ಆದಾಯ ತೆರಿಗೆ ಇ-ಫೈಲಿಂಗ್(Income Tax E-Filing Portal) ಪೋರ್ಟಲ್ನಲ್ಲಿ ತಾಂತ್ರಿಕ ದೋಷಗಳಿಗಾಗಿ ತ್ವರಿತ ಪರಿಶೀಲನೆ ನಡೆಸಿದ ನಂತರ ಇನ್ಫೋಸಿಸ್(Infosys) ಕೆಲವೊಂದು ಅಂಶಗಳನ್ನು ಗುರುತಿಸಿದೆ. ಇಲ್ಲಿಯವರೆಗೆ 1.5 ಕೋಟಿ ರಿಟರ್ನ್ಗಳನ್ನು ಫೈಲ್ ಮಾಡಲಾಗಿದೆ ಎಂಬುದನ್ನು ಸಂಸ್ಥೆ ತಿಳಿಸಿದ್ದು ಮೂರು ಕೋಟಿಗಿಂತಲೂ ಅಧಿಕ ತೆರಿಗೆ ಪಾವತಿದಾರರು ವಿವಿಧ ವಹಿವಾಟುಗಳನ್ನು ಪೋರ್ಟಲ್ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿ ನೀಡಿದೆ. ಸೆಪ್ಟೆಂಬರ್ನಲ್ಲಿ, ಸರಾಸರಿ 15 ಲಕ್ಷಕ್ಕಿಂತಲೂ ಅಧಿಕ ಅನನ್ಯ ತೆರಿಗೆ ಪಾವತಿದಾರರು ನಿತ್ಯವೂ ಪೋರ್ಟಲ್ಗೆ ಲಾಗಿನ್ ಮಾಡಿದ್ದಾರೆ ಎಂದು ತಿಳಿಸಿದೆ.
ಕೆಲವು ಬಳಕೆದಾರರು ಪೋರ್ಟಲ್ ಬಳಸುವಲ್ಲಿ ಕೆಲವೊಂದು ತೊಂದರೆಗಳನ್ನು ಇನ್ನೂ ಅನುಭವಿಸುತ್ತಿದ್ದಾರೆ ಎಂಬುದನ್ನು ಕಂಪನಿ ಒಪ್ಪಿಕೊಂಡಿದ್ದು, ಈ ಸಮಸ್ಯೆಗಳನ್ನು ಗುರುತಿಸಲು ಆದಾಯ ತೆರಿಗೆ ಇಲಾಖೆಯೊಂದಿಗೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಿದೆ. 85%ಕ್ಕಿಂತಲೂ ಅಧಿಕ ತೆರಿಗೆ ಪಾವತಿದಾರರು ತಮ್ಮ ರಿಟರ್ನ್ಗಳನ್ನು ಫೈಲ್ ಮಾಡಿದ್ದು ಹೆಚ್ಚು ಪ್ರಮಾಣದಲ್ಲಿ ಆಧಾರ್ ಒಟಿಪಿ ದೃಢೀಕರಣದ ಮೂಲಕ ತಮ್ಮ ಇ-ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಿದ್ದಾರೆ. ಪೋರ್ಟಲ್ ನಿತ್ಯವೂ 2.5 ಲಕ್ಷಕ್ಕಿಂತಲೂ ಅಧಿಕ ಫೈಲಿಂಗ್ಗೆ ಅನುಕೂಲ ಒದಗಿಸುತ್ತಿದ್ದು ITR 1,2,3,4,5 ಹಾಗೂ 7 ಇದೀಗ ಫೈಲಿಂಗ್ಗಾಗಿ ಲಭ್ಯವಿದೆ ಎಂದು ಇನ್ಫೋಸಿಸ್ ತಿಳಿಸಿದೆ. ಅದೇ ರೀತಿ ಹೆಚ್ಚಿನ ಶಾಸನಬದ್ಧ ಫಾರ್ಮ್ಗಳನ್ನೂ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಇದನ್ನೂ ಓದಿ:Gold Price Today: ಇಂದು ಮತ್ತೆ ಕಡಿಮೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ
ಇನ್ಫೋಸಿಸ್ ಈ ಹಿಂದೆ ಇದ್ದ ತಾಂತ್ರಿಕ ದೋಷಗಳನ್ನು ಪರಿಹರಿಸಲು ತ್ವರಿತವಾಗಿ ಕೆಲಸ ಮಾಡುತ್ತಿದ್ದು, ITRನ ಮುಖ್ಯ ಫಾರ್ಮ್ಗಳಾದ 1,2,3 ಹಾಗೂ 4 ಉತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ ಈ ಫಾರ್ಮ್ಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಲು ಪ್ರಾಯೋಗಿಕ ಬಳಕೆಗೆ ಒಳಪಡಿಸಬೇಕಾಗಿದೆ ಎಂದು ಆರ್ಥಿಕ ಸಚಿವಾಲಯದ ಹತ್ತು ಸದಸ್ಯರ ಕಮಿಟಿಯಲ್ಲಿ ಒಬ್ಬರಾದ ಸುಂದರ್ ರಾಮನ್ ತಿಳಿಸಿದ್ದಾರೆ. ಈ ಕಮಿಟಿಯು ಪೋರ್ಟಲ್ ಕುರಿತಾದ ಪರಿಶೀಲನೆಗಳನ್ನು ನಡೆಸುತ್ತಿದ್ದು ನಿತ್ಯವೂ ಮೇಲ್ವಿಚಾರಣೆ ಅಂಶಗಳು ಹಾಗೂ ಪ್ರತಿಕ್ರಿಯೆ ವರದಿಗಳನ್ನು ಸಲ್ಲಿಸಬೇಕು.
ಸುಂದರ್ ರಾಮನ್ ತಿಳಿಸಿರುವಂತೆ ಏಕೀಕರಣ ಪರಿಶೀಲನೆಯು ಎಲ್ಲಾ ಫೀಚರ್ಗಳು ಹಾಗೂ ಸೌಲಭ್ಯಗಳಿಗೆ ಉತ್ತಮ ಫಲಿತಾಂಶವನ್ನು ನೀಡಿಲ್ಲ. ಅಪ್ಗ್ರೇಡ್ ಮಾಡಲಾದ ವ್ಯವಸ್ಥೆಯು ಹೆಚ್ಚಿನ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಪ್ರಮುಖ ತಾಂತ್ರಿಕ ಪರಿವರ್ತನೆಗಳನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ITR ಯುಟಿಲಿಟಿಗಳಿಗೆ ಪ್ರೋಗ್ರಾಮಿಂಗ್ ಭಾಷೆ ಜಾವಾವನ್ನು JSON ಮೂಲಕ (ಜಾವಾ ಸ್ಕ್ರಿಪ್ಟ್ ಆಬ್ಜೆಕ್ಟ್ ನೊಟೇಶನ್) ಬದಲಿಸಲಾಗಿದೆ. JSON ಒಂದು ಲೈಟರ್ ವರ್ಶನ್ ಆಗಿದ್ದು ಪ್ರೊಸೆಸಿಂಗ್ ವೇಗವನ್ನು ಇದು ಹೆಚ್ಚಿಸಲಿದೆ. ಹೊಸ ಅಪ್ಗ್ರೇಡ್ ಅನ್ನು ಹೆಚ್ಚಿನ ಟಾಸ್ಕ್ಗಳನ್ನು ಸ್ವಯಂಚಾಲಿಗೊಳಿಸಲು ರಚಿಸಲಾಗಿದೆ ಎಂದು ಸುಂದರ್ ರಾಮನ್ ತಿಳಿಸಿದ್ದಾರೆ.
ನೀವು 2 ಲಕ್ಷಕ್ಕಿಂತ ಹೆಚ್ಚಿನ ವಿಮೆ ಪ್ರೀಮಿಯಂ ಪಾವತಿಸಿದಲ್ಲಿ ಅದೇ ರೀತಿ ನೀವು 2 ಲಕ್ಷಕ್ಕಿಂತ ಅಧಿಕ ಮ್ಯೂಚುವಲ್ ಫಂಡ್ ಹೊಂದಿದ್ದರೆ ಈ ಮಾಹಿತಿಯನ್ನು ಮೂಲ ಹಂತದಲ್ಲಿ ಪಡೆದುಕೊಳ್ಳಲಾಗುತ್ತದೆ ಮತ್ತು ನೀವು ಲಾಗಿನ್ ಆದಾಗ ಸ್ವಯಂಚಾಲಿತವಾಗಿ ಪ್ರದರ್ಶನಗೊಳ್ಳುತ್ತದೆ. ಇದರಿಂದ ನೀವು ಹಸ್ತಚಾಲಿತವಾಗಿ ಯಾವುದೇ ವಿವರಗಳನ್ನು ನಮೂದಿಸಬೇಕಾಗಿಲ್ಲ. ಈ ಹಿಂದೆ ಇನ್ಫೋಸಿಸ್ ಹೆಚ್ಚಿನ ಪ್ರೊಸೆಸಿಂಗ್ ಅನ್ನು ಬೆಂಗಳೂರಿನಲ್ಲಿರುವ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ನಲ್ಲಿ ನಿರ್ವಹಿಸಿತ್ತು. ಇನ್ನು ರಿಟರ್ನ್ ಫೈಲಿಂಗ್ ಸಾಫ್ಟ್ವೇರ್ ಅನ್ನು ಟಿಸಿಎಸ್ ವಿನ್ಯಾಸಪಡಿಸಿದೆ. ರಿಟರ್ನ್ ಫೈಲಿಂಗ್ ಸುಲಭಗೊಳಿಸುವುದು ಉದ್ದೇಶವಾಗಿದ್ದರಿಂದ ಸಂಸ್ಥೆಯು ಪ್ಲಾಟ್ಫಾರ್ಮ್ ಬದಲಾಯಿಸಿದೆ ಎಂದು ರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ:ITR Filing: ಹೊಸ ವೆಬ್ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ Income Tax Return ಸಲ್ಲಿಸುವುದು ಹೇಗೆ..? ಇಲ್ಲಿದೆ ವಿವರ
ಸಂಯೋಜನೆ ವಿನ್ಯಾಸವು ಉತ್ತಮ ಫಲಿತಾಂಶಗಳನ್ನು ನೀಡುತ್ತಿಲ್ಲ ಎಂದು ಕೆಲವೊಂದು ಮೂಲಗಳು ವರದಿ ಮಾಡಿವೆ. ವಿನ್ಯಾಸವನ್ನು ಮೈಕ್ರೋಸರ್ವೀಸ್ಗಳಲ್ಲಿ ರಚಿಸಲಾಗಿದ್ದು ಕೆಲವೊಂದು APIಗಳು (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳು) ಸಂಯೋಜಿತವಾಗಿಲ್ಲ. ಹೊಸ ಪ್ರೋಗ್ರಾಮಿಂಗ್ನೊಂದಿಗೆ ಏಕಕಾಲಿಕವಾಗಿ ಕೆಲಸ ಮಾಡಲು ಅವುಗಳಲ್ಲಿ ಕೆಲವೊಂದನ್ನು ಆದಾಯ ತೆರಿಗೆ ವಿಭಾಗದ ಮೂಲಕ ಒದಗಿಸಬೇಕಾಗಿದೆ. APIಗಳು ಸಿದ್ಧಗೊಳ್ಳದಿರುವಾಗ ಡೆವಲಪರ್ ಸ್ಟಬ್ (ತಾತ್ಕಾಲಿಕ ಕೋಡ್ ತುಣುಕು) API ಸ್ವೀಕರಿಸುವವರೆಗೆ ಬಳಸಿಕೊಳ್ಳಲಾಗುತ್ತದೆ. ಆದರೆ ವಿಧಾನ ಹೆಚ್ಚು ಸೂಕ್ತವಾಗಿಲ್ಲದೇ ಇರಬಹುದು ಎಂದು ಒಂದು ಮೂಲ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ