Sushma ChakreSushma Chakre
|
news18-kannada Updated:January 15, 2021, 11:29 AM IST
ಇಂಡೋನೇಷ್ಯಾದಲ್ಲಿ ಭೂಕಂಪ
ಜಕಾರ್ತ (ಜ. 15): ಇಂಡೋನೇಷ್ಯಾದಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಭೂಕಂಪದಿಂದ ಮೂವರು ಸಾವನ್ನಪ್ಪಿದ್ದಾರೆ. 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಇಂಡೋನೇಷ್ಯಾದ ಸುಲವೇಸಿಯಲ್ಲಿ 6.2 ಮ್ಯಾಗ್ನಿಟ್ಯೂಡ್ ಭೂಕಂಪ ಸಂಭವಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಭೂಕಂಪದಿಂದ ಮೂವರು ಸಾವನ್ನಪ್ಪಿದ್ದಾರೆ. ಭೂಕಂಪದಿಂದ 60ಕ್ಕೂ ಹೆಚ್ಚು ಮನೆಗಳು ಮುರಿದು ಬಿದ್ದಿವೆ. ಇಲ್ಲಿನ ಆಸ್ಪತ್ರೆಯೂ ಭೂಕಂಪದಿಂದ ಉರುಳಿಬಿದ್ದಿದ್ದು, 12ಕ್ಕೂ ಹೆಚ್ಚು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಇದ್ದಕ್ಕಿದ್ದಂತೆ ಆಸ್ಪತ್ರೆ ಅಲುಗಾಡಿದಂತಾಗಿದ್ದು, ನೋಡ ನೋಡುತ್ತಿದ್ದಂತೆ ಒಂದು ಭಾಗ ಕುಸಿದು ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಕಟ್ಟಡದ ಕೆಳಗೆ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಇದುವರೆಗೂ ಯಾರನ್ನೂ ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಪಶ್ಚಿಮ ಸುಲವೇಸಿಯ ರಾಜಧಾನಿ ಮಮುಜುವಿನಿಂದ 36 ಕಿ.ಮೀ. ದೂರದಲ್ಲಿ ಈ ಭೂಕಂಪ ಸಂಭವಿಸಿದೆ.
ಇದಕ್ಕೂ ಮೊದಲು ಸುಲವೇಸಿ ದ್ವೀಪದಲ್ಲಿ 2018ರಲ್ಲಿ 7.5 ಮ್ಯಾಗ್ನಿಟ್ಯೂಡ್ನ ಭೂಕಂಪ ಹಾಗೂ ಸುನಾಮಿ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 4,300 ಜನರು ಸಾವನ್ನಪ್ಪಿದ್ದರು ಅಥವಾ ನಾಪತ್ತೆಯಾಗಿದ್ದರು.
Published by:
Sushma Chakre
First published:
January 15, 2021, 11:28 AM IST