ಇನ್ಫೋಸಿಸ್ ನಾರಾಯಣ ಮೂರ್ತಿ ಮಗಳು ಅಕ್ಷತಾ ಬ್ರಿಟನ್ ರಾಣಿ ಎಲಿಜಬೆತ್ಗಿಂತ ಶ್ರೀಮಂತೆ!
Akshata Murthy: ನಾರಾಯಣ ಮೂರ್ತಿ- ಸುಧಾ ಮೂರ್ತಿ ದಂಪತಿಯ ಮಗಳು ಅಕ್ಷತಾ ಮೂರ್ತಿ ಇನ್ಫೋಸಿಸ್ ಸಂಸ್ಥೆಯೊಂದರಲ್ಲೇ 4,200 ಕೋಟಿ ರೂ. ಮೌಲ್ಯದ ಷೇರನ್ನು ಹೊಂದಿದ್ದಾರೆ! ತಮ್ಮ ಹೆಂಡತಿಯ ಆಸ್ತಿಯ ವಿವರವನ್ನು ಮುಚ್ಚಿಟ್ಟಿರುವ ಆರೋಪ ಎದುರಿಸುತ್ತಿರುವ ರಿಷಿ ಸುನಕ್ ಈಗ ಸಂಕಷ್ಟಕ್ಕೀಡಾಗಿದ್ದಾರೆ.
ನವದೆಹಲಿ (ಡಿ. 4): ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಲಂಡನ್ನಲ್ಲಿ ನೆಲೆಸಿದ್ದಾರೆ. ಅಕ್ಷತಾ ಅವರ ಗಂಡ ರಿಷಿ ಸುನಕ್ ಬ್ರಿಟನ್ ಹಣಕಾಸು ಸಚಿವರಾಗಿದ್ದಾರೆ. ಆದರೆ, ರಿಷಿ ಸುನಕ್ ಅವರಿಗೆ ತಮ್ಮ ಹೆಂಡತಿಯ ಆಸ್ತಿಯೇ ಈಗ ಸಂಕಷ್ಟ ತಂದಿಟ್ಟಿದೆ. ಹೌದು, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಬ್ರಿಟನ್ನ ರಾಣಿಗಿಂತ ಶ್ರೀಮಂತೆಯಂತೆ! ತಮ್ಮ ಹೆಂಡತಿಯ ಆಸ್ತಿಯ ವಿವರವನ್ನು ಮುಚ್ಚಿಟ್ಟಿರುವ ಆರೋಪ ಎದುರಿಸುತ್ತಿರುವ ರಿಷಿ ಸುನಕ್ ಈಗ ಸಂಕಷ್ಟಕ್ಕೀಡಾಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಮತ್ತು ರಿಷಿ ಸುನಕ್ ಲಂಡನ್ನಲ್ಲಿ ನೆಲೆಸಿದ್ದಾರೆ. ಬ್ರಿಟನ್ನ ಹಣಕಾಸು ಸಚಿವರಾಗಿರುವ ರಿಷಿ ಸುನಕ್ ಅಲ್ಲಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಆಸ್ತಿ ವಿವರ ಸಲ್ಲಿಸುವಾಗ ಕೇವಲ ತಮ್ಮ ಆಸ್ತಿಯ ಬಗ್ಗೆ ಮಾತ್ರ ಮಾಹಿತಿ ನೀಡಿದ್ದರು. ಪತ್ನಿ ಅಕ್ಷತಾ ಅವರ ಆಸ್ತಿಯ ಬಗ್ಗೆ ಯಾವುದೇ ಉಲ್ಲೇಖವನ್ನೂ ಮಾಡಿರಲಿಲ್ಲ. ಆದರೆ, ಇಂಗ್ಲೆಂಡ್ನ ನಿಯಮದ ಪ್ರಕಾರ ಅವರು ತಮ್ಮ ಹೆಂಡತಿ, ಅಪ್ಪ-ಅಮ್ಮ ಸೇರಿದಂತೆ ಎಲ್ಲ ಅವಲಂಬಿತರ ಆಸ್ತಿಯ ವಿವರವನ್ನೂ ನೀಡಬೇಕಾಗುತ್ತದೆ.
ದಿ ಗಾರ್ಡಿಯನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ರಿಷಿ ಸುನಕ್ ಅವರ ಹೆಂಡತಿ ಅಕ್ಷತಾ ಇನ್ಫೋಸಿಸ್ ಸಂಸ್ಥೆಯಲ್ಲಿ ದೊಡ್ಡ ಪಾಲು ಹೊಂದಿದ್ದಾರೆ. ಇನ್ನೂ ಹಲವು ಕಂಪನಿಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅಕ್ಷತಾ ಅವರ ಒಟ್ಟಾರೆ ಆಸ್ತಿಯ ಮೌಲ್ಯ ರಾಣಿ ಎಲಿಜಬೆತ್ ಆಸ್ತಿಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದೆ. ಅಕ್ಷತಾ ಮೂರ್ತಿ ಇನ್ಫೋಸಿಸ್ ಸಂಸ್ಥೆಯೊಂದರಲ್ಲೇ ಸುಮಾರು 4,200 ಕೋಟಿ ರೂ. ಮೌಲ್ಯದ ಷೇರನ್ನು ಹೊಂದಿದ್ದಾರೆ! ರಾಣಿ ಎಲಿಜಬೆತ್ ಅವರ ಆಸ್ತಿಯ ಮೌಲ್ಯ 3,400 ಕೋಟಿ ರೂ. ಎನ್ನಲಾಗಿದೆ. ಹೀಗಾಗಿ, ಅಕ್ಷತಾ ಮೂರ್ತಿ ರಾಣಿ ಎಲಿಜಬೆತ್ ಅವರಿಗಿಂತಲೂ ಶ್ರೀಮಂತೆಯಾಗಿದ್ದು, ಈ ವಿಷಯವನ್ನು ರಿಷಿ ಸುನಕ್ ಆಸ್ತಿ ವಿವರದಲ್ಲಿ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಇದಿಷ್ಟೇ ಅಲ್ಲದೆ, ಅಕ್ಷತಾ ಇಂಗ್ಲೆಂಡ್ನಲ್ಲಿ ಅಮೆಜಾನ್ನಲ್ಲಿ 900 ಮಿಲಿಯನ್ ಪೌಂಡ್ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕೂಡ ಇಂಗ್ಲೆಂಡ್ನ ಪತ್ರಿಕೆ ಬಹಿರಂಗಪಡಿಸಿದೆ. ಲಂಡನ್ ಮೂಲದ ಗ್ಲೋಬಲ್ ಇನ್ವೆಸ್ಟ್ಮೆಂಟ್ ಫರ್ಮ್ನ ಸಹ ಸಂಸ್ಥಾಪಕರಾಗಿರುವ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಕ್ಲಾಸ್ಮೇಟ್ ಆಗಿದ್ದವರು. 2009ರಲ್ಲಿ ಮದುವೆಯಾಗಿದ್ದ ಇವರಿಬ್ಬರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರು ಬ್ರಿಟನ್ ಹಣಕಾಸು ಸಚಿವರಾಗಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ