Farmers Protest: ರೈತ ಮಸೂದೆಯನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೋರ್ವ ನಾಯಕ

ಅಭಯ್​ ಸಿಂಗ್​ ಚೌಟಾಲ.

ಅಭಯ್​ ಸಿಂಗ್​ ಚೌಟಾಲ.

ರೈತ ಹೋರಾಟವನ್ನು ಬೆಂಬಲಿಸಿ ವಿಧಾನಸಭೆಗೆ ರಾಜೀನಾಮೆ ನೀಡಿದ ಹರಿಯಾಣದ 90 ಶಾಸಕರ ಪೈಕಿ ಅಭಯ್ ಸಿಂಗ್ ಚೌಟಾಲ ಮೊದಲಿಗರೆನಿಸಿಕೊಂಡಿದ್ದಾರೆ. ಈ ಹಿಂದೆ ಕೆಲವು ಸ್ವತಂತ್ರ ಶಾಸಕರು ರೈತರ ಬೆಂಬಲಕ್ಕೆ ನಿಂತು ಬಿಜೆಪಿ ಪಕ್ಷಕ್ಕೆ ತಾವು ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದರು. 

  • Share this:

    ನವ ದೆಹಲಿ (ಜನವರಿ 26); ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಈವರೆಗೆ ಪಂಜಾಬ್ ಪರಿಯಾಣ ಭಾಗಗಳಲ್ಲಿನ ಅನೇಕ ಬಿಜೆಪಿ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನೇ ತೊರೆದಿದ್ದಾರೆ. ಕೆಲ ಸ್ವಾತಂತ್ರ್ಯ ಶಾಸಕರು ಮತ್ತು ಅಕಾಲಿ ದಳದಂತಹ ಮಿತ್ರ ಪಕ್ಷಗಳು ಬಿಜೆಪಿ ಸಖ್ಯವನ್ನು ಕೊನೆಗೊಳಿಸಿಕೊಂಡಿವೆ. ಈ ಸಾಲಿಗೆ ಇದೀಗ ಐಎನ್​ಎಲ್​ಡಿ (Indian National Lok Dal) ಪಕ್ಷವೂ ಸೇರ್ಪಡೆಯಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕ್ ದಳ (ಐಎನ್‌ಎಲ್‌ಡಿ) ಪಕ್ಷದ ಏಕೈಕ ಶಾಸಕ ಅಭಯ್ ಸಿಂಗ್ ಚೌಟಾಲ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಂಜಾಬ್-ಹರಿಯಾಣ ಭಾಗದಲ್ಲಿ ರೈತ ಹೋರಾಟ ಮತ್ತಷ್ಟು ಬಲಗೊಳ್ಳಲಿದೆ ಎನ್ನಲಾಗುತ್ತಿದೆ.


    ಅಭಯ್​ ಸಿಂಗ್​ ಚೌಟಾಲ ಇಂದು ಸ್ವತಃ ರಾಜ್ಯಪಾಲ ಜ್ಞಾನ್‌ಚಂದ್ ಗುಪ್ತಾ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರೂ ಸಹ ಈ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ಆದರೆ, ರಾಜೀನಾಮೆ ನೀಡಿದ ನಂತರ ಈ ಕುರಿತು ಟ್ವಿಟರ್​ನಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ಅಭಯ್​ ಸಿಂಗ್ ಚೌಟಾಲ, "ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು! ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕಾನೂನುಗಳ ವಿರುದ್ಧ ನಾನು ರಾಜೀನಾಮೆ ನೀಡಿದ್ದೇನೆ. ಪ್ರತಿಪಕ್ಷದಲ್ಲಿ ಕುಳಿತಿರುವ ಇತರ ಎಲ್ಲ ನಾಯಕರು ಮತ್ತು ರೈತರ ಮಕ್ಕಳು ಎನಿಸಿಕೊಂಡವರು ರೈತನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.



    ರೈತ ಹೋರಾಟವನ್ನು ಬೆಂಬಲಿಸಿ ವಿಧಾನಸಭೆಗೆ ರಾಜೀನಾಮೆ ನೀಡಿದ ಹರಿಯಾಣದ 90 ಶಾಸಕರ ಪೈಕಿ ಅಭಯ್ ಸಿಂಗ್ ಚೌಟಾಲ ಮೊದಲಿಗರೆನಿಸಿಕೊಂಡಿದ್ದಾರೆ. ಈ ಹಿಂದೆ ಕೆಲವು ಸ್ವತಂತ್ರ ಶಾಸಕರು ರೈತರ ಬೆಂಬಲಕ್ಕೆ ನಿಂತು ಬಿಜೆಪಿ ಪಕ್ಷಕ್ಕೆ ತಾವು ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದರು. ಡಿಸೆಂಬರ್ 1 ರಂದು ದಾದ್ರಿ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ಸೋಂಬೀರ್ ಸಾಂಗ್ವಾನ್ ಬಿಜೆಪಿಯಿಂದ ಬೆಂಬಲವನ್ನು ಹಿಂತೆಗೆದುಕೊಂಡಿದ್ದರು. ಅಲ್ಲದೆ, ಹರಿಯಾಣ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಮತ್ತೊಬ್ಬ ಸ್ವತಂತ್ರ ಶಾಸಕ ಬಲರಾಜ್ ಕುಂಡು ಕೂಡ ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ಬಿಜೆಪಿಯಿಂದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದರು ಎಂಬುದು ಉಲ್ಲೇಖಾರ್ಹ.


    ಇದನ್ನೂ ಓದಿ: Farmers Protest: ಟ್ರ್ಯಾಕ್ಟರ್​ ರ್‍ಯಾಲಿ, ಕೆಂಪುಕೋಟೆ ಗಲಭೆ; ಹೋರಾಟದ ಕಣದಿಂದ ಹಿಂದೆ ಸರಿದ ಎರಡು ರೈತ ಸಂಘಟನೆಗಳು!


    ಇದೀಗ ಸ್ವಾತಂತ್ರ್ಯ ಶಾಸಕರ ಬೆನ್ನಿಗೆ  ಭಾರತೀಯ ರಾಷ್ಟ್ರೀಯ ಲೋಕ್ ದಳ ಪಕ್ಷದ ಶಾಸಕ ತನ್ನ ಶಾಸಕ ಸ್ಥಾನವನ್ನೇ ತ್ಯಜಿಸಿರುವುದು ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಜನವರಿ 26 ರಂದು ರೈತರ ಟ್ರ್ಯಾಕ್ಟರ್​ ರ್ಯಾಲಿ ವೇಳೆ ದೆಹಲಿಯ ಕೆಂಪುಕೋಟೆ ಭಾಗದಲ್ಲಿ ಘರ್ಷಣೆ ಕಾಣಿಸಿಕೊಂಡಿತ್ತು. ಇದರ ಬೆನ್ನಿಗೆ ರೈತ ಹೋರಾಟ ದಿಕ್ಕು ತಪ್ಪುತ್ತಿದೆಯೇ? ಎಂಬ ಪ್ರಶ್ನೆಗಳೂ ಉದ್ಭವವಾಗಿದ್ದವು. ಆದರೆ, ಇದೀಗ ಶಾಸಕನೋರ್ವ ಈ ಹೋರಾಟವನ್ನು ಬೆಂಬಲಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮತ್ತಷ್ಟು ಶಾಸಕರ ರಾಜೀನಾಮೆಗೆ ವೇದಿಕೆಯಾಗಲಿದೆ. ಅಲ್ಲದೆ, ಈ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದೆ ಎನ್ನಲಾಗುತ್ತಿದೆ.


    ಇದೀಗ ಹರಿಯಾಣ ವಿಧಾನಸಭೆಗೆ ರಾಜೀನಾಮೆ ನೀಡುವ ಮೂಲಕ ಸುದ್ದಿಯಾಗುತ್ತಿರುವ ಅಭಯ್​ ಸಿಂಗ್ ಚೌಟಾಲ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರ ಪುತ್ರರಾಗಿದ್ದು, 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಐಎನ್‌ಎಲ್‌ಡಿ ಪಕ್ಷದಿಂದ ಆಯ್ಕೆಯಾದ ಏಕೈಕ ಶಾಸಕರಾಗಿದ್ದಾರೆ.

    Published by:MAshok Kumar
    First published: