Rajasthan: ಅನ್ಯಜಾತಿ ಯುವತಿಯನ್ನ ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ

Murder : ತನ್ನ ಮಗ ಯಾಕೆ ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಅಷ್ಟಕ್ಕೂ ಇದೊಂದು ಕೊಲೆ ಅಂತಾನೂ ಯುವಕನ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಬಳಿಕ ದಲಿತ ಯುವಕನಿಗೆ ಯುವಕರ ಗುಂಪೊಂದು ಹಲ್ಲೆ ಮಾಡುವ ವಿಡಿಯೋ ವೈರಲ್​ ಆಯ್ತು. ಈ ವಿಡಿಯೋ ನೋಡಿದ ಬಳಿಕವಷ್ಟೇ ತಮ್ಮ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೋಷಕರಿಗೆ ತಿಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರೀತಿ (Love)ಮಾಡುವುದು ತಪ್ಪೇನಿಲ್ಲ ಅಂತ ಹಿರಿಯರೇ ಹೇಳುತ್ತಾರೆ. ಪೀತಿ ಅಂದರೇನೇ ಹಾಗೇ ಅದಕ್ಕೆ ಆಸ್ತಿ, ಅಂತಸ್ತು, ಜಾತಿ(Caste), ಬಡತನ ಇದು ಯಾವುದು ಅದಕ್ಕೆ ತಿಳಿಯುವುದಿಲ್ಲ. ಎರಡು ಮುಗ್ದ ಮನಸ್ಸು ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳುವುದೇ ಪ್ರೀತಿ. ಇಂತಹ ಪ್ರೀತಿಗೆ ಅದೆಷ್ಟೋ ಬಾರಿ ಮನೆಯವರೇ ವಿಲನ್​ ಆಗಿದ್ದಾರೆ. ಮಕ್ಕಳು ಬೇರೆ ಜಾತಿಯವರನ್ನ ತಿಸುತ್ತಿದ್ದಾರೆ ಅಂತ ತಮ್ಮ ಕೈಯಾರೆ ಮಕ್ಕಳನ್ನ ಕೊಂದ ಘಟನೆಗಳು ಕಣ್ಣು ಮುಂದೆ ಇವೆ. ರಾಜಸ್ಥಾನದಲ್ಲಿ(Rajastan) ಪ್ರೀತಿ ವಿಚಾರಕ್ಕೆ ದಲಿತ ಯುವಕನಿಗೆ ದೊಣ್ಣೆಗಳಿಂದ ಬಡಿದು ಸಾಯಿಸಲಾಗಿದೆ.

    ಅನ್ಯ ಜಾತಿ ಯುವತಿಯನ್ನ ಯುವಕನೊರ್ವ ಪ್ರೀತಿ ಮಾಡುತ್ತಿದ್ದನ ಸಹಿಸಿಕೊಳ್ಳಲಾಗದ ಯುವತಿ ಮನೆಯವರು, ದಲಿತ ಯುವಕನನ್ನ ಹುಡುಕಿ, ಎಳೆದುಕೊಂಡು ಹೋಗಿ ಮನಸೋ ಇಚ್ಛೆ ದೊಣ್ಣೆಯಿಂದ ಬಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ತನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂಬ ವಿಚಾರ ಯುವಕನ ಪೋಷಕರಿಗೆ ಗೊತ್ತೆ ಇರಲಿಲ್ಲ. ಯುವಕನಿಗೆ ಥಳಿಸುವ ವಿಡಿಯೋ ವೈರಲ್​ ಆದ ಬಳಿಕವಷ್ಟೇ ನನ್ನ ಮಗನನ್ನು ಕೊಂದಿದ್ದಾರೆ ಅಂತ ಅವರಿಗೆ ತಿಳಿದಿದೆ.

    ರಾಜಸ್ಥಾನದ ಹನುಮನ್​ಗರ್​ನಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಇದೇ ಊರಿನ ದಲಿತ ಯುವಕನೊಬ್ಬ ಅನ್ಯಜಾತಿ ಯುವತಿಯನ್ನ ಪ್ರೀತಿಸುತ್ತಿದ್ದನಂತೆ. ಇದ್ದಕಿದ್ದ ಹಾಗೆ ಗುರುವಾರ ಸಂಜೆ 4:30ರಿಂದ ಯುವಕ ಗ್ರಾಮದಿಂದ ಕಣ್ಮರೆಯಾಗಿದ್ದ. ಇದಾದ ಕೆಲ ಹೊತ್ತಿನ ಬಳಿಕ ಆತನ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಇದನ್ನ ಕಂಡು ಆಘಾತಕ್ಕೆ ಒಳಗಾಗಿದ್ದರು.

    ಇದನ್ನೂ ಓದಿ: ಮತ್ತೆ ಕಾಶ್ಮೀರದಲ್ಲಿ ಗುಂಡಿನ ಮೊರೆತ: ಉಗ್ರರ ದಾಳಿ, ಇಬ್ಬರು ಪೊಲೀಸರಿಗೆ ಗಾಯ

    ತನ್ನ ಮಗ ಯಾಕೆ ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಅಷ್ಟಕ್ಕೂ ಇದೊಂದು ಕೊಲೆ ಅಂತಾನೂ ಯುವಕನ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಬಳಿಕ ದಲಿತ ಯುವಕನಿಗೆ ಯುವಕರ ಗುಂಪೊಂದು ಹಲ್ಲೆ ಮಾಡುವ ವಿಡಿಯೋ ವೈರಲ್​ ಆಯ್ತು. ಈ ವಿಡಿಯೋ ನೋಡಿದ ಬಳಿಕವಷ್ಟೇ ತಮ್ಮ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೋಷಕರಿಗೆ ತಿಳಿದಿದೆ.

    ಯುವಕನ ಶವವಿಟ್ಟು ಪ್ರತಿಭಟನೆ
    ಯುವಕನ ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ನಾಲ್ವರನ್ನ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನೂ ಎಲರನ್ನು ಕೂಡಲೇ ಬಂಧಿಸುವಂತೆ ಯುವಕನ ಕುಟುಂಬಸ್ಥರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಯುವಕನ ಶವ ತಂದು ಆರೋಪಿಗಳನ್ನ ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸಲ್ಲ ಅಂತ ಪಟ್ಟು ಹಿಡಿದಿದ್ದರು. ಪೋಷಕರು ಆತನ ಮೇಲೆ ಆವಕಂಬಿತರಾಗಿದ್ದರು. ಯುವಕನನ್ನ ಕ್ರೂರವಾಗಿ ಹೊಡೆದು ಸಾಯಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಶವವನ್ನ ಮನೆ ಮುಂದೆ ಎಸೆದು ಹೋಗಿದ್ದಾರೆ. ನಾವು ಆರೋಪಿಗಳನ್ನ ಬಂಧಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

    ಬಳಿಕ ಪೊಲೀಸ್​ ಅಧಿಕಾರಿಗಳು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮನವೊಲಿಸಿದ್ದಾರೆ. ನಂತರ ಗ್ರಾಮಸ್ಥರು ಯುವಕನ ಅಂತ್ಯಕ್ರಿಯೆ ನೇರವೇರಿಸಿದ್ದಾರೆ. ವಯಸ್ಸಾದ ಅಪ್ಪ - ಅಮ್ಮ ಯುವಕನನ್ನೇ ನಂಬಿ ಜೀವನ ನಡೆಸುತ್ತಿದ್ದರು. ಪ್ರೀತಿಯಿಂದ ಸಾಕಿ, ಸಲುಹಿದ ಮಗ ಪ್ರೀತಿಗಾಗಿಯೇ ಕೊಲೆಯಾಗಿ ಹೋಗಿದ್ದಾನೆ. ಅದರಲ್ಲೂ ಜಾತಿ ವಿಚಾರಕ್ಕೆ ಹೀಗೆ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ.

    ಇದನ್ನೂ ಓದಿ: ಲಖೀಂಪುರ್​ ಖೇರಿ ಹತ್ಯಾಕಾಂಡ; ಪ್ರಮುಖ ಆರೋಪಿ, ಸಚಿವರ ಪುತ್ರ ಆಶೀಶ್ ಮಿಶ್ರಾ ಬಂಧನ!

    ಇನ್ನೂ ಕಳೆದ ವಾರ ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ವಿಶೇಷ ಚೇತನ ವ್ಯಕ್ತಿ ಮೇಲೆ ಪೊಲೀಸ್​ ಅಧಿಕಾರಿ ದರ್ಪ ತೋರಿದ್ದ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಆ ವಿಡಿಯೋ ಬೆನ್ನಲ್ಲೇ ಯುವಕನನ್ನ ಹೊಡೆದು ಕೊಲ್ಲುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    (ವರದಿ- ವಾಸುದೇವ್​.ಎಂ)​
    Published by:Sandhya M
    First published: