಡಲು ಸಾಧ್ಯವಿಲ್ಲ. ಬ್ಯಾಂಕುಗಳು ಕೇವಲ ವ್ಯವಹಾರಗಳ ಮೇಲೆ ಮಾತ್ರ ಆಸಕ್ತಿ ಹೊಂದುವ ಬದಲು ಜನರ ನೋವುಗಳನ್ನೂ ಆಲಿಸುವುದು ಸೂಕ್ತ" ಎಂದು ತಿಳಿಸಿದೆ.
ಇನ್ನೂ ಸರ್ಕಾರದ ಎದುರು ಕಟು ಪ್ರಶ್ನೆಗಳನ್ನಿಟ್ಟಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್, "ಇದು ಕೇವಲ ವ್ಯವಹಾರ ಬಗ್ಗೆ ಮಾತ್ರ ಪರಿಗಣಿಸುವ ಸಮಯವಲ್ಲ. ಬದಲಾಗಿ ಜನರ ದುಸ್ಥಿತಿಯ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ. ಹೀಗಾಗಿ ಸರ್ಕಾರ ನ್ಯಾಯಾಲಯಕ್ಕೆ ಎರಡು ವಿಚಾರದ ಬಗ್ಗೆ ಸ್ಪಷ್ಟತೆ ನೀಡಬೇಕು. ನೀವು ರಾಷ್ಟ್ರೀಯ ವಿಪತ್ತನ್ನು ನಿರ್ವಹಣೆ ಮಾಡುತ್ತೀರಾ? ಅಥವಾ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಗೆ ಮತ್ತಷ್ಟು ಬಡ್ಡಿಯನ್ನು ಸೇರಿಸುವ ಕುರಿತು ಲೆಕ್ಕ ಹಾಕುತ್ತೀರ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮೊರೊಟೋರಿಯಂ ಅವಧಿಯ ಬಡ್ಡಿಯನ್ನು ಬದಿಗಿಟ್ಟು ಜನರ ನೋವುಗಳನ್ನೂ ಆಲಿಸಿ; ಕೇಂದ್ರದ ವಿರುದ್ಧ ಸುಪ್ರೀಂ ತರಾಟೆ
ಅಲ್ಲದೆ, "ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದ್ದರೂ ಈ ಕುರಿತು ತನ್ನ ನಿಲುವನ್ನು ಸರ್ಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಸೆಪ್ಟೆಂಬರ್ 1ರ ಒಳಗಾಗಿ ಸರ್ಕಾರ ಈ ಕುರಿತು ಕೋರ್ಟ್ಗೆ ಸ್ಪಷ್ಟೀಕರಣ ನೀಡಬೇಕು" ಎಂದು ಕಾಲಾವಕಾಶ ನೀಡಲಾಗಿತ್ತು.
ಅದರಂತೆ ಇಂದು ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮೊರೊಟೋರಿಯಂ ಅವಧಿಯ ಇಎಂಐ ಮೇಲೆ ಸರ್ಕಾರ ಮತ್ತು ಬ್ಯಾಂಕುಗಳು ವಿಧಿಸಿರುವ ಬಡ್ಡಿ ಧರವನ್ನು ಕಡಿತಗೊಳಿಸುತ್ತದೆಯೇ? ಅಥವಾ ಸರ್ಕಾರ ಮಾತಿಗೆ ಕಿವಿಗೊಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ