President Speech - ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಗಳು ಹಾಗೂ ರಾಷ್ಟ್ರಧ್ವಜಕ್ಕೆ ಆದ ಅವಮಾನದ ಘಟನೆ ಬಹಳ ದುರದೃಷ್ಟಕರ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ದುರುಪಯೋಗಿಸಿಕೊಳ್ಳಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂದೇಶ ಸಾರಿದ್ದಾರೆ.

ರಾಮನಾಥ್ ಕೋವಿಂದ್

ರಾಮನಾಥ್ ಕೋವಿಂದ್

 • News18
 • Last Updated :
 • Share this:
  ನವದೆಹಲಿ(ಜ. 29): ಇಂದು ಆರಂಭವಾದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು. ಗಣರಾಜ್ಯೋತ್ಸವ ದಿನದಂದು ರೈತರ ಟ್ರಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಹಾಗೂ ಕೆಲ ಕಿಡಿಗೇಡಿಗಳು ಕೆಂಪುಕೋಟೆಗೆ ಲಗ್ಗೆ ಇಟ್ಟು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬಗ್ಗೆ ರಾಷ್ಟ್ರಪತಿಗಳು ವಿಷಾದ ವ್ಯಕ್ತಪಡಿಸಿದರು. ದೇಶದ ಸಂವಿಧಾನವು ನಮಗೆ ಅಭಿಪ್ರಾಯ ಸ್ವಾತಂತ್ರ್ಯ ನೀಡಿದೆ. ಅದೇ ಸಂವಿಧಾನವು ಕಾನೂನು ಕಟ್ಟಳೆಗಳನ್ನ ಗಂಭೀರವಾಗಿ ಪಾಲನೆ ಮಾಡಬೇಕೆಂದು ಹೇಳುತ್ತದೆ. ಇದನ್ನು ಮರೆತು ಜನರು ಸ್ವಾತಮತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುವುದು ದುರದೃಷ್ಟಕರ ಎಂದು ಕೋವಿಂದ್ ಅಭಿಪ್ರಾಯಪಟ್ಟರು.

  ರೈತರ ಸಮಸ್ಯೆ ಮತ್ತು ಪ್ರತಿಭಟನೆಗಳ ವಿಚಾರವನ್ನು ಇನ್ನಷ್ಟು ವಿಸ್ತೃತವಾಗಿ ಪ್ರಸ್ತಾಪಿಸಿದ ರಾಮನಾಥ್ ಕೋವಿಂದ್, ತಮ್ಮ ಸರ್ಕಾರ ಮೂರು ಕೃಷಿ ಕಾನೂನುಗಳನ್ನ ರಚಿಸುವ ಮುನ್ನ ಅಸ್ತಿತ್ವದಲ್ಲಿದ್ದ ರೈತರ ಹಕ್ಕು ಮತ್ತು ಸೌಲಭ್ಯಗಳಿಗೆ ಕತ್ತರಿ ಹಾಕಿಲ್ಲ. ಬದಲಾಗಿ ಈ ಮೂರು ಕೃಷಿ ಕಾಯ್ದೆಗಳು ರೈತರಿಗೆ ಹೊಸ ಸೌಲಭ್ಯ ಮತ್ತು ಹಕ್ಕುಗಳನ್ನ ಒದಗಿಸಿದೆ. ಸಂಸತ್​ನಲ್ಲಿ ಚರ್ಚೆಯ ಬಳಿಕ ಈ ಮೂರು ಕಾನೂನುಗಳನ್ನ ಜಾರಿಗೆ ತಂದ ನಂತರ ರೈತರಿಗೆ ಇದರ ಲಾಭ ಸಿಗಲು ಆರಂಭವಾಗಿದೆ ಎಂಬುದನ್ನ ವಿವರಿಸಿದರು.

  ಇದನ್ನೂ ಓದಿ: Parliament Session - ಇಂದಿನಿಂದ ಸಂಸತ್ ಅಧಿವೇಶನ: ಫೆ.1ಕ್ಕೆ ಬಜೆಟ್ ಮಂಡನೆ

  ಆತ್ಮನಿರ್ಭರ್ (ಸ್ವಾವಲಂಬನೆ) ಭಾರತ್ ಗುರಿಯು ಕೃಷಿ ಕ್ಷೇತ್ರಕ್ಕೂ ಅನ್ವಯ ಆಗುತ್ತದೆ. ಸರ್ಕಾರದ ಗಮನ ಈ ನಿಟ್ಟಿನಲ್ಲೂ ಇದೆ. ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಸಣ್ಣ ಹಾಗೂ ಅತಿಸಣ್ಣ ರೈತರು ನನ್ನ ಸರ್ಕಾರಕ್ಕೆ ಆದ್ಯತೆಯಾಗಿದೆ.  ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಇಂಥ ಸಣ್ಣ ರೈತರ ಖಾತೆಗಳಿಗೆ ಸರ್ಕಾರ 1.13 ಕೋಟಿ ರೂ ಹಣ ನೇರವಾಗಿ ವರ್ಗಾವಣೆ ಆಗಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.

  ಕೊರೋನಾ ವೈರಸ್ ಅನ್ನ ನಿಗ್ರಹಿಸಲು ನಡೆಯುತ್ತಿರುವ ಲಸಿಕೆ ಯೋಜನೆ ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಇಲ್ಲಿ ನೀಡಲಾಗುತ್ತಿರುವ ಲಸಿಕೆಯು ಭಾರತದಲ್ಲೇ ತಯಾರಾಗಿವೆ. ಹಲವು ದೇಶಗಳಿಗೂ ಭಾರತ ಲಕ್ಷಾಂತರ ವ್ಯಾಕ್ಸಿನ್ ಡೋಸ್​ಗಳನ್ನ ನೀಡಿದೆ. ಲಕ್ಷಾಂತರ ಪ್ರಜೆಗಳ ಜೀವ ಉಳಿಸುವ ಕಾರ್ಯದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನನಗೆ ಸಮಾಧಾನ ಇದೆ. ಇವತ್ತು ಹೊಸ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ರೋಗದಿಂದ ಚೇತರಿಕೆ ಆಗುತ್ತಿರುವ ಪ್ರಮಾಣವೂ ಹೆಚ್ಚುತ್ತಿದೆ ಎಂದು ಸಂಸತ್​ನ ಜಂಟಿ ಅಧಿವೇಶನದಲ್ಲಿ ರಾಮನಾಥ್ ಕೋವಿಂದ್ ಹೇಳಿದರು.

  ಇದನ್ನೂ ಓದಿ: Delhi Air Pollution | ದೆಹಲಿಯಲ್ಲಿ ನಿರಂತರವಾಗಿ ಕುಸಿಯುತ್ತಿದೆ ಗಾಳಿಯ ಗುಣಮಟ್ಟ; ಹೆಚ್ಚುತ್ತಲೇ ಇದೆ ವಾಯು ಮಾಲಿನ್ಯ

  ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನ ಕಳೆದುಕೊಂಡಿದ್ದೇವೆ. ಈ ವೇಲೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾದರು. ಆರು ಸಂಸದರು ಪ್ರಾಣ ಬಿಟ್ಟರು. ಇವರೆಲ್ಲರಿಗೂ ನಾನು ಗೌರವಾರ್ಪಣೆ ಮಾಡುತ್ತೇನೆ. ಈ ಸಂದರ್ಭದಲ್ಲಿ ಎಂಥದ್ದೇ ಸಂಕಷ್ಟದ ಪರಿಸ್ಥಿತಿ ಎದುರಾದರೂ ಭಾರತ ಮುಂದಡಿ ಇಡುವುದನ್ನು ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಇಲ್ಲಿ ನೆರೆದಿರುವ ಎಲ್ಲಾ ಸಂಸದರು ಸಾರಿದ್ದಾರೆ ಎಂದು ಅವರು ತಿಳಿಸಿದರು.
  Published by:Vijayasarthy SN
  First published: